ಪುರಿ: 12ರಿಂದ ಎಂದಿನಂತೆ ರೈಲು ಸಂಚಾರ

ಶನಿವಾರ, ಮೇ 25, 2019
22 °C
‘ಫೋನಿ’: ಮೃತಪಟ್ಟವರ ಸಂಖ್ಯೆ 41ಕ್ಕೆ ಏರಿಕೆ l 141 ರೈಲುಗಳ ಸಂಚಾರ ಪುನರಾರಂಭ

ಪುರಿ: 12ರಿಂದ ಎಂದಿನಂತೆ ರೈಲು ಸಂಚಾರ

Published:
Updated:
Prajavani

ಭುವನೇಶ್ವರ: ಒಡಿಶಾದ ಪುರಿಯಿಂದ ರೈಲು ಸಂಚಾರವನ್ನು ಈ ತಿಂಗಳ 12ರಿಂದ ಪುನರಾರಂಭಿಸುವುದಾಗಿ ರೈಲ್ವೆ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಫೋನಿ ಚಂಡಮಾರುತದಿಂದ ಇಲ್ಲಿನ ರೈಲು ಸಂಪರ್ಕ ಅಸ್ತವ್ಯಸ್ತಗೊಂಡಿತ್ತು.

ಪುರಿ ರೈಲು ನಿಲ್ದಾಣ ತೀವ್ರ ಹಾನಿಗೆ ಒಳಗಾಗಿದ್ದು ದುರಸ್ತಿಗೆ ಮೂರು ತಿಂಗಳು ಬೇಕಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ರಾಜ್ಯಕ್ಕೆ ಮೇ 3ರಂದು ಚಂಡಮಾರುತ ಅಪ್ಪಳಿಸಿದ ಬಳಿಕ ರೈಲ್ವೆ ಇಲಾಖೆಯು 595 ರೈಲುಗಳ ಸಂಚಾರವನ್ನು ರದ್ದುಗೊಳಿಸಿತ್ತು.
ಈವರೆಗೆ ಭುವನೇಶ್ವರದಿಂದ ಹೊರಡುವ 34 ರೈಲುಗಳು ಸೇರಿದಂತೆ 141 ರೈಲುಗಳ ಸಂಚಾರ ಪುನರಾರಂಭಿಸಲಾಗಿದೆ.

‘ಬುಧವಾರ ಪುರಿಯಿಂದ ಮೂರು ಎಕ್ಸ್‌ಪ್ರೆಸ್‌ ರೈಲುಗಳ ಸಂಚಾರ ಪುನರಾರಂಭಿಸಲಾಗಿದೆ. ಕ್ರಮೇಣ ಈ ಸಂಖ್ಯೆ ಹೆಚ್ಚಿಸುತ್ತೇವೆ. ಈ ತಿಂಗಳ 12ರ ವೇಳೆಗೆ ಪುರಿಯಿಂದ ಎಂದಿನಂತೆ ಎಲ್ಲಾ ರೈಲುಗಳು ಸಂಚರಿಸಲಿವೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಮಧ್ಯೆ, ಚಂಡಮಾರುತಕ್ಕೆ ಬಲಿಯಾದವರ ಸಂಖ್ಯೆ 41ಕ್ಕೆ ಏರಿದೆ. ನೆರೆ ರಾಜ್ಯಗಳ ನುರಿತ ಕೆಲಸಗಾರರ ನೆರವಿನಿಂದ ಹಾನಿಗೊಳಗಾಗಿರುವ ವಿದ್ಯುತ್‌ ಮಾರ್ಗಗಳ ದುರಸ್ತಿ ಕಾರ್ಯವು ಭರದಿಂದ ಸಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಚಂಡಮಾರುತಕ್ಕೆ ಬಲಿಯಾದವರ ಸಂಖ್ಯೆ ಮಂಗಳವಾರ 37ಕ್ಕೆ ತಲುಪಿತ್ತು. ಪುರಿ ಜಿಲ್ಲೆಯಲ್ಲಿ ಶುಕ್ರವಾರ ಸಂಭವಿಸಿದ ಭೂ ಕುಸಿತದಲ್ಲಿ ನಾಲ್ವರು ಮೃತಪಟ್ಟಿದ್ದು ವರದಿಯಾಗಿದ್ದು ಸಾವಿನ ಒಟ್ಟು 41ಕ್ಕೆ ಏರಿದೆ’ ಎಂದು ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಾರ್ಯದರ್ಶಿ ಸಂಜಯ ಸಿಂಗ್‌ ತಿಳಿಸಿದ್ದಾರೆ.

‘ಚಂಡಮಾರುತದಿಂದ ಹಾನಿಗೊಳಗಾಗಿರುವ ನೀರು ಪೂರೈಕೆ ವ್ಯವಸ್ಥೆಯನ್ನು ಪುನಃಸ್ಥಾಪಿಸುವುದು ಮೊದಲ ಆದ್ಯತೆಯಾಗಿತ್ತು. ಭುವನೇಶ್ವರ ಮತ್ತು ಪುರಿ ಜಿಲ್ಲೆಯ ಬಹುತೇಕ ಭಾಗದಲ್ಲಿ ನೀರು ಪೂರೈಕೆ ವ್ಯವಸ್ಥೆ ಕಲ್ಪಿಸಲಾಗಿದೆ. ವಿದ್ಯುತ್‌ ಪೂರೈಕೆ ಇರದ ಕಡೆಗಳಲ್ಲಿ ಡೀಸೆಲ್‌ ಜನರೇಟರ್‌ಗಳ ಮೂಲಕ ನೀರು ಪೂರೈಕೆ ವ್ಯವಸ್ಥೆ ಮಾಡಲಾಗಿದೆ’ ಎಂದು ಅವರು ಹೇಳಿದ್ದಾರೆ.

‘ರಾಜ್ಯದ ಕರಾವಳಿಯ 11 ಜಿಲ್ಲೆಗಳಲ್ಲಿ ನೀರು ಪೂರೈಕೆ, ವಿದ್ಯುತ್‌ ಸರಬರಾಜು ಮತ್ತು ದೂರಸಂಪರ್ಕ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಪಶ್ಚಿಮ ಬಂಗಾಳ, ತೆಲಂಗಾಣ ಮತ್ತು ಆಂಧ್ರಪ್ರದೇಶದಿಂದ ನುರಿತ ಕೆಲಸಗಾರರ ನೆರವನ್ನು ಪಡೆಯಲಾಗಿದ್ದು, ಮೇ 12ರ ಹೊತ್ತಿಗೆ ವಿದ್ಯುತ್‌ ಪೂರೈಕೆ ವ್ಯವಸ್ಥೆ ಸುಧಾರಿಸಲಿದೆ. ಶೇ 80 ರಷ್ಟು ವಿದ್ಯುತ್‌ ಗ್ರಾಹಕರು ಮೇ 10ರ ವೇಳೆಗೆ ವಿದ್ಯುತ್‌ ಸೌಲಭ್ಯ ಪಡೆಯಲಿದ್ದಾರೆ’ ಎಂದು ಸಿಂಗ್‌ ಅವರು ತಿಳಿಸಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !