ಮಂಗಳವಾರ, ಆಗಸ್ಟ್ 3, 2021
28 °C

ಹೈದರಾಬಾದ್: ಕೆಲಸಕ್ಕೆ ಕಾರ್ಮಿಕರ ಕರೆತರಲು ವಿಮಾನ ಪ್ರಯಾಣದ ಆಮಿಷ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಹೈದರಾಬಾದ್: ಕಾಲಮಿತಿಯೊಳಗೆ ಕಾಮಗಾರಿಗಳನ್ನು ಪೂರೈಸುವ ಅನಿವಾರ್ಯತೆಗೆ ಬಿದ್ದಿರುವ ಇಲ್ಲಿನ ಹಲವು ನಿರ್ಮಾಣ ಸಂಸ್ಥೆಗಳು, ತಮ್ಮ ಊರುಗಳಿಗೆ ಹಿಂತಿರುಗಿರುವ ವಲಸೆ ಕಾರ್ಮಿಕರನ್ನು ವಾಪಸ್ ಕರೆತರಲು ಹರಸಾಹಸ ಪಡುತ್ತಿವೆ. ಹಲವು ಸಂಸ್ಥೆಗಳು ಕಾರ್ಮಿಕರನ್ನು ಕರೆತರಲು ವಿಮಾನದ ಟಿಕೆಟ್ ಮಾಡಿಸಿವೆ, ನಿಗದಿಗಿಂತ ಹೆಚ್ಚು ವೇತನ ನೀಡುವ ಆಮಿಷ ಒಡ್ಡುತ್ತಿವೆ.

‘ನಮ್ಮ ಒಬ್ಬ ಗುತ್ತಿಗೆದಾರರು ಪಟ್ನಾದಿಂದ 10 ಬಡಗಿಗಳನ್ನು ಹೈದರಾಬಾದ್‌ಗೆ ಕರೆತರಲು ವಿಮಾನದ ಟಿಕೆಟ್ ಮಾಡಿಸಿದ್ದಾರೆ. ಇಂತಹ ಪ್ರಾಜೆಕ್ಟ್‌ಗಳನ್ನು ಮುಗಿಸುವ ಕಾಲಮಿತಿಯನ್ನು ರೇರಾ ವಿಸ್ತರಿಸಿದೆ. ಆದರೆ, ಹಲವು ಸಂಸ್ಥೆಗಳು ಈ ಮೊದಲೇ ಇದ್ದ ಕಾಲಮಿತಿಯಲ್ಲಿ ಕಾಮಗಾರಿಗಳನ್ನು ಮುಗಿಸಲು ಬದ್ಧವಾಗಿವೆ. ಹೀಗಾಗಿ ಕಾರ್ಮಿಕರನ್ನು ಕರೆತರಲು ಹೀಗೆ ಮಾಡುತ್ತಿವೆ’ ಎಂದು ಪ್ರೆಸ್ಟೀಜ್‌ ಗ್ರೂಪ್‌ನ ಹಿರಿಯ ಉಪಾಧ್ಯಕ್ಷ ಆರ್.ಸುರೇಶ್ ಕುಮಾರ್ ಹೇಳಿದ್ದಾರೆ.

ಬೆಂಗಳೂರು ಮೂಲದ ಪ್ರೆಸ್ಟೀಜ್‌ ಗ್ರೂಪ್‌ ಈಗ ಹೈದರಾಬಾದ್‌ನಲ್ಲಿ ಮೂರು ಪ್ರಾಜೆಕ್ಟ್‌ಗಳ ಕಾಮಗಾರಿ ನಡೆಸುತ್ತಿದೆ. ‘ನಮ್ಮ ನಿರ್ಮಾಣದ ಸ್ಥಳಗಳಲ್ಲಿ 2,300 ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಈಗ 700 ಕಾರ್ಮಿಕರು ಮಾತ್ರ ಇದ್ದಾರೆ. ಎಲ್ಲಾ ಕಾರ್ಮಿಕರನ್ನು ಕರೆತರಲು ಪ್ರಯತ್ನಿಸುತ್ತಿದ್ದೇವೆ. ಕಾಲಮಿತಿಯಲ್ಲೇ ಕಾಮಗಾರಿಗಳನ್ನು ಪೂರ್ಣಗೊಳಿಸಿ, ಗ್ರಾಹಕರಿಗೆ ಅವುಗಳನ್ನು ನೀಡಲು ಹೀಗೆ ಮಾಡುತ್ತಿದ್ದೇವೆ’ ಎಂದು ಅವರು ಹೇಳಿದ್ದಾರೆ.

ಲಾಕ್‌ಡೌನ್‌ಗೂ ಮುನ್ನ ರಾಜ್ಯದಲ್ಲಿ 3.5 ಲಕ್ಷ ವಲಸೆ ಕಾರ್ಮಿಕರು ಇದ್ದರು ಎಂದು ತೆಲಂಗಾಣ ಸರ್ಕಾರ ಹೇಳಿತ್ತು. ಲಾಕ್‌ಡೌನ್ ಮುಂದುವರಿದ ಕಾರಣ ಅವರಲ್ಲಿ ಬಹುತೇಕ ಮಂದಿ ತಮ್ಮ ರಾಜ್ಯಗಳಿಗೆ ವಾಪಸ್ ಆಗಿದ್ದಾರೆ. ಕೆಲವರು ನೂರಾರು ಕಿ.ಮೀ. ನಡೆದುಕೊಂಡೇ ತಮ್ಮ ಊರು ತಲುಪಿದ್ದಾರೆ. ಆದರೆ, ಲಭ್ಯವಿರುವ ಕಾರ್ಮಿಕರಲ್ಲೇ ಕಾಮಗಾರಿ ನಡೆಸಲು ಕೇಂದ್ರ ಸರ್ಕಾರ ಅವಕಾಶ ನೀಡಿದೆ. ಹೀಗಾಗಿ ಕಾರ್ಮಿಕರ ಕೊರತೆ ಆರಂಭವಾಗಿದ್ದು, ಅವರನ್ನು ಕರೆತರಲು ನಿರ್ಮಾಣ ಸಂಸ್ಥೆಗಳು ಮುಗಿಬಿದ್ದಿವೆ.

‘ಪೋಲವರಂ ನೀರಾವರಿ ಯೋಜನೆಯ ಕಾಮಗಾರಿಯಲ್ಲಿದ್ದವರಲ್ಲಿ 1,200 ಕಾರ್ಮಿಕರು ಕಳೆದ ತಿಂಗಳು ತಮ್ಮ ಊರುಗಳಿಗೆ ಹಿಂತಿರುಗಿದ್ದಾರೆ. ಬೇರೆ ರಾಜ್ಯಗಳಿಂದ ಕಾರ್ಮಿಕರನ್ನು ಕರೆತರಲು ಗುತ್ತಿಗೆದಾರರು ವಿಶೇಷ ರೈಲಿನ ವ್ಯವಸ್ಥೆ ಮಾಡಿದ್ದಾರೆ. ನಿಗದಿತ ಸಂಬಳಕ್ಕಿಂತ ಹೆಚ್ಚುವರಿ ₹ 10,000 ನೀಡುವ ಆಮಿಷವನ್ನೂ ಕೆಲವು ಕಾರ್ಮಿಕರು ತಿರಸ್ಕರಿಸಿದ್ದಾರೆ. ಈ ಕಾಮಗಾರಿಗೆ ಸಂಬಂಧಿಸಿದ 1,000 ಕಾರ್ಮಿಕರು ಹಿಂತಿರುಗಿದ್ದಾರೆ. ಮುಂದಿನ ವಾರ ಇನ್ನೂ 1,800 ಕಾರ್ಮಿಕರು ಬರುವ ನಿರೀಕ್ಷೆ ಇದೆ’ ಎಂದು ಆಂಧ್ರಪ್ರದೇಶ ನೀರಾವರಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ವಿಮಾನದಲ್ಲಿ ಮರಳಿದ ಕಾರ್ಮಿಕರು
ರಾಯಪುರ (ಪಿಟಿಐ):
ಲಾಕ್‌ಡೌನ್‌ನಿಂದಾಗಿ ಕರ್ನಾಟಕದಲ್ಲಿ ಸಿಲುಕಿಕೊಂಡಿದ್ದ 179 ವಲಸೆ ಕಾರ್ಮಿಕರು ವಿಮಾನದ ಮೂಲಕ ಛತೀಸಗಡಕ್ಕೆ ವಾಪಸ್‌ ಆಗಿದ್ದಾರೆ.

ಈ ಕಾರ್ಮಿಕರ ಪ್ರಯಾಣದ ವೆಚ್ಚವನ್ನು ನ್ಯಾಷನಲ್‌ ಲಾ ಸ್ಕೂಲ್ ಆಫ್‌‌ ಇಂಡಿಯಾ ಯೂನಿವರ್ಸಿಟಿಯ (ಎನ್‌ಎಲ್‌ಎಸ್‌ಐಯು) ಹಳೆಯ ವಿದ್ಯಾರ್ಥಿಗಳು ಭರಿಸಿದ್ದಾರೆ.

ಬೆಂಗಳೂರಿನಿಂದ ಬೆಳಿಗ್ಗೆ 8ಕ್ಕೆ ಹೊರಟ ಇಂಡಿಗೊ ವಿಮಾನ ಸುಮಾರು 10 ಗಂಟೆಗೆ ಸ್ವಾಮಿ ವಿವೇಕಾನಂದ ನಿಲ್ದಾಣ ತಲುಪಿತು.

ಬೆಂಗಳೂರಿನಲ್ಲಿ ಸಿಲುಕಿರುವ ರಾಜ್ಯದ 350 ಕಾರ್ಮಿಕರನ್ನು ವಿಮಾನದ ಮೂಲಕ ರಾಜ್ಯಕ್ಕೆ ಕರೆತರಲು ನಿರ್ಧರಿಸಿದ ಕೆಲವು ಸಂಘಟನೆಗಳು ಎನ್‌ಎಲ್‌ಎಸ್‌ಐಯು ಮತ್ತು ನ್ಯಾಷನಲ್‌ ಅಕಾಡೆಮಿ ಆಫ್‌ ಲೀಗಲ್‌ ಸ್ಟಡಿಸ್‌ ಅಂಡ್‌ ರಿಸರ್ಚ್‌ (ಎನ್‌ಎಎಲ್‌ಎಸ್‌ಎಆರ್‌) ಸಂಸ್ಥೆಗಳ ನೆರವನ್ನು ಕೋರಿತ್ತು.

ಉಳಿದ 174 ಕಾರ್ಮಿಕರು ಜೂನ್‌ 5ರಂದು (ಶುಕ್ರವಾರ)ರಾಜ್ಯಕ್ಕೆ ಮರಳಲಿದ್ದು, ಅವರ ಪ್ರಯಾಣದ ವೆಚ್ಚವನ್ನು ಎನ್‌ಎಎಲ್‌ಎಸ್‌ಎಆರ್ ಭರಿಸಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು