ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಸೋಂಕು ಏರುಗತಿ | 24 ತಾಸುಗಳಲ್ಲಿ 8,380 ಹೊಸ ಪ್ರಕರಣ

ದೇಶದಲ್ಲಿ ಐದು ಸಾವಿರ ದಾಟಿದ ಸಾವಿನ ಸಂಖ್ಯೆ
Last Updated 31 ಮೇ 2020, 21:56 IST
ಅಕ್ಷರ ಗಾತ್ರ
ADVERTISEMENT
""
""

ನವದೆಹಲಿ: ಲಾಕ್‌ಡೌನ್‌ ನಿಯಮಗಳು ಸಡಿಲಿಕೆ ಆಗಿರುವುದರ ಜತೆಗೆ ದೇಶದಲ್ಲಿ ಕೋವಿಡ್‌–19 ಪ್ರಕರಣಗಳು ಏರುತ್ತಲೇ ಇವೆ. ಶನಿವಾರ ಬೆಳಗ್ಗೆಯಿಂದ ಭಾನುವಾರ ಬೆಳಗ್ಗಿನ ವರೆಗಿನ 24 ತಾಸುಗಳಲ್ಲಿ 8,380 ಕೋವಿಡ್‌ ಪ್ರಕರಣಗಳು ದೃಢಪಟ್ಟಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

ದೇಶದಲ್ಲಿ ಸೋಂಕಿಗೆ ಒಳಗಾದವರ ಒಟ್ಟು ಸಂಖ್ಯೆ 1.84 ಲಕ್ಷಕ್ಕೆ ಏರಿದೆ. ಸಾವಿನ ಸಂಖ್ಯೆಯೂ ಹೆಚ್ಚುತ್ತಲೇ ಇದೆ. 5,323 ಮಂದಿ ಮೃತಪಟ್ಟಿದ್ದಾರೆ. ಜಗತ್ತಿನಲ್ಲಿ ಅತಿ ಹೆಚ್ಚು ಪ್ರಕರಣಗಳು ಪತ್ತೆಯಾದ ಎಂಟನೇ ದೇಶ ಎನಿಸಿಕೊಂಡಿದೆ.

ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಆಗಿರುವ ಹೆಚ್ಚಳ ಒಂದೇ ದಿನದಲ್ಲಿ ಈ ಪ್ರಮಾಣದ ಏರಿಕೆಗೆ ಕಾರಣ ಎನ್ನಲಾಗಿದೆ. ಕಳೆದ ಕೆಲವು ದಿನಗಳಲ್ಲಿ ಲೆಕ್ಕಕ್ಕೆ ಸೇರಿಸಲು ಬಾಕಿ ಇದ್ದ ಪ್ರಕರಣಗಳನ್ನು ಭಾನುವಾರ ಸೇರಿಸಿದ್ದರಿಂದಾಗಿ ಮಹಾರಾಷ್ಟ್ರದ ಪ್ರಕರಣಗಳ ಸಂಖ್ಯೆ ಹೆಚ್ಚಿದೆ.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು (ಐಸಿಎಂಆರ್‌) ಸೋಂಕು ಹರಡುವಿಕೆ ತಡೆ ಪ್ರಯತ್ನಗಳಿಗೆ ಇನ್ನಷ್ಟು ಬಲ ತುಂಬಲು ಮುಂದಾಗಿದೆ. ಸಮುದಾಯದಲ್ಲಿ ಸೋಂಕು ಇದೆಯೇ ಎಂಬುದನ್ನು ಗುರುತಿಸುವುದಕ್ಕಾಗಿ ವಿವಿಧ ಗುಂಪುಗಳಲ್ಲಿ ಸೋಂಕು ಪರೀಕ್ಷೆ ನಡೆಸುವಂತೆ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ.

69 ಜಿಲ್ಲೆಗಳಲ್ಲಿ ಇಂತಹ ಸಮೀಕ್ಷೆಗಳನ್ನು ಈಗಾಗಲೇ ನಡೆಸಲಾಗುತ್ತಿದೆ. ಇತರ ಜಿಲ್ಲೆಗಳಿಗೂ ಇದನ್ನು ವಿಸ್ತರಿಸಬೇಕು ಎಂದು ಈಗ ಹೇಳಲಾಗಿದೆ. ರೋಗ ನಿರೋಧಕ ಶಕ್ತಿ ಕಡಿಮೆ ಇರುವವರು, ಆರೋಗ್ಯ ಕಾರ್ಯಕರ್ತರು, ಭದ್ರತಾ ಸಿಬ್ಬಂದಿ, ಮಾಧ್ಯಮ ಪ್ರತಿನಿಧಿಗಳು, ಗ್ರಾಮೀಣ ಪ್ರದೇಶದ ಜನರು, ಬುಡಕಟ್ಟು ಜನರ ಗುಂಪುಗಳಲ್ಲಿ ಇಂತಹ ಪರೀಕ್ಷೆಗಳನ್ನು ನಡೆಸಲು ಸೂಚಿಸಲಾಗಿದೆ. ವಲಸೆ ಕಾರ್ಮಿಕರ ಮರುವಲಸೆಯ ಬಳಿಕ ಗ್ರಾಮೀಣ ಪ್ರದೇಶಗಳಲ್ಲಿ ಸೋಂಕು ಹೆಚ್ಚಳವಾಗಿದೆಯೇ ಎಂಬುದನ್ನು ಪರಿಶೀಲಿಸುವುದು ಕೂಡ ಇದರ ಉದ್ದೇಶ.

ದೇಶದಲ್ಲಿ ಈಗ 462 ಸರ್ಕಾರಿ ಮತ್ತು 200 ಖಾಸಗಿ ಪ್ರಯೋಗಾಲಯಗಳು ಕೋವಿಡ್‌ ಪರೀಕ್ಷೆ ನಡೆಸುತ್ತಿವೆ. ಈವರೆಗೆ, 37.37 ಲಕ್ಷ ಮಾದರಿಗಳನ್ನು ಪರೀಕ್ಷಿಸಲಾಗಿದೆ. 942 ಆಸ್ಪತ್ರೆಗಳನ್ನು ಕೋವಿಡ್‌ ಚಿಕಿತ್ಸೆಗಾಗಿ ಮೀಸಲು ಇರಿಸಲಾಗಿದೆ. 2,380 ಆರೋಗ್ಯ ಕೇಂದ್ರಗಳಲ್ಲಿಯೂ ಕೋವಿಡ್‌ಗೆ ಚಿಕಿತ್ಸೆ ನೀಡಲಾಗುತ್ತಿದೆ. ಒಟ್ಟು 1,33,678 ಪ್ರತ್ಯೇಕವಾಸದ ಹಾಸಿಗೆಗಳು, 10,916 ಐಸಿಯು ಹಾಸಿಗೆಗಳು, 45,750 ಆಮ್ಲಜನಕ ಪೂರೈಕೆ ಇರುವ ಹಾಸಿಗೆಗಳನ್ನು ಸಜ್ಜುಗೊಳಿಸಲಾಗಿದೆ.

ದೇಶದಲ್ಲಿ ಈಗ 10,541 ಕ್ವಾರಂಟೈನ್‌ ಕೇಂದ್ರಗಳಿದ್ದು, ಕೋವಿಡ್‌ ರೋಗಿಗಳಿಗಾಗಿ 6.64 ಲಕ್ಷ ಹಾಸಿಗೆಗಳನ್ನು ಆಸ್ಪತ್ರೆಗಳಲ್ಲಿ ಮೀಸಲು ಇರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT