ಭಾನುವಾರ, ಸೆಪ್ಟೆಂಬರ್ 19, 2021
29 °C

ಮೂರುವರೆ ತಾಸು ತಡವಾದ ರೈಲು: ನೀಟ್‌ ಪರೀಕ್ಷೆಗೆ ಗೈರು, ರೈಲ್ವೆ ಸಚಿವರಿಗೆ ಟ್ವೀಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ: ‘ಹಂಪಿ ಎಕ್ಸಪ್ರೆಸ್‌’ ರೈಲು (ಗಾಡಿ ಸಂಖ್ಯೆ 16591) ವಿಳಂಬವಾಗಿ ಬೆಂಗಳೂರು ತಲುಪಿದ್ದರಿಂದ ಬಳ್ಳಾರಿ, ಕೊಪ್ಪಳ ಜಿಲ್ಲೆಯ ವಿದ್ಯಾರ್ಥಿಗಳು ಭಾನುವಾರ ನಡೆದ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಗೆ (ನೀಟ್‌) ಗೈರಾಗಿದ್ದಾರೆ.

ಶನಿವಾರ ರಾತ್ರಿ 9.15ಕ್ಕೆ ಹೊಸಪೇಟೆಗೆ ಬರಬೇಕಿದ್ದ ರೈಲು ರಾತ್ರಿ 12.45ಕ್ಕೆ ಬಂದಿದೆ. ತಡರಾತ್ರಿ 2ಗಂಟೆಗೆ ಬಳ್ಳಾರಿ ಮೂಲಕ ಪಯಣ ಬೆಳೆಸಿದೆ. ಭಾನುವಾರ ಬೆಳಿಗ್ಗೆ ಏಳು ಗಂಟೆಗೆ ರೈಲು ಅರಸೀಕೆರೆ ರೈಲು ನಿಲ್ದಾಣ ತಲುಪಿತ್ತು. ವಿಷಯ ತಿಳಿದು ವಿದ್ಯಾರ್ಥಿಯೊಬ್ಬ ರೈಲ್ವೆ ಸಚಿವರಿಗೆ ಟ್ವೀಟ್‌ ಮಾಡಿದ್ದಾನೆ. 

* ಇದನ್ನೂ ಓದಿ: ರೈಲು ವಿಳಂಬ: ನೀಟ್ ಪರೀಕ್ಷೆಯಿಂದ ನೂರಾರು ವಿದ್ಯಾರ್ಥಿಗಳು ವಂಚಿತ​

‘ಬೆಂಗಳೂರಿನಲ್ಲಿ ನೀಟ್‌ ಪರೀಕ್ಷೆ ಬರೆಯಲು ಹಂಪಿ ಎಕ್ಸಪ್ರೆಸ್‌ ರೈಲಿನ ಮೂಲಕ ಬರುತ್ತಿದ್ದೇವೆ. ಈಗ ಸಮಯ ಬೆಳಿಗ್ಗೆ ಏಳು ಗಂಟೆ. ಬೆಂಗಳೂರು ತಲುಪಲು ಇನ್ನೂ 180 ಕಿ.ಮೀ. ಕ್ರಮಿಸಬೇಕಿದೆ’ ಎಂದು ಸಾಯಿ ಶ್ರೀನಿವಾಸ್‌ ಎಂಬುವರು ಟ್ವೀಟ್‌ ಮಾಡಿದ್ದಾರೆ.

ರೈಲಿನಲ್ಲಿ ಬಳ್ಳಾರಿ, ಕೊಪ್ಪಳ ಹಾಗೂ ಹುಬ್ಬಳ್ಳಿ ವಿದ್ಯಾರ್ಥಿಗಳಿದ್ದರು ಎಂದು ತಿಳಿದು ಬಂದಿದೆ. ಆದರೆ, ವಿದ್ಯಾರ್ಥಿಗಳ ನಿಖರ ಸಂಖ್ಯೆ ತಿಳಿದು ಬಂದಿಲ್ಲ. ಪ್ರತಿದಿನ ಸಂಜೆ ಆರು ಗಂಟೆಗೆ ಹುಬ್ಬಳ್ಳಿಯಿಂದ ಪಯಣ ಬೆಳೆಸುವ ರೈಲು ಮರುದಿನ ಆರು ಗಂಟೆಗೆ ಬೆಂಗಳೂರು ತಲುಪುತ್ತದೆ.

* ಇದನ್ನೂ ಓದಿ: ಹಂಪಿ ಎಕ್ಸ್‌ಪ್ರೆಸ್ ಮಾರ್ಗ ಬದಲಾವಣೆಯ ಮಾಹಿತಿ ನೀಡಲಾಗಿತ್ತು: ರೈಲ್ವೆ ಇಲಾಖೆ

‘ವಿದ್ಯಾರ್ಥಿಗಳು ಪರೀಕ್ಷೆ ಬಗ್ಗೆ ಈ ರೀತಿ ನಿರ್ಲಕ್ಷ್ಯ ತೋರುವುದು ಸರಿಯಲ್ಲ. ಪರೀಕ್ಷೆ ನಿಗದಿಯಾದ ಒಂದು ದಿನ ಮುಂಚಿತವಾಗಿಯೇ ಬೆಂಗಳೂರಿಗೆ ಹೋಗಬೇಕಿತ್ತು’ ಎಂದು ಕೆಲವರು ಟ್ವೀಟ್‌ ಮಾಡಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು