ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವೆಂಬರ್ ವೇಳೆಗೆ ಕೋವಿಡ್ ಭಾರತದಲ್ಲಿ ಗರಿಷ್ಠ ಮಟ್ಟಕ್ಕೆ

Last Updated 14 ಜೂನ್ 2020, 22:12 IST
ಅಕ್ಷರ ಗಾತ್ರ
ADVERTISEMENT
""

ನವದೆಹಲಿ:ಭಾರತದಲ್ಲಿ ಪ್ರತಿದಿನ ಪತ್ತೆಯಾಗುವ ಕೋವಿಡ್–19 ಪ್ರಕರಣಗಳ ಸಂಖ್ಯೆ ನವೆಂಬರ್ ಮಧ್ಯದ ವೇಳೆಗೆ ಗರಿಷ್ಠಮಟ್ಟ ಮುಟ್ಟಲಿದೆ. ಆ ವೇಳೆಗೆ ದೇಶದಲ್ಲಿ ಐಸೋಲೇಷನ್ ಹಾಸಿಗೆಗಳು, ತೀವ್ರ ನಿಗಾ ಘಟಕಗಳು ಮತ್ತು ವೆಂಟಿಲೇಟರ್‌ಗಳ ಕೊರತೆ ಉಂಟಾಗುತ್ತದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು (ಐಸಿಎಂಆರ್) ಹೇಳಿದೆ. ಐಸಿಎಂಆರ್ ರಚನೆ ಮಾಡಿರುವ ‘ಆಪರೇಷನ್ಸ್ ರಿಸರ್ಚ್ ಗ್ರೂಪ್‌’ ನಡೆಸಿದ ಸಾಂಖ್ಯಿಕ ಅಧ್ಯಯನದ ವರದಿಯ ಆಧಾರದ ಮೇಲೆ ಈ ಅಭಿಮತಕ್ಕೆ ಬರಲಾಗಿದೆ.

ಈ ಮೊದಲಿನ ಅಂದಾಜಿನ ಪ್ರಕಾರ ಭಾರತದಲ್ಲಿ ಪ್ರತಿದಿನ ಪತ್ತೆಯಾಗುವ ಕೋವಿಡ್–19 ಪ್ರಕರಣಗಳ ಸಂಖ್ಯೆಯು ಜುಲೈ ಅಂತ್ಯದ ವೇಳೆಗೆ ಗರಿಷ್ಠಮಟ್ಟ ತಲುಪಬೇಕಿತ್ತು. ಲಾಕ್‌ಡೌನ್‌ನ ಕಾರಣ ಗರಿಷ್ಠಮಟ್ಟ ತಲುಪುವ ಅವಧಿಯು ನವೆಂಬರ್ ಮಧ್ಯದವರೆಗೆ ವಿಸ್ತರಣೆಯಾಗಿದೆ. ಸೋಂಕಿತರ ಸಂಖ್ಯೆ ಶೇ 67–90ರಷ್ಟು ಕಡಿಮೆಯಾಗಿದೆ.ಲಾಕ್‌ಡೌನ್ ಇಷ್ಟರಮಟ್ಟಿಗೆ ಯಶಸ್ವಿಯಾಗಿದೆ. ವಿಸ್ತರಣೆ ಆಗಿರುವ ಹೆಚ್ಚುವರಿ ಅವಧಿಯಲ್ಲಿ ಅಗತ್ಯ ವೈದ್ಯಕೀಯ ಮೂಲಸೌಕರ್ಯಗಳನ್ನು ಹೆಚ್ಚಿಸಿಕೊಳ್ಳಬಹುದು. ಇದಕ್ಕೆ ಸಾಕಷ್ಟು ಕಾಲಾವಕಾಶ ದೊರೆತಿದೆ ಎಂದು ತಜ್ಞರು ಹೇಳಿದ್ದಾರೆ.

ಸೋಂಕಿತರ ಪತ್ತೆ, ತಪಾಸಣೆ, ಕ್ವಾರಂಟೈನ್, ಐಸೊಲೇಷನ್ ಮತ್ತು ಚಿಕಿತ್ಸೆಗೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಹೆಚ್ಚಿಸಿಕೊಳ್ಳಲು ಲಾಕ್‌ಡೌನ್ ನೆರವಾಗಿದೆ. ಮೂಲಸೌಕರ್ಯ ಹೆಚ್ಚಾಗಿರುವ ಕಾರಣ ಈ ಕ್ರಮಗಳನ್ನು ಜಾರಿಗೆ ತರಲು ಅನುಕೂಲವಾಗುತ್ತಿದೆ. ಕೋವಿಡ್‌–19ಗೆ ಲಸಿಕೆ ದೊರೆಯುವವರೆಗೂ ಇವುಗಳನ್ನು ಪಾಲಿಸಬೇಕಾಗುತ್ತದೆ ಎಂದು ಅಧ್ಯಯನ ವರದಿಯಲ್ಲಿ ಹೇಳಲಾಗಿದೆ.

ದೇಶದಲ್ಲಿ ಕೋವಿಡ್ ಆಸ್ಪತ್ರೆಗಳು...

21,494 ಕೋವಿಡ್‌ ಚಿಕಿತ್ಸೆಗೆಂದು ಮೀಸಲಿರಿಸಿರುವ ವೆಂಟಿಲೇಟರ್‌ಗಳು

60,848 ಹೆಚ್ಚುವರಿ ವೆಂಟಿಲೇಟರ್‌ಗಳನ್ನು ಖರೀದಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ

958 ಕೋವಿಡ್–19 ಆಸ್ಪತ್ರೆಗಳು

1.67 ಲಕ್ಷ ಐಸೊಲೇಷನ್‌ ಹಾಸಿಗೆಗಳು

21,614 ಐಸಿಯುಗಳು

73,469 ಆಮ್ಲಜನಕ ಪೂರೈಕೆ ಸವಲತ್ತಿರುವ ಹಾಸಿಗೆಗಳು

2,313 ಕೋವಿಡ್–19 ಆರೋಗ್ಯ ಕೇಂದ್ರಗಳು

1.33 ಲಕ್ಷ ಐಸೊಲೇಷನ್‌ ಹಾಸಿಗೆಗಳು

10,748 ಐಸಿಯುಗಳು

46,635 ಆಮ್ಲಜನಕ ಪೂರೈಕೆ ಸವಲತ್ತಿರುವ ಹಾಸಿಗೆಗಳು

7,525 ಕೋವಿಡ್–19 ಚಿಕಿತ್ಸಾ ಕೇಂದ್ರಗಳು

7.10 ಲಕ್ಷ ಐಸೊಲೇಷನ್ ಹಾಸಿಗೆಗಳು

ಸೆರೊ ಸಮೀಕ್ಷೆಗೆ ಸೂಚನೆ

ಕೋವಿಡ್–19 ಸೋಂಕಿತರ ಸಂಪರ್ಕಕ್ಕೆ ಬರುವ ಸಾಧ್ಯತೆ ಅಧಿಕವಾಗಿರುವ ವರ್ಗಗಳ ಜನರನ್ನು ಸೆರೊ ಸಮೀಕ್ಷೆಗೆ ಒಳಪಡಿಸಿ ಎಂದು ಎಲ್ಲಾ ರಾಜ್ಯಗಳಿಗೆ ಐಸಿಎಂಆರ್ ಸೂಚನೆ ನೀಡಿದೆ.

ಆರ್‌ಟಿ–ಪಿಸಿಆರ್‌ ತಪಾಸಣೆಗೆ ಎಲ್ಲರನ್ನೂ ಒಳಪಡಿಸಲು ಸಾಧ್ಯವಿಲ್ಲ. ಸೋಂಕು ತಗುಲಿದ 5 ದಿನಗಳ ಒಳಗೆ ಈ ಪರೀಕ್ಷೆ ನಡೆಸಿದರಷ್ಟೇ ಅನುಕೂಲವಿದೆ. ಹೀಗಾಗಿ ಐಜಿಜಿ ಎಲಿಸ್ಸಾ ಆ್ಯಂಟಿಬಾಡಿ ತಪಾಸಣೆ ನಡೆಸಿದರೆ, ಸೋಂಕು ಹರಡುವಿಕೆಯ ವ್ಯಾಪ್ತಿಯನ್ನು ಪತ್ತೆಮಾಡಬಹುದು. ಸೋಂಕಿತರ ಸಂಪರ್ಕಕ್ಕೆ ಬರುವ ಸಾಧ್ಯತೆ ಅತ್ಯಧಿಕವಾಗಿರುವ ವರ್ಗಗಳನ್ನು ಆದ್ಯತೆ ಮೇರೆಗೆ ಈ ತಪಾಸಣೆಗೆ ಒಳಪಡಿಸಿ. ಹೀಗೆ ತಪಾಸಣೆಗೆ ಒಳಗಾದವರಲ್ಲಿ ಸೋಂಕು ಪತ್ತೆಯಾದರೆ, ಸೋಂಕು ಹರಡುವಿಕೆಯ ವ್ಯಾಪ್ತಿ ತಿಳಿಯುತ್ತದೆ ಎಂದು ಐಸಿಎಂಆರ್ ಹೇಳಿದೆ.

ಐಸಿಎಂಆರ್ ಮತ್ತು ರಾಷ್ಟ್ರೀಯ ವೈರಾಣುಶಾಸ್ತ್ರ ಸಂಸ್ಥೆ ಜಂಟಿಯಾಗಿ ಈ ಕಿಟ್‌ ಅಭಿವೃದ್ಧಿಪಡಿಸಿವೆ.ಐಜಿಜಿ ಎಲಿಸ್ಸಾ ಆ್ಯಂಟಿಬಾಡಿ ತಪಾಸಣಾ ಕಿಟ್‌ಗಳನ್ನು ತಯಾರಿಸಲು ದೇಶದ ಹಲವು ಕಂಪನಿಗಳಿಗೆ ತಂತ್ರಜ್ಞಾನವನ್ನು ಉಚಿತವಾಗಿ ವರ್ಗಾವಣೆ ಮಾಡಲಾಗಿದೆ. ಅಗತ್ಯಬಿದ್ದರೆ ಮತ್ತಷ್ಟು ಕಂಪನಿಗಳಿಗೆ ತಂತ್ರಜ್ಞಾನ ವರ್ಗಾವಣೆ ಮಾಡಲಾಗುತ್ತದೆ. ರಾಜ್ಯಗಳು ಬೇಡಿಕೆ ಇಟ್ಟರೆ, ಈ ಕಂಪನಿಗಳು ತಪಾಸಣಾ ಕಿಟ್‌ಗಳನ್ನು ತಯಾರಿಸಿ ಕೊಡಲಿವೆ. ಸೆರೊ ಸಮೀಕ್ಷೆ ನಡೆಸಲು ಅಗತ್ಯವಿರುವ ನೆರವನ್ನೂ ಐಸಿಎಂಆರ್‌ ನೀಡಲಿದೆ ಎಂದು ರಾಜ್ಯಗಳಿಗೆ ಕಳುಹಿಸಿರುವ ಸುತ್ತೋಲೆಯಲ್ಲಿ ವಿವರಿಸಲಾಗಿದೆ.

17 ಹೈರಿಸ್ಕ್ ವರ್ಗಗಳು

17 ವರ್ಗದ ಜನರನ್ನು ಐಸಿಎಂಆರ್ ಗುರುತಿಸಿದ್ದು, ಅವರನ್ನು ಸೆರೊ ಸಮೀಕ್ಷೆಗೆ ಒಳಪಡಿಸಿ ಎಂದು ಸೂಚಿಸಿದೆ.

1. ರೋಗಿಗಳು: ಎಚ್‌ಐವಿ, ಕ್ಷಯ, ತೀವ್ರ ಉಸಿರಾಟದ ತೊಂದರೆ ಇರುವವರು, ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿರುವವರು

2. ಕಂಟೈನ್‌ಮೆಂಟ್ ವಲಯದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯನ್ನೂ ಸೆರೊ ಸಮೀಕ್ಷೆಗೆ ಒಳಪಡಿಸಬೇಕು

3. ವೈದ್ಯಕೀಯ ಸಿಬ್ಬಂದಿ: ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು, ಸಹಾಯಕರು, ದಾದಿಯರು ಮತ್ತು ಆಸ್ಪತ್ರೆಯ ಎಲ್ಲಾ ಸಿಬ್ಬಂದಿ

4. ಭದ್ರತಾ ಸಿಬ್ಬಂದಿ: ಜನರ ಸಂಪರ್ಕಕ್ಕೆ ಬರುವ ಭದ್ರತಾ ಸಿಬ್ಬಂದಿ, ಎಲ್ಲಾ ಕಚೇರಿಗಳಲ್ಲಿ ಜನರನ್ನು ತಪಾಸಣೆಗೆ ಒಳಪಡಿಸುವವರು, ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್‌ಎಫ್‌) ಎಲ್ಲಾ ಸಿಬ್ಬಂದಿ‌

5. ಪೊಲೀಸರು: ಪೊಲೀಸರು, ಗೃಹದಳದ ಸಿಬ್ಬಂದಿ, ಕೋವಿಡ್ ಸ್ವಯಂಸೇವಕರು

6. ಮಾಧ್ಯಮ ಸಿಬ್ಬಂದಿ: ವರದಿಗಾರಿಕೆ ಮತ್ತು ಛಾಯಾಗ್ರಹಣಕ್ಕೆ ಹೋಗುವ ಸಿಬ್ಬಂದಿ, ಕ್ಯಾಮೆರಾಮೆನ್‌ಗಳು, ಚಾಲಕರು ಮತ್ತು ಸಹಾಯಕ ಸಿಬ್ಬಂದಿ

7. ಗ್ರಾಮೀಣ ಭಾಗದ ಜನರು: ನಗರಗಳಿಂದ ಹಳ್ಳಿಗಳಿಗೆ ವಾಪಸ್ ಆಗಿರುವ ವಲಸೆ ಕಾರ್ಮಿಕರನ್ನು ಆದ್ಯತೆ ಮೇರೆಗೆ ಸೆರೊ ಸಮೀಕ್ಷೆಗೆ ಒಳಪಡಿಸಬೇಕು. ಈ ಜನರ ಸಂಪರ್ಕಕ್ಕೆ ಬಂದಿರುವವರನ್ನೂ ಸಮೀಕ್ಷೆಗೆ ಒಳಪಡಿಸಬೇಕು

8. ಕಾರ್ಮಿಕರು: ಕೈಗಾರಿಕೆಗಳಲ್ಲಿ ದುಡಿಯುತ್ತಿರುವ ಕಾರ್ಮಿಕರು, ದಿನಗೂಲಿ ನೌಕರರು, ವಲಸೆ ಕಾರ್ಮಿಕರನ್ನು ಸಮೀಕ್ಷೆಗೆ ಒಳಪಡಿಸಬೇಕು. ಸೇವಾ ವಲಯದಲ್ಲಿ ದುಡಿಯುತ್ತಿರುವ ಎಲ್ಲಾ ಸಿಬ್ಬಂದಿಯನ್ನು ಸಮೀಕ್ಷೆಗೆ ಒಳಪಡಿಸಬೇಕು

9. ರೈತರು ಮತ್ತು ವ್ಯಾಪಾರಿಗಳು: ಕೃಷಿ ಉತ್ಪನ್ನಗಳ ಮಾರಾಟಕ್ಕಾಗಿ ದೊಡ್ಡ ಮಾರುಕಟ್ಟೆಗಳಿಗೆ ಭೇಟಿ ನೀಡಿರುವ ಮತ್ತು ನೀಡುವ ರೈತರು, ಕೂಲಿ ಕಾರ್ಮಿಕರು, ಹಮಾಲಿಗಳು, ವ್ಯಾಪಾರಿಗಳು, ದಲ್ಲಾಳಿಗಳು ಮತ್ತು ವಾಹನ ಚಾಲಕರು

10. ಸ್ಥಳೀಯ ಸಂಸ್ಥೆಗಳ ಸಿಬ್ಬಂದಿ: ಕೋವಿಡ್–19 ವಿರುದ್ಧದ ಹೋರಾಟದಲ್ಲಿ ಭಾಗಿಯಾಗಿರುವ ನಗರಪಾಲಿಕೆ, ನಗರ ಸಭೆ, ಪುರ ಸಭೆ ಮತ್ತು ಗ್ರಾಮ ಪಂಚಾಯಿತಿಗಳ ಎಲ್ಲಾ ಸಿಬ್ಬಂದಿ. ನೀರು ಸರಬರಾಜು ಮತ್ತು ವಿದ್ಯುತ್ ಸರಬರಾಜು ಕಂಪನಿಗಳ ಎಲ್ಲಾ ಸಿಬ್ಬಂದಿ

11. ಚಾಲಕರು: ಆಸ್ಪತ್ರೆ, ಆಂಬುಲೆನ್ಸ್, ಬಸ್‌, ಟ್ರಕ್, ಟ್ಯಾಕ್ಸಿ ಮತ್ತು ಆಟೊ ಚಾಲಕರು. ಬಸ್ ಕಂಡಕ್ಟರ್‌ಗಳು, ಬಸ್ ಮತ್ತು ಟ್ರಕ್‌ನ ಕ್ಲೀನರ್‌ಗಳು ಮತ್ತು ಸಹಯಾಕ ಸಿಬ್ಬಂದಿ

12. ಬ್ಯಾಂಕ್, ಅಂಚೆ ಮತ್ತು ದೂರವಾಣಿ ಸಿಬ್ಬಂದಿ: ಬ್ಯಾಂಕಿಂಗ್ ಸಿಬ್ಬಂದಿ, ಅಂಚೆ ಇಲಾಖೆ ನೌಕರರು, ಕೊರಿಯರ್‌ ಮತ್ತು ಪಾರ್ಸಲ್‌ ಸೇವೆ ನೌಕರರು ಮತ್ತು ದೂರಸಂಪರ್ಕ ವಲಯದಲ್ಲಿರುವ ಕ್ಷೇತ್ರ ಸಿಬ್ಬಂದಿ

13: ಅಂಗಡಿ: ದಿನಸಿ, ತರಕಾರಿ, ಅಗತ್ಯ ವಸ್ತುಗಳ ಅಂಗಡಿ, ಹೋಟೆಲ್‌ಗಳು, ಪಾರ್ಸೆಲ್ ಸೇವೆ ನೀಡುತ್ತಿರುವ ಹೋಟೆಲ್‌ಗಳು, ಹಾಲಿನ ಅಂಗಡಿ, ಔಷಧ ಅಂಗಡಿಗಳಮಾಲೀಕರು, ಕೆಲಸಗಾರರು.

14: ವಿಮಾನಯಾನ ಸಿಬ್ಬಂದಿ: ವಿಮಾನ ನಿಲ್ದಾಣದ ಎಲ್ಲಾ ಸಿಬ್ಬಂದಿ, ವಿಮಾನಯಾನ ಸಂಸ್ಥೆಯ ಎಲ್ಲಾ ಸಿಬ್ಬಂದಿ

15: ವಿದೇಶಗಳಿಂದ ಭಾರತೀಯರನ್ನು ಕರೆತರಲು ದುಡಿದ ಎಲ್ಲಾ ಸಿಬ್ಬಂದಿಯನ್ನು ಸೆರೊ ಸಮೀಕ್ಷೆಗೆ ಒಳಪಡಿಸಬೇಕು

16: ವೃದ್ಧಾಶ್ರಮ, ಅನಾಥಶ್ರಮ, ನಿರಾಶ್ರಿತ ಶಿಬಿರಗಳಲ್ಲಿ ಇರುವವರನ್ನು ಸೆರೊ ಸಮೀಕ್ಷೆಗ ಒಳಪಡಿಸಬೇಕು. ಗಾಳಿಯಾಡದಂತಹ ಇಕ್ಕಟ್ಟಿನ ಪ್ರದೇಶಗಳಲ್ಲಿ ವಾಸಿಸುತ್ತಿರುವವರು ಮತ್ತು ದುಡಿಯುತ್ತಿರುವವರನ್ನೂ ಸಮೀಕ್ಷೆಗೆ ಒಳಪಡಿಸಬೇಕು

17: ಕೈದಿಗಳು: ಎಲ್ಲಾ ಜೈಲುಗಳಲ್ಲಿ ಇರುವ ಕೈದಿಗಳು ಮತ್ತು ಹೊಸದಾಗಿ ಜೈಲಿಗೆ ಬರುವ ಕೈದಿಗಳನ್ನೂ ಸಮೀಕ್ಷೆಗೆ ಒಳಪಡಿಸಬೇಕು

ಆಧಾರ: ಐಸಿಎಂಆರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT