ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈಲಿನಲ್ಲಿ ಚಿದಂಬರಂ 1ನೇ ದಿನ: ವಾಕ್‌, ಪುಸ್ತಕ,ಪತ್ರಿಕೆ ಓದು, ಪುತ್ರನೊಡನೆ ಮಾತು

Last Updated 6 ಸೆಪ್ಟೆಂಬರ್ 2019, 18:49 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಐಎನ್‌ಎಕ್ಸ್‌ ಮೀಡಿಯ ಹಗರಣದ ಆರೋಪಿ ಯಾಗಿ, ತಿಹಾರ್‌ ಜೈಲನ್ನು ಸೇರಿರುವ ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ಅವರು ಗುರುವಾರ ಮರದ ಹಲಗೆಯೊಂದರ ಮೇಲೆ ನಿದ್ರಿಸಿ ರಾತ್ರಿ ಕಳೆದರು.

‘ಶುಕ್ರವಾರ ಬೆಳಿಗ್ಗೆ ಜೈಲಿನೊಳಗೇ ಸ್ವಲ್ಪ ನಡೆದಾಡಿದರು, ನಂತರ ಬೆಳಗಿನ ಉಪಾಹಾರದ ರೂಪದಲ್ಲಿ ಚಹಾ ಹಾಗೂ ಗಂಜಿಯನ್ನು ಸೇವಿಸಿದರು. ಬಳಿಕ ಸ್ವಲ್ಪ ಹೊತ್ತನ್ನು ಧಾರ್ಮಿಕ ಪುಸ್ತಕ ಹಾಗೂ ದಿನಪತ್ರಿಕೆಗಳನ್ನು ಓದುತ್ತಾ ಕಳೆದರು. ಆನಂತರ ಅವರ ಪುತ್ರ ಕಾರ್ತಿ ಚಿದಂಬರಂ ಬಂದು ಅವರನ್ನು ಭೇಟಿಮಾಡಿದರು’ ಎಂದು ಅಧಿಕಾರಿಗಳು ತಿಳಿಸಿದರು.

ಚಿದಂಬರಂ ಅವರನ್ನು ತಿಹಾರ್‌ ಜೈಲಿನ ಕೊಠಡಿ ಸಂಖ್ಯೆ 7ರಲ್ಲಿ ಇರಿಸಲಾಗಿದೆ. ಸಾಮಾನ್ಯವಾಗಿ ಜಾರಿ ನಿರ್ದೇಶನಾಲಯವು ತನಿಖೆ ನಡೆಸುತ್ತಿರುವ ಪ್ರಕರಣಗಳ ಆರೋಪಿಗಳಿಗೇ ಈ ಕೊಠಡಿಯನ್ನು ನೀಡಲಾಗುತ್ತದೆ. ಮಲಗಲು ತಮಗೆ ಮಂಚವೊಂದನ್ನು ಒದಗಿಸುವಂತೆ ಚಿದಂಬರಂ ಮನವಿ ಮಾಡಿದ್ದಾರೆ. ಆದರೆ ‘ಅವರಿಗೆ ಮಂಚದ ಅಗತ್ಯವಿದೆ ಎಂದು ಆರೋಗ್ಯ ತಪಾಸಣೆ ಮಾಡುವ ಜೈಲಿನ ವೈದ್ಯರು ಸೂಚಿಸಿದರೆ ಮಾತ್ರ ಅದನ್ನು ಒದಗಿಸಲಾಗುವುದು’ ಎಂದು ಮೂಲಗಳು ತಿಳಿಸಿವೆ. ಜೈಲಿನಲ್ಲಿ ಪ್ರತ್ಯೇಕ ಕೊಠಡಿ ಹಾಗೂ ಪಾಶ್ಚಾತ್ಯ ಶೈಲಿಯ ಶೌಚಾಲಯ ವ್ಯವಸ್ಥೆಯನ್ನು ಒದಗಿಸಲು ಕೋರ್ಟ್‌ ಸೂಚಿಸಿತ್ತು. ಆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಚಿದಂಬರಂ ಅವರನ್ನು 14 ದಿನಗಳ ಅವಧಿಗೆ ನ್ಯಾಯಾಂಗ ಕಸ್ಟಡಿಗೆ ನೀಡಲಾಗಿದೆ. ಅಷ್ಟರೊಳಗೆ ಅವರಿಗೆ ಜಾಮೀನು ಲಭಿಸದಿದ್ದರೆ 74ನೇ ಜನ್ಮ ದಿನವನ್ನು (ಸೆ. 16) ಅವರು ಜೈಲಿನಲ್ಲೇ ಆಚರಿಸಬೇಕಾಗಬಹುದು. ಚಿದಂಬರಂ ಅವರನ್ನು ಈ ಜೈಲಿಗೆ ಕಳುಹಿಸುವ ಸಾಧ್ಯತೆಯನ್ನು ನಿರೀಕ್ಷಿಸಿದ್ದ ಅಧಿಕಾರಿಗಳು ಮೊದಲೇ ಕೊಠಡಿಯನ್ನು ಸಿದ್ಧಪಡಿಸಿಟ್ಟಿದ್ದರು. ಐಎನ್‌ಎಕ್ಸ್‌ ಹಗರಣದ ಆರೋಪದ ಮೇಲೆ ಕಳೆದ ವರ್ಷ ಬಂಧನಕ್ಕೆ ಒಳಗಾಗಿದ್ದ ಕಾರ್ತಿ ಚಿದಂಬರಂ ಅವರೂ ತಿಹಾರ್‌ ಜೈಲಿನ ಇದೇ ಕೊಠಡಿಯಲ್ಲಿ 12 ದಿನಗಳನ್ನು ಕಳೆದಿದ್ದರು.

ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್‌ನಾಥ್‌ ಅವರ ಸೋದರ ಸಂಬಂಧಿ, ಬ್ಯಾಂಕ್‌ ವಂಚನೆ ಹಗರಣ ಹಾಗೂ ಅಗಸ್ಟಾ ವೆಸ್ಟ್‌ಲ್ಯಾಂಡ್‌ ಹೆಲಿಕಾಪ್ಟರ್‌ ಖರೀದಿ ಹಗರಣದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ರತುಲ್‌ ಪುರಿ ಅವರನ್ನೂ ಇದೇ ಜೈಲಿನಲ್ಲಿರಿಸಲಾಗಿದೆ.

***

ಮರದ ಹಲಗೆಯ ಮೇಲೆ ನಿದ್ರಿಸಿ ರಾತ್ರಿ ಕಳೆದ ಮಾಜಿ ಗೃಹಸಚಿವ

ಬೆಳಿಗ್ಗೆ ಗಂಜಿ, ಚಹಾ ಸೇವನೆ

ಜಾಮೀನು ಲಭಿಸದಿದ್ದರೆ ಜೈಲಿನಲ್ಲೇ ಜನ್ಮದಿನಾಚರಣೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT