ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ಬಜೆಟ್‌: ಹೂಡಿಕೆ –ಬೇಡಿಕೆ ಸೃಷ್ಟಿಗೆ ಒತ್ತು

ಬೇಸಾಯ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮ ಚೇತರಿಕೆಗೆ ಕ್ರಮ ಸಾಧ್ಯತೆ
Last Updated 1 ಜುಲೈ 2019, 5:21 IST
ಅಕ್ಷರ ಗಾತ್ರ

ನವದೆಹಲಿ: ಇದೇ 5ರಂದು ಮಂಡನೆಯಾಗಲಿರುವ ಕೇಂದ್ರ ಬಜೆಟ್‌ನಲ್ಲಿ ದೊಡ್ಡ ದೊಡ್ಡ ಘೋಷಣೆಗಳ ಸಾಧ್ಯತೆ ಇಲ್ಲ ಎಂದು ಹೇಳಲಾಗುತ್ತಿದೆ. ಸರ್ಕಾರದ ವರಮಾನದಲ್ಲಿ ಆಗಿರುವ ಖೋತಾ ಮತ್ತು ಜಾಗತಿಕ ಅರ್ಥ ವ್ಯವಸ್ಥೆಯಲ್ಲಿನ ಅನಿಶ್ಚಿತ ಸ್ಥಿತಿ ಇದಕ್ಕೆ ಕಾರಣ. ಹಾಗಿದ್ದರೂ ಅರ್ಥ ವ್ಯವಸ್ಥೆ ಎದುರಿಸುತ್ತಿರುವ ಬಿಕ್ಕಟ್ಟು ಪರಿಹಾರದ ಕ್ರಮಗಳನ್ನು ಘೋಷಿಸುವ ಸಾಧ್ಯತೆ ಇದೆ.

ಹೂಡಿಕೆ ಮತ್ತು ಬೇಡಿಕೆ ಹೆಚ್ಚಿಸುವ ಕ್ರಮಗಳನ್ನು ಕೈಗೊಳ್ಳಬಹುದು. ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳಿಗೆ ಉತ್ತೇಜನ ನೀಡಲು ಬಜೆಟ್‌ನಲ್ಲಿ ಯತ್ನಿಸಬಹುದು. ಏಕೆಂದರೆ ಉದ್ಯೋಗ ಸೃಷ್ಟಿಸುವ ಮುಖ್ಯ ಕ್ಷೇತ್ರಗಳು ಇವೇ ಆಗಿವೆ. ಬೇಸಾಯ ಮತ್ತು ಮನೆ ನಿರ್ಮಾಣ ಕ್ಷೇತ್ರಗಳು ಗರಿಗೆದರಲು ಪೂರಕವಾದ ಅಂಶಗಳನ್ನೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಪ್ರಕಟಿಸಬಹುದು. 2018–19ರಲ್ಲಿ ಆರ್ಥಿಕ ವೃದ್ಧಿ ದರ ಶೇ 6.8ರಷ್ಟಿತ್ತು. ಇದು ಕಳೆದ ಐದು ವರ್ಷಗಳಲ್ಲಿಯೇ ಅತ್ಯಂತ ಕಡಿಮೆ ದರದ ಬೆಳವಣಿಗೆಯಾಗಿದೆ.

‘ಜಾಗತಿಕ ಆರ್ಥಿಕ ಪ್ರಗತಿಗೆ ಹಿನ್ನಡೆಯಾಗಬಹುದು ಎಂಬ ಆತಂಕ ಜೋರಾಗಿದೆ. ವ್ಯಾಪಾರ ಸಮರವು ಕರೆನ್ಸಿ ಸಮರವಾಗಿ ಪರಿವರ್ತನೆಯಾಗುವ ಅಪಾಯವೂ ಇದೆ. ಇದು ಭಾರತವೂ ಸೇರಿ ಅಭಿವೃದ್ಧಿಶೀಲ ಹಲವು ದೇಶಗಳನ್ನು ಕಾಡಬಹುದು. ಅಮೆರಿಕ ಮತ್ತು ಇರಾನ್‌ ನಡುವಣ ಯುದ್ಧದ ಭೀತಿಯಿಂದಾಗಿ ತೈಲ ಸೇರಿಸಿ ಹಲವು ಸರಕುಗಳ ದರ ಏರಿಕೆಯಾಗಬಹುದು. ಈ ಎಲ್ಲವೂ ಬಜೆಟ್‌ನಲ್ಲಿ ಬಿಂಬಿತವಾಗಬಹುದು’ ಎಂದು ಕೇಂದ್ರದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಜನರ ಜೇಬಿಗೆ ಕಾಸು?

ಮಧ್ಯಮ ವರ್ಗದ ಜನರ ಜೇಬಿನಲ್ಲಿ ಹೆಚ್ಚು ಹಣ ಉಳಿಯುವಂತೆ ಮಾಡಲು ಹಣಕಾಸು ಸಚಿವೆ ಯತ್ನಿಸಬಹುದು. ಅದಕ್ಕಾಗಿ ನೇರ ತೆರಿಗೆಯಲ್ಲಿ ಸ್ವಲ್ಪ ವಿನಾಯಿತಿಯ ನಿರೀಕ್ಷೆ ಇದೆ. ಸರಕುಗಳು ಮತ್ತು ವಾಹನಗಳ ಬೇಡಿಕೆ ಕುಸಿದಿದೆ. ಇದನ್ನು ಸರಿಪಡಿಸಬೇಕಿದ್ದರೆ ಜನರಲ್ಲಿ ಹೆಚ್ಚು ಹಣ ಓಡಾಡಬೇಕಾದ ಅಗತ್ಯ ಇದೆ. ಉದ್ಯಮ ಕ್ಷೇತ್ರವು ದೊಡ್ಡ ರೀತಿಯ ತೆರಿಗೆ ಸುಧಾರಣೆಯ ನಿರೀಕ್ಷೆಯಲ್ಲಿದೆ.

ಚುನಾವಣೆಗೆ ಮೊದಲು ಮಧ್ಯಂತರ ಬಜೆಟ್‌ ಮಂಡಿಸಿದ್ದ ಪೀಯೂಷ್‌ ಗೋಯಲ್‌ ಅವರು ₹5 ಲಕ್ಷ ವರೆಗಿನ ಆದಾಯವನ್ನು ತೆರಿಗೆ ಮುಕ್ತಗೊಳಿಸಿದ್ದರು. ಆದರೆ, ತೆರಿಗೆ ವಿನಾಯಿತಿ ಮಿತಿಯಲ್ಲಿ ಯಾವುದೇ ಬದಲಾವಣೆ ಮಾಡಿರಲಿಲ್ಲ. ಈಗಲೂ ತೆರಿಗೆ ವಿನಾಯಿತಿ ಮಿತಿ ₹2.5 ಲಕ್ಷವೇ ಇದೆ. ಈ ಬಾರಿ, ವಿನಾಯಿತಿ ಮಿತಿಯನ್ನು ₹3 ಲಕ್ಷಕ್ಕೆ ಏರಿಸಬಹುದು ಎಂಬ ನಿರೀಕ್ಷೆ ಇದೆ.

ಶೇ 10ರಷ್ಟು ತೆರಿಗೆಯ ಮತ್ತೊಂದು ಹಂತವನ್ನು ಸೇರಿಸುವ ಸಾಧ್ಯತೆ ಇದೆ. ಹಾಗೆಯೇ, ಸೆಕ್ಷನ್‌ 80 ಸಿ ಅಡಿಯಲ್ಲಿನ ವಿನಾಯಿತಿಯನ್ನು ಈಗಿನ ₹1.5 ಲಕ್ಷದಿಂದ ₹2 ಲಕ್ಷಕ್ಕೆ ಏರಿಸಬಹುದು ಎನ್ನಲಾಗಿದೆ.

ಏನೆಲ್ಲ ನಿರೀಕ್ಷೆಗಳು?

* ರೈತರಿಗೆ ಈಗ ವಾರ್ಷಿಕ ₹6 ಸಾವಿರ ನೀಡಲಾಗುತ್ತಿದೆ. ಅದಲ್ಲದೆ, ಯಾಂತ್ರೀಕರಣವನ್ನು ಆಯ್ಕೆ ಮಾಡುವ ರೈತರಿಗೆ ಹೆಚ್ಚು ಉತ್ತೇಜನ. ಇದು ಕೃಷಿ ಉತ್ಪಾದಕತೆಯನ್ನು ಹೆಚ್ಚಿಸಬಹುದು

* ಕೃಷಿ ಕ್ಷೇತ್ರದ ನವೋದ್ಯಮಗಳಿಗೆ ಪ್ರೋತ್ಸಾಹ. ಇದು ಬೇಸಾಯ ಕ್ಷೇತ್ರದ ಮೂಲಸೌಕರ್ಯವನ್ನು ಉತ್ತಮಪಡಿಸಿ ರಫ್ತಿಗೆ ಪೂರಕವಾಗಬಹುದು

* ಮುಂದಿನ ಐದು ವರ್ಷದಲ್ಲಿ ಮೂಲಸೌಕರ್ಯಕ್ಕೆ ₹100 ಲಕ್ಷ ಕೋಟಿ ಹೂಡಿಕೆ ಮಾಡುವುದು ಬಿಜೆಪಿಯ ಪ್ರಣಾಳಿಕೆಯಾಗಿತ್ತು. ಈ ಹೂಡಿಕೆಯ ನೀಲನಕ್ಷೆ ಬಜೆಟ್‌ನಲ್ಲಿ ಪ್ರಕಟವಾಗಬಹುದು

* ಬ್ಯಾಟರಿಚಾಲಿತ ವಾಹನ ಬಳಕೆಗೆ ಒತ್ತು ನೀಡುವ ಕ್ರಮಗಳು, ಸಂಕಷ್ಟದಲ್ಲಿರುವ ನಾಗರಿಕ ವಿಮಾನಯಾನ ಕ್ಷೇತ್ರ ಪುನಶ್ಚೇತನಕ್ಕೆ ಅಗತ್ಯ ಕ್ರಮ

* ದೇಶವು ಎದುರಿಸುತ್ತಿರುವ ತೀವ್ರ ನೀರಿನ ಕೊರತೆಯ ವಿಚಾರ ಬಜೆಟ್‌ನಲ್ಲಿ ಪ್ರಸ್ತಾಪವಾಗಬಹುದು

* ಅರ್ಥ ವ್ಯವಸ್ಥೆ ಉತ್ತೇಜನಕ್ಕೆ 100, 200 ದಿನಗಳ ಯೋಜನೆ ಘೋಷಣೆಯಾಗಬಹುದು

* ಹೆಚ್ಚಿನ ಘೋಷಣೆಗಳು 2022ನೇ ವರ್ಷವನ್ನು ಗಮನದಲ್ಲಿ ಇರಿಸಿಕೊಂಡೇ ಇರಬಹುದು. ಅದು ಭಾರತದ ಸ್ವಾತಂತ್ರ್ಯದ 75ನೇ ವರ್ಷ, ಜತೆಗೆ ಮಹಾತ್ಮ ಗಾಂಧಿಯ 150ನೇ ಜನ್ಮ ವರ್ಷ

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT