ಗುರುವಾರ , ಮಾರ್ಚ್ 4, 2021
24 °C
ಚೌಹಾಣ್ ಪುತ್ರನಿಂದ ದಾಖಲು: ನನ್ನಿಂದ ತಪ್ಪು ಗ್ರಹಿಕೆ– ರಾಹುಲ್‌

ರಾಹುಲ್‌ ವಿರುದ್ಧ ಮಾನನಷ್ಟ ಮೊಕದ್ದಮೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಭೋಪಾಲ್‌: ತೆರಿಗೆ ವಂಚಕರು ಎನ್ನಲಾದವರ ವಿವರಗಳನ್ನು ಒಳಗೊಂಡಿರುವ ಪನಾಮಾ ದಾಖಲೆ ಸೋರಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಶಿವರಾಜ್‌ಸಿಂಗ್‌ ಚೌಹಾಣ್ ಪುತ್ರನ ಹೆಸರಿದೆ ಎಂದು ಆರೋಪಿಸಿದ್ದ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲಾಗಿದೆ.

‘ನನ್ನ ತೇಜೋವಧೆ ಮಾಡುವ ಉದ್ದೇಶದಿಂದ ರಾಹುಲ್‌ ಗಾಂಧಿ ಈ ಹೇಳಿಕೆ ನೀಡಿದ್ದಾರೆ’ ಎಂದು ಆರೋಪಿಸಿ, ಚೌಹಾಣ್‌ ಪುತ್ರ ಕಾರ್ತಿಕೇಯ ಚೌಹಾಣ್‌ ಅವರು ಇಲ್ಲಿನ ವಿಶೇಷ ನ್ಯಾಯಾಲಯದಲ್ಲಿ ಮಂಗಳವಾರ ಮೊಕದ್ದಮೆ ದಾಖಲಿಸಿದ್ದಾರೆ. 

ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಸುರೇಶ್‌ ಸಿಂಗ್‌ ಅವರು ಅರ್ಜಿಯ ವಿಚಾರಣೆಯನ್ನು ನ. 3ಕ್ಕೆ ನಿಗದಿ ಮಾಡಿ, ಆದೇಶಿಸಿದ್ದಾರೆ.

ಝಬುವಾ ಜಿಲ್ಲೆಯಲ್ಲಿ ಸೋಮವಾರ ಆಯೋಜಿಸಿದ್ದ ರ‍್ಯಾಲಿಯಲ್ಲಿ ಮಾತನಾಡಿದ್ದ ರಾಹುಲ್‌, ‘ಮಾಮಾಜಿ (ಮುಖ್ಯಮಂತ್ರಿ ಚೌಹಾಣ್‌ ಅವರನ್ನು ಈ ರೀತಿ ಕರೆಯಲಾಗುತ್ತದೆ) ಪುತ್ರನ ಹೆಸರು ಪನಾಮಾ ಪೇಪರ್ಸ್‌ ಪ್ರಕರಣದಲ್ಲಿ ಇದೆ. ಆದರೆ, ಈ ವರೆಗೆ ಪುತ್ರನ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಆರೋಪಿಸಿದ್ದರು.

ಇದಾದ ಕೆಲವೇ ಗಂಟೆ ನಂತರ ಪ್ರತಿಕ್ರಿಯೆ ನೀಡಿದ್ದ ಕಾರ್ತಿಕೇಯ ಚೌಹಾಣ್‌, ‘ಇಂತಹ ಹೇಳಿಕೆಯಿಂದ ನನ್ನ ಮತ್ತು ನನ್ನ ಕುಟುಂಬದ ವರ್ಚಸ್ಸಿಗೆ ಧಕ್ಕೆಯಾಗಿದೆ. 48 ಗಂಟೆಯೊಳಗೆ ರಾಹುಲ್‌ ಕ್ಷಮೆ ಯಾಚಿಸದಿದ್ದರೆ ಅವರ ವಿರುದ್ಧ ಕಾನೂನು ಕ್ರಮ ಜರುಗಿಸುತ್ತೇವೆ’ ಎಂದು ಗುಡುಗಿದ್ದರು.

ನನ್ನಿಂದ ತಪ್ಪು ಗ್ರಹಿಕೆ–ರಾಹುಲ್‌: ‘ಪನಾಮಾ ‍ಪೇಪರ್ಸ್‌ ಸೋರಿಕೆಯಾದ ಪ್ರಕರಣದಲ್ಲಿ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಪುತ್ರನ ಪಾತ್ರ ಇಲ್ಲ. ನನ್ನಿಂದ ತಪ್ಪು ಗ್ರಹಿಕೆಯಾಗಿದೆ’ ಎಂದು ರಾಹುಲ್‌ ಸಮಜಾಯಿಷಿ ನೀಡಿದ್ದಾರೆ.

ಮಂಗಳವಾರ ಇಂದೋರ್‌ನಲ್ಲಿ ಸುದ್ದಿಗಾರರೊದಿಗೆ ಮಾತನಾಡಿದ ಅವರು, ‘ನಾನು ಚುನಾವಣಾ ಪ್ರಚಾರ ನಿಮಿತ್ತ ಮಧ್ಯಪ್ರದೇಶ, ಛತ್ತೀಸಗಡ ಹಾಗೂ ರಾಜಸ್ಥಾನಗಳಲ್ಲಿ ಪ್ರವಾಸ ಮಾಡುತ್ತಿದ್ದೇನೆ. ಆಯಾ ರಾಜ್ಯಗಳಲ್ಲಿನ ಹಲವಾರು ಹಗರಣಗಳಲ್ಲಿ ಬಿಜೆಪಿ ಪಾತ್ರ ಇದೆ. ಹೀಗಾಗಿ ನಾನು ತಪ್ಪು ಗ್ರಹಿಕೆಯಿಂದಾಗಿ ಈ ಆರೋಪ ಮಾಡಿದೆ’ ಎಂದರು.

‘ಆದರೆ, ವ್ಯಾಪಂ, ಇ–ಟೆಂಡರಿಂಗ್ ಸೇರಿದಂತೆ ಹಲವಾರು ಹಗರಣಗಳಲ್ಲಿ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರ ಪಾತ್ರ ಇದೆ’ ಎಂದೂ ರಾಹುಲ್‌ ಆರೋಪಿಸಿದರು.

‘ಬಿಜೆಪಿ ಸರ್ಟಿಫಿಕೇಟ್‌ ಬೇಡ’

‘ನಾನು ಬಿಜೆಪಿಯವರಿಗಿಂತ ಚೆನ್ನಾಗಿ ಹಿಂದೂ ಧರ್ಮವನ್ನು ಅರ್ಥ ಮಾಡಿಕೊಂಡಿದ್ದೇನೆ. ನಾನೊಬ್ಬ ರಾಷ್ಟ್ರೀಯವಾದಿ ನಾಯಕ. ಪ್ರತಿಯೊಂದು ಧರ್ಮವನ್ನೂ ಗೌರವಿಸುವ ನನಗೆ ದೇವಸ್ಥಾನಗಳಿಗೆ ಭೇಟಿ ನೀಡಲು ಬಿಜೆಪಿಯ ಸರ್ಟಿಫಿಕೇಟ್‌ನ ಅಗತ್ಯ ಇಲ್ಲ’ ಎಂದು ರಾಹುಲ್‌ಗಾಂಧಿ ಹೇಳಿದ್ದಾರೆ.

‘ರಾಹುಲ್‌ ಒಬ್ಬ ಛದ್ಮವೇಷಧಾರಿ ಹಿಂದೂ’ ಎಂಬ ಬಿಜೆಪಿ ಟೀಕೆಗೆ ಮಂಗಳವಾರ ಇಲ್ಲಿ ತಿರುಗೇಟು ನೀಡಿದ ಅವರು, ‘ನಾನು ಹಿಂದೂವಾದಿ ನಾಯಕ ಅಲ್ಲ. ನಾನು ಪ್ರತಿಯೊಂದು ಧರ್ಮ, ಜಾತಿ, ಭಾಷೆ ಹಾಗೂ ವರ್ಗವನ್ನು ಗೌರವಿಸುವ ನಾಯಕ’ ಎಂದರು.

‘ದೇಶದಲ್ಲಿರುವ ಎಲ್ಲ ದೇವಸ್ಥಾನಗಳು ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನ ಆಸ್ತಿಯೇ? ಪ್ರಧಾನಿ ಮೋದಿ, ಅಮಿತ್‌ ಶಾ ಮಾತ್ರ ದೇವಸ್ಥಾನಗಳಿಗೆ ಭೇಟಿ ನೀಡುವ ಗುತ್ತಿಗೆ ಪಡೆದಿದ್ದಾರೆಯೇ’ ಎಂದೂ ಕುಟುಕಿದರು.

ಮಣಿಪುರ ಬದಲು ಮಿಜೋರಾಂ: ಮತ್ತೆ ಎಡವಟ್ಟು

ನವದೆಹಲಿ: ಸೈನಿಕ ಶಾಲೆ ವಿದ್ಯಾರ್ಥಿನಿಯರ ಸಾಧನೆಗೆ ಶಹಬ್ಬಾಸ್‌ಗಿರಿ ಹೇಳುವ ಭರದಲ್ಲಿ ರಾಜ್ಯದ ಹೆಸರನ್ನು ಮಿಜೋರಾಂ ಬದಲು ಮಣಿಪುರ ಎಂದು ಟ್ವೀಟ್‌ ಮಾಡುವ ಮೂಲಕ ರಾಹುಲ್‌ ಗಾಂಧಿ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದಾರೆ.

ಬಿಜೆಪಿಯ ಐಟಿ ಘಟಕದ ಮುಖ್ಯಸ್ಥ ಅಮಿತ್‌ ಮಾಲವೀಯ, ‘ಮಣಿಪುರ ಮತ್ತು ಮಿಜೋರಾಂ ಪ್ರತ್ಯೇಕ ರಾಜ್ಯಗಳು ಎಂಬುದನ್ನು ರಾಹುಲ್‌ ಗಾಂಧಿ ತಿಳಿದುಕೊಳ್ಳಬೇಕು. ಈ ವಿಷಯವನ್ನು ನೂರು ಬಾರಿ ಬರೆದು ಅಭ್ಯಾಸ ಮಾಡುವುದು ಒಳಿತು’ ಎಂದು ಮರುಟ್ವೀಟ್‌ನಲ್ಲಿ ವ್ಯಂಗ್ಯಭರಿತ ಚಾಟಿ ಬೀಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು