ಬುಧವಾರ, ಆಗಸ್ಟ್ 4, 2021
20 °C

ಮೌಲ್ಯಮಾಪನಕ್ಕೆ ಗೈರು: ಮೃತ ಶಿಕ್ಷಕ ಅಮಾನತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಪಟ್ನಾ: ಎರಡು ವರ್ಷ ಹಿಂದೆ ಮೃತಪಟ್ಟ ಗುತ್ತಿಗೆ ಶಿಕ್ಷಕರೊಬ್ಬರನ್ನು ಬಿಹಾರ ಸರ್ಕಾರ ಈಗ ವಜಾ ಮಾಡಿದೆ. ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು ಅವರು ಮೌಲ್ಯಮಾಪನ ಮಾಡಿಲ್ಲ ಎಂಬುದು ಅವರ‌ ವಿರುದ್ಧದ ಆರೋಪ.

ಸಾವಿರಾರು ಗುತ್ತಿಗೆ ಶಿಕ್ಷಕರು ಬಿಹಾರದಲ್ಲಿ ಫೆ. 17ರಿಂದಲೂ ಮುಷ್ಕರ ನಡೆಸುತ್ತಿದ್ದಾರೆ. ಕೆಲಸ ಕಾಯಂ ಮಾಡಿ ಮತ್ತು ಸರ್ಕಾರಿ ಶಿಕ್ಷಕರಿಗೆ ಸಮಾನವಾದ ಸಂಬಳ ನೀಡಿ ಎಂಬುದು ಅವರ ಮುಖ್ಯ ಬೇಡಿಕೆಗಳು. ಗುತ್ತಿಗೆ ಶಿಕ್ಷಕರಲ್ಲಿ ಹೆಚ್ಚಿನವರು ಮುಷ್ಕರದಲ್ಲಿ ಭಾಗವಹಿಸುತ್ತಿರುವುದರಿಂದ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಆಗಿಲ್ಲ. 

ಹಾಗಾಗಿ, ಉತ್ತರ ಪತ್ರಿಕೆ ಮೌಲ್ಯಮಾಪನ ಮಾಡದ ಹಲವು ಗುತ್ತಿಗೆ ಶಿಕ್ಷಕರನ್ನು ಬೆಗುಸರಾಯ್‌ ಜಿಲ್ಲಾ ಶಿಕ್ಷಣಾಧಿಕಾರಿ ಅಮಾನತು ಮಾಡಿದ್ದಾರೆ. ಎರಡು ವರ್ಷ ಹಿಂದೆ ಮೃತಪಟ್ಟ ರಂಜಿತ್‌ ಕುಮಾರ್‌ ಯಾದವ್‌ ಅವರೂ ಅಮಾನತುಗೊಂಡವರಲ್ಲಿ ಸೇರಿದ್ದಾರೆ. 

ಉತ್ತರ ಪತ್ರಿಕೆ ಮೌಲ್ಯಮಾಪನ ಮಾಡಲು ಯಾದವ್‌ ಅವರಿಗೆ ಸೂಚಿಸಲಾಗಿದೆ. ಹಾಗಿದ್ದರೂ ಅವರು ಪರೀಕ್ಷಾ ಕೇಂದ್ರಕ್ಕೆ ಬಂದು ಕೆಲಸ ಮಾಡಿಲ್ಲ ಎಂದು ಅಮಾನತು ಆದೇಶದಲ್ಲಿ ಹೇಳಲಾಗಿದೆ. ಮುಂದಿನ ಆದೇಶದವರೆಗೆ ಅವರು ಅಮಾನತಿನಲ್ಲಿ  ಇರುತ್ತಾರೆ ಎಂದೂ ತಿಳಿಸಲಾಗಿದೆ. 

ಸಾವಿರಾರು ಶಿಕ್ಷಕರು ಪಟ್ನಾದಲ್ಲಿ ಮಂಗಳವಾರ ಭಾರಿ ಪ್ರತಿಭಟನೆ ನಡೆಸಿದ್ದಾರೆ. 

ಮಹಾವೀರ ಮಂದಿರದಲ್ಲಿ ಇರುವ ಭಿಕ್ಷುಕರ ಸಾಲಿನಲ್ಲಿ ಕುಳಿತು ಭಿಕ್ಷೆ ಬೇಡಿದ್ದಾರೆ. ‘ನಮ್ಮ ಮುಷ್ಕರದಿಂದಾಗಿ 76 ಸಾವಿರ ಶಾಲೆಗಳು ಮುಚ್ಚಿವೆ’ ಎಂದು ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಬ್ರಜನಂದನ್‌ ಶರ್ಮಾ ಹೇಳಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು