ಶುಕ್ರವಾರ, ಏಪ್ರಿಲ್ 10, 2020
19 °C
ಸಿಎಎ ವಿರೋಧಿಸಿ ಒಂದೂವರೆ ತಿಂಗಳಿಂದ ಪ್ರತಿಭಟನೆ, ಮಹಿಳೆಯರಿಂದ ಗಣರಾಜ್ಯೋತ್ಸವ

ಸಿಎಎ ಪ್ರತಿಭಟನಾಕರರಿಂದ ಶಾಹೀನ್‌ ಬಾಗ್‌ನಲ್ಲಿ 55 ಅಡಿ ಎತ್ತರದ ರಾಷ್ಟ್ರಧ್ವಜ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಸಿಎಎ ವಿರೋಧಿಸಿ ಸುಮಾರು ಒಂದೂವರೆ ತಿಂಗಳಿಂದ ಇಲ್ಲಿನ ಶಾಹೀನ್‌ ಬಾಗ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಸಾವಿರಾರು ಮಂದಿ ಭಾನುವಾರ 55 ಅಡಿ ಎತ್ತರದ ರಾಷ್ಟ್ರಧ್ವಜ ಹಾರಿಸುವ ಮೂಲಕ ಗಣರಾಜ್ಯೋತ್ಸವವನ್ನು ಆಚರಿಸಿದರು.

2016ರ ಜನವರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಹೈದರಾಬಾದ್‌ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ರೋಹಿತ್‌ ವೇಮುಲು ಅವರ ತಾಯಿ ರಾಧಿಕಾ ವೇಮುಲು ಮತ್ತು ದೆಹಲಿಯಲ್ಲಿ ಗುಂಪು ಹತ್ಯೆಗೆ ಒಳಗಾಗಿದ್ದ ಜುನೈದ್‌ ಖಾನ್‌ ಅವರ ತಾಯಿ ಸಾಯಿರಾ ಬಾನೊ ಅವರು ಜಂಟಿಯಾಗಿ ಧ್ವಜಾರೋಹಣ ನೆರವೇರಿಸಿದರು.

ಮೊದಲ ದಿನದಿಂದ ಪಾಲ್ಗೊಂಡಿರುವ 75 ಮತ್ತು 90 ವಯಸ್ಸಿನ ಮೂವರು ವೃದ್ಧೆಯರಾದ ಅಸ್ಮಾ ಖಾನ್‌, ಬಿಲ್ಕಿಸ್‌ ಮತ್ತು ಸರ್ವಾರಿ ಧ್ವಜಾರೋಹಣಕ್ಕೆ ನೆರ
ವಾದರು. ಇವರನ್ನು ‘ದಬಾಂಗ್‌ ದಾದೀಸ್‌ (ಅಜ್ಜಿಯಂದಿರು) ಎನ್ನಲಾಗು ತ್ತದೆ. ಡಿಸೆಂಬರ್‌ 15ರಿಂದ ದಕ್ಷಿಣ ಮಹಿಳೆಯರು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಜನರು ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದಾರೆ.

ಪ್ರಕರಣ ದಾಖಲು: ಸಿಎಎ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿದ್ದಕ್ಕಾಗಿ ಜೆಎನ್‌ಯು ಮಾಜಿ ವಿದ್ಯಾರ್ಥಿ ಶರ್ಜೀಲ್‌ ಇಮಾಮ್‌ ವಿರುದ್ಧ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

620 ಕಿ.ಮೀ. ಮಾನವ ಸರಪಳಿ

ತಿರುವನಂತಪುರ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಾಪಸಿಗೆ ಆಗ್ರಹಿಸಿ ಗಣರಾಜ್ಯ ದಿನವಾದ ಭಾನುವಾರ 620 ಕಿ.ಮೀ ಉದ್ದದ ಮಾನವ ಸರಪಳಿ ರಚಿಸಲಾಯಿತು.

ಕೇರಳ ಉತ್ತರದ ಕಾಸರಗೋಡಿನಿಂದ ದಕ್ಷಿಣದ ಕಲಿಯಕ್ಕವಿಲೈವರೆಗೆ ಮಾನವ ಸರಪಳಿ ರಚಿಸಲಾಗಿತ್ತು. ಸಿಪಿಎಂ ನೇತೃತ್ವದ ಎಲ್‌ಡಿಎಫ್‌ (ಲೆಫ್ಟ್‌ ಡೆಮಾಕ್ರಟಿಕ್‌ ಫ್ರಂಟ್‌) ಪ್ರತಿಭಟನೆ ಆಯೋಜಿಸಿತ್ತು.

ತಿರುವನಂತಪುರದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಮತ್ತು ಸಿಪಿಐ ನಾಯಕ ಕಣಂ ರಾಜೇಂದ್ರನ್‌ ಪಾಲ್ಗೊಂಡಿದ್ದರು. ಮಾನವ ಸರಪಳಿಯಲ್ಲಿ 60ರಿಂದ 70 ಲಕ್ಷ ಮಂದಿ ಪಾಲ್ಗೊಂಡಿದ್ದರು ಎಂದು ಎಲ್‌ಡಿಎಫ್‌ ಹೇಳಿದೆ.

ಸಿಎಎ ವಿರುದ್ಧ ಪತ್ರಕ್ಕೆ ನಾಸೀರುದ್ದೀನ್‌ ಶಾ, ಮೀರಾ ಸಹಿ

ಮುಂಬೈ: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಬಹಿರಂಗ ಪತ್ರಕ್ಕೆ ಬಾಲಿವುಡ್ ಚಿತ್ರ ನಿರ್ಮಾಪಕಿ ಮೀರಾ ನಾಯರ್, ನಟ ನಾಸೀರುದ್ದೀನ್ ಶಾ ಸೇರಿದಂತೆ ಸುಮಾರು 300ಕ್ಕೂ ಹೆಚ್ಚು ಗಣ್ಯರು ಸಹಿ ಹಾಕಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ ಭಾರತದ 'ಆತ್ಮ'ಕ್ಕೆ ಧಕ್ಕೆ ತರುತ್ತವೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು