ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮ್ಮನ ನಿಧನ ಸುದ್ದಿ ಕೇಳಿ ಗೂಡ್ಸ್ ರೈಲು ಹತ್ತಿ 1100ಕಿಮೀ ಕ್ರಮಿಸಿ ಊರಿಗೆ ಬಂದ ಮಗ

Last Updated 12 ಏಪ್ರಿಲ್ 2020, 14:58 IST
ಅಕ್ಷರ ಗಾತ್ರ

ರಾಯ್ಪುರ್:ಛತ್ತೀಸ್‌ಗಡದ ಬಿಜಾಪುರ್ ಜಿಲ್ಲೆಯಲ್ಲಿ ಛತ್ತೀಸ್‌ಗಢ್ ಸಶಸ್ತ್ರ ಪಡೆ (ಸಿಎಎಫ್) ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸಂತೋಷ್ ಯಾದವ್‌ಗೆ ಅಮ್ಮನ ನಿಧನ ಸುದ್ದಿ ಕೇಳಿ ಅಲ್ಲಿ ನಿಲ್ಲಲಾಗಲಿಲ್ಲ. ದೇಶವ್ಯಾಪಿ ಲಾಕ್‌ಡೌನ್ ಆಗಿರುವಾಗ ಛತ್ತೀಸ್‌ಗಡದಿಂದ ಉತ್ತರಪ್ರದೇಶದಲ್ಲಿರುವ ತನ್ನ ಊರಿಗೆ ಹೋಗುವುದು ಸುಲಭದ ಮಾತಲ್ಲ. ಆದರೆ 30ರ ಹರೆಯದ ಸಂತೋಷ್ 1100 ಕಿಮೀಕ್ರಮಿಸಿ ಅಮ್ಮನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡರು.ನಕ್ಸಲ್ ಪ್ರದೇಶದಲ್ಲಿ ಕರ್ತವ್ಯ ನಿರತರಾಗಿದ್ದ ಸಂತೋಷ್, ಗೂಡ್ಸ್ ರೈಲು, ಟ್ರಕ್, ದೋಣಿ ಹೀಗೆ ಪ್ರಯಾಣ ಮಾಡಲು ಯಾವ ವ್ಯವಸ್ಥೆ ಇದೆಯೊ ಅದನ್ನೆಲ್ಲ ಬಳಸಿ ಮನೆಗೆ ತಲುಪಿದ್ದಾರೆ.

ನನ್ನ ಅಮ್ಮನ ನಿಧನ ಸುದ್ದಿಕೇಳಿದ ನಂತರ ಹೇಗಾದರೂ ಮಾಡಿ ನನ್ನ ಗ್ರಾಮ ಸಿಖರ್‌ಗೆ ತಲುಪಲೇ ಬೇಕು ಎಂದು ನಿರ್ಧರಿಸಿದೆ. ನನ್ನ ಇಬ್ಬರು ತಮ್ಮಂದಿರು ಮತ್ತು ಸಹೋದರಿ ಮುಂಬೈಯಲ್ಲಿರುವ ಕಾರಣ ಅವರಿಗೆ ಮನೆಗೆ ಬರಲು ಸಾಧ್ಯವಾಗುವುದಿಲ್ಲ. ಈ ಹೊತ್ತಲ್ಲಿ ನನ್ನಪ್ಪನನ್ನು ಒಂಟಿಯಾಗಿ ಬಿಡಲು ಇಷ್ಟವಿರಲಿಲ್ಲ ಅಂತಾರೆ ಅವರು.

ಸಂತೋಷ್ ಅವರ ಪತ್ನಿ ಮತ್ತು ಇಬ್ಬರು ಮಕ್ಕಳು ಉತ್ತರ ಪ್ರದೇಶ ಮಿರ್ಜಾಪುರ್ ಗ್ರಾಮದಲ್ಲಿ ವಾಸವಾಗಿದ್ದು, ಸಾವಿನ ಸುದ್ದಿ ಕೇಳಿ ಊರಿಗೆ ಬಂದಿದ್ದರು.

2009ರಲ್ಲಿ ಸಿಎಎಫ್‌ಗೆ ಸೇರಿದ್ದ ಸಂತೋಷ್ ಯಾದವ್ 15ನೇ ಬೆಟಾಲಿಯನ್‌ನಲ್ಲಿ ಕರ್ತವ್ಯ ನಿರತರಾಗಿದ್ದರು. ಏಪ್ರಿಲ್ 4ರಂದು ಬಿಜಾಪುರ್‌ದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಕರೆ ಮಾಡಿದ ಅಪ್ಪ, ಅಮ್ಮನಿಗೆ ಆರಾಮವಿಲ್ಲ ಎಂದು ತಿಳಿಸಿದ್ದರು.ಅಮ್ಮನನ್ನು ವಾರಣಾಸಿಯ ಆಸ್ಪತ್ರೆಗೆ ದಾಖಲಿಸಿದ್ದು, ಸಂಜೆ ಹೊತ್ತಿಗೆ ನಿಧನರಾದರು ಎಂದು ಅಪ್ಪ ಮತ್ತೆ ಕರೆ ಮಾಡಿ ತಿಳಿಸಿದ್ದರು.

ಲಾಕ್‍ಡೌನ್ ಆದಕಾರಣ ಊರಿಗೆ ಹೊರಡುವುದು ಕಷ್ಟ. ಏಪ್ರಿಲ್ 7ರಂದು ಹಿರಿಯ ಅಧಿಕಾರಿಯ ಅನುಮತಿ ಪಡೆದು ಊರಿಗೆ ಹೊರಟೆ. ರಾಯ್ಪುರ್‌ಗೆ ತಲುಪಿದರೆ ಸಾಕು, ಅಲ್ಲಿಂದ ಮುಂದಿನ ಪ್ರಯಾಣ ಮಾಡುತ್ತೇನೆ ಎಂಬ ಆತ್ಮವಿಶ್ವಾಸ ಇತ್ತು.ಬಿಜಾಪುರ್‌ದಿಂದ ಹುಲ್ಲು ಕೊಂಡೊಯ್ಯುವ ಟ್ರಕ್ ಏರಿ ಜಗದಲ್‌ಪುರ್‌ಗೆ ತಲುಪಿದೆ. ಅಲ್ಲಿ 2 ಗಂಟೆ ಕಾದು ಮಿನಿ ಟ್ರಕ್ ಏರಿ ರಾಯ್ಪುರ್‌ನಿಂದ ಸುಮಾರು 200 ಕಿಮೀ ದೂರದಲ್ಲಿರುವ ಕೊಂಡಗಾಂವ್ ಬಂದು ತಲುಪಿದೆ . ರಾಯ್ಪುರ್‌ನಲ್ಲಿ ಆರ್‌ಪಿಎಫ್ ಸಿಬ್ಬಂದಿಯಾಗಿರುವ ಗೆಳೆಯನ ಸಹಾಯದಿಂದ ಗೂಡ್ಸ್ ರೈಲು ಹತ್ತಿದೆ. ಅಲ್ಲಿಂದ ಚೂನರ್‌ಗೆ ತಲುಪಲು ಕನಿಷ್ಠ 8 ಗೂಡ್ಸ್ ರೈಲುಗಳನ್ನು ಬದಲಿಸಿದೆ.ಏಪ್ರಿಲ್ 10ರಂದು ನನ್ನ ಗ್ರಾಮದ ಬಳಿ ಇರುವ ರೈಲ್ವೆ ಸ್ಟೇಷನ್‌ಗೆ ಬಂದು ತಲುಪಿದೆ. ಇದೆಲ್ಲಾ ಸಾಧ್ಯವಾಗಿದ್ದು ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ನನ್ನ ಗೆಳೆಯರು ಮತ್ತು ಸ್ಟೇಷನ್ ಮಾಸ್ಟರ್‌ಗಳಿಂದ. ಅವರಿಗೆಲ್ಲರಿಗೂ ಧನ್ಯವಾದಗಳು.ಆ ರೈಲು ನಿಲ್ದಾಣದಿಂದ 5 ಕಿಮೀ ನಡೆದು ಗಂಗಾ ನದಿ ತಟಕ್ಕೆ ಬಂದು ದೋಣಿ ಮೂಲಕ ಊರು ತಲುಪಿದೆ.

ಹಲವಾರು ಸ್ಥಳಗಳಲ್ಲಿ ಪೊಲೀಸರು ಮತ್ತು ರೈಲ್ವೆ ಸಿಬ್ಬಂದಿಗಳು ನನ್ನನ್ನು ತಡೆದು ನಿಲ್ಲಿಸಿದರು. ವಿಷಯ ತಿಳಿಸಿದಾಗ ಮಾನವೀಯತೆಯ ದೃಷ್ಟಿಯಿಂದ ಅವರು ನನ್ನನ್ನು ಕಳುಹಿಸಿಕೊಟ್ಟರು.ನನ್ನ ಗ್ರಾಮದ 78 ಮಂದಿ ರೈಲ್ವೆಯಲ್ಲಿ ಕೆಲಸ ಮಾಡುತ್ತಿದ್ದಾರೆ.ಪ್ರಯಾಣದ ಹೊತ್ತಲ್ಲಿ ನನಗೆ ಅವರಿಂದ ತುಂಬಾ ಸಹಕಾರ ಸಿಕ್ಕಿತುಎಂದು ಸಂತೋಷ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT