ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಡಿಶಾ, ಪಶ್ಚಿಮ ಬಂಗಾಳದಲ್ಲಿ ಅಬ್ಬರಿಸಿದ ‘ಅಂಪನ್‌’: 10 ಸಾವು

Last Updated 21 ಮೇ 2020, 1:04 IST
ಅಕ್ಷರ ಗಾತ್ರ

ಕೋಲ್ಕತ್ತ/ನವದೆಹಲಿ: ಅತ್ಯಂತ ತೀವ್ರವಾದ, ಗಂಟೆಗೆ 190 ಕಿ.ಮೀ. ನಷ್ಟು ವೇಗ ಹೊಂದಿದ್ದ ಅಂಪನ್‌ ಚಂಡಮಾರುತವು ಪಶ್ಚಿಮ ಬಂಗಾಳವನ್ನು ಬುಧವಾರ ಮಧ್ಯಾಹ್ನ 2.30ರ ಹೊತ್ತಿಗೆ ಅಪ್ಪಳಿಸಿದೆ. ರಾಜ್ಯದ ಹಲವು ಭಾಗಗಳಲ್ಲಿ ಭಾರಿ ಮಳೆಯಾಗಿದ್ದು, ಅಪಾರ ಹಾನಿ ಉಂಟಾಗಿದೆ. ಕನಿಷ್ಠ ಹತ್ತು ಮಂದಿ ಮೃತಪಟ್ಟಿದ್ದಾರೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಪಶ್ಚಿಮ ಬಂಗಾಳದ ದಿಘಾ ಮತ್ತು ಬಾಂಗ್ಲಾದೇಶದ ಹಾತಿಯಾ ದ್ವೀಪದ ನಡುವಣ ಭಾಗದಲ್ಲಿ ‘ಅಂಪನ್‌’ ಭೂ ಪ‍್ರದೇಶವನ್ನು ಪ‍್ರವೇಶಿಸಿದೆ. ಕರಾವಳಿ ಪ್ರದೇಶದಲ್ಲಿ ಹಲವು ಕಟ್ಟಡಗಳು, ಮರಗಳು ಮತ್ತು ವಿದ್ಯುತ್‌ ಕಂಬಗಳನ್ನು ನೆಲಕ್ಕೆ ಉರುಳಿಸಿದೆ. ಪಶ್ಚಿಮ ಬಂಗಾಳ ಮತ್ತು ಒಡಿಶಾ ಕರಾವಳಿ ಪ್ರದೇಶದ 6.58ಲಕ್ಷಕ್ಕೂ ಹೆಚ್ಚು ಜನರನ್ನು ಚಂಡಮಾರುತವು ಪ್ರವೇಶಿಸುವ ಮೊದಲೇ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿತ್ತು.

ಭೂಪ್ರದೇಶಕ್ಕೆ ಅಂಪನ್‌ ಪ್ರವೇಶಿಸಿದ ದಿಘಾದಲ್ಲಿ ಐದು ಮೀಟರ್‌ಗೂ ಹೆಚ್ಚು ಎತ್ತರದ ಬೃಹತ್‌ ಅಲೆಗಳು ಸಮುದ್ರ ದಂಡೆಯನ್ನು ಅಪ್ಪಳಿಸಿವೆ. ಎರಡೂ ರಾಜ್ಯಗಳ ಕರಾವಳಿಯಲ್ಲಿ ಭಾರಿ ಮಳೆ ಸುರಿದಿದೆ. ಐದು ಸಾವಿರಕ್ಕೂ ಹೆಚ್ಚು ಮನೆಗಳು ಕುಸಿದಿವೆ.

ದಕ್ಷಿಣ, ಉತ್ತರ 24 ಪರಗಣ ಜಿಲ್ಲೆಗಳಿಗೆ ಚಂಡಮಾರುತ ಪ‍್ರವೇಶಿಸಿದಾಗ ಗಾಳಿಯ ವೇಗ ಗಂಟೆಗೆ 160–170 ಕಿ.ಮೀ.ನಷ್ಟಿತ್ತು ಎಂದು ಭಾರತೀಯ ಹವಾಮಾನ ಇಲಾಖೆಯ ಮಹಾನಿರ್ದೇಶಕ ಮೃತ್ಯುಂಜಯ ಮಹಾಪಾತ್ರ ತಿಳಿಸಿದ್ದಾರೆ.

ಕೋಲ್ಕತ್ತವನ್ನು ‘ಅಂಪನ್‌’ ತಲುಪುವ ಹೊತ್ತಿಗೆ ಗಾಳಿಯ ಗರಿಷ್ಠ ವೇಗ ಗಂಟೆಗೆ 135 ಕಿ.ಮೀ. ಇತ್ತು. ಸರಾಸರಿ ವೇಗ 110–120 ಕಿ.ಮೀ ಎಂದು ಅವರು ಹೇಳಿದ್ದಾರೆ. ಭಾರಿ ಮಳೆಯ ಕಾರಣ ಕೋಲ್ಕತ್ತ ನಗರದಲ್ಲಿ ಅಪಾರ ನಷ್ಟದ ಆತಂಕ ಎದುರಾಗಿದೆ.

ನಿಖರ ಮುನ್ಸೂಚನೆ

ಮೇ 20ರಂದೇ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿತ್ತು. ಇದು ಭಾರಿ ವೇಗದ ಚಂಡಮಾರುತವಾಗಿ ಪರಿವರ್ತನೆಗೊಳ್ಳಲಿದೆಎಂದು ಹವಾಮಾನ ಇಲಾಖೆ ಅಂದಾಜಿಸಿತ್ತು. ಚಂಡಮಾರುತವು ಭೂ ಪ್ರದೇಶವನ್ನು ಪ್ರವೇಶಿಸುವ ನಿಖರ ದಿನಾಂಕದ ಮುನ್ಸೂಚನೆಯನ್ನು ಇಲಾಖೆ ನೀಡಿತ್ತು. ಹಾಗಾಗಿ, ಜನರ ಸ್ಥಳಾಂತರ, ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಯೋಜಿಸಲು ಸಾಧ್ಯವಾಗಿದೆ ಎಂದು ಮಹಾಪಾತ್ರ ಹೇಳಿದ್ದಾರೆ.

ದುರಂತದ ನೆನಪು

ಅಂಪನ್, ಸ್ವಾತಂತ್ರ್ಯಾನಂತರ ಭಾರತಕ್ಕೆ ಅಪ್ಪಳಿಸಿರುವ ಎರಡನೇ ಅತಿವೇಗದ ಚಂಡಮಾರುತ (ಸೂಪರ್‌ ಸೈಕ್ಲೋನ್‌).1999ರ ಅಕ್ಟೋಬರ್ 29ರಂದು ಮೊದಲ ಸೂಪರ್ ಸೈಕ್ಲೋನ್ ದಾಳಿಯಿಟ್ಟಿತ್ತು.ಒಡಿಶಾ ಕರಾವಳಿಗೆ ಅಪ್ಪಳಿಸಿದ್ದ ಅದು ದೊಡ್ಡ ಅನಾಹುತವನ್ನೇ ಸೃಷ್ಟಿಸಿತ್ತು. ಶತಮಾನದಲ್ಲಿ ದಾಖಲಾದ ಈ ಭೀಕರ ಚಂಡಮಾರುತದಲ್ಲಿ ಸುಮಾರು 9 ಸಾವಿರ ಜನರು ಮೃತಪಟ್ಟಿದ್ದರು.

ಅಂದಾಜು 260 ಕಿಲೋಮೀಟರ್ ವೇಗದಲ್ಲಿ ಬೀಸಿದ ಗಾಳಿಯು 36 ಗಂಟೆಗಳ ಕಾಲ ಕರಾವಳಿಯನ್ನು ಅಕ್ಷರಶಃ ರೌದ್ರವಾಗಿಸಿತ್ತು. ಕರಾವಳಿಯ 14 ಜಿಲ್ಲೆಗಳು, 2 ಕರಾವಳಿ ಪಟ್ಟಣಗಳು ತೀವ್ರ ಹಾನಿಗೀಡಾಗಿದ್ದವು. 9,885 ಜನರು ಮೃತಪಟ್ಟರು ಎಂದುಅಧಿಕೃತ ದಾಖಲೆಗಳ ಹೇಳುತ್ತವೆ.

ಅಂಫಾನ್ ಪರಿಣಾಮವಾಗಿ ಮುಂಗಾರು ಮಳೆ ಕೇರಳ ಪ್ರವೇಶಿಸುವುದು ವಿಳಂಬವಾಗುವ ಸಾಧ್ಯತೆ ಇದೆ. ಜೂನ್ 5ರ ವೇಳೆಗೆ ಮುಂಗಾರು ಕೇರಳ ಪ್ರವೇಶಿಸುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT