ಶನಿವಾರ, ಏಪ್ರಿಲ್ 4, 2020
19 °C

ಜೈಲಿನಲ್ಲಿದ್ದರೆ ಕೊರೊನಾ ವೈರಸ್ ಆತಂಕ: ಜಾಮೀನು ಕೋರಿದ ಕ್ರಿಶ್ಚೇನ್ ಮೈಕೆಲ್

ಏಜೆನ್ಸಿಸ್ Updated:

ಅಕ್ಷರ ಗಾತ್ರ : | |

ನವದೆಹಲಿ: ಸಿಬಿಐ ಮತ್ತು ಜಾರಿ ನಿರ್ದೇಶನಾಲಯಗಳ ವಿಚಾರಣೆ ಎದುರಿಸುತ್ತಿರುವ ಅಗಸ್ಟಾ ವೆಸ್ಟ್‌ಲ್ಯಾಂಡ್‌ ಹೆಲಿಕಾಪ್ಟರ್‌ ಹಗರಣದ ಪ್ರಮುಖ ಆರೋಪಿ ಕ್ರಿಶ್ಚೇನ್ ಮೈಕೆಲ್ ತಿಹಾರ್ ಜೈಲಿನಲ್ಲಿ ಕೊರೊನಾ ವೈರಸ್‌ ಸೋಂಕು ತಗುಲುವ ಅಪಾಯ ಇರುವುದರಿಂದ ತನಗೆ ಮಧ್ಯಂತರ ಜಾಮೀನು ನೀಡಬೇಕು ಎಂದು ಗುರುವಾರ ಕೋರ್ಟ್‌ ಮೊರೆ ಹೋಗಿದ್ದಾನೆ.

'ನನಗೀಗ 59 ವರ್ಷ. ಆರೋಗ್ಯ ಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಇಂಥ ಸಂದರ್ಭದಲ್ಲಿ ಕೋವಿಡ್-19 ಸೋಂಕು ತಗುಲಿದರೆ ನನಗದು ಮಾರಣಾಂತಿಕವಾಗುತ್ತದೆ. ನಾನು ಈಗಾಗಲೇ ಹಲವು ಬಗೆಯ ಸೋಂಕುಗಳಿಂದ ನರಳುತ್ತಿದ್ದೇನೆ. ಹೀಗಾಗಿ ಇತರ ಕೈದಿಗಳಿಗಿಂತಲೂ ಕೋವಿಡ್-19 ಸೋಂಕಿನ ಅಪಾಯ ನನಗೆ ಹೆಚ್ಚು' ಎಂದು ಮೈಕೆಲ್ ತನ್ನ ಅರ್ಜಿಯಲ್ಲಿ ತಿಳಿಸಿದ್ದಾನೆ.

'ಕೋವಿಡ್-19 ಪಾಸಿಟಿವ್ ಇರಬಹುದಾದ ಕೆಲ ಕೈದಿಗಳ ಜೊತೆಗೆ ಇರುವುದು ಅಪಾಯಕಾರಿ. ವಯಸ್ಸು ಮತ್ತು ಈಗಾಗಲೇ ಅಸ್ತಿತ್ವದಲ್ಲಿರುವ ಅನಾರೋಗ್ಯಗಳಿಂದಾಗಿ ಅದು ನಮ್ಮ ಕಕ್ಷಿದಾರರಿಗೆ ಪ್ರಾಣಾಂತಿಕವಾಗಬಹುದು' ಎಂದು ಮೈಕೆಲ್ ಪರ ವಕೀಲರಾದ ಶ್ರೀರಾಮ್ ಪರಾಕ್ಕಟ್, ವಿಷ್ಣು ಶಂಕರ್ ಮತ್ತು ಅಜಿಯೊ ಕೆ.ಜೊಸೆಫ್ ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ಹೇಳಿದ್ದಾರೆ.

ಕೊರೊನಾ ವೈರಸ್‌ ವ್ಯಾಪಕವಾಗಿ ಹಬ್ಬುತ್ತಿರುವುದರಿಂದ ಜೈಲುಗಳಲ್ಲಿ ಜನಸಂದಣಿ ಕಡಿಮೆ ಮಾಡಬೇಕಿದೆ. ಹೀಗಾಗಿ 7 ವರ್ಷದವರೆಗೆ ಶಿಕ್ಷೆ ವಿಧಿಸಲು ಅರ್ಹವಾಗಿರುವ ಅಪರಾಧ ಎಸಗಿರುವ ಕೈದಿಗಳನ್ನು ಪೆರೋಲ್ ಅಥವಾ ಮಧ್ಯಂತರ ಜಾಮೀನಿನ ಮೇಲೆ ಹೊರಗೆ ಕಳಿಸಲು ಉನ್ನತ ಮಟ್ಟದ ಸಮಿತಿಗಳನ್ನು ರಾಜ್ಯ ಸರ್ಕಾರಗಳು ರಚಿಸಬೇಕು ಎಂಬ ಮಾರ್ಚ್ 16ರ ಸುಪ್ರೀಂ ಕೋರ್ಟ್‌ ಆದೇಶವನ್ನೂ ಮೈಕೆಲ್ ಪರ ಸಲ್ಲಿಸಲಾಗಿರುವ ಅರ್ಜಿ ಉಲ್ಲೇಖಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್‌ 24ರಂದು ಮಾಡಿದ ಭಾಷಣವನ್ನೂ ಮೈಕೆಲ್ ಮನವಿ ಉಲ್ಲೇಖಿಸಿದೆ. ಮೈಕೆಲ್ ಆರೋಗ್ಯವನ್ನು ಸತತ ನಿಗಾದಲ್ಲಿ ಇರಿಸಬೇಕಾಗಿದೆ. ಅವರಿಗೆ ಮನೆ ಮಾದರಿ ವಾತಾವರಣ ಬೇಕಿದೆ. ಆಗ ಮಾತ್ರ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಮನವಿಯಲ್ಲಿ ಹೇಳಲಾಗಿದೆ.

2018ರಲ್ಲಿ ಮೈಕೆಲ್ ಬಂಧನವಾಗಿತ್ತು. ಜನವರಿ 5, 2019ರಿಂದ ಮೈಕೆಲ್ ನ್ಯಾಯಾಂಗ ಬಂಧನದಲ್ಲಿದ್ದರು. ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ವಕೀಲರು ಮೈಕೆಲ್ ಜಾಮೀನು ಅರ್ಜಿಗೆ ತಗಾದೆ ಅರ್ಜಿ ಸಲ್ಲಿಸಿದ್ದರು. ಮೈಕೆಲ್‌ಗೆ ಉನ್ನತ ಸ್ಥಾನದಲ್ಲಿರುವ ಪ್ರಭಾವಿಗಳ ಒಡನಾಟವಿದೆ. ಆತ ಪ್ರಕರಣಕ್ಕೆ ಸಂಬಂಧಿಸಿದವರ ಮೇಲೆ ಪ್ರಭಾವ ಬೀರಬಹುದು ಎಂದು ವಾದಿಸಿದ್ದರು. ವಿಚಾರಣಾ ನ್ಯಾಯಾಲಯವು ಎರಡು ಬಾರಿ ಮೈಕೆಲ್ ಅರ್ಜಿಯನ್ನು ವಜಾ ಮಾಡಿತ್ತು. ಕೆಳಹಂತದ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಹೈಕೋರ್ಟ್‌ಗೆ ಮೈಕೆಲ್ ಮನವಿ ಮಾಡಿಕೊಂಡಿದ್ದರು.

ಜಾಮೀನು ಮಂಜೂರು ಮಾಡಲು ಸಾಕಷ್ಟು ಆಧಾರಗಳಿಲ್ಲ ಎಂದು ಸಿಬಿಐ ವಿಶೇಷ ನ್ಯಾಯಾಲಯ ಮೈಕೆಲ್ ಜಾಮೀನು ಅರ್ಜಿಯನ್ನು ತಳ್ಳಿಹಾಕಿತ್ತು. ದುಬೈ ಸರ್ಕಾರ ಹಸ್ತಾಂತರ ಮಾಡಿದ್ದ ಮೈಕೆಲ್‌ನನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಡಿಸೆಂಬರ್ 22, 2018ರಂದು ಬಂಧಿಸಿದ್ದರು.

ಕಳೆದ ವರ್ಷ ಜನವರಿ 5ರಂದು ಮೈಕೆಲ್‌ನನ್ನು ಜಾರಿ ನಿರ್ದೇಶನಾಯ ದಾಖಲಿಸಿದ್ದ ಪ್ರಕರಣದ ಮೇಲೆ ಜೈಲಿಗೆ ಕಳಿಸಲಾಗಿತ್ತು. ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ದಾಖಲಿಸಿದ್ದ ಮತ್ತೊಂದು ಪ್ರಕರಣದಲ್ಲಿಯೂ ಮೈಕೆಲ್‌ಗೆ ನ್ಯಾಯಾಲಯ ಬಂಧನ ವಿಧಿಸಲಾಗಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು