ಸೋಮವಾರ, ಜನವರಿ 20, 2020
24 °C
56 ಪ್ರಸ್ತಾವಗಳಲ್ಲಿ 22 ಸ್ತಬ್ಧಚಿತ್ರಗಳು ಅಂತಿಮಗೊಂಡಿವೆ

ಗಣರಾಜ್ಯೋತ್ಸವ ಪಥಸಂಚಲನ: ಬಂಗಾಳದ ಸ್ತಬ್ಧಚಿತ್ರ ತಿರಸ್ಕರಿಸಿದ ರಕ್ಷಣಾ ಇಲಾಖೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ನವದೆಹಲಿ: ಗಣರಾಜ್ಯೋತ್ಸವದ ಅಂಗವಾಗಿ ನಡೆಯುವ ಪರೇಡ್‌ನಲ್ಲಿ ಸಂಚರಿಸಲು ಪಶ್ಚಿಮ ಬಂಗಾಳ ಕಳುಹಿಸಿದ್ದ ಸ್ತಬ್ಧಚಿತ್ರ ಪರಿಕಲ್ಪನೆಯನ್ನು ರಕ್ಷಣಾ ಇಲಾಖೆ ಅದನ್ನು ತಿರಸ್ಕರಿಸಿದೆ. 

‘ಪಶ್ಚಿಮ ಬಂಗಾಳ ಸರ್ಕಾರ ಕಳುಹಿಸಿದ್ದ ಸ್ತಬ್ಧಚಿತ್ರದ ಪ್ರಸ್ತಾವವನ್ನು ತಜ್ಞರ ಸಮಿತಿ ಎರಡು ಸುತ್ತುಗಳಲ್ಲಿ ಪರೀಕ್ಷಿಸಿದೆ. ಎರಡನೇ ಸಭೆಯಲ್ಲಿ ಸ್ತಬ್ಧಚಿತ್ರದ ಬಗ್ಗೆ ಸಾಕಷ್ಟು ಚರ್ಚೆಗಳು, ತಕರಾರು ಎದ್ದಿದ್ದರಿಂದ ಅದನ್ನು ತಿರಸ್ಕರಿಸಲಾಗಿದೆ’ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.  

ಗಣರಾಜ್ಯೋತ್ಸವದಂದು ನಡೆಯುವ ಪರೇಡ್‌ನಲ್ಲಿ ಸ್ತಬ್ಧಚಿತ್ರಗಳನ್ನು ಪ್ರದರ್ಶಿಸಲು ಪ್ರತಿ ವರ್ಷ 14 ರಾಜ್ಯಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗುತ್ತದೆ. 2020ರ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಪಾಲ್ಗೊಳ್ಳಲು 16 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಂದ 31  ಹಾಗೂ ಆರು ಸಚಿವಾಲಯಗಳಿಂದ 24 ಸ್ತಬ್ಧಚಿತ್ರಗಳು ಸೇರಿ ಒಟ್ಟು 56 ಪ್ರಸ್ತಾವಗಳು ಬಂದಿದ್ದವು. ಇದರಲ್ಲಿ 22 ಪ್ರಸ್ತಾವಗಳನ್ನು ಇಲಾಖೆ ಅಂತಿಮಗೊಳಿಸಿದೆ.

‘ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಪಾಲ್ಗೊಳ್ಳಲು ರಕ್ಷಣಾ ಸಚಿವಾಲಯ ಸ್ತಬ್ಧಚಿತ್ರಗಳನ್ನು ಆಹ್ವಾನಿಸುತ್ತದೆ. ಅದರನ್ವಯ ರಾಜ್ಯಗಳಿಂದ ಬರುವ ಸ್ತಬ್ಧಚಿತ್ರ ಪ್ರಸ್ತಾವಗಳನ್ನು ಆಯ್ಕೆ ಮಾಡಲು ಸುಸ್ಥಾಪಿತ ವ್ಯವಸ್ಥೆಯೊಂದಿದೆ. ಇದೇ ಪ್ರಕ್ರಿಯೆ ಮೂಲಕವೇ ಕಳೆದ ಗಣರಾಜ್ಯೋತ್ಸವದ ಪಥಸಂಚಲನಕ್ಕೆ ಬಂಗಾಳದ ಸ್ತಬ್ಧಚಿತ್ರವನ್ನು ಆಯ್ಕೆ ಮಾಡಲಾಗಿತ್ತು’ ಎಂದು ತಿಳಿಸಿದೆ.

ಕಲೆ, ಸಂಸ್ಕೃತಿ, ಚಿತ್ರಕಲೆ, ಶಿಲ್ಪಕಲೆ, ಸಂಗೀತ, ವಸ್ತುಶಿಲ್ಪ, ನೃತ್ಯ ಸಂಯೋಜನೆ ಮತ್ತಿತರ ಕ್ಷೇತ್ರಗಳ ಪ್ರಮುಖ ವ್ಯಕ್ತಿಗಳನ್ನು ಒಳಗೊಂಡಿರುವ ತಜ್ಞರ ಸಮಿತಿ ಸಾಕಷ್ಟು ಸಭೆಗಳನ್ನು ನಡೆಸಿ, ಪರಿಶೀಲಿಸಿ ಸ್ತಬ್ಧಚಿತ್ರವನ್ನು ಆಯ್ಕೆ ಮಾಡುತ್ತದೆ. ಈ ಸಮಿತಿಯು ಸ್ತಬ್ಧಚಿತ್ರಗಳ ವಿಷಯ, ಪರಿಕಲ್ಪನೆ, ವಿನ್ಯಾಸ ಮತ್ತು ಅದರ ದೃಶ್ಯ ಪ್ರಭಾವದ ಆಧಾರದ ಮೇಲೆ ಆಯ್ಕೆಗೆ ಶಿಫಾರಸು ಮಾಡುತ್ತದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು