ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಹಣ ವರ್ಗಾವಣೆ ಪ್ರಕರಣ: ಯೆಸ್‌ ಬ್ಯಾಂಕ್‌ ಸ್ಥಾಪಕ ರಾಣಾ ಕಪೂರ್‌ ಬಂಧನ

Last Updated 8 ಮಾರ್ಚ್ 2020, 19:27 IST
ಅಕ್ಷರ ಗಾತ್ರ

ಮುಂಬೈ: ಯೆಸ್‌ ಬ್ಯಾಂಕ್‌ ಸ್ಥಾಪಕ ರಾಣಾ ಕಪೂರ್‌ರನ್ನು ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಬಂಧಿಸಿ ಕೋರ್ಟ್‌ಗೆ ಹಾಜರುಪಡಿಸಿದರು. ಕೋರ್ಟ್‌ ಮಾರ್ಚ್‌ 11ರವರೆಗೆ ಅವರನ್ನು ಇ.ಡಿ ವಶಕ್ಕೆ ಒಪ್ಪಿಸಿತು.

62 ವರ್ಷದ ಕಪೂರ್‌ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ. ಇವರ ವಿರುದ್ಧ ಹಣ ಅಕ್ರಮ ವಗಾವಣೆ ನಿಯಂತ್ರಣ ಕಾಯ್ದೆ (ಪಿಎಂಎಲ್‌ಎ) ಅಡಿ ಪ್ರಕರಣ ದಾಖಲಾಗಿದೆ. ಇವರು ತನಿಖೆಗೆ ಸಹಕರಿಸುತ್ತಿಲ್ಲ ಎಂದು ಅಧಿಕಾರಿಗಳು ಮೊದಲು ಹೇಳಿದ್ದರು.

ಸುಮಾರು ₹ 2,000 ಕೋಟಿ ರೂಪಾಯಿ ಹೂಡಿಕೆ, ಕಾಗದಲ್ಲಿಯಷ್ಟೇ ಅಸ್ತಿತ್ವದಲ್ಲಿರುವ 12 ಕಂಪನಿಗಳು, ದುಬಾರಿ ಬೆಲೆಯ 44 ಪೇಂಟಿಂಗ್‌ಗಳು –ತನಿಖೆಗೆ ಆರಂಭಿಸಿರುವ ಇ.ಡಿ ಅಧಿಕಾರಿಗಳಿಗೆ ಕಂಡುಬಂದಿರುವ ರಾಣಾ ಕಪೂರ್‌ನ ಅಸ್ತಿಗಳಿವು.

ಅಲ್ಲದೆ, ಕಪೂರ್ ಕುಟುಂಬ ಸದಸ್ಯರು ಲಂಡನ್‌ನಲ್ಲಿ ಹೊಂದಿರುವ ಕೆಲ ಆಸ್ತಿಗಳಿಗೆ ಸಂಬಂಧಿಸಿದ ದಾಖಲೆಗಳು ಪತ್ತೆಯಾಗಿವೆ. ಇವುಗಳ ಸ್ವಾಧೀನಕ್ಕೆ ಹಣದ ಮೂಲ ಕುರಿತಂತೆ ಈಗ ತನಿಖೆ ನಡೆಸಲಾಗುತ್ತಿದೆ ಎಂದು ಇ.ಡಿ ಅಧಿಕಾರಿಗಳು ತಿಳಿಸಿದ್ದಾರೆ.

ತನಿಖೆ ಕೈಗೊಂಡಿರುವ ಇ.ಡಿ ಅಧಿಕಾರಿಗಳು ಶುಕ್ರವಾರ ದಕ್ಷಿಣ ಮುಂಬೈನಲ್ಲಿರುವ ರಾಣಾ ಕಪೂರ್‌ನ ಮನೆಯ ಮೇಲೆ ದಾಳಿ ನಡೆಸಿದ್ದರು. ಕುಟುಂಬ ಸದಸ್ಯರ ನಿಯಂತ್ರಣದಲ್ಲಿರುವ ಸಂಸ್ಥೆಗೆ ₹ 600 ಕೋಟಿ ಬಂದಿರುವ ಮೂಲ ಕುರಿತು ಕಪೂರ್, ಅವರ ಪತ್ನಿ ಮತ್ತು ಮೂವರು ಪುತ್ರಿಯರನ್ನು ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ. ಉದ್ದೇಶಿತ ಸಂಸ್ಥೆಗೂ ಈಗಾಗಲೇ ಹಗರಣದಲ್ಲಿ ಮುಳುಗಿರುವ ಡಿಎಚ್‌ಎಫ್‌ಎಲ್‌ ಸಂಸ್ಥೆಗೂ ಸಂಪರ್ಕವಿದೆ ಎಂದು ಹೇಳಲಾಗುತ್ತಿದೆ.

ಡಿಎಚ್‌ಎಫ್‌ಎಲ್‌ನಿಂದ ಸಾಲ ವಸೂಲಾತಿಗೆ ಬ್ಯಾಂಕ್‌ ಕ್ರಮವಹಿಸಿರಲಿಲ್ಲ. ಇದಕ್ಕೆ ಪೂರಕವಾಗಿ ರುಷುವತ್ತು ರೂಪದಲ್ಲಿ, ರಾಣಾ ಕುಟುಂಬ ನಿಯಂತ್ರಿಸುತ್ತಿರುವ ಉದ್ದೇಶಿತ ಕಂಪನಿಗೆ ₹ 600 ಕೋಟಿ ಬಂದಿರಬಹುದು ಎಂದು ಶಂಕಿಸಲಾಗಿದೆ.

ತನಿಖೆ ಸಂದರ್ಭದಲ್ಲಿ ರಾಣಾ ಕುಟುಂಬವು ಸುಮಾರು ₹ 2,000 ಕೋಟಿ ಹೂಡಿಕೆ ಮಾಡಿರುವುದು, ರುಷುವತ್ತು ಮೊತ್ತವನ್ನು ಹೊಂದಾಣಿಸಲು ಕಾಗದದಲ್ಲಷ್ಟೇ ಅಸ್ತಿತ್ವದಲ್ಲಿರುವ 12 ಕಂಪನಿಗಳ ಸ್ಥಾಪಿಸಿರುವುದು ಬೆಳಕಿಗೆ ಬಂದಿದೆ.

ಅಲ್ಲದೆ, ಕುಟುಂಬ ಸದಸ್ಯರು ಖರೀದಿಸಿದ್ದ ದುಬಾರಿ ಬೆಲೆಯ ಸುಮಾರು 44 ಪೇಂಟಿಂಗ್‌ಗಳು ಕಂಡುಬಂದಿವೆ. ಇವುಗಳ ಪೈಕಿ ಕೆಲವನ್ನು ರಾಜಕಾರಣಿಗಳಿಂದ ಖರೀದಿಸಲಾಗಿದೆ ಎಂಬುದು ಗಮನಾರ್ಹ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಿಜೆಪಿ–ಕಾಂಗ್ರೆಸ್ ಕೆಸರೆರಚಾಟ
ಯೆಸ್‌ ಬ್ಯಾಂಕ್‌ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳ ನಡುವೆ ಭಾನುವಾರ ವಾಕ್ಸಮರ ನಡೆದಿದೆ.

ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಕುಟುಂಬದ ಜತೆ ಯೆಸ್‌ ಬ್ಯಾಂಕ್‌ಗೆ ನಂಟು ಇದೆ ಎಂದು ಬಿಂಬಿಸಲು ಬಿಜೆಪಿ ಯತ್ನಿಸಿದೆ. ಆದರೆ, ‘ಬ್ಯಾಂಕ್‌ನ ಸಾಲದ ಮೊತ್ತ ಹಿಗ್ಗಲು ಪ್ರಧಾನಿ, ಹಣಕಾಸು ಸಚಿವರ ‘ಸಹಕಾರ’ ಕಾರಣವಿರಬಹುದೇ’ ಎಂದು ಕಾಂಗ್ರೆಸ್‌ ಪ್ರಶ್ನಿಸಿದೆ.

ರಾಣಾ ಕಪೂರ್‌ ಅವರು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರಿಂದ ಚಿತ್ರ ಕಲಾಕೃತಿ ಖರೀದಿಸಿದ್ದರು ಎಂಬ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿಯ ಐ.ಟಿ ವಿಭಾಗದ ಅಮಿತ್ ಮಾಳವೀಯ, ‘ಹಗರಣಕ್ಕೂ ಗಾಂಧಿ ಕುಟುಂಬಕ್ಕೆ ಸಂಬಂಧ ಇದೆ’ ಎಂದಿದ್ದಾರೆ.

ಈ ಆರೋಪ ಆಧಾರರಹಿತ ಎಂದು ಕಾಂಗ್ರೆಸ್‌ ತಳ್ಳಿಹಾಕಿದೆ. ‘ಪ್ರಿಯಾಂಕಾ ಗಾಂಧಿ ಅವರು ತಮ್ಮ ತಂದೆ ರಾಜೀವ್‌ಗಾಂಧಿ ಅವರಲ್ಲಿದ್ದ ಎಂ.ಎಫ್‌.ಹುಸೇನ್‌ ಅವರ ಪೇಂಟಿಂಗ್‌ ಅನ್ನು ₹ 2 ಕೋಟಿಗೆ ಮಾರಿದ್ದರು. ಈ ಮಾಹಿತಿ ಅವರ ಆದಾಯ ತೆರಿಗೆ ವಿವರಗಳಲ್ಲೂ ಇದೆ’ ಎಂದಿದೆ.

ಕಾಂಗ್ರೆಸ್‌ ವಕ್ತಾರ ಅಭಿಷೇಕ್‌ ಮನು ಸಿಂಘ್ವಿ ಅವರು, ‘ಇದು, ಗಮನ ಬೇರೆಡೆ ಸೆಳೆಯುವ ಸರ್ಕಾರದ ಕಾರ್ಯತಂತ್ರ. ಬ್ಯಾಂಕ್‌ನ ಸಾಲದ ಮೊತ್ತ ಮಾರ್ಚ್‌ 2014ರಲ್ಲಿ ಮೋದಿ ಅಧಿಕಾರಕ್ಕೆ ಬಂದಾಗ ₹ 55,633 ಕೋಟಿ ಇತ್ತು. ಮಾರ್ಚ್‌ 2019ಕ್ಕೆ ಅದು ರೂ. 2,41,499 ಕೋಟಿ ಆಗಿದೆ. ನೋಟು ರದ್ದತಿ ನಂತರ ಈ ಬದಲಾವಣೆ ಆಗಿದೆ. ಆಗ ಪ್ರಧಾನಿ, ಹಣಕಾಸು ಸಚಿವರು ನಿದ್ರೆ ಮಾಡುತ್ತಿದ್ದರೆ’ ಎಂದು ಪ್ರಶ್ನಿಸಿದ್ದಾರೆ.

ಸಿಬಿಐ ತನಿಖೆ
ಯೆಸ್‌ ಬ್ಯಾಂಕ್‌ ಬಿಕ್ಕಟ್ಟು ಕುರಿತಂತೆ ಸಿಬಿಐ ತನಿಖೆ ಆರಂಭಿಸಿದ್ದು, ಅಧಿಕಾರಿಗಳು ದಾಖಲೆಪತ್ರಗಳನ್ನು ಸಂಗ್ರಹಿಸಲು ಆರಂಭಿಸಿದ್ದಾರೆ.

ಸಿಬಿಐ ತನ್ನ ತನಿಖೆ ಕುರಿತು ಗೌಪ್ಯತೆ ಕಾಪಾಡಿಕೊಳ್ಳಲು ಬಯಸಿದೆ. ಅಧಿಕಾರಿಗಳು ಈ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ತನಿಖೆಯ ಕಾರ್ಯಶೈಲಿಯನ್ನು ವಿವರಿಸಲು ನಿರಾಕರಿಸಿದ ಮೂಲಗಳು, ತನಿಖೆ ಅಧಿಕೃತವಾಗಿ ಆರಂಭವಾಗಿದೆ ಎಂಬುದನ್ನಷ್ಟೇ ದೃಢಪಡಿಸಿವೆ.

ಹಗರಣಪೀಡಿತ ಡಿಎಚ್‌ಎಫ್‌ಎಲ್ ಮತ್ತು ಯೆಸ್‌ ಬ್ಯಾಂಕ್‌ ನಡುವಣ ಸಂಬಂಧ ಕುರಿತಂತೆ ಸಿಬಿಐ ಗಮನ
ಹರಿಸಲಿದೆ ಎಂದು ತಿಳಿದುಬಂದಿದೆ.

ಮಗಳಿಗೆ ತಡೆ
ರಾಣಾ ಕಪೂರ್‌ ಮಗಳು ರೋಶ್ನಿ ಕಪೂರ್‌ ಅವರು ಲಂಡನ್‌ಗೆ ಹೋಗುವುದನ್ನು ತಡೆಯಲಾಗಿದೆ. ಅವರ ವಿರುದ್ಧ ‘ಲುಕ್‌ ಔಟ್‌
ಸರ್ಕ್ಯುಲರ್‌’ ಹೊರಡಿಸಲಾಗಿದೆ. ಹಾಗಾಗಿ, ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ಪ್ರಯಾಣಕ್ಕೆ ತಡೆ ಒಡ್ಡಲಾಗಿದೆ. ರಾಣಾ ಅವರ ಕುಟುಂಬದ ಸದಸ್ಯರ ವಿರುದ್ಧವೂ ‘ಲುಕ್‌ ಔಟ್‌ ಸರ್ಕ್ಯುಲರ್‌’ ಹೊರಡಿಸಲಾಗಿದೆ.

ಇನ್ನಷ್ಟು:

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT