ಶುಕ್ರವಾರ, ಆಗಸ್ಟ್ 7, 2020
25 °C

ಆರು ತಿಂಗಳಲ್ಲೇ ಗರಿಷ್ಠ ಮಟ್ಟಕ್ಕೆ ಕಚ್ಚಾ ತೈಲ: ಇಂಧನ ದರ ಭಾರಿ ಏರಿಕೆ?

ಎಎಫ್‌ಪಿ Updated:

ಅಕ್ಷರ ಗಾತ್ರ : | |

ನವದೆಹಲಿ/ಲಂಡನ್‌: ಇರಾನ್‌ನಿಂದ ತೈಲ ಆಮದು ಮಾಡಿಕೊಳ್ಳಲು ಅಮೆರಿಕ ನೀಡಿದ್ದ ವಿನಾಯ್ತಿ ಕೆಲವೇ ದಿನಗಳಲ್ಲಿ ಕೊನೆಗೊಳ್ಳಲಿದೆ. ಇದು ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಏರಿಕೆಗೆ ಕಾರಣವಾಗಿದ್ದು, ಭಾರತದಲ್ಲಿಯೂ ದರ ಏರಿಕೆ ಬಿಸಿ ಅನುಭವಿಸಬೇಕಾಗಿ ಬರಲಿದೆ.

‘ಚುನಾವಣೆಯ ಕಾರಣಕ್ಕಾಗಿ ದರ ಏರಿಕೆ ಪ್ರಮಾಣಕ್ಕೆ ಕಡಿವಾಣ ಬಿದ್ದಿತ್ತು. ಚುನಾವಣಾ ಫಲಿತಾಂಶದ ಬಳಿಕ ದರ ಏರಿಕೆ ಪ್ರಮಾಣ ವೇಗ ಪಡೆಯಲಿದೆ. ಇದರ ಜತೆಗೆ ಆಮದು ನಿರ್ಬಂಧವೂ ವ್ಯತಿರಿಕ್ತ ಪರಿಣಾಮ ಬೀರುವುದರಿಂದ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಪ್ರತಿ ಲೀಟರಿಗೆ ₹ 5 ರಿಂದ ₹ 10ರವರೆಗೂ ಏರಿಕೆಯಾಗುವ ಸಾಧ್ಯತೆ ಇದೆ’ ಎಂದು ರಾಜ್ಯದ ಪೆಟ್ರೋಲಿಯಂ ವಿತರಕರ ಒಕ್ಕೂಟದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭಾರತದ ತೈಲ ಆಮದು ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. 2017–18ರಲ್ಲಿ ತೈಲ ಆಮದು ಮೌಲ್ಯ ₹ 6.02 ಲಕ್ಷ ಕೋಟಿ ಇತ್ತು. ಇದು 2018–19ರಲ್ಲಿ ₹ 8.62 ಲಕ್ಷ ಕೋಟಿಗೆ ಏರಿಕೆಯಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರದಲ್ಲಿ ಏರಿಕೆಯಾದರೆ ಭಾರತದ ಆಮದು ವೆಚ್ಚ ಹೆಚ್ಚಾಗಲಿದೆ. ಇದು ಪೆಟ್ರೋಲ್‌, ಡೀಸೆಲ್‌ ದರದಲ್ಲಿ ಏರಿಕೆ ಕಾರಣವಾಗಲಿದೆ.

ಆರು ತಿಂಗಳ ಗರಿಷ್ಠ: ಇರಾನ್‌ ಬೆಳವಣಿಗೆಯು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರದಲ್ಲಿ ಏರಿಕೆಗೆ ಕಾರಣವಾಗುತ್ತಿದೆ. ಬ್ರೆಂಟ್ ತೈಲ ದರ ಗುರುವಾರ ಆರು ತಿಂಗಳ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ. ಒಂದು ಬ್ಯಾರೆಲ್‌ಗೆ 75.17 ಡಾಲರ್‌ಗಳಿಗೆ ತಲುಪಿದೆ. ಜನವರಿಯಿಂದ ಬ್ರೆಂಟ್‌ ತೈಲ ದರದಲ್ಲಿ ಶೇ 40ರಷ್ಟು ಏರಿಕೆಯಾಗಿದೆ.

ಅಮೆರಿಕ ಬೆಂಚ್‌ಮಾರ್ಕ್‌ ವೆಸ್ಟ್‌ ಟೆಕ್ಸಾಸ್‌ ಇಂಟರ್‌ಮಿಡಿಯೇಟ್‌ ದರ್ಜೆಯ (ಡಬ್ಲ್ಯುಟಿಐ) ಕಚ್ಚಾ ತೈಲ ದರ ಒಂದು ಬ್ಯಾರೆಲ್‌ಗೆ 66.16 ಡಾಲರ್‌ಗಳವರೆಗೆ ಏರಿಕೆಯಾಗಿದ್ದು ಆರು ತಿಂಗಳ ಗರಿಷ್ಠ ಮಟ್ಟದ ಸಮೀಪದಲ್ಲಿದೆ.

2018ರ ನಂತರ ಅಮೆರಿಕವು ತನ್ನ ಕಚ್ಚಾ ತೈಲ ಉತ್ಪಾದನೆಯನ್ನು ಒಂದು ದಿನಕ್ಕೆ 20 ಲಕ್ಷ ಬ್ಯಾರೆಲ್‌ಗಳಷ್ಟು ಹೆಚ್ಚಿಸಿದೆ. ಸದ್ಯ ದಿನದ ಉತ್ಪಾದನೆ ಗರಿಷ್ಠ 1.22 ಕೋಟಿ ಬ್ಯಾರೆಲ್‌ಗಳಿಗೆ ತಲುಪಿದೆ. ಉತ್ಪಾದನೆಯ ದೃಷ್ಟಿಯಿಂದ  ರಷ್ಯಾ ಮತ್ತು ಸೌದಿ ಅರೇಬಿಯಾವನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿದೆ.

ಕಚ್ಚಾ ತೈಲ ಉತ್ಪಾದನೆ ಇಳಿಕೆ
2018–19ರಲ್ಲಿ ಭಾರತದ ಕಚ್ಚಾ ತೈಲ ಉತ್ಪಾದನೆ ಶೇ 4ರಷ್ಟು ಇಳಿಕೆಯಾಗಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿನ ಅನಿಲ ಸಚಿವಾಲಯ ಮಾಹಿತಿ ನೀಡಿದೆ. ಹಣಕಾಸು ವರ್ಷದಲ್ಲಿ 3.42 ಕೋಟಿ ಟನ್‌ ಕಚ್ಚಾ ತೈಲ ಉತ್ಪಾದನೆಯಾಗಿದೆ. ಹಿಂದಿನ ಹಣಕಾಸು ವರ್ಷದಲ್ಲಿ 3.57 ಕೋಟಿ ಟನ್‌ ಉತ್ಪಾದನೆ ಆಗಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು