ನವದೆಹಲಿ: ಸುಪ್ರಿಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯ (ಸಿಜೆಐ) ಕಚೇರಿಯು ಸಾರ್ವಜನಿಕ ಪ್ರಾಧಿಕಾರ. ಹಾಗಾಗಿ ಈ ಕಚೇರಿ ಕೂಡ ಮಾಹಿತಿ ಹಕ್ಕು ಕಾಯ್ದೆಯ ವ್ಯಾಪ್ತಿಯಲ್ಲಿಯೇ ಬರುತ್ತದೆ ಎಂದು ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠವು ಬುಧವಾರ ಮಹತ್ವದ ತೀರ್ಪು ನೀಡಿದೆ.
ದೆಹಲಿ ಹೈಕೋರ್ಟ್ 2010ರಲ್ಲಿ ನೀಡಿದ್ದ ತೀರ್ಪನ್ನು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಪೀಠವು ಎತ್ತಿ ಹಿಡಿಯಿತು. ಸುಪ್ರೀಂ ಕೋರ್ಟ್‌ನ ಮಹಾ ಕಾರ್ಯದರ್ಶಿ ಮತ್ತು ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾ ಮಾಡಿತು.ನ್ಯಾಯಮೂರ್ತಿಗಳಾದ ಎನ್.ವಿ. ರಮಣ, ಡಿ.ವೈ. ಚಂದ್ರಚೂಡ್, ದೀಪಕ್ ಗುಪ್ತಾ ಮತ್ತು ಸಂಜೀವ್ ಖನ್ನಾ ಅವರು ಪೀಠದಲ್ಲಿದ್ದರು.
ಪೀಠವು ಮೂರು ಪ್ರತ್ಯೇಕ ತೀರ್ಪುಗಳನ್ನು ನೀಡಿದೆ. ಗೊಗೊಯಿ, ದೀಪಕ್ ಗುಪ್ತಾ ಮತ್ತು ಸಂಜೀವ್ ಖನ್ನಾ ಅವರು ಒಂದು ತೀರ್ಪು ಬರೆದರೆ, ರಮಣ ಮತ್ತು ಚಂದ್ರಚೂಡ್ ಪ್ರತ್ಯೇಕ ತೀರ್ಪುಗಳನ್ನು ಬರೆದಿದ್ದಾರೆ.
ಖಾಸಗಿತನದ ಹಕ್ಕು ಬಹಳ ಮುಖ್ಯವಾದುದು. ಹಾಗಾಗಿ, ಸಿಜೆಐ ಕಾರ್ಯಾಲಯದ ಮಾಹಿತಿಯನ್ನು ಬಹಿರಂಗಪಡಿಸುವಾಗ ಖಾಸಗಿತನದ ಹಕ್ಕು ಮತ್ತು ಪಾರದರ್ಶಕತೆಯ ನಡುವೆ ಸಮತೋಲನ ಇರಬೇಕು ಎಂದು ಮೂವರು ಜತೆಯಾಗಿ ನೀಡಿದ ತೀರ್ಪಿನಲ್ಲಿ ಹೇಳಲಾಗಿದೆ.
ನ್ಯಾಯಮೂರ್ತಿಗಳದ್ದು ಸಾಂವಿಧಾನಿಕ ಹುದ್ದೆ. ಅವರು ಸಾರ್ವಜನಿಕ ಕರ್ತವ್ಯವನ್ನೇ ನಿರ್ವಹಿಸುತ್ತಿರುತ್ತಾರೆ. ಹಾಗಾಗಿ, ಪೂರ್ಣ ರಕ್ಷಣೆಯಲ್ಲಿ ಕಾರ್ಯನಿರ್ವಹಿಸುವುದು ಸಾಧ್ಯವಿಲ್ಲ ಎಂದು ಚಂದ್ರಚೂಡ್ ಅವರು ತಮ್ಮ ತೀರ್ಪಿನಲ್ಲಿ ಹೇಳಿದ್ದಾರೆ.
ಹೈಕೋರ್ಟ್ ತೀರ್ಪು
ನ್ಯಾಯಾಂಗದ ಸ್ವಾತಂತ್ರ್ಯವು ನ್ಯಾಯಮೂರ್ತಿಗಳ ವಿಶೇಷಾಧಿಕಾರ ಅಲ್ಲ. ಅದು ಅವರ ಮೇಲೆ ಇರುವ ಹೊಣೆಗಾರಿಕೆ.ಸಿಜೆಐ ಕಚೇರಿಯು ಮಾಹಿತಿ ಹಕ್ಕು ಕಾಯ್ದೆಯ ಅಡಿಯಲ್ಲಿಯೇ ಇರಬೇಕು ಎಂದು ದೆಹಲಿ ಹೈಕೋರ್ಟ್ 2010ರ ಜನವರಿ 10ರಂದು ನೀಡಿದ್ದ ತೀರ್ಪುನಲ್ಲಿ ಹೇಳಿತ್ತು.
ಸುಪ್ರೀಂ ಕೋರ್ಟ್‌ನ ಆಗಿನ ಸಿಜೆಐ ಕೆ.ಜಿ.ಬಾಲಕೃಷ್ಣನ್ ಅವರಿಗೆ ಈ ತೀರ್ಪು ಹಿನ್ನಡೆ ಎಂದೇ ಪರಿಗಣಿಸಲಾಗಿತ್ತು. ನ್ಯಾಯಮೂರ್ತಿಗಳಿಗೆ ಸಂಬಂಧಿಸಿದ ಮಾಹಿತಿ ಬಹಿರಂಗಪಡಿಸುವುದನ್ನು ಅವರು ವಿರೋಧಿಸಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.