ಶುಕ್ರವಾರ, ಫೆಬ್ರವರಿ 26, 2021
19 °C

ವಿಶ್ವಾಸ ಮತಯಾಚನೆ ಹಿನ್ನೆಲೆ: ಭೋಪಾಲ್‌ಗೆ ಬಂದಿಳಿದ ಕಾಂಗ್ರೆಸ್ ಶಾಸಕರು

ಪಿಟಿಐ Updated:

ಅಕ್ಷರ ಗಾತ್ರ : | |

prajavani

ಜೈಪುರ: ಮಧ್ಯ ಪ್ರದೇಶದ ರಾಜ್ಯಪಾಲರು ಮುಖ್ಯಮಂತ್ರಿ ಕಮಲ್‌ನಾಥ್ ಅವರಿಗೆ ಬಹುಮತ ಸಾಬೀತುಪಡಿಸುವಂತೆ ನಿರ್ದೇಶನ ನೀಡಿರುವ ಬೆನ್ನಲ್ಲೇ ಇಲ್ಲಿನ ಎರಡು ರೆಸಾರ್ಟ್‌ನಲ್ಲಿ ತಂಗಿದ್ದ ಕಾಂಗ್ರೆಸ್ ಶಾಸಕರು ಭಾನುವಾರ ಮುಂಜಾನೆ ಭೋಪಾಲ್‌ಗೆ ಮರಳಿದ್ದಾರೆ.

ಸುಮಾರು 90 ಕಾಂಗ್ರೆಸ್ ಶಾಸಕರು ಜೈಪುರ ವಿಮಾನ ನಿಲ್ದಾಣಕ್ಕೆ ಆಗಮಿಸಿ ಅಲ್ಲಿಂದ ವಿಮಾನದಲ್ಲಿ ಭೋಪಾಲ್‌ಗೆ ಹಿಂತಿರುಗಿದ್ದಾರೆ.

ಜೈಪುರ ವಿಮಾನನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರೊಬ್ಬರು, ವಿಶ್ವಾಸಮತ ಯಾಚನೆಯಲ್ಲಿ ನಾವು ಬಹುಮತ ಸಾಬೀತುಪಡಿಸುತ್ತೇವೆ. ಕಮಲ್‌ನಾಥ್ ನೇತೃತ್ವದ ಸರ್ಕಾರವು ಐದು ವರ್ಷಗಳನ್ನು ಪೂರೈಸಲಿದೆ ಎಂದು ತಿಳಿಸಿದ್ದಾರೆ.

ಮಾಜಿ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ ನಂತರ ಮಧ್ಯಪ್ರದೇಶದಲ್ಲಿ ರಾಜಕೀಯ ಬಿಕ್ಕಟ್ಟು ಎದುರಾಗಿದ್ದು, ಬುಧವಾರ ಕಾಂಗ್ರೆಸ್ ಶಾಸಕರನ್ನು ರೆಸಾರ್ಟ್‌ಗೆ ಸ್ಥಳಾಂತರಿಸಲಾಗಿತ್ತು. ಜೈಪುರ - ದೆಹಲಿ ಹೆದ್ದಾರಿಯಲ್ಲಿರುವ ಎರಡು ಐಷಾರಾಮಿ ರೆಸಾರ್ಟ್‌ಗಳಲ್ಲಿ ತಂಗಿದ್ದರು. 

ಕಾಂಗ್ರೆಸ್ ಶಾಸಕರ ತಂಡದ ನೇತೃತ್ವ ವಹಿಸಿರುವ ಕಾಂಗ್ರೆಸ್ ನಾಯಕ ಹರೀಶ್ ರಾವತ್ ಸುದ್ದಿಗಾರರೊಂದಿಗೆ ಮಾತನಾಡಿ, ನಾಳೆ ನಾವು ವಿಶ್ವಾಸ ಮತಯಾಚನೆಗೆ ಸಿದ್ಧರಿದ್ದೇವೆ ಮತ್ತು ಜಯ ಸಾಧಿಸುವ ವಿಶ್ವಾಸವಿದೆ. ಬೆಂಗಳೂರಿನಲ್ಲಿರುವ ರೆಬೆಲ್ ಶಾಸಕರು ಕೂಡ ನಮ್ಮ ಸಂಪರ್ಕದಲ್ಲಿದ್ದಾರೆ. ನಮಗೇನು ಭಯವಿಲ್ಲ, ಆದರೆ ಬಿಜೆಪಿಗೆ ಮತ್ತು ಬಿಜೆಪಿ ಸಂಪರ್ಕದಲ್ಲಿರುವ ಶಾಸಕರಿಗೆ ಭಯವಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಮಧ್ಯಪ್ರದೇಶ ಬಿಕ್ಕಟ್ಟು: ವಿಶ್ವಾಸಮತ ಯಾಚನೆಗೆ ರಾಜ್ಯಪಾಲರ ನಿರ್ದೇಶನ

ಈಮಧ್ಯೆ, ಕಾಂಗ್ರೆಸ್ ಶಾಸಕರ ಆಗಮನಕ್ಕೆ ಮುಂಚಿತವಾಗಿ ಭೋಪಾಲ್ ವಿಮಾನ ನಿಲ್ದಾಣದ ಸುತ್ತಮುತ್ತ ಸೆಕ್ಷನ್ 144 ಅನ್ನು ವಿಧಿಸಲಾಗಿತ್ತು. ಮುಂಜಾಗ್ರತಾ ಕ್ರಮವಾಗಿ ಬಿಗಿ ಭದ್ರತೆಯನ್ನೂ ಹೆಚ್ಚಿಸಲಾಗಿದೆ.

ಮಾರ್ಚ್ 16 ರಂದು (ರಾಜ್ಯಪಾಲರು) ಭಾಷಣ ಮಾಡಿದ ನಂತರ ವಿಧಾನಸಭೆಯಲ್ಲಿ ವಿಶ್ವಾಸಾರ್ಹ ಮತಯಾಚಿಸುವಂತೆ ಮಧ್ಯಪ್ರದೇಶದ ರಾಜ್ಯಪಾಲ ಲಾಲ್‌ಜಿ ಟಂಡನ್ ಅವರು ಮುಖ್ಯಮಂತ್ರಿ ಕಮಲ್‌ನಾಥ್ ಅವರಿಗೆ ಶನಿವಾರ ತಡರಾತ್ರಿ ನಿರ್ದೇಶನ ನೀಡಿದ್ದಾರೆ. ಈ ಕುರಿತಾಗಿ ರಾಜ್ಯಪಾಲರ ಪತ್ರವು ಮುಖ್ಯಮಂತ್ರಿಗೆ ತಲುಪಿದೆ ಎಂದು ರಾಜಭವನದ ಮೂಲಗಳು ಪಿಟಿಐಗೆ ತಿಳಿಸಿವೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು