ಗ್ರಾಮಗಳ ಪ್ರತಿ ಮನೆಗೆ ಶುದ್ಧ ನೀರು

ಮಂಗಳವಾರ, ಜೂಲೈ 23, 2019
25 °C
2022ರ ವೇಳೆಗೆ ಗ್ರಾಮೀಣ ಭಾಗದ ಪ್ರತಿ ಕುಟುಂಬಕ್ಕೆ ವಿದ್ಯುತ್‌ ಪೂರೈಕೆ ಮತ್ತು ಎಲ್‌ಪಿಜಿ ಸಂಪರ್ಕ

ಗ್ರಾಮಗಳ ಪ್ರತಿ ಮನೆಗೆ ಶುದ್ಧ ನೀರು

Published:
Updated:

ನವದೆಹಲಿ: ಗ್ರಾಮೀಣ ಪ್ರದೇಶದ ಪ್ರತಿ ಮನೆಗೂ 2024ರ ವೇಳೆಗೆ ಪೈಪ್‌ಲೈನ್‌ ಮೂಲಕ ಶುದ್ಧ ಕುಡಿಯುವ ನೀರು ಪೂರೈಸಲು ಉದ್ದೇಶಿಸಲಾಗಿದ್ದು ಇದಕ್ಕಾಗಿ ' ಹರ್‌ ಘರ್‌ ಜಲ್‌’ ಯೋಜನೆ ಜಾರಿಗೆ ತರಲು ನಿರ್ಧರಿಸಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದರು.

ಇದನ್ನೂ ಓದಿ: ಕೇಂದ್ರ ಬಜೆಟ್‌ 2019: ಯಾವುದು ದುಬಾರಿ? ಯಾವುದು ಅಗ್ಗ?​

ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರು ಪೂರೈಸುವುದು ಸರ್ಕಾರದ ಆದ್ಯತೆ. ಈ ದಿಸೆಯಲ್ಲಿ ಪ್ರಮುಖ ಹೆಜ್ಜೆಯಾಗಿ ಜಲ ಶಕ್ತಿ ಸಚಿವಾಲಯವನ್ನು ರೂಪಿಸಲಾಗಿದೆ. ಜಲ್‌ ಜೀವನ್‌ ಮಿಷನ್‌ನಡಿ ಪ್ರತಿ ಮನೆಗೆ ನೀರು ಪೂರೈಸಲು ಈ ಸಚಿವಾಲಯವು ರಾಜ್ಯಗಳ ಜತೆಗೆ ಕಾರ್ಯ ನಿರ್ವಹಿಸಲಿದೆ ಎಂದರು.

ಇದನ್ನೂ ಓದಿ: ಬಜೆಟ್ ವಿಶ್ಲೇಷಣೆ | ಮುಚ್ಚುಮರೆಯ ಆಟ, ಅಂಕಿಸಂಖ್ಯೆ ಮಾಟ, ಆರ್ಥಿಕ ಸ್ಥಿತಿ ಅಸ್ಪಷ್ಟ​

ಸ್ವಾತಂತ್ರ್ಯೋತ್ಸವದ 75ನೇ ವರ್ಷ 2022ರ ವೇಳೆಗೆ ಗ್ರಾಮೀಣ ಭಾಗದ ಪ್ರತಿ ಕುಟುಂಬಕ್ಕೆ ವಿದ್ಯುತ್‌ ಪೂರೈಕೆ ಮತ್ತು ಎಲ್‌ಪಿಜಿ ಸಂಪರ್ಕ ಕಲ್ಪಿಸಲಾಗುವುದು. ಸರ್ಕಾರದ ಸೌಲಭ್ಯ ಪಡೆಯಬಯಸುವ ಎಲ್ಲಾ ಕುಟುಂಬಗಳಿಗೂ ಈ ಯೋಜನೆ ತಲುಪಲಿದೆ.

ಗ್ರಾಮ ಸಡಕ್‌ ಯೋಜನೆ: ಪ್ರಧಾನ ಮಂತ್ರಿ ಗ್ರಾಮ ಸಡಕ್‌ ಯೋಜನೆಯು (ಪಿಎಂಜಿಎಸ್‌ವೈ) ಗ್ರಾಮೀಣ ಪ್ರದೇಶಗಳಲ್ಲಿ ಸಾಮಾಜಿಕ– ಆರ್ಥಿಕ ಲಾಭಗಳನ್ನು ತಂದುಕೊಟ್ಟಿದೆ. ಅರ್ಹ ವಸತಿ ಪ್ರದೇಶಗಳಿಗೆ ಸಾರ್ವತ್ರಿಕ ಸಂಪರ್ಕ ಸಾಧಿಸಲು ಕಾಮಗಾರಿಯನ್ನು ತ್ವರಿತಗೊಳಿಸಲಾಗಿದೆ. ಅರ್ಹ ಮತ್ತು ಸಾಧ್ಯತೆ ಇರುವ ಎಲ್ಲಾ ವಸತಿ ಪ್ರದೇಶಗಳನ್ನು ರಸ್ತೆ ಮೂಲಕ ಸಂಪರ್ಕಿಸುವ ಕಾರ್ಯವನ್ನು 2019ರೊಳಗೆ ಪೂರ್ಣಗೊಳಿಸುವ ಗುರಿ ಹಾಕಿಕೊಳ್ಳಲಾಗಿದೆ. ಈ ಹಿಂದೆ 2022ರವೆಗೆ ಕಾಲಾವಧಿ ನಿಗದಿಪಡಿಸಿದ್ದು ಇದನ್ನು ಕಡಿಮೆ ಮಾಡಲಾಗಿದೆ ಎಂದರು.

ಬಜೆಟ್‌ನ ಸಮಗ್ರ ಮಾಹಿತಿಗೆ https://www.prajavani.net/budget-2019 ಲಿಂಕ್ ಕ್ಲಿಕ್ ಮಾಡಿ

‘ಇಂತಹ ಶೇಕಡಾ 97ರಷ್ಟು ವಸತಿಪ್ರದೇಶಗಳಿಗೆ  ಸರ್ವ ಋತು ಸಂಪರ್ಕ ಕಲ್ಪಿಸಲಾಗಿದೆ ಎಂದು ಹೇಳಲು ನನಗೆ ಸಂತೋಷವಾಗುತ್ತದೆ. ಕಳೆದ ಒಂದು ಸಾವಿರ ದಿನಗಳಲ್ಲಿ ದಿನಕ್ಕೆ 130 ಕಿ.ಮೀ– 135 ಕಿ.ಮೀವರೆಗಿನ ರಸ್ತೆ ನಿರ್ಮಾಣ ಕಾಮಗಾರಿ ಮಾಡುವ ಗುರಿ ಹೊಂದಲಾಗಿತ್ತು. ತ್ವರಿತವಾಗಿ ಕಾಮಗಾರಿ ಕೈಗೊಂಡಿದ್ದರಿಂದ ಇದು ಸಾಧ್ಯವಾಯಿತು’ ಎಂದು ಮಾಹಿತಿ ನೀಡಿದರು.

ಬದಲಾದ ಆರ್ಥಿಕ ಪರಿಸ್ಥಿತಿಯಲ್ಲಿ ಗ್ರಾಮಗಳನ್ನು ಸಂಪರ್ಕಿಸುವ ರಸ್ತೆಗಳು ಗ್ರಾಮೀಣ ಮಾರುಕಟ್ಟೆ ತಲುಪುವಂತೆ ಅವುಗಳನ್ನು ಮೇಲ್ದರ್ಜೆಗೇರಿಸುವುದು ಅಗತ್ಯ. ಇದಕ್ಕಾಗಿ ಯೋಜನೆಯ 3ನೇ ಹಂತದಲ್ಲಿ ಮುಂದಿನ ಐದು ವರ್ಷಗಳಲ್ಲಿ ₹ 80,250 ವೆಚ್ಚದಲ್ಲಿ 1,25,000 ಕಿ.ಮೀ ಗ್ರಾಮೀಣ ರಸ್ತೆಗಳನ್ನು ಮೇಲ್ದರ್ಜೆಗೇರಿಸಲು ಮತ್ತು ರಾಷ್ಟ್ರೀಯ ಹೆದ್ದಾರಿಗಳ ಗ್ರಿಡ್‌ ರಚಿಸಲು ಉದ್ದೇಶಿಸಲಾಗಿದೆ.

ಬಜೆಟ್‌ ನಂತರ ಎಷ್ಟು ಟ್ಯಾಕ್ಸ್‌ ಕಟ್ಟಬೇಕು? http://bit.ly/30esPwk ಲಿಂಕ್ ಕ್ಲಿಕ್ ಮಾಡಿ, ಲೆಕ್ಕಹಾಕಿ

ಎಲ್ಲರಿಗೆ ವಸತಿ: ಪ್ರಧಾನಮಂತ್ರಿ ಆವಾಸ್‌ ಯೋಜನೆಯಡಿ (ಪಿಎಂಎವೈ) ಮುಂದಿನ ಎರಡು ವರ್ಷಗಳಲ್ಲಿ ‘ಪ್ರತಿಯೊಬ್ಬರಿಗೂ ವಸತಿ’ ಗುರಿ ಸಾಧಿಸಲಾಗುವುದು. ಈ ಅವಧಿಯಲ್ಲಿ 1.95 ಕೋಟಿ ಮನೆಗಳನ್ನು ನಿರ್ಮಿಸಲಾಗುವುದು.

ಈ ಯೋಜನೆಯಡಿ ಮನೆಗಳ ನಿರ್ಮಾಣವನ್ನು ಈ ಹಿಂದೆ 314 ದಿನಗಳಲ್ಲಿ ಪೂರ್ಣಗೊಳಿಸಲಾಗುತ್ತಿತ್ತು. ಆದರೆ ಈಗ ಆಧುನಿಕ ತಂತ್ರಜ್ಞಾನದ ಸೌಲಭ್ಯದಿಂದಾಗಿ ಈ ಅವಧಿ ಕಡಿಮೆಯಾಗಲಿದ್ದು 114 ದಿನಗಳಲ್ಲೇ ಮನೆಗಳು ನಿರ್ಮಾಣಗೊಳ್ಳಲಿವೆ.

ಪಿಎಂಎವೈ– (ಗ್ರಾಮೀಣ) 2ನೇ ಹಂತದಲ್ಲಿ 2019–20ರಿಂದ 2021–22ನೇ ಅವಧಿಯಲ್ಲಿ 1.95 ಕೋಟಿ ಮನೆಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಲಾಗುವುದು. ಈ ಮನೆಗಳಲ್ಲಿ ಎಲ್‌ಪಿಜಿ, ವಿದ್ಯುತ್‌ ಮತ್ತು ಶೌಚಾಲಯದಂತಹ ಸೌಲಭ್ಯಗಳು ಇರುತ್ತವೆ.

ಇಂಟರ್‌ನೆಟ್‌ ಸೌಲಭ್ಯ: ಭಾರತ್‌ ನೆಟ್‌ ಯೋಜನೆಯಡಿ ಗ್ರಾಮೀಣ ಭಾರತದಲ್ಲಿ ಇಂಟರ್‌ನೆಟ್‌ ಸಂಪರ್ಕ ಒದಗಿಸುವ ಕಾರ್ಯವನ್ನು ಸರ್ಕಾರ ತ್ವರಿತಗೊಳಿಸಲಿದೆ. ಇದಕ್ಕೆ ಸಾರ್ವಕಾಲಿಕ ಸೇವಾ ಬದ್ಧತಾ ನಿಧಿಯ (ಯುಎಸ್‌ಒಎಫ್‌) ನೆರವು ಪಡೆಯಲಿದೆ.

ರಾಷ್ಟ್ರದ ಪ್ರತಿ ಪಂಚಾಯತ್‌ನಲ್ಲಿನ ಸ್ಥಳೀಯ ಸಂಸ್ಥೆಗಳಿಗೆ ಇಂಟರ್‌ನೆಟ್‌ ಸಂಪರ್ಕ ಒದಗಿಸುವ ಗುರಿಯನ್ನು ಭಾರತ್‌ ನೆಟ್‌ ಹೊಂದಿದೆ. ಇದರಿಂದ ನಗರ– ಗ್ರಾಮೀಣ ಭಾರತ ಭಾಗದ ತಾರತಮ್ಯ ನಿವಾರಣೆಯಾಗಲಿದೆ ಎಂದು ಆಶಿಸಲಾಗಿದೆ.

2019ರ ಮೇ ಅಂತ್ಯದ ವೇಳೆಗೆ ಎಲ್ಲಾ 2.5 ಲಕ್ಷ ಗ್ರಾಮ ಪಂಚಾಯ್ತಿಗಳನ್ನು ಹೈಸ್ಪೀಡ್‌ ಬ್ರಾಡ್‌ಬ್ಯಾಂಡ್‌ ಸೌಲಭ್ಯ ಒದಗಿಸಲಾಗಿದೆ.

ಭಾರತ್‌ನೆಟ್‌ನಡಿ 3,33,195 ಕಿ.ಮೀವರೆಗೆ ಆಪ್ಟಿಕಲ್‌ ಫೈಬರ್‌ ಕೇಬಲ್‌ ಅಳವಡಿಸಿದ್ದು 1,28,118 ಗ್ರಾಮಪಂಚಾಯ್ತಿಗಳಿಗೆ ಸಂಪರ್ಕ ಒದಗಿಸಿದೆ. ಈವರೆಗೆ ಪ್ರಧಾನ ಮಂತ್ರಿ ಗ್ರಾಮೀಣ ಡಿಜಿಟಲ್‌ ಸಾಕ್ಷರತಾ ಅಭಿಯಾನ ಯೋಜನೆಯಡಿ ಗ್ರಾಮೀಣ ಭಾಗದ ಸುಮಾರು 2 ಕೋಟಿ ಜನರನ್ನು ತಲುಪಲಾಗಿದೆ ಎಂದರು.

ಪ್ರಧಾನಮಂತ್ರಿ ಅವರ ಮಹತ್ವಾಕಾಂಕ್ಷೆಯ ಉಜ್ವಲ ಯೋಜನೆ ಮತ್ತು ಸೌಲಭ್ಯ ಯೋಜನೆಗಳು ಗ್ರಾಮೀಣ ಪ್ರದೇಶದಲ್ಲಿ ಪ್ರತಿ ಕುಟುಂಬದ ಜೀವನವನ್ನು ಬದಲು ಮಾಡಿದೆ. ಈಗಾಗಲೇ ಈ ಭಾಗದಲ್ಲಿ 7 ಕೋಟಿ ಎಲ್‌ಪಿಜಿ ಸಂಪರ್ಕ ನೀಡಲಾಗಿದೆ ಎಂದರು.

ಮೀನುಗಾರರಿಗಾಗಿ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯನ್ನು ಮೀನುಗಾರಿಕಾ ಇಲಾಖೆ ಜಾರಿಗೆ ತರಲಾಗಿದೆ.  ಬಹುತೇಕ ಜನರು ಗ್ರಾಮಗಳಲ್ಲಿ ವಾಸಿಸುತ್ತಿದ್ದು ಕೃಷಿ ಮತ್ತು ಸಾಂಪ್ರದಾಯಿಕ ಉದ್ದಿಮೆಗಳನ್ನು ಅವಲಂಬಿಸಿದ್ದಾರೆ. ಇವರಿಗಾಗಿ ‘ಸಾಂಪ್ರದಾಯಿಕ ಉದ್ದಿಮೆಗಳ ಪುನರುಜ್ಜೀವನ ಮತ್ತು ಉನ್ನತೀಕರಣಕ್ಕಾಗಿ ನಿಧಿ ಯೋಜನೆ’  ಜಾರಿಗೆ ತರಲಾಗುವುದು ಎಂದರು.

 ಮಹಾತ್ಮ ಗಾಂಧಿ ಹೇಳಿದ್ದ  ’ಗ್ರಾಮಗಳಲ್ಲಿ ಭಾರತದ ಆತ್ಮ ಅಡಗಿದೆ’ ಎಂಬ ಮಾತನ್ನೂ ಸಚಿವೆ ತಮ್ಮ ಭಾಷಣದಲ್ಲಿ ಉದ್ಧರಿಸಿದರು.

ಪ್ರಮುಖ ಅಂಶಗಳು....

l ‘ಹರ್‌ ಘರ್‌ ಜಲ್‌’ ಯೋಜನೆ 2030ರ ವೇಳೆಗೆ ಪೂರ್ಣಗೊಳಿಸಲು ಬದ್ಧ ಎಂದು 2017ರ ಮಾರ್ಚ್‌ನಲ್ಲಿ ಪ್ರಕಟಿಸಿದ್ದ ಸರ್ಕಾರ

l ರಾಷ್ಟ್ರದಾದ್ಯಂತ ನೀರಿನ ಕೊರತೆ ಕಾರಣ 6 ವರ್ಷ ಮೊದಲೇ ಅಂದರೆ 2024ರಲ್ಲಿ ಈ ಯೋಜನೆ ಪೂರ್ಣಗೊಳಿಸಲು ನಿರ್ಧಾರ

l ಜಲ ಶಕ್ತಿ  ಸಚಿವಾಲಯಕ್ಕೆ 2019– 20ನೇ ಸಾಲಿನಲ್ಲಿ ₹ 28,261 ಕೋಟಿ ನಿಗದಿ

l ಮೋದಿ ಸರ್ಕಾರದ ಎರಡನೇ ಅವಧಿಯಲ್ಲಿ  ಜಲ ಶಕ್ತಿ ಸಚಿವಾಲಯದಲ್ಲಿ ಕುಡಿಯುವ ನೀರು ಸಚಿವಾಲಯ, ಜಲ ಸಂಪನ್ಮೂಲ ಮತ್ತು ಗಂಗಾ ಪುನರುಜ್ಜೀವನ ಸಚಿವಾಲಯ ವಿಲೀನ

l 50 ಸಾವಿರ ಕುಶಲಕರ್ಮಿಗಳ ಸಬಲೀಕರಣಕ್ಕಾಗಿ ಪ್ರಸಕ್ತ ಸಾಲಿನಲ್ಲಿ 100 ಹೊಸ ಕ್ಲಸ್ಟರ್‌ಗಳ ರಚನೆ

l ಬುಡಕಟ್ಟು ವರ್ಗಗಳ ಜನರ ಶ್ರೀಮಂತ ಸಂಸ್ಕೃತಿಯ ರಕ್ಷಣೆಗೆ ಎಲ್ಲಾ ಕ್ರಮ

l ಬುಡಕಟ್ಟು ವರ್ಗಗಳ ಜನಜೀವನ ಬಿಂಬಿಸುವ ಡಿಜಿಟಲ್‌ ಸಂಗ್ರಹಾಲಯ ಸ್ಥಾಪನೆ

l ಒಟ್ಟಾರೆ ಗ್ರಾಮೀಣ ಅಭಿವೃದ್ಧಿ ಯೋಜನೆಗಳಿಗೆ ಶೇ 4.4ರಷ್ಟು ಹಣ ಹೆಚ್ಚಳ ಆದರೆ ನರೇಗಾ, ಪಿಎಂಎವೈಗೆ ನಿಗದಿ ಪಡಿಸಿದ ಮೊತ್ತದಲ್ಲಿ ಸ್ವಲ್ಪ ಇಳಿಕೆ

l ನರೇಗಾಕ್ಕೆ 2018–19ರಲ್ಲಿ ನಿಗದಿ ಪಡಿಸಿದ್ದ ಅಂದಾಜು ವೆಚ್ಚ ₹ 61.084 ಕೋಟಿ. 2019–20ರ ಅವಧಿಯಲ್ಲಿ ನಿಗದಿಪಡಿಸಿರುವ ಅಂದಾಜು ವೆಚ್ಚ ₹ 60 ಸಾವಿರ ಕೋಟಿ

l ಕಳೆದ ಐದು ವರ್ಷಗಳಲ್ಲಿ ಪಿಎಂಎವೈ–ಜಿ ಅಡಿ ಗ್ರಾಮೀಣ ಪ್ರದೇಶಗಳಲ್ಲಿ ಒಟ್ಟು 1.54 ಕೋಟಿ ಮನೆಗಳ ನಿರ್ಮಾಣ

l ಕೊಯ್ಲು ಯಂತ್ರೋಪಕರಣ, ಹನಿ ನೀರಾವರಿ ಸಲಕರಣೆಗಳು, ಯಾಂತ್ರಿಕ ಸ್ಪ್ರೇಯರ್‌ ಹಾಗೂ ನಿರ್ದಿಷ್ಟ ಜೈವಿಕ ಕೀಟನಾಶಕಗಳು, ಮೇಲೆ ವಿಧಿಸಲಾಗಿದ್ದ ಶೇ 18ರಷ್ಟು ಜಿಎಸ್‌ಟಿಯನ್ನು ಶೇ 12ಕ್ಕೆ ಇಳಿಸಲಾಗಿದೆ.

l ಗೊಬ್ಬರ ಗ್ರೇಡ್‌ನ ಫಾಸ್ಪಾರಿಕ್‌ ಆ್ಯಸಿಡ್‌ (ಗಂಧಕಾಮ್ಲ)ಮೇಲಿನ ಜಿಎಸ್‌ಟಿ ಪ್ರಮಾಣವನ್ನು ಶೇ 18ರಿಂದ ಶೇ 5ಕ್ಕೆ ಇಳಿಕೆ

l ಕೃಷಿ ಉತ್ಪನ್ನಗಳ ದಾಸ್ತಾನಿಗೆ ಬಳಸುವ ಉಗ್ರಾಣದಲ್ಲಿ ಧೂಮೀಕರಣ (ಫ್ಯೂಮಿಗೇಷನ್‌) ಸೇವೆಗೆ ಸಂಪೂರ್ಣ ತೆರಿಗೆ ವಿನಾಯಿತಿ ನೀಡಲಾಗಿದೆ.

ಸಾಮಾಜಿಕ ಅಭಿವೃದ್ಧಿ ಸಾಕಾರಕ್ಕೆ ನೆರವು

ಸ್ಟ್ಯಾಂಡ್‌ ಅಪ್‌ ಇಂಡಿಯಾ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನವೋದ್ಯಮಿಗಳಿಗೆ ನೆರವು ಮುಂದುವರಿಕೆ. ಈ ಸಮುದಾಯದವರು ವ್ಯಾಪಾರ–ಉದ್ದಿಮೆ ಆರಂಭಿಸಲು 15ನೇ ಹಣಕಾಸು ಆಯೋಗದ ಅವಧಿವರೆಗೂ (2020–25) ಹಣಕಾಸು ನೆರವು ಒದಗಿಸುವುದು.

ಉದ್ದಿಮೆ ಸ್ಥಾಪಿಸುವವರ ಬೇಡಿಕೆಗೆ ಅನುಸಾರವಾಗಿ ಬ್ಯಾಂಕುಗಳು ಹಣಕಾಸು ನೆರವು ನೀಡಲಿವೆ. ಶೌಚಗುಂಡಿಗಳನ್ನು ಸ್ವಚ್ಛಗೊಳಿಸುವ ಯಂತ್ರಗಳಿಂದ ಹಿಡಿದು ರೋಬೊಟ್‌ಗಳ ಖರೀದಿ ವರೆಗೆ ಈ ನೆರವು ಸಿಗಲಿದೆ.

ಸಮಾಜ ಕಲ್ಯಾಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಸ್ವಯಂ ಸೇವಾ ಸಂಸ್ಥೆಗಳು ನಿಧಿ ಸಂಗ್ರಹಿಸಲು ಅನುಕೂಲವಾಗುವಂತೆ ‘ಸೋಷಿಯಲ್‌ ಸ್ಟಾಕ್‌ ಎಕ್ಸ್‌ಚೇಂಜ್‌’ (ಎಸ್‌ಎಸ್‌ಇ) ಸ್ಥಾಪಿಸಲಾಗುತ್ತದೆ. ಇದು ಸೆಕ್ಯುರಿಟೀಸ್‌ ಆ್ಯಂಡ್‌ ಎಕ್ಸ್‌ಚೇಂಜ್‌ ಬೋರ್ಡ್‌ ಆಫ್‌ ಇಂಡಿಯಾ (ಸೆಬಿ) ನಿಯಂತ್ರಣದಲ್ಲಿ ಕಾರ್ಯ ನಿರ್ವಹಿಸುವುದು. ಈ ಸ್ವಯಂ ಸಂಸ್ಥೆಗಳು ಎಸ್‌ಎಸ್‌ಇ ಮೂಲಕ ಈಕ್ವಿಟಿ, ಸಾಲಪತ್ರಗಳು ಅಥವಾ ಮ್ಯೂಚುವಲ್‌ ಫಂಡ್‌ ರೂಪದಲ್ಲಿ ಬಂಡವಾಳ ಸಂಗ್ರಹ ಮಾಡಲು ಅವಕಾಶ ನೀಡಲಾಗುತ್ತದೆ.

ರಾಷ್ಟ್ರೀಯ ಪೌಷ್ಟಿಕಾಂಶ ಅಭಿಯಾನಕ್ಕೆ ₹3,400 ಕೋಟಿ ಹಂಚಿಕೆ. ಅಪೌಷ್ಟಿಕತೆ, ರಕ್ತಹೀನತೆ ಹಾಗೂ ಕಡಿಮೆ ತೂಕದಿಂದ ಬಳಲುವ 10 ಕೋಟಿ ಮಕ್ಕಳಿಗೆ ಈ ಅಭಿಯಾನದಡಿ ಪೌಷ್ಟಿಕ ಆಹಾರ ಪೂರೈಕೆ ಮಾಡಲಾಗುತ್ತದೆ. ಇದಕ್ಕೆ ಪೂರಕವಾಗಿರುವ ಅಂಗನವಾಡಿ ಕೇಂದ್ರಗಳೂ ಉತ್ತಮವಾಗಿರಬೇಕಲ್ಲವೇ? ಅದಕ್ಕಾಗಿ ಅಂಗನವಾಡಿಗಳ ಅಭಿವೃದ್ಧಿಗಾಗಿ ದೊಡ್ಡ ಮೊತ್ತವಾದ ₹ 19,834.37 ಕೋಟಿ ಹಂಚಿಕೆ ಮಾಡಲಾಗಿದೆ. ರಾಷ್ಟ್ರೀಯ ಶಿಶುಪಾಲನಾ ಯೋಜನೆಯ ಅನುದಾನವನ್ನು ₹ 30 ಕೋಟಿಯಿಂದ ₹ 50 ಕೋಟಿಗೆ ಹೆಚ್ಚಿಸಲಾಗಿದೆ. ಉದ್ಯೋಗದಲ್ಲಿರುವ ಮಹಿಳೆಯರು ತಮ್ಮ ಮಕ್ಕಳನ್ನು ಬಿಡುವ ಈ ಶಿಶುಪಾಲನಾ ಕೇಂದ್ರಗಳಿಗೆ (ಕ್ರೆಷ್‌) ಹೆಚ್ಚಿನ ಮೂಲಸೌಕರ್ಯ ಒದಗಿಸಲು ಸಾಧ್ಯವಾಗಲಿದೆ.

ಕೃಷಿ ಯಾಂತ್ರೀಕರಣ: ಸಿಗದ ಆದ್ಯತೆ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಕೃಷಿ ಯಾಂತ್ರೀಕರಣಕ್ಕೆ ಉತ್ತೇಜನ ನೀಡುವ ಯೋಜನೆಗಳನ್ನು ಘೋಷಿಸಿಲ್ಲ. ಫೆಬ್ರುವರಿಯಲ್ಲಿ ಮಂಡಿಸಲಾಗಿದ್ದ ಮಧ್ಯಂತರ ಬಜೆಟ್‌ನಲ್ಲಿ ಕೃಷಿ ಯಾಂತ್ರೀಕರಣ ಕ್ಷೇತ್ರಕ್ಕೆ ₹ 591.64 ಕೋಟಿ ಹಂಚಿಕೆ ಮಾಡಲಾಗಿತ್ತು. ಆದರೆ, ಈ ಬಜೆಟ್‌ನಲ್ಲಿ ಈ ಕ್ಷೇತ್ರಕ್ಕೆ ₹ 600 ಕೋಟಿ ಮಾತ್ರ ಹಂಚಿಕೆ ಮಾಡಿದ್ದಾರೆ.

ಕೃಷಿ ಉತ್ಪನ್ನಗಳ ಬೆಲೆ ಕುಸಿದ ಸಂದರ್ಭದಲ್ಲಿ ರೈತರ ನೆರವಿಗೆ ಧಾವಿಸಲು ನೆರವು ಘೋಷಿಸಲಾಗಿದೆ. ಮಾರುಕಟ್ಟೆ ಮಧ್ಯಪ್ರವೇಶ ಯೋಜನೆ ಹಾಗೂ ಬೆಂಬಲ ಬೆಲೆ ಯೋಜನೆಗೆ ಈ ಮೊದಲು ನೀಡಲಾಗಿದ್ದ ₹ 2,000 ಕೋಟಿಯನ್ನು ಈ ಬಜೆಟ್‌ನಲ್ಲಿ ₹ 3,000 ಕೋಟಿಗೆ ಹೆಚ್ಚಿಸಲಾಗಿದೆ.

ಪ್ರಧಾನ ಮಂತ್ರಿ ಅನ್ನದಾತ ಆಯ ಸಂರಕ್ಷಣಾ ಯೋಜನೆ (ಪಿಎಂ–ಎಎಎಸ್‌ಎಚ್ಎ) ಅನುದಾನವನ್ನು ₹ 100 ಕೋಟಿಯಿಂದ ₹ 1,500 ಕೋಟಿಗೆ ಹೆಚ್ಚಿಸಲಾಗಿದೆ. ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಗೆ (ಪಿಎಂಕೆಎಸ್‌ವೈ) ಈ ಬಾರಿ ₹ 3,500 ಕೋಟಿ ತೆಗೆದಿರಿಸಲಾಗಿದೆ. ಕಳೆದ ಹಣಕಾಸು ವರ್ಷದಲ್ಲಿ ಈ ಯೋಜನೆಗೆ ₹ 2,954.69 ಕೋಟಿ ಹಂಚಿಕೆ ಮಾಡಲಾಗಿತ್ತು.

***

ಉಚಿತ ಎಲ್‌ಪಿಜಿ ಯೋಜನೆ, ವಿದ್ಯುತ್‌ ಸಂಪರ್ಕ ಗ್ರಾಮೀಣ ಭಾರತವನ್ನು ಬದಲಾಯಿಸಲಿದೆ. ಭಾರತ್‌ಮಾಲಾ, ಸಾಗರ್‌ಮಾಲಾ ಮತ್ತು ಉಡಾನ್‌ ಗ್ರಾಮೀಣ– ನಗರ ಭಾರತಕ್ಕೆ ಸೇತುವೆಯಾಗಲಿದೆ.

–ನಿರ್ಮಲಾ ಸೀತರಾಮನ್‌, ಹಣಕಾಸು ಸಚಿವೆ

ಇವನ್ನೂ ಓದಿ...

ಬಜೆಟ್‌ | ಸೆಸ್‌, ಆಮದು ಸುಂಕ ಹೆಚ್ಚಳ: ಪೆಟ್ರೋಲ್‌, ಡೀಸೆಲ್‌, ಚಿನ್ನ ದುಬಾರಿ​

ಬಜೆಟ್ | ₹5 ಲಕ್ಷಕ್ಕಿಂತ ಕಡಿಮೆ ಗಳಿಕೆ ಹೊಂದಿದವರಿಗೆ ಆದಾಯ ತೆರಿಗೆ ಇಲ್ಲ ​

ಬಜೆಟ್‌ | ಮಹಿಳೆಯರ ಶ್ರೇಯೋಭಿವೃಧ್ಧಿಗೆ ‘ನಾರಿ ಟು ನಾರಾಯಣಿ‘

ಬಜೆಟ್ | ರಾಜ್ಯಗಳಿಗೆ ಸಮಾನ ವಿದ್ಯುತ್‌ಗಾಗಿ ‘ಒನ್‌ ನೇಷನ್‌ ಒನ್‌ ಗ್ರಿಡ್‌’ ಯೋಜನೆ​

ಹಣಕಾಸು ಸಚಿವೆ ನಿರ್ಮಲಾ ಅವರಿಂದ ಬಜೆಟ್‌ ಮಂಡನೆ ಆರಂಭ 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !