ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿಯನ್ನು ಜಶೋದಾ ಪತಿ ಎನ್ನಬಹುದೇ: ನಾಯ್ಡು ಪ್ರಶ್ನೆ

Last Updated 11 ಫೆಬ್ರುವರಿ 2019, 4:09 IST
ಅಕ್ಷರ ಗಾತ್ರ

ಗುಂಟೂರು:‘ನಾನೊಬ್ಬ ಒಳ್ಳೆಯ ತಂದೆ ಹಾಗೂ ಉತ್ತಮ ಪತಿ ಎಂದು ಹೇಳಿಕೊಳ್ಳಲು ಹೆಮ್ಮೆ ಪಡುತ್ತೇನೆ. ಆದರೆ, ನೀವು ಒಳ್ಳೆಯ ಪತಿಯೇ. ಗಂಡನಾಗಿ ನೀವು ನಿಮ್ಮ ಕರ್ತವ್ಯ ನಿಭಾಯಿಸಿದ್ದೀರಾ’ ಎಂದು ಆಂಧ್ರ ಪ್ರದೇಶದ ಮುಖ್ಯಮಂತ್ರಿ ಎನ್‌. ಚಂದ್ರಬಾಬು ನಾಯ್ಡುಪ್ರಧಾನಿ ಮೋದಿ ಅವರಿಗೆ ತಿರುಗೇಟು ನೀಡಿದ್ದಾರೆ.

ಗುಂಟೂರಿನಲ್ಲಿ ಭಾನುವಾರ ನಡೆದ ರ‍್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನಾಯ್ಡು ಅವರನ್ನು ‘ನಾರಾ ಲೋಕೇಶ್‌ ಅವರ ಅಪ್ಪ’ ಎಂದು ಸಂಬೋಧಿಸಿ ಲೇವಡಿ ಮಾಡಿದ್ದರು.

ಅದರ ಬೆನ್ನಲ್ಲೇ ವಿಜಯವಾಡದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ನಾಯ್ಡು ಅವರು ಮೋದಿ ವೈವಾಹಿಕ ಜೀವನವನ್ನು ಕೆದಕಿದರು.

‘ನನ್ನನ್ನು ನಾರಾ ಲೋಕೇಶ್‌ ಅಪ್ಪ ಎನ್ನುವುದಾದರೆ, ನಾನು ನಿಮ್ಮನ್ನು ಜಶೋದಾ ಬೆನ್‌ ಪತಿ ಎಂದು ಕರೆಯಬಹುದೇ’ ಎಂದು ನಾಯ್ಡು ಪ್ರಶ್ನಿಸಿದ್ದಾರೆ.

‘ನಾರಾ ಲೋಕೇಶ್‌ನ ಅಪ್ಪ ಎಂದು ಗುರುತಿಸಿಕೊಳ್ಳಲು ಹೆಮ್ಮೆಯಾಗುತ್ತದೆ. ಭುವನೇಶ್ವರಿಯ ಪತಿ ಎಂದು ಕರೆಸಿಕೊಳ್ಳಲು ಗರ್ವ ಪಡುತ್ತೇನೆ. ದೇವಾಂಶನ ಅಜ್ಜ ಎಂದು ಕರೆದರೆ ಸಂತೋಷ ಇಮ್ಮಡಿಯಾಗುತ್ತದೆ. ಒಟ್ಟಾರೆ ಕೌಂಟುಂಬಿಕ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದ ಬಗ್ಗೆ ನನಗೆ ಹೆಮ್ಮೆ ಇದೆ’ ಎಂದು ನಾಯ್ಡು ಭಾವುಕರಾಗಿ ಹೇಳಿದರು.

‘ಕೈ ಹಿಡಿದ ಪತ್ನಿ ಜಶೋದಾ ಬೆನ್‌ ಅವರ ಜತೆ ಸಂಸಾರ ಮಾಡದೆ, ವಿಚ್ಛೇದನವನ್ನೂ ನೀಡದೆ ಆ ಮಹಿಳೆಯನ್ನು ಕೈಬಿಟ್ಟ ನಿಮ್ಮನ್ನು ಒಳ್ಳೆಯ ಗಂಡ ಎಂದು ಕರೆಯಲು ಸಾಧ್ಯವೇ’ ಎಂದು ಖಾರವಾಗಿ ಪ್ರಶ್ನಿಸಿದರು.

‘ಇದು ತೀರಾ ವೈಯಕ್ತಿಕ ವಿಷಯವಾದ್ದರಿಂದ ಸಾರ್ವಜನಿಕವಾಗಿ ಪ್ರಸ್ತಾಪಿಸಲು ಮುಜುಗರವಾಗುತ್ತದೆ. ಎಂತಹ ಕಡು ವಿರೋಧಿಯಾದರೂ ಅವರ ವೈಯಕ್ತಿಕ ವಿಷಯಗಳನ್ನು ಮುಂದಿಟ್ಟುಕೊಂಡು ವಾಗ್ದಾಳಿ ನಡೆಸುವುದು ನನ್ನ ಜಾಯಮಾನವಲ್ಲ. ಆದರೆ, ಅಂಥ ಅನಿವಾರ್ಯ ಸ್ಥಿತಿಯನ್ನು ನೀವೇ ಸೃಷ್ಟಿಸಿದ್ದೀರಿ. ನಿಮ್ಮ ಹೇಳಿಕೆಗಳು ನಿಜಕ್ಕೂ ನೋವು ತಂದಿದೆ’ ಎಂದು ನಾಯ್ಡು ಅವರು ಮೋದಿ ವಿರುದ್ಧ ಹರಿಹಾಯ್ದರು.

‘ನನ್ನನ್ನು ನಿಂದಿಸುವ ಸಲುವಾಗಿಯೇ ಪ್ರಧಾನಿ ಮೋದಿ ಅವರು ದೆಹಲಿಯಿಂದ ಇಲ್ಲಿಯವರೆಗೆ ಬಂದಿದ್ದರು. ಜಗನ್‌ ಮೋಹನ್‌ ರೆಡ್ಡಿ ನೇತೃತ್ವದ ವೈಎಸ್‌ಆರ್ ಕಾಂಗ್ರೆಸ್‌ ಪಕ್ಷವು ರ‍್ಯಾಲಿಗೆ ಕರೆ ತಂದಿದ್ದ ಜನರು ಮೋದಿ ಮಾತುಗಳಿಗೆ ಮರುಳಾಗಲಿಲ್ಲ’ ಎಂದರು.

ಎಲ್ಲ ರಂಗಗಳಲ್ಲಿಯೂ ಗುಜರಾತ್‌ಗಿಂತ ವೇಗವಾಗಿ ಬೆಳೆಯುತ್ತಿರುವ ಆಂಧ್ರ ಪ್ರದೇಶದ ಅಭಿವೃದ್ಧಿ ಕಂಡು ಪ್ರಧಾನಿಗೆ ಮತ್ಸರವಾಗಿದೆ. ಇದೇ ಕಾರಣಕ್ಕೆ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಲು ಅವರು ನಿರಾಕರಿಸಿದರು ಎಂದು ನಾಯ್ಡು ದೂರಿದರು.

ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ಬೇಡಿಕೆಯ ಬಗ್ಗೆ ವೈಎಸ್‌ಆರ್‌ ಕಾಂಗ್ರೆಸ್‌ ಮುಖಂಡ ಜಗನ್‌ ರೆಡ್ಡಿ ಮೌನವಾಗಿದ್ದರು. ಎಲ್ಲಿ ಪ್ರಧಾನಿ ಮೋದಿ ತಮ್ಮ ವಿರುದ್ಧ ಮತ್ತೆ ಸಿಬಿಐ ತನಿಖೆ ಆರಂಭಿಸಬಹುದು ಎಂಬ ಭೀತಿ ಅವರನ್ನು ಕಾಡುತ್ತಿದೆ ಎಂದರು.

‘ಜಗನ್‌ ಅವರಂತೆ ನನಗೆ ಯಾವ ಭೀತಿಯೂ ಇಲ್ಲ. ಬಿಜೆಪಿಯನ್ನು ಧೈರ್ಯದಿಂದ ಎದುರಿಸುವ ತಾಕತ್ತು ನನಗಿದೆ. ಮೋದಿ ಪ್ರಾದೇಶಿಕ ಭಾವನೆಗಳ ಜತೆ ಚೆಲ್ಲಾಟವಾಡುತ್ತಿದ್ದಾರೆ. ಮೋದಿ ಅವರಿಂದ ದೇಶವನ್ನು ರಕ್ಷಿಸಲು ತೆಲುಗುದೇಶಂ ರಾಷ್ಟ್ರೀಯ ಮಟ್ಟದಲ್ಲಿ ಎಲ್ಲ ಪ್ರಾದೇಶಿಕ ಪಕ್ಷಗಳನ್ನು ಒಗ್ಗೂಡಿಸುತ್ತಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT