ಸೋಮವಾರ, ಮೇ 17, 2021
27 °C

ಕೋವಿಡ್-19ಗೆ ರಾಜಸ್ಥಾನದಲ್ಲಿ ಯಶಸ್ವಿ ಚಿಕಿತ್ಸೆ: ಮಹಿಳೆ ಗುಣಮುಖ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ನವದೆಹಲಿ: ಜೈಪುರ ಆಸ್ಪತ್ರೆಯಲ್ಲಿ ಕೊರೊನಾವೈರಸ್ ಸೋಂಕಿತ ವೃದ್ಧ ಇಟಾಲಿಯನ್ ದಂಪತಿಗಳಿಗೆ ಎಚ್‌ಐವಿ ವಿರೋಧಿ ಔಷಧಿಗಳಾದ ಲೋಪಿನವಿರ್ ಮತ್ತು ರಿಟಾನವೀರ್ ಅನ್ನು ನೀಡಲಾಗಿದ್ದು, ಮಹಿಳೆ ಗುಣಮುಖರಾಗಿದ್ದಾರೆ. ಇದರಿಂದಾಗಿ ಕೊರೊನಾವೈರಸ್‌ಗೆ ಚಿಕಿತ್ಸೆಗೆ ವೈದ್ಯಕೀಯ ಲೋಕದಲ್ಲಿ ಹೊಸ ಆಶಾವಾದ ಹುಟ್ಟುಕೊಂಡಂತಾಗಿದೆ. ಆದರೆ ಇದು ವೈದ್ಯಕೀಯವಾಗಿ ಸಂಶೋಧನೆಗೆ ಒಳಪಡಬೇಕಿದೆ. 

ಮುಂದಿನ ದಿನಗಳಲ್ಲಿ ಕೋವಿಡ್-19 ರೋಗಿಗಳಿಗೆ ಎರಡು ಔಷಧಗಳನ್ನು ಸೇರಿಸಿ ಚಿಕಿತ್ಸೆ ನೀಡುವ ಕುರಿತು ಆಸ್ಪತ್ರೆಯು ಆರೋಗ್ಯ ಸಚಿವಾಲಯ ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಗೆ (ಐಸಿಎಂಆರ್) ತಿಳಿಸಲು ಕೇಳಲಾಗಿದೆ ಎಂದು ರಾಜಸ್ಥಾನದ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. 

ಇದನ್ನೂ ಓದಿ: 

ಭಾರತದಲ್ಲಿ ಕೊರೊನಾವೈರಸ್ ಹಾವಳಿ ಮಿತಿಮೀರುತ್ತಿರುವ ಬೆನ್ನಲ್ಲೇ ಇದೇ ಮೊದಲ ಬಾರಿಗೆ ಕೋವಿಡ್-19 ರೋಗಿಗಳಿಗೆ ಎರಡು ಔಷಧಗಳನ್ನು ಒಟ್ಟಿಗೆ ಸೇರಿಸಿ ಚಿಕಿತ್ಸೆ ನೀಡಲಾಗಿದೆ. ಇಟಾಲಿಯನ್ ದಂಪತಿ ಸದ್ಯ ಜೈಪುರದ ಎಸ್‌ಎಂಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ ಪತಿಗೆ ಇನ್ನು ಚಿಕಿತ್ಸೆಯನ್ನು ಮುಂದುವರಿಸಲಾಗಿದೆ.

ಇದೊಂದು ತೀವ್ರವಾದ ಖಾಯಿಲೆ ಎಂದು ಭಾವಿಸಿ ಚಿಕಿತ್ಸೆಯನ್ನು ಆರಂಭಿಸಿದ ವೈದ್ಯರು ಮೊದಲಿಗೆ ಸ್ಥಳೀಯವಾಗಿ ರೋಗಕ್ಕೆ ಚಿಕಿತ್ಸೆ ನೀಡಲು ಲೋಪಿನವಿರ್ ಮತ್ತು ರಿಟಾನವಿರ್ ಸಂಯೋಜಿತ ಔಷಧವನ್ನು ಬಳಸಿದ್ದಾರೆ. ಆದರೆ ಒಬ್ಬೇ ಒಬ್ಬ ರೋಗಿಯ ಮೇಲಿನ ಪ್ರಯೋಗಗಳಿಂದ ಖಚಿತವಾಗಿ ಹೇಳಲು ಸಾಧ್ಯವಾಗುವುದಿಲ್ಲ. ಇದಕ್ಕಾಗಿ ವ್ಯವಸ್ಥಿತವಾದ ರಚನಾತ್ಮಕ ಅಧ್ಯಯನದ ಅಗತ್ಯವಿದೆ ಎಂದು ಐಸಿಎಂಆರ್‌ನ ಸಾಂಕ್ರಾಮಿಕ ರೋಗಶಾಸ್ತ್ರ ಮತ್ತು ಸಾಂಕ್ರಾಮಿಕ ರೋಗಗಳ ವಿಭಾಗದ ಮುಖ್ಯಸ್ಥ ರಮಣ್ ಆರ್ ಗಂಗಾಖೇಡ್ಕರ್ ತಿಳಿಸಿದ್ದಾರೆ. 

ಇಂತಹ ಪ್ರಯೋಗಗಳಿಂದ ಹೆಚ್ಚಿನ ಫಲಿತಾಂಶಗಳು ಲಭ್ಯವಾದ ಬಳಿಕವಷ್ಟೇ ಸೂಕ್ತ ನಿರ್ಧಾರಕ್ಕೆ ಬರಬಹುದು. ಆದರೆ ಔಷಧವನ್ನು ನೀಡಿದಾಗಿನಿಂದಲೂ ಅಧ್ಯಯನಕ್ಕೆ ಒತ್ತು ನೀಡಿದ್ದೇವೆ. ಈ ಔಷಧವು ಪರಿಣಾಮಕಾರಿಯೇ ಎಂಬುದನ್ನು ತಿಳಿಯಲು ನಿಯಮಿತವಾಗಿ ಮಾದರಿಗಳನ್ನು ಸಂಗ್ರಹಿಸುತ್ತಿದ್ದೇವೆ. ಔಷಧವು ವೈದ್ಯಕೀಯವಾಗಿ ಪ್ರಾಮಾಣಿಕರಣಗೊಳ್ಳುವವರೆಗೂ ಪರಿಣಾಮಕಾರಿ ಎನ್ನುವ ತೀರ್ಮಾನಕ್ಕೆ ಬರಲಾಗುವುದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. 

ಎಸ್‌ಎಂಎಸ್ ಆಸ್ಪತ್ರೆಯ ವೈದ್ಯಕೀಯ ಸೂಪರಿಂಟೆಂಡೆಂಟ್ ಡಾ. ಎಸ್. ಮೀನಾ ಮಾತನಾಡಿ, ಇಟಾಲಿಯನ್ ವ್ಯಕ್ತಿ ಮತ್ತು ಪತ್ನಿಯು ತೀವ್ರ ಉಸಿರಾಟದ ಸಮಸ್ಯೆಯನ್ನು ಎದುರಿಸುತ್ತಿದ್ದ ವೇಳೆ ಲೋಪಿನವಿರ್ ಮತ್ತು ರಿಟಾನವಿರ್ ಔಷಧವನ್ನು ನೀಡುವ ತೀರ್ಮಾನ ಕೈಗೊಳ್ಳಲಾಯಿತು. ಮೂಲತಃ ವೈದ್ಯರೇ ಆಗಿರುವ ಇಟಾಲಿಯನ್ ವ್ಯಕ್ತಿಯು ಸದ್ಯ ಆಮ್ಲಜನಕದ ನೆರವಿನೊಂದಿಗೆ ಐಸಿಯುವಿನಲ್ಲಿ ಇದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ಹೇಳಿದ್ದಾರೆ.

ಈತನಿಗೆ ಸೋಂಕು ತಗುಲುವ ಮುನ್ನವೂ ಕೆಲವು ಉಸಿರಾಟದ ಸಮಸ್ಯೆಯನ್ನು ಎದುರಿಸುತ್ತಿದ್ದರು. ಅಲ್ಲದೆ ದೀರ್ಘಕಾಲದಿಂದಲೂ ಧೂಮಪಾನಿಯಾಗಿದ್ದರು. ಇವರ ಪರಿಸ್ಥಿತಿ ತೀರಾ ಹದಗೆಟ್ಟಿತ್ತು. ಈತ ಕೊರೊನಾವೈರಸ್ ಸೋಂಕು ತಗುಲಿದ ಬಳಿಕ ತೀವ್ರವಾದ ಉಸಿರಾಟದ ಸಮಸ್ಯೆಯನ್ನು ಎದುರಿಸುತ್ತಿದ್ದರು. ಇದರಿಂದಾಗಿ ಈ ಔಷಧಗಳನ್ನು ನೀಡಲಾಯಿತು. ಕೋವಿಡ್-19 ದೃಢಪಟ್ಟಿದ್ದ ಮಹಿಳೆ ಈಗ ಸುಧಾರಿಸಿಕೊಂಡಿದ್ದು, ಪ್ರತ್ಯೇಕ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: 

ಸೋಂಕಿತ ದಂಪತಿಗೆ ಚಿಕಿತ್ಸೆ ನೀಡುವ ಮುನ್ನವೇ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಎಚ್‌ಐವಿ ಔಷಧಗಳಾದ ಲೋಪಿನವಿರ್ ಮತ್ತು ರಿಟಾನವಿರ್ ಸಂಯೋಜನೆಯ 'ನಿಯಮಿತ' ಬಳಕೆಗೆ ಒಪ್ಪಿಗೆ ನೀಡಿತ್ತು. ಕೋವಿಡ್-19 ಚಿಕಿತ್ಸೆಗೆ ಔಷಧಿಗಳನ್ನು ಬಳಸಲು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ತುರ್ತು ಅನುಮತಿ ಕೋರಿದ ನಂತರ ಡಿಸಿಜಿಐ ಒಪ್ಪಿಗೆ ನೀಡಿತ್ತು.

ಭಾರತದಲ್ಲಿ ಇದುವರೆಗೂ ಕೊರೊನಾವೈರಸ್ ಸೋಂಕಿತರ ಸಂಖ್ಯೆ 17 ವಿದೇಶಿಯರು ಸೇರಿದಂತೆ 74ಕ್ಕೆ ಏರಿಕೆಯಾಗಿದೆ. ಇವರಲ್ಲಿ ಕೇರಳದ ಮೂವರು ಗುಣಮುಖರಾಗಿ ಕಳೆದ ತಿಂಗಳು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 

ಇನ್ನಷ್ಟು: 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು