ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದ್ರಯಾನ–2ರ ಉಡ್ಡಯನ ರದ್ದು

ರಾಕೆಟ್‌ ವ್ಯವಸ್ಥೆಯಲ್ಲಿ ತಾಂತ್ರಿಕ ಸಮಸ್ಯೆ
Last Updated 15 ಜುಲೈ 2019, 19:22 IST
ಅಕ್ಷರ ಗಾತ್ರ

ಶ್ರೀಹರಿಕೋಟಾ:ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ‘ಚಂದ್ರಯಾನ–2’ ನೌಕೆಯ ಉಡ್ಡಯನವು ತಾಂತ್ರಿಕ ತೊಂದರೆಯಿಂದ ಕೊನೆಯ ನಿಮಿಷಗಳಲ್ಲಿ ರದ್ದಾಗಿದೆ. ಇದೇ ತಿಂಗಳಲ್ಲಿ ಮತ್ತೊಮ್ಮೆ ಉಡ್ಡಯನಕ್ಕೆ ಪ್ರಯತ್ನ ನಡೆಸಲಾಗುತ್ತದೆ ಎಂದು ಇಸ್ರೊ ತಿಳಿಸಿದೆ.

ಪೂರ್ವನಿಗದಿಯಂತೆ ಸೋಮವಾರ ನಸುಕಿನ 2 ಗಂಟೆ 51ನೇ ನಿಮಿಷದಲ್ಲಿ ಉಡ್ಡಯನ ನಡೆಯಬೇಕಿತ್ತು. ಆದರೆ ಈ ಸಮಯಕ್ಕೆ ಸರಿಯಾಗಿ 56 ನಿಮಿಷ ಮತ್ತು 24 ಸೆಕೆಂಡ್‌ಗಳು ಬಾಕಿ ಇರುವಾಗ ಕಾರ್ಯಾಚರಣೆಯನ್ನು ರದ್ದುಗೊಳಿಸಿಲಾಗಿದೆ ಎಂದು ಇಸ್ರೊ ಅಧಿಕೃತವಾಗಿ ಘೋಷಿಸಿತು.

ಈ ಕಾರ್ಯಾಚರಣೆಗೆ ಸಾಕ್ಷಿಯಾಗಲು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಇಲ್ಲಿನ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರಕ್ಕೆ ಬಂದಿದ್ದರು. ಅಲ್ಲದೆ ನೂರಾರು ಮಂದಿ ಈ ಮಹತ್ವದ ಕ್ಷಣವನ್ನು ಕಣ್ತುಂಬಿಕೊಳ್ಳಲು ಬಾಹ್ಯಾಕಾಶ ಕೇಂದ್ರದ ಆವರಣದಲ್ಲಿ ಸೇರಿದ್ದರು. ಪೂರ್ವನಿಗದಿಯಂತೆ ಎಲ್ಲವೂ ನಡೆಯಿತು.

‘ಕಾರ್ಯಾಚರಣೆ ಸರಿಯಾಗೇ ನಡೆಯುತ್ತಿದೆ. ಉಡ್ಡಯನ ವಾಹನಕ್ಕೆ ಇಂಧನವನ್ನು ಯಶಸ್ವಿಯಾಗಿ ತುಂಬಿಸಲಾಗಿದೆ’ ಎಂದುರಾತ್ರಿ 1.34ರಲ್ಲಿ ಇಸ್ರೊ ಅಧಿಕಾರಿಗಳು ಮಾಹಿತಿ ನೀಡಿದ್ದರು. ಆದರೆ ನಂತರದ ನಿಮಿಷಗಳಲ್ಲಿ ಕಾರ್ಯಾಚರಣೆಯನ್ನು ರದ್ದು ಮಾಡಲಾಗಿದೆ ಎಂದು ಇಸ್ರೊ ಘೋಷಿಸಿತು.

‘ಉಡ್ಡಯನ ವಾಹನದಲ್ಲಿ ಸಣ್ಣ ತಾಂತ್ರಿಕ ಸಮಸ್ಯೆಯೊಂದು ಎದುರಾಗಿತ್ತು. ಅದನ್ನು ಕಡೆಗಣಿಸಲು ನಾವು ತಯಾರಿರಲಿಲ್ಲ. ಹೀಗಾಗಿ ಈ ನಿರ್ಧಾರ ತೆಗೆದುಕೊಳ್ಳಲಾಯಿತು’ ಎಂದು ಇಸ್ರೊ ಮಾಹಿತಿ ನೀಡಿತು.

ಈವರೆಗೆ ಅಮೆರಿಕ, ರಷ್ಯಾ ಮತ್ತು ಚೀನಾ ಮಾತ್ರ ಚಂದ್ರನ ಅಂಗಳದಲ್ಲಿ ತಮ್ಮ ರೋವರ್ ನೌಕೆಗಳನ್ನು ಇಳಿಸಿವೆ. ವರ್ಷದ ಹಿಂದೆ ಇಸ್ರೇಲ್‌ ಇಂಥದ್ದೇ ಪ್ರಯತ್ನವನ್ನು ಕೈಗೊಂಡಿತ್ತು. ಆದರೆ ಆ ಕಾರ್ಯಾಚರಣೆ ವಿಫಲವಾಗಿತ್ತು. ಚಂದ್ರಯಾನ–2ರ ಉಡ್ಡಯನವೂ ಇದೇ ಜನವರಿಯಲ್ಲಿ ನಡೆಯಬೇಕಿತ್ತು. ಆದರೆ ಇಸ್ರೇಲ್‌ನ ವೈಫಲ್ಯದ ನಂತರ ಉಡ್ಡಯನವನ್ನು ಇಸ್ರೊ ಮುಂದೂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT