ಮಂಗಳವಾರ, ಜುಲೈ 5, 2022
21 °C

ಮೋಹಿಸುವೆ ಎಂದು ಸಂದೇಶ ಕಳುಹಿಸಿದ್ದಕ್ಕೆ ಕ್ಷಮೆಯಾಚಿಸಿದ ಚೇತನ್‌ ಭಗತ್

ಏಜೆನ್ಸಿಸ್ Updated:

ಅಕ್ಷರ ಗಾತ್ರ : | |

ನವದೆಹಲಿ: ತನುಶ್ರೀ ದತ್ತಾ ಲೈಂಗಿಕ ಕಿರುಕುಳದ ಬಗ್ಗೆ ಹೇಳಿಕೊಂಡ ನಂತರ ದೇಶದಲ್ಲಿ #Metoo ಅಭಿಯಾನ ಚುರುಕು ಪಡೆಯುತ್ತಿದ್ದು, ವಿವಿಧ ಕ್ಷೇತ್ರದ ಮಹಿಳೆಯರೂ ತಮ್ಮ ಜೀವನದಲ್ಲಿ ನಡೆದ ಕಹಿ ಘಟನೆಗಳನ್ನು ಬಿಚ್ಚಿಡುತ್ತಿದ್ದಾರೆ. ಕೆಲ ಪ್ರಮುಖ ವ್ಯಕ್ತಿಗಳ ಮೇಲೂ ಆರೋಪಗಳು ಕೇಳಿಬರುತ್ತಿವೆ.

ಕಥೆಗಾರ ಚೇತನ್‌ ಭಗತ್‌ ಮಹಿಳೆಯೊಬ್ಬಳಿಗೆ ಕಳುಹಿಸಿದ ಸಂದೇಶಗಳನ್ನು ಪತ್ರಕರ್ತೆ ಶೀನಾ, ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಪ್ರಕಟಿಸಿ, ಲೈಂಗಿಕ ಕಿರುಕುಳದ ಆರೋಪಗಳ ಬಗ್ಗೆ ಹಂಚಿಕೊಂಡಿದ್ದಾರೆ.

ಅವರ ಆ ಮಾತುಕತೆಯಲ್ಲಿ ಚೇತನ್‌, ಆ ಮಹಿಳೆಗೆ ‘ಮೋಹಿಸಬೇಕು’ (wooing) ಎಂದು ಹೇಳಿದ್ದಾರೆ. ‘ನೀವು ಸ್ವೀಟ್‌, ಕ್ಯೂಟ್‌ , ತಮಾಷೆಯ ಮತ್ತು ಒಳ್ಳೆಯ ಮನುಷ್ಯರಾಗಿದ್ದೀರಿ.. ಹಾಗಾಗಿ ನಿಮ್ಮನ್ನು ಪ್ರೇಮಿಸಬೇಕೆಂದು ಅನಿಸುತ್ತಿದೆ’ ಎಂದಿದ್ದಾರೆ.

ಅದಕ್ಕೆ ಆ ಮಹಿಳೆ, ‘ಮದುವೆಯಾದ ಎಲ್ಲಾ ಗಂಡಸರ ರೀತಿ ನೀವೂ ಆಡಬೇಡಿ. ನೀವು ಅವರಿಗಿಂತ ಉತ್ತಮರು’ ಎಂದು ಅವರ ಮಾತುಗಳನ್ನು ತಿರಸ್ಕರಿಸುವ ಧಾಟಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಹೀಗದ್ದೂ ಚೇತನ್‌ ಮತ್ತೆ ಮತ್ತೆ ಅದೇ ಮಾತುಗಳನ್ನು ಮುಂದುವರಿಸಿದ್ದಾರೆ.

ಸಂಭಾಷಣೆ ನಿಜವೆಂದ ಚೇತನ್‌ ಭಗತ್‌

ಶೀನಾ ಅವರು ಪ್ರಕಟಿಸಿರುವ ವಾಟ್ಸ್‌ಆ್ಯಪ್‌ ಸಂಭಾಷಣೆಯ ಚಿತ್ರಗಳು ನಿಜವೆಂದು ಚೇತನ್‌ ಭಗತ್‌ ಹೇಳಿದ್ದು, ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಸುದೀರ್ಘ ಸ್ಪಷ್ಟನೆ ನೀಡಿದ್ದಾರೆ.

ಆ ಮಹಿಳೆ ಮತ್ತು ತಮ್ಮ ಪತ್ನಿ ಅನುಷಾ ಅವರಿಗೆ ಚೇತನ್‌ ಕ್ಷಮೆ ಕೇಳಿದ್ದಾರೆ. ಜೊತೆಗೆ ಅದೊಂದು ಸ್ನೇಹಪೂರಕ ಸಂಭಾಷಣೆಯಾಗಿದ್ದು, ಅದನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದಿದ್ದಾರೆ. 

‘ಮೊದಲನೆಯದಾಗಿ ಈ ಸಂಭಾಷಣೆ ಬಹಳ ವರ್ಷಗಳ ಹಿಂದೆ ನಡೆದಿರುವುದು. ಅಲ್ಲದೆ, ಆ ಮಹಿಳೆಯನ್ನು ನಾನು ಎರಡು–ಮೂರು ಬಾರಿ ಭೇಟಿಯಾಗಿದ್ದೇನೆ. ನಮ್ಮ ನಡುವೆ ಒಂದು ಉತ್ತಮ ಸ್ನೇಹವಿತ್ತು. ನಾವು ಆ ಮೆಸೆಜ್‌ಗಳಲ್ಲಿ ಹೇಳಿರುವಂತೆ ಆಕೆಯ ಬಗ್ಗೆ ಒಂದು ಗಟ್ಟಿ ಬಾಂಧವ್ಯದ ಭಾವವೊಂದು ನನ್ನಲ್ಲಿ ಮೂಡಿತ್ತು’ ಎಂದು ಹೇಳಿಕೊಂಡಿದ್ದಾರೆ. 

ಮೋಹಿಸಬೇಕು ಎಂಬ ಮಾತು ಆರಂಭವಾಗಿದ್ದೇಕೆ ಎನ್ನುವ ಬಗ್ಗೆಯೂ ವಿವರಿಸಿದ್ದಾರೆ. ಸಂಬಂಧಗಳ ಕುರಿತು ಪುಸ್ತಕವೊಂದನ್ನು ಬರೆಯುವ ವೇಳೆ ಈ ಮಾತುಕತೆ ನಡೆದಿತ್ತು. ಇದನ್ನು ಹೊರತುಪಡಿಸಿ ಯಾವುದೇ ರೀತಿಯ ಕಾಮುಕ ಆಲೋಚನೆ ಅಲ್ಲಿ ವ್ಯಕ್ತವಾಗಿರಲಿಲ್ಲ ಎಂದು ಹಂಚಿಕೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು