ಶುಕ್ರವಾರ, ಜನವರಿ 24, 2020
17 °C

ಪಶುವೈದ್ಯೆ ಅತ್ಯಾಚಾರ| ಮೃತ ಆರೋಪಿಗಳ ಮರು ಮರಣೋತ್ತರ ಪರೀಕ್ಷೆಗೆ ಹೈಕೋರ್ಟ್‌ ಸೂಚನೆ

ಏಜನ್ಸಿಸ್‌ Updated:

ಅಕ್ಷರ ಗಾತ್ರ : | |

ಹೈದರಾಬಾದ್: ಪಶುವೈದ್ಯೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಕೊಲೆ ಮಾಡಿ, ನಂತರ ಪೊಲೀಸರ ಎನ್‌ಕೌಂಟರ್‌ಗೆ ಬಲಿಯಾದ ನಾಲ್ವರು ಆರೋಪಿಗಳ ಮೃತದೇಹಗಳ ಮರು ಮರಣೋತ್ತರ ಪರೀಕ್ಷೆಯನ್ನು ಡಿ. 23ರ ಒಳಗೆ ನಡೆಸುವಂತೆ ತೆಲಂಗಾಣ ಹೈಕೋರ್ಟ್ ಶನಿವಾರ ನಿರ್ದೇಶನ ನೀಡಿದೆ.

ಮುಖ್ಯನ್ಯಾಯಮೂರ್ತಿ ರಾಘವೇಂದ್ರ ಸಿಂಗ್‌ ಚೌವಾಣ್‌ ಮತ್ತು ನ್ಯಾ. ಅಭಿಷೇಕ್‌ ರೆಡ್ಡಿ ಅವರನ್ನು ಒಳಗೊಂಡ ತೆಲಂಗಾಣ ಹೈಕೋರ್ಟ್‌, ಡಿ.23ರ ಸಂಜೆ 5ರ ಒಳಗಾಗಿ ಮರು ಮರಣೋತ್ತರ ಪರೀಕ್ಷೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿತು  ದೆಹಲಿಯ ಏಮ್ಸ್‌ನ ವಿಧಿ ವಿಜ್ಞಾನ ತಜ್ಞರು ಮರಣೋತ್ತರ ಪರೀಕ್ಷೆ ನಡೆಸಬೇಕು ಎಂದು ಕೋರ್ಟ್‌ ಹೇಳಿದೆ.

‘ಮರಣೋತ್ತರ ಪರೀಕ್ಷೆಯ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಬೇಕು. ಮರಣೋತ್ತರ ಪರೀಕ್ಷೆ ನಂತರ ದೇಹಗಳನ್ನು ಕುಟುಂಬಗಳಿಗೆ ಹಸ್ತಾಂತರಿಸಬೇಕು,’ ಎಂದು ರಾಜ್ಯ ಸರ್ಕಾರದ ಪರವಾಗಿ ಹಾಜರಾಗಿದ್ದ ವೈದ್ಯಕೀಯ ಮತ್ತು ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಕೋರ್ಟ್‌ ಆದೇಶಿಸಿದೆ.

ನ.27ರಂದು ಹೈದರಾಬಾದ್ ಹೊರ ವಲಯದಲ್ಲಿ ಮೊಹಮದ್‌ ಆರೀಫ್‌, ಜೊಲ್ಲು ನವೀನ್‌, ಜೊಲ್ಲು ಶಿವ ಮತ್ತು ಚಿಂತಕುಂಟ ಚೆನ್ನಕೇಶವ ಎಂಬ ನಾಲ್ವರು ಆರೋಪಿಗಳು 26 ವರ್ಷದ ಪಶುವೈದ್ಯೆಯನ್ನು ಅತ್ಯಾಚಾರ ಮಾಡಿ, ಉಸಿರುಗಟ್ಟಿಸಿ ಕೊಲೆ ಮಾಡಿ ನಂತರ ಆಕೆಯ ದೇಹವನ್ನು ಸುಟ್ಟು ಹಾಕಿದ್ದರು. ನಾಲ್ವರೂ ಆರೋಪಿಗಳನ್ನು ಡಿ.6ರಂದು ಸ್ಥಳ ಮಹಜರು ಮಾಡಲೆಂದು ಘಟನಾ ಸ್ಥಳಕ್ಕೆ ಕರೆದೊಯ್ದಿದ್ದ ಪೊಲೀಸರು, ಗನ್‌ ಕಸಿದು ದಾಳಿ ಮಾಡಲು ಬಂದರು ಎಂಬ ಕಾರಣಕ್ಕೆ ಆರೋಪಿಗಳನ್ನು ಎನ್‌ಕೌಂಟರ್‌ ಮಾಡಿದ್ದರು. ಅದೇ ದಿನ ನಾಲ್ವರ ಮರಣೋತ್ತರ ಪರೀಕ್ಷೆಯನ್ನು ಮೆಹಬೂಬನಗರದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆಸಲಾಗಿತ್ತು. ನಂತರ ಮೃತದೇಹಗಳನ್ನು ಮುಂದಿನ ತನಿಖೆಯ ಉದ್ದೇಶಕ್ಕಾಗಿ ಸಂರಕ್ಷಿಸಿಡುವಂತೆ ಕೋರ್ಟ್‌ ಆದೇಶಿಸಿದ್ದ ಹಿನ್ನೆಲೆಯಲ್ಲಿ ಮೃತದೇಹಗಳನ್ನು ಡಿ.9ರಂದು ಹೈದರಾಬಾದ್‌ನ ಗಾಂಧಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿತ್ತು. ಅಂದಿನಿಂದ ಇಲ್ಲಿಯ ವರೆಗೆ ದೇಹಗಳು ಅಲ್ಲಿಯೇ ಇದ್ದವು.

ಪಶುವೈದ್ಯೆ ಅತ್ಯಾಚಾರ ಆರೋಪಿಗಳ ಎನ್‌ಕೌಂಟರ್‌ ಪ್ರಕರಣದ ತನಿಖೆಗಾಗಿ ಸುಪ್ರೀಂ ಕೋರ್ಟ್‌ ಮೂವರು ನ್ಯಾಯಮೂರ್ತಿಗಳ ಸಮಿತಿ ರಚಿಸಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು