ಶುಕ್ರವಾರ, ಜುಲೈ 30, 2021
20 °C
ಗ್ರಾಮೀಣ ಕುಟುಂಬಗಳಿಗೆ ಶುದ್ಧ ಕುಡಿಯುವ ನೀರು...

ಜಲ ಜೀವನ ಯೋಜನೆ ಪೂರ್ಣಗೊಳಿಸಲು ರಾಜ್ಯ ಸರ್ಕಾರಕ್ಕೆ ಕೇಂದ್ರ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಗ್ರಾಮೀಣ ಭಾಗದ ಪ್ರತಿ ಕುಟುಂಬಕ್ಕೂ ಶುದ್ಧ ಕುಡಿಯುವ ನೀರು ಪೂರೈಸುವ ನಿಟ್ಟಿನಲ್ಲಿ ಆರಂಭಿಸಲಾದ ‘ಜಲ ಜೀವನ’ ಯೋಜನೆಯ ಕಾಮಗಾರಿಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸುವಂತೆ ಕೇಂದ್ರವು ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಸೋಮವಾರ ಈ ಕುರಿತು ಪತ್ರ ಬರೆದಿರುವ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರಸಿಂಗ್‌ ಶೆಖಾವತ್‌, ಪ್ರತಿ ಮನೆಗೆ ನಲ್ಲಿಯ ಸಂಪರ್ಕ ಕಲ್ಪಿಸಿ ಶುದ್ಧ ಕುಡಿಯುವ ನೀರು ಒದಗಿಸುವ ಗುರಿ ಹೊಂದಿರುವ ಈ ಯೋಜನೆಯನ್ನು 2023ರೊಳಗೆ ಪೂರ್ಣಗೊಳಿಸುವಂತೆ ಮನವಿ ಮಾಡಿದ್ದಾರೆ.

ಪ್ರತಿ ಕುಟುಂಬಕ್ಕೆ ನಿತ್ಯ 55 ಲೀಟರ್‌ ಶುದ್ಧ ನೀರು ಒದಗಿಸುವ ಈ ಯೋಜನೆಯ ಪ್ರಯೋಜನವನ್ನು ರಾಜ್ಯದ 89.61 ಲಕ್ಷ ಕುಟುಂಬಗಳು ಪಡೆಯಲಿವೆ. ಪೈಕಿ ಈ ಯೋಜನೆ ಅಡಿ 24.41 ಲಕ್ಷ ಕುಟುಂಬಗಳಿಗೆ ಈಗಾಗಲೇ ನೀರು ಪೂರೈಕೆ ಸಂಪರ್ಕ ಕಲ್ಪಿಸಲಾಗಿದೆ.

ಕಳೆದ ವರ್ಷ ಯೋಜನೆ ಅಡಿ ಕೇವಲ 22,133 ಕುಟುಂಬಗಳಿಗೆ ಸಂಪರ್ಕ ಕಲ್ಪಿಸಲಾಗಿದೆ. 2020–21ನೇ ಸಾಲಿನಲ್ಲಿ 23.57 ಲಕ್ಷ ಕುಟುಂಬಗಳನ್ನು ಯೋಜನೆಯಡಿ ತರಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಯೋಜನೆಗಾಗಿ ಪ್ರಸಕ್ತ ಸಾಲಿನಲ್ಲಿ ₹ 1,810.40 ಕೋಟಿ ಅನುದಾನವನ್ನು ರಾಜ್ಯಕ್ಕೆ ಒದಗಿಸಲಾಗಿದ್ದು, ರಾಜ್ಯದ ಪಾಲುದಾರಿಕೆಯ ಮೊತ್ತವೂ ಒಳಗೊಂಡಂತೆ ಒಟ್ಟು ₹ 2,734 ಕೋಟಿ ಲಭ್ಯವಿದೆ. ಅಗತ್ಯವಿದ್ದರೆ ಇನ್ನಷ್ಟು ಅನುದಾನವನ್ನು ಒದಗಿಸಲಾಗುವುದು. ಅಭಿಯಾನದ ಮಾದರಿಯಲ್ಲಿ ಯೋಜನೆಯನ್ನು ಸಾಕಾರಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ತಿಳಿಸಿದೆ.

ಫ್ಲೋರೈಡ್‌ ಸಮಸ್ಯೆ ಎದುರಿಸುತ್ತಿರುವ ಗ್ರಾಮೀಣ ಪ್ರದೇಶಗಳನ್ನೂ ಯೋಜನೆ ಅಡಿ ಆಯ್ಕೆ ಮಾಡಿ ಶುದ್ಧ ಕುಡಿಯುವ ನೀರು ಪೂರೈಸುವಂತೆ ಸಚಿವರು ಸೂಚಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು