ಮಂಗಳವಾರ, ಜೂನ್ 2, 2020
27 °C

ಪ್ರಾಣ ಹೋದರೆ ಊರಲ್ಲೇ ಹೋಗಲಿ: ಹುಟ್ಟೂರುಗಳಿಗೆ ಮರಳುತ್ತಿರುವ ವಲಸಿಗರ ದಂಡು

ಸಿದ್ದಯ್ಯ ಹಿರೇಮಠ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಉದ್ಯೋಗ ಅರಸಿ ಬರುವವರನ್ನು ಆಕರ್ಷಿಸಿ ಆಶ್ರಯ ನೀಡಿದ್ದ ನಗರಗಳು ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ಸೋಂಕಿನ ಕಾರಣದಿಂದ ಈಗ ‘ನೆಚ್ಚಿದವರಿಗೇ’ ಬೇಡವಾಗಿವೆ.

ಉತ್ತರಪ್ರದೇಶ ಮತ್ತು ಹರಿಯಾಣ ರಾಜ್ಯಗಳ ಗಡಿಯನ್ನು ಹಂಚಿಕೊಂಡಿರುವ ರಾಷ್ಟ್ರ ರಾಜಧಾನಿ ದೆಹಲಿಯೂ ಈಗ ಇದಕ್ಕೆ ಹೊರತಲ್ಲ.

‘ಕಡೆಯ ಪಕ್ಷ ಕೂಲಿ ಕೆಲಸವಾದರೂ ಪರವಾಗಿಲ್ಲ, ಕೈ ತುಂಬ ಸಂಬಳಕ್ಕೆ ಮೋಸವಿಲ್ಲ’ ಎಂದುಕೊಂಡೇ ಈ ಮಾಯಾ ನಗರಿಯತ್ತ ಮಾರು ಹೋಗಿ ಬಂದಿದ್ದ ಗ್ರಾಮೀಣ ಭಾಗದ ಜನರೆಲ್ಲ ಈಗ ಕೊರೊನಾ ಮಾರಿಯಿಂದಾಗಿ ಅನಿವಾರ್ಯವಾಗಿ ಮನೆಯಲ್ಲೇ ಕೂರಬೇಕಾಗಿದ್ದರಿಂದ ದುಡಿಮೆಯೂ, ಜೀವನೋಪಾಯಕ್ಕಾಗಿ ದುಡ್ಡೂ ಸಿಗದಿರುವ ಅಪಾಯಕ್ಕೆ ಸಿಲುಕಿ ಊರಿನತ್ತ ಮುಖ ಮಾಡಿದ್ದಾರೆ.

ಕೊರೊನಾ ಹರಡದಂತೆ ತಡೆಯಲು ಸರ್ಕಾರ ಲಾಕ್‌ಡೌನ್ ಘೋಷಿಸಿದ್ದರಿಂದ ದುಃಸ್ಥಿತಿಗೆ ಸಿಲುಕಿರುವ ಬಿಹಾರ, ಉತ್ತರ ಪ್ರದೇಶ, ರಾಜಸ್ಥಾನ, ಹರಿಯಾಣ, ಉತ್ತರಾಖಂಡ, ಹಿಮಾಚಲ ಪ್ರದೇಶ, ಮಧ್ಯ ಪ್ರದೇಶ, ಪಶ್ಚಿಮ ಬಂಗಾಳ, ಛತ್ತೀಸ್‌ಗಢ ಮತ್ತಿತರ ರಾಜ್ಯಗಳ ವಲಸಿಗರು ಹುಟ್ಟೂರುಗಳತ್ತ ಮುಖ ಮಾಡಿದ್ದು, ವಾಹನ ದೊರೆಯದ್ದರಿಂದ ಪರದಾಡುವಂತಾಗಿದೆ.

ಗುಜರಾತ್ ಮತ್ತು ರಾಜಸ್ಥಾನದ ಸುಮಾರು ಮೂರು ಸಾವಿರ ಕಾರ್ಮಿಕರು ಮಹಾರಾಷ್ಟ್ರದ ಪಾಲ್ಗಾರ್ ಜಿಲ್ಲೆಯ ಗಡಿ ಹಾಗೂ ಗುಜರಾತಿನ ಸುಮಾರು 1,800 ಕಾರ್ಮಿಕರು ಉತ್ತರಾಖಂಡದ ಗಡಿ ಭಾಗದಲ್ಲಿ ಸಿಲುಕಿಕೊಂಡಿದ್ದಾರೆ.

ರಾಷ್ಟ್ರ ರಾಜಧಾನಿ ವಲಯ(ಎನ್‌ಸಿಆರ್‌)ದ ಗಡಿಯಲ್ಲಿನ ಅಂತರರಾಜ್ಯ ಸಂಪರ್ಕದ ಬಸ್ ನಿಲ್ದಾಣಗಳಲ್ಲಿ ಭಾರಿ ನೂಕುನುಗ್ಗಲು ಕಂಡುಬರುತ್ತಿದೆ.

‘ಕೆಲಸ ಇಲ್ಲ. ಕೂಲಿಯೂ ಇಲ್ಲ. ಕೈಯಲ್ಲಿ ದುಡ್ಡು ಇಲ್ಲದಿದ್ದರೆ ನಗರದಲ್ಲಿ ಜೀವನ ನಡೆಸುವುದು ಹೇಗೆ ಎಂಬ ಪ್ರಶ್ನೆ ಕಾಡುತ್ತಿದೆ. ನಮಗಂತೂ ಇಲ್ಲಿ ಬದುಕಿ ಉಳಿಯುತ್ತೇವೆ ಎಂಬ ಭರವಸೆಯೇ ಇಲ್ಲದಂತಾಗಿದೆ. ಕೊರೊನಾ ಆವರಿಸಿ ಸತ್ತರೂ ಪರವಾಗಿಲ್ಲ. ಊರಲ್ಲೇ ಪ್ರಾಣ ಹೋದರೆ ಒಳ್ಳೆಯದು ಎಂದೇ ಹೊರಟಿದ್ದೇವೆ’ ಎಂದು ಬಿಹಾರದ ಲಕ್ಕಿಸರಾಯ್ ಜಿಲ್ಲೆಯ ಹುಕುಮ್ ಸಿಂಗ್ ಹಾಗೂ ಅವರ 9 ಜನ ಸಂಗಡಿಗರು ಶನಿವಾರ ‘ಪ್ರಜಾವಾಣಿ’ಗೆ ತಿಳಿಸಿದರು.

ಅತಂತ್ರ ಸ್ಥಿತಿಗೆ ಕೇಂದ್ರವೇ ಹೊಣೆ: ಕಾಂಗ್ರೆಸ್ 
ನವದೆಹಲಿ (ಪಿಟಿಐ):
ದೇಶದ ವಿವಿಧೆಡೆ ವಲಸೆ ಕಾರ್ಮಿಕರು ಸದ್ಯ ಎದುರಿಸುತಿರುವ ಸಮಸ್ಯೆಗಳಿಗೆ ಕೇಂದ್ರ ಸರ್ಕಾರವೇ ನೇರ ಹೊಣೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಪಕ್ಷದ ಮುಖಂಡ ರಾಹುಲ್ ಗಾಂಧಿ ಅವರು, ದೊಡ್ಡ ಬಿಕ್ಕಟ್ಟಾಗಿ ಪರಿವರ್ತನೆ ಹೊಂದುವ ಮೊದಲು ಪರಿಸ್ಥಿತಿ ಬಗೆಹರಿಸಲು ಕೇಂದ್ರ ಮುಂದಾಗಲಿ ಎಂದಿದ್ದಾರೆ.

ನೆರವಿಗೆ ಕೇಂದ್ರ ಬದ್ಧ: ಅಮಿತ್‌ ಶಾ
ನವದೆಹಲಿ (ಪಿಟಿಐ):
ವಲಸೆ ಕಾರ್ಮಿಕರಿಗೆ ನೆರವಾಗಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ವಲಸೆ ಕಾರ್ಮಿಕರು, ಯಾತ್ರಿಕರಿಗೆ ನೆರವಾಗಲು ಕೂಡಲೇ ಪರಿಹಾರ ಶಿಬಿರಗಳನ್ನು ಸ್ಥಾಪಿಸಲು ಕ್ರಮವಹಿಸಬೇಕು ಎಂದು ರಾಜ್ಯಗಳಿಗೆ ಸಚಿವಾಲಯ ಸೂಚಿಸಿದೆ ಎಂದು ತಿಳಿಸಿದರು. ಪರಿಹಾರ ಉದ್ದೇಶಗಳಿಗೆ ರಾಜ್ಯ ಪ್ರಾಕೃತಿಕ ವಿಕೋಪ ಪರಿಹಾರ ನಿಧಿಯನ್ನು ಬಳಸಿಕೊಳ್ಳಲು ಸೂಚಿಸಲಾಗಿದೆ ಎಂದು ಶಾ ತಿಳಿಸಿದರು.

ವೃದ್ಧ ಸಾವು; ಕೋವಿಡ್‌ ಶಂಕೆ
ಭಾಲ್ಕಿ (ಬೀದರ್‌ ಜಿಲ್ಲೆ):
ಇಲ್ಲಿಯ ಇಂದಿರಾ ನಗರ ಬಡಾವಣೆ ನಿವಾಸಿ ಬಾಬುರಾವ್ ಭೀಮಪ್ಪ (65) ಶನಿವಾರ ಬೆಳಿಗ್ಗೆ ಸರ್ಕಾರಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

‘ಸಾವಿಗೆ ಹೃದಯಾಘಾತ ಕಾರಣ ಇರಬಹುದು ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಮೃತ ವೃದ್ಧಗೆ ಶ್ವಾಸಕೋಶದ ತೊಂದರೆ, ಮಧುಮೇಹ ಇತ್ತು. ಮೃತ ವ್ಯಕ್ತಿಯ ಸ್ಯಾಂಪಲ್‌ ಅನ್ನು ಕೋವಿಡ್-19 ಪರೀಕ್ಷೆಗೆ ಕಳುಹಿಸಲಾಗಿದೆ. ಕೋವಿಡ್-19 ನಿಯಮಾವಳಿ ಅನ್ವಯ ಶವವನ್ನು ಸುಡಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು