ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾಗೆ ದೆಹಲಿಯ ಹಿರಿಯ ಕ್ರಿಕೆಟಿಗ ಸಂಜಯ್‌ ಡೋಬಾಲ್‌ ಬಲಿ

Last Updated 29 ಜೂನ್ 2020, 12:10 IST
ಅಕ್ಷರ ಗಾತ್ರ

ನವದೆಹಲಿ: ಕೊರೊನಾ‌ ಸೋಂಕಿಗೆ ಒಳಗಾಗಿದ್ದ ಹಿರಿಯ ಕ್ಲಬ್‌ ಕ್ರಿಕೆಟಿಗ ಹಾಗೂ ದೆಹಲಿಯ 23 ವರ್ಷದೊಳಗಿನವರ ತಂಡದ ನೆರವು ಸಿಬ್ಬಂದಿಯಾಗಿ ಕಾರ್ಯನಿರ್ವಹಿಸಿದ್ದ ಸಂಜಯ್‌ ಡೋಬಾಲ್‌ ಸೋಮವಾರ ಕೊನೆಯುಸಿರೆಳೆದರು. ಅವರ ಕುಟುಂಬದ ಮೂಲಗಳು ಈ ವಿಷಯ ಖಚಿತಪಡಿಸಿವೆ. ಅವರಿಗೆ ಪತ್ನಿ ಮತ್ತು ಇಬ್ಬರು ಪುತ್ರರಿದ್ದಾರೆ.

ಅವರ ಇಬ್ಬರೂ ಪುತ್ರರು ಕ್ರಿಕೆಟಿಗರು. ಹಿರಿಯ ಪುತ್ರ ಸಿದ್ಧಾಂತ್‌ ಅವರು ರಾಜಸ್ಥಾನ ಪರ ಪ್ರಥಮ ದರ್ಜೆ ಕ್ರಿಕೆಟ್‌ ಆಡುತ್ತಿದ್ದಾರೆ. ಕಿರಿಯ ಪುತ್ರ ಏಕಾಂಶ್‌ ದೆಹಲಿ 23 ವರ್ಷದೊಳಗಿನವರ ತಂಡವನ್ನು ಪ್ರತಿನಿಧಿಸಿದ್ದಾರೆ.

‘ಕೋವಿಡ್‌ ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ವಾರದ ಹಿಂದೆ ಸಂಜಯ್‌‌ ಅವರನ್ನು ಬಹದ್ದೂರ್‌ಗರ್‌ನ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಅಲ್ಲಿ ಅವರಿಗೆ ಸೋಂಕು ದೃಢಪಟ್ಟಿತ್ತು. ಬಳಿಕ ಆರೋಗ್ಯ ಸ್ಥಿತಿ ಹದಗೆಟ್ಟ ಕಾರಣ ಉತ್ತಮ ಸೌಲಭ್ಯಗಳು ಇರುವ ದ್ವಾರ್ಕಾ ಆಸ್ಪತ್ರಗೆ ಸ್ಥಳಾಂತರಿಸಲಾಗಿತ್ತು. ಅಲ್ಲಿ ಪ್ಲಾಸ್ಮಾ ಚಿಕಿತ್ಸೆ ನೀಡಿದರೂ ಸ್ಪಂದಿಸಲಿಲ್ಲ’ ಎಂದು ದೆಹಲಿ ಕ್ರಿಕೆಟ್‌ ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಫಿರೋಜ್ ಶಾ ಕೋಟ್ಲಾ ಕ್ರೀಡಾಂಗಣದಲ್ಲಿ ಚಿರಪರಿಚಿತರಾಗಿದ್ದ ಸಂಜಯ್‌ ಅವರು ವೀರೇಂದ್ರ ಸೆಹ್ವಾಗ್‌, ಗೌತಮ್‌ ಗಂಭೀರ್‌ ಹಾಗೂ ಮಿಥುನ್‌ ಮನ್ಹಾಸ್‌ ಅವರಂತಹ ದೆಹಲಿ ಕ್ರಿಕೆಟಿಗರ ಮಧ್ಯೆ ಜನಪ್ರಿಯರಾಗಿದ್ದರು. ಪ್ರಸಿದ್ಧ ಸಾನೆಟ್‌ ಕ್ಲಬ್‌ ಪರ ಆಡಿದ್ದ ಅವರು ತಾರಕ್‌ ಸಿನ್ಹಾ ಅವರ ಬಳಿ ತರಬೇತಿ ಪಡೆದಿದ್ದರು.

ಸಂಜಯ್‌ ಅವರಿಗೆ ದಾನ ಮಾಡುವಂತೆ ಗಂಭೀರ್‌ ಹಾಗೂ ಮನ್ಹಾಸ್‌ ಅವರು ಟ್ವಿಟರ್‌ನಲ್ಲಿ ಕೇಳಿಕೊಂಡಿದ್ದರು. ಆಮ್‌ ಆದ್ಮಿ ಪಕ್ಷದ ಶಾಸಕ ದಿಲೀಪ್‌ ಪಾಂಡೆ ಅವರು ಪ್ಲಾಸ್ಮಾ ದಾನಿಯ ವ್ಯವಸ್ಥೆ ಮಾಡಿದ್ದರು.

ಸಂಜಯ್‌ ಅವರು ರಣಜಿ ಟ್ರೋಫಿ ಆಡಿರಲಿಲ್ಲ. ತಾವು ಉದ್ಯೋಗಿಯಾದ್ದ ಏರ್‌ ಇಂಡಿಯಾ ತಂಡದ ಪರ ಆಡಿ ನಿವೃತ್ತರಾದ ಬಳಿಕ ಕಿರಿಯ ಕ್ರಿಕೆಟಿಗರಿಗೆ ತರಬೇತಿ ನೀಡುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT