ಶನಿವಾರ, ಸೆಪ್ಟೆಂಬರ್ 18, 2021
26 °C

ಸಂದರ್ಶನ: ‘ಪ್ರತಿಸ್ಪರ್ಧಿ ಕಾಂಗ್ರೆಸ್‌ಗಿಂತ ಬಿಜೆಪಿ ಬಹಳ ಮುಂದಿರಲಿದೆ’

ಶೆಮಿನ್‌ ಜಾಯ್‌ Updated:

ಅಕ್ಷರ ಗಾತ್ರ : | |

ಪ್ರಸಿದ್ಧ ಚುನಾವಣಾಶಾಸ್ತ್ರಜ್ಞ ಮತ್ತು ಸೆಂಟರ್‌ ಫಾರ್‌ ಸ್ಟಡಿ ಆಫ್‌ ಡೆವಲಪಿಂಗ್‌ ಸೊಸೈಟೀಸ್‌ನ (ಸಿಎಸ್‌ಡಿಎಸ್‌) ನಿರ್ದೇಶಕ ಸಂಜಯ್‌ ಕುಮಾರ್‌ ಅವರು ಫಲಿತಾಂಶ ಸಾಧ್ಯತೆಗಳು ಮತ್ತು ಪ್ರಚಾರ ವಿಚಾರಗಳ ಬಗ್ಗೆ ‘ಪ್ರಜಾವಾಣಿ’ಯ ಶೆಮಿನ್‌ ಜಾಯ್‌ ಅವರಿಗೆ ನೀಡಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

* ಆರು ಹಂತಗಳ ಮತದಾನಕ್ಕೆ ಸಂಬಂಧಿಸಿ ನಿಮ್ಮ ಗ್ರಹಿಕೆಗಳೇನು? ಚುನಾವಣೆ ಎತ್ತ ಸಾಗುತ್ತಿದೆ?
ಕೆಲವು ಮೂಲಭೂತ ವಿಚಾರಗಳನ್ನು ಹೇಳುತ್ತೇನೆ. ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಮತ್ತು ಅದರ ಹತ್ತಿರದ ಪ್ರತಿಸ್ಪರ್ಧಿ ಕಾಂಗ್ರೆಸ್‌ಗಿಂತ ಅದು ಬಹಳ ಮುಂದೆ ಇರಲಿದೆ. ಸರಳ ಬಹುಮತದತ್ತ ಎನ್‌ಡಿಎ ಸಾಗುತ್ತಿದೆ ಎಂದು ಅನಿಸುತ್ತಿದೆ. ಕಾಂಗ್ರೆಸ್‌ ಪಕ್ಷ ನೂರು ಕ್ಷೇತ್ರಗಳನ್ನು ತಲುಪಬಹುದು ಎಂದೂ ಅನಿಸುತ್ತಿಲ್ಲ. ಆ ಪಕ್ಷಕ್ಕೆ 75–80 ಸ್ಥಾನಗಳು ಸಿಗಬಹುದು. ಅದಕ್ಕಿಂತ ಹೆಚ್ಚು ಇಲ್ಲ. ಇದು ಸ್ಥೂಲವಾದ ಗ್ರಹಿಕೆ.

* 2014ಕ್ಕೆ ಹೋಲಿಸಿದರೆ ಹಿಂದಿ ಭಾಷಿಕ ರಾಜ್ಯಗಳಲ್ಲಿ ಬಿಜೆಪಿ ಕೆಲವು ಕ್ಷೇತ್ರಗಳನ್ನು ಕಳೆದುಕೊಳ್ಳಬಹುದು ಎಂಬ ಗ್ರಹಿಕೆ ಇದೆ. ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ಬಿಜೆಪಿಯ ಸ್ಥಿತಿ ಉತ್ತಮಗೊಳ್ಳಬಹುದು ಮತ್ತು ಹಿಂದಿ ಭಾಷಿಕ ರಾಜ್ಯಗಳಲ್ಲಿನ ನಷ್ಟ ಇಲ್ಲಿ ಸರಿದೂಗಬಹುದೇ?
ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ಬಿಜೆಪಿಯ ಸ್ಥಿತಿ ಗಣನೀಯವಾಗಿ ಉತ್ತಮಗೊಳ್ಳಬಹುದು ಎಂಬುದು ನನ್ನ ಅಂದಾಜು. ಹಾಗೆಯೇ, ಹಿಂದಿ ಭಾಷಿಕ ಪ್ರದೇಶದಲ್ಲಿ ಬಿಜೆಪಿಯ ಸ್ಥಾನ ಸಂಖ್ಯೆ ಕುಸಿಯಬಹುದು ಎಂದೂ ನಾನು ಭಾವಿಸಿದ್ದೇನೆ. 2014ರಲ್ಲಿ ಈ ರಾಜ್ಯಗಳಲ್ಲಿ ಬಿಜೆಪಿಯ ಸಾಧನೆ ಗರಿಷ್ಠ ಮಟ್ಟದಲ್ಲಿತ್ತು. ತ್ರಿಪುರಾದಲ್ಲಿ ಕೂಡ ಬಿಜೆಪಿಯ ಸಾಧನೆ ಉತ್ತಮಗೊಳ್ಳಲಿದೆ ಎಂಬುದು ಖಚಿತ. 

* ಪ್ರಧಾನಿ ನರೇಂದ್ರ ಮೋದಿ ಅವರ ಚುನಾವಣಾ ಪ್ರಚಾರದಲ್ಲಿ ನೀವು ಗಮನಿಸಿದ ಬದಲಾವಣೆಗಳು ಏನು?
ಇತ್ತೀಚಿನ ವಿಚಾರಗಳಿಂದ ಆರಂಭಿಸಿ ನಾನು ಹಿಂದಕ್ಕೆ ಹೋಗುತ್ತೇನೆ. ಆರನೇ ಹಂತದ ಮತದಾನದ ಹೊತ್ತಿಗೆ ಮೋದಿ ಅವರು ತಮ್ಮ ಜಾತಿ ಅಸ್ಮಿತೆ ಮತ್ತು ವರ್ಗ ಅಸ್ಮಿತೆಯನ್ನು ಪ್ರಸ್ತಾಪಿಸಿದ್ದಾರೆ. ತಾವು ಹಿಂದುಳಿದ ವರ್ಗಕ್ಕೆ ಸೇರಿದ ವ್ಯಕ್ತಿಯಾಗಿದ್ದು ಎಲ್ಲರನ್ನೂ ಮುಂದಕ್ಕೆ ತರಲು ಬಯಸಿದ್ದೇನೆ ಎಂದು ಅವರು ಹೇಳಿದ್ದಾರೆ. ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಕೊನೆಯ ಹಂತಗಳಲ್ಲಿ ಮತದಾನ ನಿಗದಿಯಾಗಿರುವ ಕ್ಷೇತ್ರಗಳಲ್ಲಿ ಈ ಎರಡೂ ವರ್ಗಗಳ ಜನರ ಸಂಖ್ಯೆ ಹೆಚ್ಚು. ಇವರ ಮತಗಳ ಮೇಲೆ ಕಣ್ಣಿಟ್ಟೇ ಮೋದಿ ಅವರು ಬಹಳ ಬುದ್ಧಿವಂತಿಕೆಯಿಂದ ಈ ಮಾತು ಹೇಳಿದ್ದಾರೆ. ನನಗೆ ಅನಿಸುವಂತೆ ಮೋದಿ ಅವರು ಎರಡು ತಿಂಗಳ ಸುದೀರ್ಘ ಪ್ರಚಾರದಲ್ಲಿ ಎರಡು ಅಂಶಗಳಿಗೆ ಒತ್ತು ಕೊಟ್ಟಿದ್ದಾರೆ–  ಕಾಂಗ್ರೆಸ್‌ ಪಕ್ಷದ ಮೇಲೆ ನಿರಂತರವಾಗಿ ದಾಳಿ ನಡೆಸುವುದು ಅಥವಾ ಒಂದೇ ವಿಚಾರವನ್ನು ಮತ್ತೆ ಮತ್ತೆ ಪ್ರಸ್ತಾಪಿಸಿದರೆ ಪ್ರಚಾರ ನಿಸ್ಸಾರಗೊಳ್ಳಬಹುದು ಎಂಬುದನ್ನು ಅವರು ಅರಿತುಕೊಂಡಿದ್ದಾರೆ. 

* ಅಂದರೆ, ಮೋದಿ ಅವರ ಪ್ರಚಾರದಲ್ಲಿ ವೈವಿಧ್ಯಮಯ ವಿಚಾರಗಳಿದ್ದವು ಎಂಬುದು ನಿಮ್ಮ ಮಾತಿನ ಅರ್ಥವೇ?
ಮೋದಿ ಅವರು ತಮ್ಮ ಪ್ರಚಾರದಲ್ಲಿ ವಿವಿಧ ಕಾರ್ಯತಂತ್ರಗಳನ್ನು ಬಳಸಿದ್ದಾರೆ. ಪ್ರಾದೇಶಿಕ ಪಕ್ಷಗಳನ್ನು ಲೇವಡಿ ಮಾಡಿದ್ದಾರೆ, ಪ್ರಾದೇಶಿಕ ಪಕ್ಷಗಳ ನಾಯಕರದ್ದು ವಿದೂಷಕರ ಗುಂಪು ಮಾತ್ರ ಎಂಬುದನ್ನು ಮತದಾರರಿಗೆ ಮತ್ತೆ ಮತ್ತೆ ಮನವರಿಕೆ ಮಾಡಲು ಯತ್ನಿಸಿದ್ದಾರೆ. ಇವು ಮೋದಿ ಅವರ ಮಾತೇ ಹೊರತು ನನ್ನದಲ್ಲ. ಪ್ರಾದೇಶಿಕ ಪಕ್ಷಗಳ ನಾಯಕರಿಗೆ ಸ್ಥಳೀಯ ಅಪರಾಧ ಕೃತ್ಯಗಳನ್ನು ನಿಭಾಯಿಸುವುದೇ ಸಾಧ್ಯವಾಗುತ್ತಿಲ್ಲ, ಹಾಗಿರುವಾಗ ಭಯೋತ್ಪಾದನೆಯನ್ನು ತಡೆಯುವುದು ಸಾಧ್ಯವೇ ಎಂದು ಇತ್ತೀಚಿನ ಪ್ರಚಾರ ಸಭೆಯೊಂದರಲ್ಲಿ ಅವರು ಕೇಳಿದ್ದರು. ‘ಪಾಕಿಸ್ತಾನದ ಮೇಲೆ ನೀವೇ ಬಾಂಬ್‌ ಹಾಕುತ್ತಿದ್ದೀರಿ ಎಂಬ ಭಾವನೆ ನಿಮಗೆ ಬಂದಿಲ್ಲವೇ’ ಎಂದೂ ಅವರು ಮತದಾರರನ್ನು ಕೇಳಿದ್ದಾರೆ. 

* ಬಿಜೆಪಿ ಪ್ರಚಾರವನ್ನು ಮಸುಕುಗೊಳಿಸುವಲ್ಲಿ ವಿರೋಧ ಪಕ್ಷಗಳು ಯಶಸ್ವಿಯಾಗಿಲ್ಲವೇ? ಬಿಜೆಪಿಯ ಪ್ರಚಾರಕ್ಕೆ ಪ್ರತಿರೋಧ ಒಡ್ಡಲು ಸಾಧ್ಯವಾಗಿಲ್ಲವೇ?
ಭ್ರಷ್ಟಾಚಾರದ ವಿಚಾರವನ್ನೇ ನೋಡಿ– ಮೋದಿ ಅವರಿಗೆ ಉತ್ತರ ಕೊಡಲು ಕಾಂಗ್ರೆಸ್ ಅಥವಾ ಪ್ರಾದೇಶಿಕ ಪಕ್ಷಗಳ ಬಳಿಯಲ್ಲಿ ಹೆಚ್ಚೇನೂ ಇಲ್ಲ. ಬಿಜೆಪಿಗೆ ಎದುರೇಟು ನೀಡಲು ಸಾಧ್ಯವಾಗದೇ ಇದ್ದ ವಿಚಾರ ನಿರುದ್ಯೋಗ ಮಾತ್ರ. ಆಡಳಿತದ ವಿಚಾರದಲ್ಲಿ ಬಿಜೆಪಿಯ ವಿರುದ್ಧ ಕಾಂಗ್ರೆಸ್‌ ಆರೋಪಗಳನ್ನು ಮಾಡಿದೆ. ಅಂಕಿ ಅಂಶ ಅಥವಾ ಬೇರೆ ಯಾವುದೇ ವಾದ ಮುಂದಿಟ್ಟು ಅದಕ್ಕೆ ಉತ್ತರ ಕೊಡಲು ಬಿಜೆಪಿಗೆ ಆಗಿಲ್ಲ. ಆದರೆ, ಇತರ ಎಲ್ಲ ವಿಚಾರಗಳಲ್ಲಿ, ಬಾಲಾಕೋಟ್‌ ಇರಲಿ ಅಥವಾ ಬೇರೆ ವಿಚಾರಗಳಿರಲಿ, ಕಾಂಗ್ರೆಸ್‌ ಪಕ್ಷವು ಇತ್ತೀ
ಚಿನ ದಿನಗಳಲ್ಲಿ ಪ‍್ರಶ್ನೆ ಕೇಳುವುದನ್ನುಬಿಟ್ಟುಬಿಟ್ಟಿತು.

ಹೆಚ್ಚುತ್ತಿರುವ ನಿರುದ್ಯೋಗದ ಬಗ್ಗೆ ಕೂಡ ಜನರಿಗೆ ಮನವರಿಕೆ ಮಾಡಿಕೊಡಲು ಕಾಂಗ್ರೆಸ್‌ ವಿಫಲವಾಗಿದೆ ಎಂದೇ ನಾನು ಹೇಳುತ್ತೇನೆ.

ಜನರಿಗೆ ಮನವರಿಕೆ ಆಗಿದ್ದರೂ ಈ ಸಮಸ್ಯೆಯನ್ನು ಪರಿಹರಿಸಲು ಮೋದಿಯವರಿಗೆ ಸಾಧ್ಯವೇ ಹೊರತು ಕಾಂಗ್ರೆಸ್‌ಗೆ ಅಲ್ಲ ಎಂಬ ಭಾವನೆ ಜನರಲ್ಲಿ ಇದೆ. ಕಾಂಗ್ರೆಸ್‌ಗೆ ಹೋಲಿಸಿದರೆ ಜನ ಸಂಪರ್ಕದಲ್ಲಿ ಬಿಜೆಪಿ ಬಹಳ ಮುಂದೆ ಇದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು