ಗುರುವಾರ , ಏಪ್ರಿಲ್ 2, 2020
19 °C

ಈಶಾನ್ಯ ರಾಜ್ಯಗಳಲ್ಲಿ ಕೊರೊನಾ ಪ್ರಕರಣ ಪತ್ತೆ; ಭಾರತದಲ್ಲಿ ರೋಗಿಗಳ ಸಂಖ್ಯೆ 500

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Covid 19

ನವದೆಹಲಿ: ಭಾರತದಲ್ಲಿ ಕೊರೊನಾ ಸೋಂಕಿನಿಂದ ಇಲ್ಲಿಯವರೆಗೆ 9 ಮಂದಿ  ಸಾವಿಗೀಡಾಗಿದ್ದು, ಸೋಂಕಿತರ ಸಂಖ್ಯೆ 500ಕ್ಕೇರಿದೆ. ದೇಶದ 75 ಜಿಲ್ಲೆಗಳನ್ನು ಲಾಕ್‌ಡೌನ್ ಮಾಡಿದ್ದು, ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು ಸೋಂಕು ಪ್ರಕರಣ ಪತ್ತೆಯಾಗಿದೆ. 

ದೆಹಲಿಯಲ್ಲಿ ಹೊಸ ಪ್ರಕರಣ ಇಲ್ಲ : ಕೇಜ್ರಿವಾಲ್
ದೆಹಲಿಯಲ್ಲಿ ಮಂಗಳವಾರ ಕೋವಿಡ್-19  ಹೊಸ ಪ್ರಕರಣಗಳು ವರದಿಯಾಗಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.  ಪರಿಸ್ಥಿತಿ ಕೈಮೀರದಂತೆ ನೋಡಿಕೊಳ್ಳುವುದೇ ಈಗಿರುವ ಸವಾಲು ಎಂದ ಅವರು ಕೋವಿಡ್ -19 ಸೋಂಕು ತಗಲಿ ಆಸ್ಪತ್ರೆಗೆ ದಾಖಲಾಗಿದ್ದ 5 ಮಂದಿ ಗುಣಮುಖರಾಗಿ ಮನೆಗೆ ಮರಳಿದ್ದಾರೆ ಎಂದು  ಟ್ವೀಟಿಸಿದ್ದಾರೆ. ದೆಹಲಿಯಲ್ಲಿ  ಕೋವಿಡ್-19 ಸೋಂಕು ಇರುವ 30 ಪ್ರಕರಣಗಳಿವೆ.
 

ಈಶಾನ್ಯ ರಾಜ್ಯಗಳಲ್ಲಿ ಮೊದಲ ಪ್ರಕರಣ ಪತ್ತೆ
ಬ್ರಿಟನ್‌ನಿಂದ ಮಣಿಪುರಕ್ಕೆ ಮರಳಿದ್ದ 23ರ ಹರೆಯದ ಮಹಿಳೆಯೊಬ್ಬರಿಗೆ ಕೋವಿಡ್-19 ಸೋಂಕು ಇರುವುದ ಪತ್ತೆಯಾಗಿದೆ. ಈಶಾನ್ಯ ರಾಜ್ಯದಲ್ಲಿ ಪತ್ತೆಯಾದ ಮೊದಲ ಪ್ರಕರಣ ಇದು. 
 

ಗುಜರಾತ್‌ನಲ್ಲಿ ಹೊಸ ನಾಲ್ಕು ಪ್ರಕರಣ
ಗುಜರಾತಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 33ಕ್ಕೇರಿದೆ. ಮಂಗಳವಾರ ಹೊಸ ನಾಲ್ಕು ಪ್ರಕರಣಗಳು ಪತ್ತೆಯಾಗಿವೆ. ಹೊರದೇಶಕ್ಕೆ ಹೋಗಿ ಬಂದ ವ್ಯಕ್ತಿಯಿಂದ ಇತರ ಮೂವರಿಗೆ ಈ ಸೋಂಕು ತಗಲಿದೆ ಎಂದು ಆರೋಗ್ಯ ಇಲಾಖೆಯ ಕಾರ್ಯದರ್ಶಿ ಜಯಂತಿ ರವಿ ತಿಳಿಸಿದ್ದಾರೆ.

ಮುಂಜಾಗ್ರತಾ ಕ್ರಮಗಳಿಗೆ ಸಹಕರಿಸದ ವ್ಯಕ್ತಿಯ ಬಂಧನ
ಕೊರೊನಾ ವೈರಸ್ ವಿರುದ್ಧ ಮುಂಜಾಗ್ರತಾ  ಕ್ರಮಗಳನ್ನು  ಕೈಗೊಳ್ಳುವಂತೆ ಹೇಳಿದರೂ ಅದನ್ನು ಪಾಲಿಸದೇ ಇರುವ ವಿಮಾನ ಪ್ರಯಾಣಿಕರೊಬ್ಬರನ್ನು ಕೊಚ್ಚಿ  ವಿಮಾನ ನಿಲ್ದಾಣದಲ್ಲಿ  ಬಂಧಿಸಲಾಗಿದೆ ಎಂದು  ಪೊಲೀಸರು  ಹೇಳಿದ್ದಾರೆ.

ಮಧ್ಯಪ್ರದೇಶದ ಭೋಪಾಲ್ , ಜಬಲ್‌ಪುರ್ ನಗರದಲ್ಲಿ ಕರ್ಫ್ಯೂ ಜಾರಿ
ಕೊರೊನಾ ಸೋಂಕು ಪತ್ತೆಯಾಗಿರುವ ಭೋಪಾಲ್ ಮತ್ತು ಜಬಲ್‌ಪುರ್ ನಗರದಲ್ಲಿ ಕರ್ಫ್ಯೂ ಜಾರಿ ಮಾಡಲು ಮಧ್ಯಪ್ರದೇಶ ಸರ್ಕಾರ ಸೋಮವಾರ ಮಧ್ಯರಾತ್ರಿ ತೀರ್ಮಾನ ಕೈಗೊಂಡಿದೆ.
ರಾತ್ರಿ ಸಭೆ ಕರೆದ ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಈ ನಗರಗಳಲ್ಲಿ ಕರ್ಫ್ಯೂ ಜಾರಿಗೆ ಆದೇಶ ನೀಡಿದ್ದಾರೆ. ಇಲ್ಲಿಯವರೆಗೆ ಜಬಲ್‌ಪುರ್‌ನಲ್ಲಿ 5 ಮತ್ತು ಭೋಪಾಲ್‌ನಲ್ಲಿ 1 ಪ್ರಕರಣ  ಪತ್ತೆಯಾಗಿದೆ. ಇಲ್ಲಿನ 51 ಜಿಲ್ಲೆಗಳ ಪೈಕಿ 39 ಜಿಲ್ಲೆಗಳು ಲಾಕ್‌ಡೌನ್ ಆಗಿದೆ, ಅದೇ ವೇಳೆ ಜನರಿಗೆ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ಸಮಸ್ಯೆಯುಂಟಾಗಬಾರದು ಎಂದು ಚೌಹಾಣ್ ಅಧಿಕಾರಿಗಳಿಗೆ ಹೇಳಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು