ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಕ್ಷಣವೇ ಕಾಣಿಸದೆ ಹರಡುತ್ತಿರುವ ಸೋಂಕು: ಐಸಿಎಂಆರ್‌ ಅಧ್ಯಯನದಲ್ಲಿ ದೃಢ

40,184 ಪ್ರಕರಣಗಳಲ್ಲಿ ಶೇ 28ರಷ್ಟು ಜನರಿಗೆ ಸೋಂಕಿನ ಲಕ್ಷಣವೇ ಇರಲಿಲ್ಲ
Last Updated 31 ಮೇ 2020, 2:07 IST
ಅಕ್ಷರ ಗಾತ್ರ

ನವದೆಹಲಿ: ‘ಕೋವಿಡ್–19’ ದೃಢಪಟ್ಟಿರುವ 40,184 ಜನರಲ್ಲಿ ಶೇ 28ರಷ್ಟು ಜನರಿಗೆ ಪೂರ್ವಭಾವಿಯಾಗಿ ಸೋಂಕಿನ ಯಾವುದೇ ಲಕ್ಷಣ ಕಾಣಿಸಿರಲಿಲ್ಲ ಎಂಬುದನ್ನು ಅಧ್ಯಯನವೊಂದು ತಿಳಿಸಿದೆ.

ಸೋಂಕು ಇರುವುದು ದೃಢಪಟ್ಟಿರುವ ಹೆಚ್ಚಿನವರಿಗೆ ಪೂರ್ವಭಾವಿಯಾಗಿ ಸೋಂಕಿನ ಯಾವುದೇ ಲಕ್ಷಣ ಕಂಡುಬಂದಿರಲಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ವಿಜ್ಞಾನಿಗಳು ನಡೆಸಿದ ಅಧ್ಯಯನದಿಂದ ತಿಳಿದುಬಂದಿದೆ.

ಸೋಂಕುಪೀಡಿತರ ಪೈಕಿ ಶೇ 25.3ರಷ್ಟು ಜನರು ಆರೋಗ್ಯಸೇವಾ ಕಾರ್ಯಕರ್ತರಾಗಿದ್ದು, ಸೋಂಕು ಪೀಡಿತರ ಜತೆಗೆ ನೇರ ಮುಖಾಮುಖಿಗೆ ಒಳಗಾಗಿದ್ದವರು. ಸೋಂಕು ಪೀಡಿತರ ಶೇ 2.8ರಷ್ಟು ಆರೋಗ್ಯ ಕಾರ್ಯಕರ್ತರಿಗೆ ಯಾವುದೇ ಸುರಕ್ಷತಾ ವ್ಯವಸ್ಥೆ ಇರಲಿಲ್ಲ.

‘ಯಾವುದೇ ಲಕ್ಷಣ ಕಂಡುಬರದ ಸೋಂಕುಪೀಡಿತರ ಸಂಖ್ಯೆ ಇನ್ನೂ ಹೆಚ್ಚಾಗಿರಬಹುದು. ಇದು, ಹೆಚ್ಚಿನ ಆತಂಕವನ್ನು ಮೂಡಿಸುವ ಸಂಗತಿಯಾಗಿದೆ’ ಎಂದು ಐಸಿಎಂಆರ್‌ನ ರಾಷ್ಟ್ರೀಯ ಸೂಕ್ಷ್ಮಾಣು ಜೀವಿಗಳ ಸಂಸ್ಥೆಯ ನಿರ್ದೇಶಕ ಮನೋಜ್‌ ಮುರ‍್ರೆಕರ್‌ ತಿಳಿಸಿದರು.

ಜನವರಿ 22 ಮತ್ತು ಏಪ್ರಿಲ್‌ 30ರ ನಡುವೆ ಒಟ್ಟು 10,21,518 ಜನರಿಗೆ ಸಾರ್ಸ್‌ ಮತ್ತು ಕೋವಿಡ್‌ ಸೋಂಕಿನ ಲಕ್ಷಣಗಳಿರುವುದು ಮಾದರಿಯ ಪರೀಕ್ಷೆಯಿಂದ ಗೊತ್ತಾಗಿದೆ. ಪರೀಕ್ಷೆಯ ಪ್ರಮಾಣ ಮಾರ್ಚ್‌ ಆರಂಭದಲ್ಲಿ ದೈನಿಕ 500 ಇದ್ದರೆ, ಏಪ್ರಿಲ್‌ ಅಂತ್ಯದ ವೇಳೆಗೆ ಅದನ್ನು ದೈನಿಕ 50,000ಕ್ಕೆ ಏರಿಸಲಾಗಿದೆ. ಒಟ್ಟಾರೆ 40,184 (ಶೇ 3.9) ಜನರಿಗೆ ಕೋವಿಡ್‌–19 ದೃಢಪಟ್ಟಿದೆ.

ದೇಶದಲ್ಲಿರುವ 736 ಜಿಲ್ಲೆಗಳ ಪೈಕಿ 523 ಜಿಲ್ಲೆಗಳಲ್ಲಿ ಕೋವಿಡ್‌ ಪ್ರಕರಣಗಳು ವರದಿಯಾಗಿವೆ. ಅತ್ಯಧಿಕ ಪ್ರಕರಣಗಳು ವರದಿ ಆಗುತ್ತಿರುವ ರಾಜ್ಯಗಳು ದೆಹಲಿ, ಮಹಾರಾಷ್ಟ್ರ, ಕೇರಳ, ಪಂಜಾಬ್‌, ಹರಿಯಾಣ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಗುಜರಾತ್.

ಗರಿಷ್ಠ ಪ್ರಕರಣಗಳು ವರದಿಯಾಗಿರುವ ರಾಜ್ಯಗಳೆಂದರೆ ಮಹಾರಾಷ್ಟ್ರ (ಶೇ 10.6), ದೆಹಲಿ (ಶೇ 7.8), ಗುಜರಾತ್ (ಶೇ 6.3), ಮಧ್ಯಪ್ರದೇಶ (ಶೇ 6.1) ಮತ್ತು ಪಶ್ಚಿಮ ಬಂಗಾಳ (ಶೇ 5.8).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT