ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಸನೆ, ರುಚಿ ಗ್ರಹಣ ಶಕ್ತಿ ನಷ್ಟವೂ ಕೋವಿಡ್‌ ಲಕ್ಷಣ: ಆರೋಗ್ಯ ಸಚಿವಾಲಯ

Last Updated 13 ಜೂನ್ 2020, 15:47 IST
ಅಕ್ಷರ ಗಾತ್ರ

ನವದೆಹಲಿ: ವಾಸನೆ ಅಥವಾ ರುಚಿಯನ್ನು ಗ್ರಹಿಸುವ ಶಕ್ತಿ ನಷ್ಟವಾಗುವುದೂ ಕೋವಿಡ್‌–19ರ ಲಕ್ಷಣ ಎಂದು ಕೇಂದ್ರದ ಆರೋಗ್ಯ ಸಚಿವಾಲಯ ಹೇಳಿದೆ. ಕೋವಿಡ್‌ ಲಕ್ಷಣಗಳ ಪಟ್ಟಿಗೆ ಈ ಅಂಶವನ್ನೂ ಶನಿವಾರ ಸೇರಿಸಲಾಗಿದೆ.

‘ಕೋವಿಡ್‌–19ಕ್ಕೆ ಚಿಕಿತ್ಸೆ ಪಡೆಯುತ್ತಿರುವ ಅನೇಕ ರೋಗಿಗಳು, ಜ್ವರ, ಕೆಮ್ಮು, ಆಯಾಸ, ಉಸಿರಾಟದ ತೊಂದರೆ ಮುಂತಾದ ಸಮಸ್ಯೆಗಳ ಜತೆಗೆ ವಾಸನೆ ಹಾಗೂ ರುಚಿ ಗ್ರಹಣ ನಷ್ಟವಾಗಿರುವ ಬಗ್ಗೆಯೂ ಹೇಳಿಕೊಂಡಿದ್ದಾರೆ’ ಎಂದು ಸಚಿವಾಲಯ ತಿಳಿಸಿದೆ.

3 ಲಕ್ಷದ ದಾಟಿದ ಸೋಂಕು ಪ್ರಕರಣಗಳು

ದೇಶದಲ್ಲಿ ಕೋವಿಡ್‌–19 ಸೋಂಕಿತರ ಸಂಖ್ಯೆ ಮೂರು ಲಕ್ಷದ ಗಡಿ ದಾಟಿದೆ. ಆರೋಗ್ಯ ಇಲಾಖೆಯ ಅಂಕಿ ಅಂಶಗಳ ಪ್ರಕಾರ ಶನಿವಾರ ಒಂದೇ ದಿನ 11,458 ಮಂದಿ ಸೋಂಕಿತರಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆಯು 3,08,992ಕ್ಕೆ ಏರಿದೆ. ತಮಿಳುನಾಡಿನಲ್ಲಿ ಒಂದೇದಿನ 30 ಮಂದಿ ಕೋವಿಡ್‌ನಿಂದಾಗಿ ಮೃತಪಟ್ಟಿದ್ದಾರೆ.

ದೇಶದ ಒಟ್ಟು ಸೋಂಕಿತರಲ್ಲಿ ಮೂರನೇ ಎರಡರಷ್ಟು ಮಂದಿ ಐದು ರಾಜ್ಯಗಳಲ್ಲಿದ್ದಾರೆ. ದೊಡ್ಡ ನಗರಗಳಲ್ಲಿ ಸೋಂಕಿತರ ಪ್ರಮಾಣ ಹೆಚ್ಚಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಪ್ರಧಾನಿ ಸಭೆ: ಪ್ರಧಾನಿ ನರೇಂದ್ರ ಮೋದಿ ಅವರು ಕೆಲವು ಸಚಿವರು ಹಾಗೂ ಹಿರಿಯ ಅಧಿಕಾರಿಗಳ ಜತೆ ಶನಿವಾರ ಸಭೆ ಆಯೋಜಿಸಿ, ಪರಿಸ್ಥಿತಿಯ ಅವಲೋಕನ ನಡೆಸಿದ್ದಾರೆ.

ಜೂನ್‌ 16 ಮತ್ತು 17ರಂದು ಪ್ರಧಾನಿ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ವಿಡಿಯೊ ಸಂವಾದ ನಡೆಸಲಿದ್ದು ಅದಕ್ಕೆ ಪೂರ್ವಭಾವಿಯಾಗಿ ಈ ಸಭೆ ನಡೆಸಿದ್ದಾರೆ.

ಚಿಂತೆ ಹೆಚ್ಚಿಸಿದ ದೆಹಲಿ, ಮಹಾರಾಷ್ಟ್ರ: ಮಹಾರಾಷ್ಟ್ರ ಮತ್ತು ದೆಹಲಿ ರಾಜ್ಯಗಳು ಕೇಂದ್ರ ಸರ್ಕಾರದ ಚಿಂತೆಯನ್ನು ಹೆಚ್ಚಿಸಿವೆ. ‘ಈ ರಾಜ್ಯಗಳಲ್ಲಿ ಲಾಕ್‌ಡೌನ್‌ ಅನ್ನು ಇನ್ನಷ್ಟು ಬಿಗಿಗೊಳಿಸುವ ಸಾಧ್ಯತೆ ಇಲ್ಲ. ಆದರೆ, ಸಾವಿನ ಸಂಖ್ಯೆ ಏರಿಕೆಯಾಗುತ್ತಿರುವುದು ಆತಂಕವನ್ನು ಹೆಚ್ಚಿಸಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.

ದೆಹಲಿಯ ಪರಿಸ್ಥಿತಿಯ ಅವಲೋಕನಕ್ಕಾಗಿ ಗೃಹಸಚಿವ ಅಮಿತ್‌ ಶಾ ಅವರು, ಲೆಫ್ಟಿನೆಂಟ್‌ ಗವರ್ನರ್‌ ಅನಿಲ್‌ ಬೈಜಲ್‌, ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಹಾಗೂ ಮೂರು ನಗರಪಾಲಿಕೆಗಳ ಮೇಯರ್‌ಗಳ ಜತೆ ಭಾನುವಾರ ಪ್ರತ್ಯೇಕ ಸಭೆ ನಡೆಸಲಿದ್ದಾರೆ. ಬಿಜೆಪಿ ಆಡಳಿತವಿರುವ ಸ್ಥಳೀಯ ಸಂಸ್ಥೆಗಳು ಹೆಚ್ಚಿನ ಜವಾಬ್ದಾರಿಯನ್ನು ಹೊರಬೇಕು ಎಂಬ ಸಂದೇಶ ನೀಡುವ ಸಲುವಾಗಿ ಶಾ ಅವರು ಮೇಯರ್‌ಗಳ ಜತೆ ಸಭೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT