ಶುಕ್ರವಾರ, ಮಾರ್ಚ್ 5, 2021
29 °C

ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟಿಸಿದ ಮುಖ್ಯಮಂತ್ರಿಗಳಿವರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರ  ಸರ್ಕಾರ ಮತ್ತು ಸಿಬಿಐ ನಡೆ ವಿರೋಧಿಸಿ ಭಾನುವಾರ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಧರಣಿ ಸತ್ಯಾಗ್ರಹ ಆರಂಭಿಸಿದ್ದರು.

ತೃಣಮೂಲ ಕಾಂಗ್ರೆಸ್ ಪಕ್ಷದ ಮುಖ್ಯಸ್ಥೆ  64ರ ಹರೆಯದ ಮಮತಾ ಪ್ರಧಾನಿ ಮೋದಿಗೆ ಸೆಡ್ಡು ಹೊಡೆದು ನಿಂತಿದ್ದು, ನಮ್ಮ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಲು ಧೈರ್ಯವಿದೆಯೇ ?ಎಂದು ಕೇಂದ್ರ ಸರ್ಕಾರಕ್ಕೆ ಸವಾಲೆಸೆದಿದ್ದರು.

ಕೋಲ್ಕತ್ತ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ಅವರ ನಿವಾಸಕ್ಕೆ ವಿಚಾರಣೆಗಾಗಿ ಬಂದ ಸಿಬಿಐ ಅಧಿಕಾರಿಗಳನ್ನು ಕೋಲ್ಕತ್ತ ಪೊಲೀಸರು ವಶ ಪಡಿಸಿದ ನಾಟಕೀಯ ಘಟನೆ ಭಾನುವಾರ ನಡೆದಿತ್ತು. ಸಿಬಿಐ ಅಧಿಕಾರಿಗಳನ್ನು ಬಿಡುಗಡೆಗೊಳಿಸಿದ್ದರೂ, ಪೊಲೀಸರ ಕ್ರಮ ಪ್ರಶ್ನಿಸಿ ಸಿಬಿಐ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು.

ಇತ್ತ ಪೊಲೀಸ್ ಆಯುಕ್ತರನ್ನು ಸಿಬಿಐ ಪ್ರಶ್ನಿಸಿದ್ದರ ಬಗ್ಗೆ ದೀದಿ ಗರಂ ಆಗಿದ್ದಾರೆ. ಮಮತಾ ಅವರು ನಡೆಸುತ್ತಿರುವ ಧರಣಿ ಸತ್ಯಾಗ್ರಹಕ್ಕೆ ವಿಪಕ್ಷಗಳು ಬೆಂಬಲ ಸೂಚಿಸಿದ್ದು, ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಕೀಯದಲ್ಲಿ ಕುತೂಹಲಕಾರಿ ಬೆಳವಣಿಗೆಗಳು ಕಾಣುತ್ತಿವೆ.

ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟಿಸಿದ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ಇದೀಗ ಮಮತಾ ಬ್ಯಾನರ್ಜಿ ಹೆಸರು ಸೇರ್ಪಡೆಯಾಗಿದೆ.

ಅಂದ ಹಾಗೆ ಮಮತಾ ಬ್ಯಾನರ್ಜಿ ಧರಣಿ ನಡೆಸಿದ್ದು ಇದೇ ಮೊದಲೇನೂ ಅಲ್ಲ. 2006ರಲ್ಲಿ, ಆಗ ಮಮತಾ ವಿರೋಧ ಪಕ್ಷದ ನಾಯಕಿಯಾಗಿದ್ದರು. ಸಿಂಗೂರ್‌ನಲ್ಲಿ ಟಾಟಾ ಕಾರ್ ಘಟಕ ಸ್ಥಾಪಿಸುವುದನ್ನು ಪ್ರತಿಭಟಿಸಿ ಮಮತಾ 25 ದಿನಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಮಮತಾ ಅವರ ಆ ಪ್ರತಿಭಟನೆ ಪಶ್ಚಿಮ ಬಂಗಾಳದಲ್ಲಿ ಎಡಪಕ್ಷಗಳ ವಿರುದ್ಧ ಗೆಲ್ಲಲು ಸಹಕಾರಿಯಾಯಿತು.

ಈ ಹಿಂದೆ 2014 ಜನವರಿಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟಿಸಿದ್ದರು. ದೆಹಲಿ ಪೊಲೀಸರ ನಿಯಂತ್ರಣ ದೆಹಲಿ ಸರ್ಕಾರಕ್ಕೆ ಬೇಕು ಎಂದು ಒತ್ತಾಯಿಸಿ  ಕೇಜ್ರಿವಾಲ್ ಧರಣಿ ಕುಳಿತಿದ್ದರು. ಪ್ರಸ್ತುತ ದೆಹಲಿ ಪೊಲೀಸರ ನಿಯಂತ್ರಣ ಕೇಂದ್ರ ಸರ್ಕಾರದ ಕೈಯಲ್ಲಿದೆ.

ಇದೇ ರೀತಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟಿಸಿದ್ದು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತು ತಮಿಳುನಾಡು ಮುಖ್ಯಮಂತ್ರಿ ಇ. ಪಳನಿ ಸ್ವಾಮಿ.

 ಕೇರಳದ ಪಾಲಕ್ಕಾಡ್‍ನಲ್ಲಿ ರೈಲ್ವೆ ಕೋಚ್ ಫ್ಯಾಕ್ಟರಿ ಯೋಜನೆಯಿಂದ ಕೇಂದ್ರ ಸರ್ಕಾರ ಹಿಂದೆ ಸರಿಯುತ್ತಿದೆ ಎಂದು ಆರೋಪಿಸಿ ಕಳೆದ ಜೂನ್ ತಿಂಗಳಲ್ಲಿ ಪಿಣರಾಯಿ ವಿಜಯನ್ ತಿರುವನಂತಪುರಂನಲ್ಲಿರುವ ರೈಲ್ ಭವನದ ಹೊರಗೆ ಪ್ರತಿಭಟನೆ ನಡೆಸಿದ್ದರು.

ಕಾವೇರಿ ನಿರ್ವಹಣಾ ಮಂಡಳಿ ಮತ್ತು ಕಾವೇರಿ ನೀರು ನಿಯಂತ್ರಣಾ ಸಮಿತಿ ರಚನೆಗೆ ಆಗ್ರಹಿಸಿ ತಮಿಳುನಾಡು ಸಿಎಂ ಇ. ಪಳನಿಸ್ವಾಮಿ  ಏಪ್ರಿಲ್ ತಿಂಗಳಲ್ಲಿ ಒಂದು ದಿನ ಉಪವಾಸ ಸತ್ಯಾಗ್ರಹ ಮಾಡಿದ್ದರು. ಇವರೊಂದಿಗೆ ಉಪ ಮುಖ್ಯಮಂತ್ರಿ ಒ.ಪನ್ನೀರ್ ಸೆಲ್ವಂ ಕೂಡಾ ಜತೆಯಾಗಿದ್ದರು.

ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಬಜೆಟ್ ಕಲಾಪದ ಮೊದಲ ದಿನ ಕಪ್ಪು ಬಟ್ಟೆ ಧರಿಸಿ ಬಂದು ಪ್ರತಿಭಟಿಸಿದ್ದರು. ಕೇಂದ್ರ ಸರ್ಕಾರ ಆಂಧ್ರ ಪ್ರದೇಶದ ಬಗ್ಗೆ ಮಲತಾಯಿ ಧೋರಣೆ ತಳೆದಿದೆ ಮತ್ತು ಆಂಧ್ರಕ್ಕೆ ವಿಶೇಷ ಸ್ಥಾನಮಾನ ನೀಡಿದ ಭರವಸೆಯನ್ನು ಪೂರೈಸಿಲ್ಲ ಎಂದು ನಾಯ್ಡು ಕೇಂದ್ರ ವಿರುದ್ಧ ಕಿಡಿ ಕಾರಿದ್ದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು