ಶುಕ್ರವಾರ, ಏಪ್ರಿಲ್ 3, 2020
19 °C

ಟ್ರಂಪ್‌ ಬಳಿ ಪ್ರಶ್ನೆಗಳನ್ನಿಡಬಲ್ಲರೇ ಮೋದಿ? ಕಾಂಗ್ರೆಸ್‌ನಿಂದ ವಾಗ್ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಆಗಮನಕ್ಕೆ ಇನ್ನೇನು ಕ್ಷಣಗಣನೆ ಆರಂಭವಾಗಿರುವಾಗಲೇ, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಮುಂದೆ ಹಲವು ಪ್ರಶ್ನೆಗಳನ್ನು ಮುಂದಿಟ್ಟಿರುವ ಕಾಂಗ್ರೆಸ್‌, ಮೋದಿ ಈ ಬಗ್ಗೆ ಟ್ರಂಪ್‌ ಅವರ ಬಳಿ ಪ್ರಸ್ತಾಪಿಸುವರೇ ಎಂದು ಕೇಳಿದೆ. 

ಕಾಂಗ್ರೆಸ್‌ ವಕ್ತಾರ ರಣದೀಪ್‌ ಸಿಂಗ್‌ ಸುರ್ಜೆವಾಲ ಅವರು ಇಂದು ಟ್ವಿಟರ್‌ ಮೂಲಕ ಮೋದಿ ಅವರಿಗೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ‘ಟ್ರಂಪ್‌ ಸರ್ಕಾರದ ನಿರ್ಬಂಧಿತ ವಲಸೆ ನೀತಿಗಳಿಂದಾಗಿ ಎಚ್‌1ಬಿ ವಿಸಾ ಲಭ್ಯತೆ ಕಷ್ಟವಾಗುತ್ತಿದೆ. 2015ರಲ್ಲಿ ಶೇ. 6ರಷ್ಟಿದ್ದ ವಿಸಾ ನಿರಾಕರಣೆ ಪ್ರಮಾಣ, 2019ರಲ್ಲಿ ಶೇ. 24ಕ್ಕೆ ಏರಿದೆ. ಇದರಿಂದ ಐಟಿ ವೃತ್ತಿಪರರಿಗೆ ತೊಂದರೆಯಾಗಿದೆ. ಸುಗಮವಾಗಿ ಎಚ್‌1ಬಿ ವಿಸಾ ಲಭ್ಯವಾಗುವ ನಿಟ್ಟಿನಲ್ಲಿ ಮೋದಿ ಅವರು ಟ್ರಂಪ್‌ ಅವರ ಬಳಿ ಮಾತುಕತೆ ನಡೆಸಿದ್ದಾರೆಯೇ? ಎಂದು ಅವರು ಪ್ರಶ್ನೆ ಮಾಡಿದ್ದಾರೆ. 

ಭಾರತದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಿರುವ ತಾಲೀಬಾನ್‌ ಸಂಘಟನೆಯೊಂದಿಗೆ ಇದೇ 29ರಂದು ಅಮೆರಿಕ ಶಾಂತಿ ಒಪ್ಪಂದ ಮಾಡಿಕೊಳ್ಳುತ್ತಿದೆ. ಭಾರತದ ಐಸಿ814 ವಿಮಾನವನ್ನು ಹೈಜಾಕ್‌ ಮಾಡಿ ಅಪ್ಘಾನಿಸ್ತಾನದ ಕಾಂದಹಾರ್‌ನಲ್ಲಿಟ್ಟುಕೊಂಡಿದ್ದು, ಅದಕ್ಕಾಗಿ ಉಗ್ರ ಮಸೂದ್‌ ಅಜರ್‌ನನ್ನು ನಾವು ಬಿಟ್ಟುಕೊಟ್ಟದ್ದು, ಆತ ಪುಲ್ವಾಮದಲ್ಲಿ ದಾಳಿ ಮಾಡಿದ್ದನ್ನು ನಾವು ಮರೆತಿದ್ದೇವೆಯೇ? ತಾಲಿಬಾನಿ ಸಂಘಟನೆ ಪಾಕಿಸ್ತಾನದ ಉಗ್ರ ಸಂಘಟನೆಗಳಿಗೆ ನೇರವಾಗಿ ಪ್ರೋತ್ಸಾಹ ನೀಡುತ್ತಿದೆ. ಇಂಥವರ ಜೊತೆಗಿನ ಅಮೆರಿಕ ಒಪ್ಪಂದ ಬಗ್ಗೆ ಮೋದಿ ಅವರು ಟ್ರಂಪ್‌ ಅವರ ಬಳಿ ಪ್ರಶ್ನಿಸುವರೇ ಎಂದಿದ್ದಾರೆ. ಸುರ್ಜೆವಾಲ. 

ವಾಣಿಜ್ಯ ವ್ಯವಹಾರಗಳಲ್ಲಿ ಆದ್ಯತೆಯ ಸ್ಥಾನಮಾನ (ಜಿಎಸ್‌ಪಿ)ವನ್ನು ಅಮೆರಿಕ ಭಾರತಕ್ಕೆ 1974ರಿಂದಲೂ ನೀಡುತ್ತಿತ್ತು. ಆದರೆ, 2019ರಲ್ಲಿ ಅದನ್ನು ರದ್ದು ಮಾಡಿತು. ಇದರಿಂದಾಗಿ 5.6 ಬಿಲಿಯನ್‌ ಡಾಲರ್‌ಗಳಷ್ಟು ವ್ಯವಹಾರಕ್ಕೆ ತೊಂದರೆಯಾಗಿದೆ. ಇದನ್ನು ಮರಳಿ ಸ್ಥಾಪಿಸುವ ಬಗ್ಗೆ ‘ಹೌಡಿ ಮೋದಿ’ ಕಾರ್ಯಕ್ರಮಕ್ಕೂ ಮೊದಲು ಅಥವಾ ‘ನಮಸ್ತೆ ಟ್ರಂಪ್‌’ ಕಾರ್ಯಕ್ರಮಕ್ಕೂ ಮೊದಲು ಮಾತುಕತೆ ನಡೆದಿದೆಯೇ ಎಂದು ಕೇಳಿದ್ದಾರೆ ಸುರ್ಜೆವಾಲ. 

ಭಾರತವು 2018ರ ವರೆಗೆ ಇರಾನ್‌ನಿಂದ ಅತ್ಯಂತ ಕಡಿಮೆ ಬೆಲೆಗೆ ರೂಪಾಯಿ ಆಧಾರದಲ್ಲಿ ಪ್ರತಿ ತಿಂಗಳು 250 ಕೋಟಿ ಟನ್‌ ನಷ್ಟು ಕಚ್ಚಾ ತೈಲವನ್ನು 90 ದಿನಗಳ ಪಾವತಿ ಆಧಾರದಲ್ಲಿ ಆಮದು ಮಾಡಿಕೊಳ್ಳುತ್ತಿತ್ತು. ಆದರೆ,  ಇರಾನ್‌ ಮೇಲೆ ಅಮೆರಿಕ ಆರ್ಥಿಕ ನಿರ್ಬಂಧ ಹೇರಿದ ಕಾರಣಕ್ಕೆ ಭಾರತ ಅಲ್ಲಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಿದೆ. ಹೀಗಾಗಿ ತೈಲದ ಬೆಲೆ ಏರಿಕೆಯಾಗುತ್ತಿದೆ ಎಂದೂ ಸುರ್ಜೆವಾಲ  ಆರೋಪಿಸಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು