ಬುಧವಾರ, ಜನವರಿ 27, 2021
27 °C

ಕೊರೊನಾ ದಿಗ್ಬಂಧನ: ಇಂಟರ್‌ನೆಟ್‌ ದೌರ್ಜನ್ಯದಿಂದ ಮಕ್ಕಳನ್ನು ರಕ್ಷಿಸಿ

ಪಿಟಿಐ Updated:

ಅಕ್ಷರ ಗಾತ್ರ : | |

prajavani

ವಿಶ್ವಸಂಸ್ಥೆ: ಕೊರೊನಾ ಪಿಡುಗು ವಿವಿಧ ರೀತಿಯಲ್ಲಿ ಸಮುದಾಯಗಳನ್ನು ಬಾಧಿಸುತ್ತಿದೆ. ಈ ವೈರಾಣು ಪಸರಿಸುವಿಕೆ ತಡೆಗಾಗಿ ಹೇರಲಾಗಿರುವ ದಿಗ್ಬಂಧನದಿಂದಾಗಿ ಜನರೆಲ್ಲರೂ ಮನೆಯಲ್ಲಿದ್ದಾರೆ. ಶಾಲೆಗಳು ಬಂದ್‌ ಆಗಿರುವುದರಿಂದ ಮಕ್ಕಳೂ ಮನೆಯಲ್ಲಿಯೇ ಇದ್ದಾರೆ. 

ವಿದ್ಯಾರ್ಥಿಗಳು ಮನೆಯಲ್ಲಿಯೇ ಇದ್ದರೂ ಹಲವು ಕಡೆ ಆನ್‌ಲೈನ್‌ ತರಗತಿಗಳು ನಡೆಯುತ್ತಿವೆ. ಇದಲ್ಲದೆ, ಮಾಹಿತಿ ಮತ್ತು ಮನರಂಜನೆಗಾಗಿ ಇಂಟರ್‌ನೆಟ್‌ನ ಮೇಲಿನ ಅವಲಂಬನೆ ಹೆಚ್ಚು. ಹೀಗಾಗಿ ಮಕ್ಕಳು ಆನ್‌ಲೈನ್‌ನಲ್ಲಿ ಕಳೆಯುವ ಸಮಯವು ಹೆಚ್ಚಾಗಿದೆ. 

‘ಅಂತರ್ಜಾಲದಲ್ಲಿ ಹೆಚ್ಚು ಸಮಯ ಕಳೆಯುವುದರಿಂದ ಮಕ್ಕಳು ಆನ್‌ಲೈನ್‌ ದೌರ್ಜನ್ಯಕ್ಕೆ ಒಳಗಾಗುವ ಅಪಾಯ ಹೆಚ್ಚು. ಮಕ್ಕಳು ಆನ್‌ಲೈನ್‌ ಲೈಂಗಿಕ ಶೋಷಣೆಗೆ ಒಳಗಾಗಬಹುದು’ ಎಂದು ವಿಶ್ವ ಸಂಸ್ಥೆಯ ಮಕ್ಕಳ ನಿಧಿ (ಯುನಿಸೆಫ್‌) ಎಚ್ಚರಿಸಿದೆ. 

ಹೊರಗೆ ಹೋಗುವುದಕ್ಕೆ ಅವಕಾಶವೇ ಇಲ್ಲದಿರುವುದರಿಂದ ಮಕ್ಕಳು ತಂತ್ರಜ್ಞಾನ ಮತ್ತು ಡಿಜಿಟಲ್‌ ಮಾಧ್ಯಮದ ಮೂಲಕ ಕಲಿಯಲಿ ಎಂದು ಅಪ್ಪ–ಅಮ್ಮ ಬಯಸುತ್ತಿದ್ದಾರೆ. ಅಂತರ್ಜಾಲದ ಮೂಲಕ ಹೊರಜಗತ್ತಿನ ಜತೆಗಿನ ಸಂಪರ್ಕ ಉಳಿಸಿಕೊಳ್ಳಲಿ ಎಂಬ ಉದ್ದೇಶವೂ ಇದರಲ್ಲಿ ಇದೆ. ಆದರೆ, ಆನ್‌ಲೈನ್‌ನಲ್ಲಿ ತಮ್ಮನ್ನು ಸುರಕ್ಷಿತವಾಗಿ ಇರಿಸಿಕೊಳ್ಳುವ ಜ್ಞಾನ, ಕೌಶಲ ಮತ್ತು ಸಂಪನ್ಮೂಲ ಎಲ್ಲ ಮಕ್ಕಳಲ್ಲಿಯೂ ಇಲ್ಲ ಎಂಬುದು ಕಳವಳಕಾರಿ ಅಂಶ ಎಂದು ‘ಮಕ್ಕಳ ವಿರುದ್ಧದ ದೌರ್ಜನ್ಯ ತಡೆಗೆ ಜಾಗತಿಕ ಸಹಭಾಗಿತ್ವ’ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಹೊವಾರ್ಡ್‌ ಟೇಲರ್‌ ಹೇಳುತ್ತಾರೆ. 

ಮಕ್ಕಳ ಸುರಕ್ಷತೆಯ ಖಾತರಿಯಲ್ಲಿ ಶಾಲೆಗಳ ಜವಾಬ್ದಾರಿಯೂ ಇದೆ. ಮಕ್ಕಳು ಮನೆಯಿಂದಲೇ ಕಲಿಯುವ ಈ ಸಂದರ್ಭದಲ್ಲಿ ಸಂಸ್ಥೆಯ ಸುರಕ್ಷತಾ ನೀತಿಯನ್ನು ಇನ್ನಷ್ಟು ಬಲಪಡಿಸಬೇಕು. ಶಾಲೆಯ ಆಪ್ತಸಮಾಲೋಚನೆ ಸೇವೆ ಮಕ್ಕಳಿಗೆ ಸದಾ ಲಭ್ಯ ಇರುವಂತೆ ನೋಡಿಕೊಳ್ಳಬೇಕು ಎಂದು ಯುನಿಸೆಫ್‌ ಸಲಹೆ ನೀಡಿದೆ. 

ಅಪಾಯಗಳು

* ಮನೆಯಲ್ಲಿಯೇ ಇರುವುದರಿಂದ ಮನರಂಜನೆ ಮತ್ತು ಮಾಹಿತಿಗಾಗಿ ಅಂತರ್ಜಾಲದ ಮೇಲಿ ಮಕ್ಕಳ ಅವಲಂಬನೆ ಹೆಚ್ಚು

* ಗೆಳೆಯರ ಜತೆಗೆ ಮುಖಾಮುಖಿ ಸಂಪರ್ಕ ಮಕ್ಕಳಿಗೆ ದೊರೆಯುವುದಿಲ್ಲ. ಇದರಿಂದಾಗಿ ಅವರು ನಂಬಬಹುದಾದ ಸಲಹೆ ಕೂಡ ಸಿಗುವುದಿಲ್ಲ

* ಪರಿಣಾಮವಾಗಿ, ಹೆಚ್ಚು ಯೋಚನೆ ಮಾಡದೆ, ಸಾಹಸವೊಂದನ್ನು ಮಾಡಿ ನೋಡುವ ಎಂಬ ಹುಂಬತನಕ್ಕೆ ಅವರು ಒಳಗಾಗಬಹುದು

* ಲೈಂಗಿಕ ದೃಷ್ಟಿಕೋನದ ಫೋಟೊಗಳನ್ನು ಅಥವಾ ಇತರ ಮಾಹಿತಿಯನ್ನು ಕಳುಹಿಸುವ ಅಪಾಯಕ್ಕೆ ಈಡಾಗಬಹುದು

* ಅಪರಿಚಿತರ ಜತೆ ಸಂವಹನದಿಂದಾಗಿ ದೌರ್ಜನ್ಯಕ್ಕೆ ಒಳಗಾಗಬಹುದು

* ಹೆತ್ತವರ ಬ್ಯಾಂಕ್‌ ಖಾತೆಗಳು ಮತ್ತು ಡೆಬಿಟ್‌/ಕ್ರೆಡಿಟ್‌ ಕಾರ್ಡ್‌ಗಳ ಮಾಹಿತಿ ಇದ್ದರೆ, ಅದನ್ನು ಬಳಸುವ ಸಂದರ್ಭದಲ್ಲಿಯೂ ವಂಚನೆಗೆ ಒಳಗಾಗಬಹುದು

ಪರಿಹಾರ ಕ್ರಮಗಳು

* ಯುನಿಸೆಫ್‌ ಮತ್ತು ವಿವಿಧ ಸಂಸ್ಥೆಗಳು ಜತೆಯಾಗಿ ಮಕ್ಕಳನ್ನು ಸುರಕ್ಷಿತವಾಗಿ ಇರಿಸುವ ಬಗ್ಗೆ ತಾಂತ್ರಿಕ ಟಿಪ್ಪಣಿಯೊಂದನ್ನು ಸಿದ್ಧಪಡಿಸಿವೆ

* ಮಕ್ಕಳ ಆನ್‌ಲೈನ್‌ ಅನುಭವ ಸುರಕ್ಷಿತವಾಗಿಸಲು ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರ, ಶಿಕ್ಷಣ ಸಂಸ್ಥೆಗಳು ಮತ್ತು ಹೆತ್ತವರಿಗೆ ಈ ಟಿಪ್ಪಣಿಯಲ್ಲಿ ಸೂಚಿಸಲಾಗಿದೆ

* ಆನ್‌ಲೈನ್‌ ವ್ಯವಸ್ಥೆಯ ಸುರಕ್ಷತೆ ವಿಧಾನಗಳನ್ನು ಹೆಚ್ಚಿಸಲು ಕೋರಲಾಗಿದೆ

* ಮಕ್ಕಳು ಇಂಟರ್‌ನೆಟ್‌ ಅನ್ನು ಸುರಕ್ಷಿತವಾಗಿ ಹೇಗೆ ಬಳಸಬೇಕು ಎಂಬ ಬಗ್ಗೆ ಹೆತ್ತವರು ಮತ್ತು ಶಿಕ್ಷಕರು ತರಬೇತಿ ನೀಡುವುದಕ್ಕೆ ಅಗತ್ಯವಾದ ಟೂಲ್‌ ಅಭಿವೃದ್ಧಿ ಪಡಿಸಬೇಕು

* ಕೊರೊನಾ ಪಿಡುಗಿನ ಅವಧಿಯಲ್ಲಿ, ಮಕ್ಕಳ ಸಂರಕ್ಷಣಾ ಸೇವೆಗಳು ತೆರೆದಿರಬೇಕು ಮತ್ತು ಸಕ್ರಿಯವಾಗಿರಬೇಕು. ಸ್ಥಳೀಯ ಸಹಾಯವಾಣಿ, ಹಾಟ್‌ಲೈನ್‌ ಆರಂಭಿಸಬಹುದು

* ದಿಗ್ಬಂಧನ ಅವಧಿಯು ಮಕ್ಕಳ ಮೇಲೆ ಬೀರಬಹುದಾದ ಪರಿಣಾಮಗಳ ಬಗ್ಗೆ ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ಕ್ಷೇತ್ರದ ಕೆಲಸಗಾರರಿಗೆ ತರಬೇತಿ ನೀಡಬೇಕು

* ಮಕ್ಕಳ ಜತೆಗೆ ಹೆತ್ತವರು ಆಗಾಗ ಮುಕ್ತವಾಗಿ ಮಾತನಾಡುತ್ತಿರಬೇಕು. ಮಕ್ಕಳು ಆನ್‌ಲೈನ್‌ನಲ್ಲಿ ಯಾರೊಂದಿಗೆ, ಯಾವ ರೀತಿಯಲ್ಲಿ ಮಾತನಾಡುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳಬೇಕು

* ಕಂಪ್ಯೂಟರ್‌ಗಳಲ್ಲಿ ಬಳಸುವ ಸಾಫ್ಟ್‌ವೇರ್‌ಗಳನ್ನು ಅಪ್‌ಡೇಟ್‌ ಮಾಡಿಕೊಳ್ಳಬೇಕು. ಆ್ಯಂಟಿ ವೈರಸ್‌ ಕೂಡ ಇರಬೇಕು

* ಮಕ್ಕಳ ಇಂಟರ್‌ನೆಟ್‌ ಬಳಕೆಗೆ ಹೊಸ ನಿಯಮಗಳನ್ನು ರೂಪಿಸಬೇಕು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು