ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ |ನಾಲ್ವರು ಸಚಿವರಿಗೆ ಕ್ವಾರಂಟೈನ್; ರಾಜ್ಯದಲ್ಲಿ ಮೃತರ ಸಂಖ್ಯೆ 21ಕ್ಕೇರಿಕೆ

Last Updated 30 ಏಪ್ರಿಲ್ 2020, 2:47 IST
ಅಕ್ಷರ ಗಾತ್ರ

ಬೆಂಗಳೂರು: ಕನ್ನಡ ಸುದ್ದಿವಾಹಿನಿಯೊಂದರ ಕ್ಯಾಮೆರಾಮನ್‌ಗೆ ಕೊರೊನಾ ಸೋಂಕು ಇರುವುದು ದೃಢಪಟ್ಟ ಬಳಿಕ ಅವರ ಸಂಪರ್ಕಕ್ಕೆ ಬಂದಿದ್ದ ನಾಲ್ವರು ಸಚಿವರಿಗೆ 14 ದಿನಗಳ ಕಾಲ ಪ್ರತ್ಯೇಕ ವಾಸಕ್ಕೆ ಶಿಫಾರಸು ಮಾಡಲಾಗಿದೆ.

ಉಪಮುಖ್ಯಮಂತ್ರಿ ಸಿ.ಎನ್‌.ಅಶ್ವತ್ಥನಾರಾಯಣ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ, ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಅವರನ್ನು ಕ್ಯಾಮೆರಾಮನ್‌ ಸಂದರ್ಶನ ನಡೆಸಿದ್ದರು.

ಈ ಪೈಕಿ ಬೊಮ್ಮಾಯಿ, ಅಶ್ವತ್ಥನಾರಾಯಣ, ಸಿ.ಟಿ. ರವಿ ಅವರ ಗಂಟಲ ದ್ರವವನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಅವರಲ್ಲಿ ಸೋಂಕು ಪತ್ತೆಯಾಗಿಲ್ಲ. ಸುಧಾಕರ್ ಅವರೂ ಸೋಂಕಿತನ ಸಂಪರ್ಕಕ್ಕೆ ಬಂದಿದ್ದು, ಅವರ ಪರೀಕ್ಷಾ ಫಲಿತಾಂಶ ಇನ್ನೂ ಬಂದಿಲ್ಲ. ಈ ಮಾಹಿತಿಯನ್ನು ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ ಕುಮಾರ್‌ ಖಚಿತಪಡಿಸಿದರು.

‘ಸೋಂಕಿನ ಪರೀಕ್ಷಾ ವರದಿ ನೆಗೆಟಿವ್‌ ಬಂದಿದೆ. ಸ್ವತಃ ಕ್ವಾರಂಟೈನ್‌ಗೆ ಒಳಗಾಗಿದ್ದೇವೆ’ ಎಂದು ಬಸವರಾಜ ಬೊಮ್ಮಾಯಿ, ಅಶ್ವತ್ಥನಾರಾಯಣ ಟ್ವೀಟ್‌ ಮಾಡಿದ್ದಾರೆ. ‘ಗಂಟಲ ದ್ರವ ಪರೀಕ್ಷೆಯಲ್ಲಿ ಕೋವಿಡ್‌ 19 ರೋಗ ಲಕ್ಷಣ ಕಾಣಿಸಿಕೊಂಡಿಲ್ಲ’ ಎಂದು ಸಿ.ಟಿ.ರವಿ ಟ್ವೀಟ್‌ ಮಾಡಿದ್ದಾರೆ.

ರಾಜ್ಯದಲ್ಲಿ 21 ತಲುಪಿದ ಮೃತರ ಸಂಖ್ಯೆ
ಬೆಂಗಳೂರು: ಕೊರೊನಾ ಸೋಂಕಿತರಾಗಿದ್ದ ತುಮಕೂರಿನ ವೃದ್ಧರೊಬ್ಬರು ಬುಧವಾರ ಮೃತಪಟ್ಟಿದ್ದು, ಇದರೊಂದಿಗೆ ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆ 21 ಆಗಿದೆ.

ಹಸಿರು ವಲಯ ಘೋಷಣೆಯಾದ ಬೆನ್ನಲ್ಲೇ ದಾವಣಗೆರೆಯಲ್ಲಿ ಒಬ್ಬರಿಗೆ ಸೋಂಕು ದೃಢಪಟ್ಟಿದೆ. ಅತ್ಯಧಿಕ ಸೋಂಕಿತರನ್ನು ಹೊಂದಿರುವ ಬೆಂಗಳೂರಿನಲ್ಲಿ ಸತತ ಎರಡು ದಿನಗಳಿಂದ ಹೊಸ ಪ್ರಕರಣ ದಾಖಲಾಗಿಲ್ಲ.

ತುಮಕೂರಿನ ವೃದ್ಧರಿಗೆ ತೀವ್ರ ಉಸಿರಾಟದ ತೊಂದರೆ ಇತ್ತು. ಇದೇ 24ರಂದು ಅವರು ಆಸ್ಪತ್ರೆಗೆ ದಾಖಲಾಗಿದ್ದರು.

ಬುಧವಾರ ಮತ್ತೆ 12 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 535ಕ್ಕೆ ತಲಪಿದೆ. ಕಲಬುರ್ಗಿಯಲ್ಲಿ 8 ಪ್ರಕರಣಗಳು ದೃಢಪಟ್ಟಿದ್ದರೆ, ಬೆಳಗಾವಿ, ದಾವಣಗೆರೆ, ನಂಜನಗೂಡು ಮತ್ತು ತುಮಕೂರಿನಲ್ಲಿ ತಲಾ ಒಂದು ಪ್ರಕರಣಗಳು ದೃಢಪಟ್ಟಿವೆ. ದಾವಣಗೆರೆ ಮಹಿಳೆ ಇನ್‌ಫ್ಲುಯೆಂಜಾ ಮಾದರಿಯ ಅಸೌಖ್ಯದಿಂದ (ಐಎಲ್‌ಐ) ಬಳಲುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT