ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಛತ್ತೀಸಗಡದಲ್ಲಿ ಕಾಂಗ್ರೆಸ್‌ ಮುನ್ನಡೆ: ನೀವು ತಿಳಿಯಬೇಕಾದ 10 ಅಂಶಗಳು

Last Updated 11 ಡಿಸೆಂಬರ್ 2018, 10:25 IST
ಅಕ್ಷರ ಗಾತ್ರ

ಛತ್ತೀಸಗಡದಲ್ಲಿ ರಮಣ್‌ಸಿಂಗ್‌ ನೇತೃತ್ವದ ಸರ್ಕಾರಕ್ಕೆ ನಾಲ್ಕನೇ ಬಾರಿ ವಿಜಯಲಕ್ಷ್ಮಿ ಒಲಿಯುವುದು ಅನುಮಾನ. ಫಲಿತಾಂಶದ ಟ್ರೆಂಡ್‌ ಗಮನಿಸುತ್ತಿದ್ದರೆ, 15 ವರ್ಷಗಳಿಂದ ಇಲ್ಲಿ ನೆಲೆ ಕಳೆದುಕೊಂಡಿದ್ದ ಕಾಂಗ್ರೆಸ್‌ಗೆ ಜನ ಕೈ ಹಿಡಿದಿರುವುದು ತಿಳಿಯುತ್ತದೆ. ಅಜಿತ್‌ ಜೋಗಿ ನೇತೃತ್ವದ ಬಿಎಸ್‌ಪಿ ಮತ್ತು ಸಿಪಿಐ ಮೈತ್ರಿಕೂಟ ಕಾಂಗ್ರೆಸ್‌ ವೋಟ್‌ಬ್ಯಾಂಕ್‌ಗೆ ಯಾವುದೇ ವ್ಯತ್ಯಾಸ ಮಾಡಲು ಸಾಧ್ಯವಾಗಿಲ್ಲ. 60 ಸ್ಥಾನಗಳಲ್ಲಿ ಕಾಂಗ್ರೆಸ್‌ ಮುನ್ನಡೆ ಕಾಯ್ದುಕೊಂಡಿದ್ದರೆ, ಬಿಜೆಪಿ 23 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.ರಾಜನಾಂದಗಾಂವ್‌ ಕ್ಷೇತ್ರದಲ್ಲಿ ರಮಣ್‌ ಸಿಂಗ್‌ ಅವರು ಕಾಂಗ್ರೆಸ್‌ ಮುಖಂಡ ಕರುಣಾ ಶುಕ್ಲಾ ಅವರ ಎದುರು 1000 ಮತಗಳ ಅಂತರದಲ್ಲಿ ಮುನ್ನಡೆಯಲ್ಲಿದ್ದಾರೆ

ಛತ್ತೀಸಗಡ ವಿಧಾನಸಭಾ ಚುನಾವಣೆ: ನೀವು ತಿಳಿಯಬೇಕಾದ 10 ಅಂಶಗಳು

1. ಛತ್ತೀಸಗಡ ವಿಧಾನಸಭೆ ಚುನಾವಣೆ ಎರಡು ಹಂತಗಳಲ್ಲಿ ನಡೆದಿದ್ದು, ಮೊದಲ ಹಂತನವೆಂಬರ್ 12 ಹಾಗೂ ಎರಡನೇ ಹಂತ ಮತದಾನನವೆಂಬರ್‌ 20ರಂದು ನಡೆಯಿತು. ಮೊದಲ ಹಂತದಲ್ಲಿ ನಕ್ಸಲ್‌ ಪೀಡಿತ ಜಿಲ್ಲೆಗಳಾದ ಬಸ್ತಾರ್‌, ಬಿಜಾಪುರ, ದಾಂತೇವಾಡ, ಸುಕ್ಮಾ, ಕೊಂದಗಾಂವ್, ಕಾಂಕೇರ್, ನಾರಾಯಣಪುರ ಮತ್ತುರಾಜನಂದಗಾಂವ್‌ ಸೇರಿ 18 ಕ್ಷೇತ್ರಗಳಲ್ಲಿಮತದಾನ ನಡೆಯಿತು.

2. ಮೂರು ಬಾರಿ ಮುಖ್ಯಮಂತ್ರಿಯಾಗಿದ್ದ ರಮಣ್‌ ಸಿಂಗ್‌ರಾಜನಂದಗಾಂವ್‌ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಮುಖ್ಯಮಂತ್ರಿಯಾಗಿ ದೀರ್ಘಾವಧಿ ಸೇವೆ ಸಲ್ಲಿಸಿದ ಬಿಜೆಪಿಯ ಮುಖಂಡರಲ್ಲಿ ಸಿಂಗ್‌ ಕೂಡ ಒಬ್ಬರಾಗಿದ್ದಾರೆ. ಬಿಜೆಪಿ ತೊರೆದು 2014ರಲ್ಲಿ ಕಾಂಗ್ರೆಸ್‌ ಸೇರಿದ್ದ ಕರುಣಾ ಶುಕ್ಲಾ ಹಾಗೂ ಇಲ್ಲಿನ ಮಾಜಿ ಮುಖ್ಯಮಂತ್ರಿ ಜನತಾ ಕಾಂಗ್ರೆಸ್‌ನ ಅಜಿತ್‌ ಜೋಗಿ ಸಹ ಇದೇ ಕ್ಷೇತ್ರದಿಂದ ಚುನಾವಣಾ ಕಣಕ್ಕಿಳಿದಿದ್ದಾರೆ.

3. ಈ ಮೂವರಲ್ಲಿ ಅಜಿತ್‌ ಜೋಗಿ ‘ಕಿಂಗ್‌ಮೇಕರ್‌’ ಆಗಿ ಪಾತ್ರವಹಿಸುವ ಸಾಧ್ಯತೆ ಇದೆ. ಜೋಗಿ ಅವರು 2016ರಲ್ಲಿ ಕಾಂಗ್ರೆಸ್‌ ತೊರೆದು ಜನತಾ ಕಾಂಗ್ರೆಸ್‌ ಛತ್ತೀಸಗಡ (ಜೆಸಿಸಿ) ಎಂಬ ಪ್ರಾದೇಶಿಕ ಪಕ್ಷ ಸ್ಥಾಪಿಸಿದರು. ಬಿಎಸ್‌ಪಿ ಮತ್ತು ಸಿಪಿಐನೊಂದಿಗೆ ಮೈತ್ರಿ ಮಾಡಿಕೊಂಡಿದ್ದು,ತೀವ್ರ ಹಣಾಹಣಿಯಲ್ಲಿರುವ ಬಿಜೆಪಿ, ಕಾಂಗ್ರೆಸ್‌ ಮತಗಳಿಗೆ ಪೆಟ್ಟು ಬೀಳುವ ಸಾಧ್ಯತೆ ಇದೆ. ಇದೇ ಮೊದಲ ಬಾರಿ ಇಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೇ ಪೈಪೋಟಿ ಇತ್ತು.

4. ಛತ್ತೀಸಗಡದ ಮೊದಲ ಮುಖ್ಯಮಂತ್ರಿ ಹಾಗೂ 14 ವರ್ಷಗಳ ಕಾಲ ಈ ರಾಜ್ಯವನ್ನು ಮುನ್ನಡೆಸಿದ ಮುಖ್ಯಮಂತ್ರಿ ಎಂಬ ಕಾರಣಕ್ಕೆಅಜಿತ್‌ ಜೋಗಿ ಮತ್ತು ರಮಣ್‌ ಸಿಂಗ್‌ ಅವರ ನಡುವಿನ ಸ್ಪರ್ಧೆಯೂ ಗಮನಾರ್ಹ ಎನಿಸಿದೆ. 2000ದಲ್ಲಿ ಮಧ್ಯಪ್ರದೇಶದಿಂದ ಪ್ರತ್ಯೇಕಗೊಂಡ ನಂತರ ಛತ್ತೀಸಗಡದ ಮೊದಲ ಮುಖ್ಯಮಂತ್ರಿಯಾಗಿ ಅಜಿತ್‌ ಜೋಗಿಅಧಿಕಾರ ಸ್ವೀಕರಿಸಿದರು. ಮೂರು ವರ್ಷ ಆಡಳಿತದ ನಂತರ ಕಾಂಗ್ರೆಸ್‌ನಿಂದ ಬಿಜೆಪಿ ಅಧಿಕಾರ ಪಡೆಯಿತು. ಆಗಿನಿಂದಲೂ ಇಲ್ಲಿನ ಜನರು ಬಿಜೆಪಿ ಪರವಾಗಿ ಮತಚಲಾಯಿಸಿದ್ದರು.

5.ಕಾಂಗ್ರೆಸ್‌ ಅಭ್ಯರ್ಥಿ ಕರುಣಾ ಶುಕ್ಲ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಸೋದರ ಸೊಸೆ. ಇವರು 32 ವರ್ಷಗಳಿಂದ ಬಿಜೆಪಿ ಜೊತೆಗಿದ್ದು 2014ರಲ್ಲಿ ಕಾಂಗ್ರೆಸ್‌ ಸೇರ್ಪಡೆಯಾದರು. ಇವರು ಸಿಎಂ ರಮಣ್‌ ಸಿಂಗ್‌ಗೆ ತೀವ್ರ ಪೈಪೋಟಿ ನೀಡಿದ್ದಾರೆ.

6. ಕಾಂಗ್ರೆಸ್– ಬಿಜೆಪಿ ನಡುವೆ ಜಿದ್ದಾಜಿದ್ದಿ ಹಣಾಹಣಿ ನಡೆಯಬಹುದು ಎಂದು ಮತಗಟ್ಟೆ ಸಮೀಕ್ಷೆಗಳು ಹೇಳಿದ್ದವು. ಮತಗಟ್ಟೆ ಸಮೀಕ್ಷೆಗಳು ನಿಜವಾದರೆ ಬಿಎಸ್‌ಪಿ–ಜೆಸಿಸಿ ಮೈತ್ರಿಕೂಟ ಮೂರರಿಂದ ಎಂಟು ಸ್ಥಾನಗಳನ್ನು ಗೆಲ್ಲಲಿದೆ. ಒಂದು ವೇಳೆ ಇದು ಸಾಧ್ಯವಾದರೆ ಅತಂತ್ರ ವಿಧಾನಸಭೆಯಲ್ಲಿ ಅಜಿತ್‌ ಜೋಗಿ ಕಿಂಗ್‌ಮೇಕರ್ ಆಗಿ ಹೊರಹೊಮ್ಮುತ್ತಾರೆ.

7. ಛತ್ತೀಸಗಡದಲ್ಲಿ ಇಂದು ಒಟ್ಟು 13 ರಾಜಕುಟುಂಬಗಳಿವೆ. ಈ ಪೈಕಿ ಒಂಬತ್ತು ರಾಜಕುಟುಂಬಗಳು ರಾಜಕಾರಣದಲ್ಲಿ ಸಕ್ರಿಯವಾಗಿವೆ. ಜಶ್‌ಪುರ್ ಮತ್ತು ಸುರ್‌ಗುಜಾ ರಾಜಕುಟುಂಬಗಳು ಹಲವು ವರ್ಷಗಳಿಂದ ರಾಜಕಾರಣದಲ್ಲಿ ತೊಡಗಿಸಿಕೊಂಡಿವೆ. ಒಂದು ಕಾಲದಲ್ಲಿ ಹಲವು ನಾಯಕರನ್ನು ನೀಡಿದ್ದ ಕಂಕೇರ್ ಮತ್ತು ಸಾರಂಗಡ ರಾಜಕುಟುಂಬಗಳು ಇಂದು ಚುನಾವಣಾ ರಾಜಕಾರಣದಿಂದ ಹಿಂದೆ ಸರಿದಿವೆ

8. ಮಾವೋವಾದಿಗಳ ಬೆದರಿಕೆ, ಮತಗಟ್ಟೆಗಳ ಮೇಲೆ ದಾಳಿಯ ನಡುವೆಯೂ ರಾಜ್ಯದಲ್ಲಿ ಒಟ್ಟು ಶೇ 74.17ರಷ್ಟು ಮತದಾನ ನಡೆಯಿತು.

9. 2013ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 49, ಕಾಂಗ್ರೆಸ್ 39, ಬಿಎಸ್‌ಪಿ ಒಂದು ಕ್ಷೇತ್ರದಲ್ಲಿ ಜಯಗಳಿಸಿತ್ತು. ಓರ್ವ ಪಕ್ಷೇತರ ಅಭ್ಯರ್ಥಿಯೂ ಜಯಗಳಿಸಿದ್ದರು.

10. ಮುಖ್ಯಮಂತ್ರಿ ರಮಣ್‌ಸಿಂಗ್‌ ಜನಪ್ರಿಯತೆ ಗಮನಿಸಿದ್ದ ಪ್ರಧಾನಿ ನರೇಂದ್ರ ಮೋದಿ ಛತ್ತೀಸಗಡಕ್ಕಿಂತ ಇತರ ರಾಜ್ಯಗಳ ಚುನಾವಣೆಗಳತ್ತ ಹೆಚ್ಚು ಗಮನ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT