ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ: ಬದಲಾಗುತ್ತಾ ಲೆಕ್ಕಾಚಾರ?

Last Updated 17 ಜನವರಿ 2020, 6:36 IST
ಅಕ್ಷರ ಗಾತ್ರ

ದೆಹಲಿಯಲ್ಲಿ ಅಧಿಕಾರದ ಸವಿ ಉಂಡಿರುವ ಮೂರು ಪಕ್ಷಗಳ ನಡುವೆ ಪೈಪೋಟಿಯಿದೆ. ಈ ಬಾರಿ ಚುನಾವಣೆಯಲ್ಲಿ ಈ ಮೂರೂ ಪಕ್ಷಗಳಿಗಿರುವ ಸಾಮರ್ಥ್ಯ, ದೌರ್ಬಲ್ಯ ಹಾಗೂ ಅವಕಾಶಗಳೇನು?

ಮರು ಆಯ್ಕೆ ವಿಶ್ವಾಸದಲ್ಲಿ ಎಎಪಿ

ಸಾಮರ್ಥ್ಯ:ರಾಜಕೀಯ ನಾಯಕರಾಗಿ ಮುಂಚೂಣಿಗೆ ಬಂದಿರುವ ಕೇಜ್ರಿವಾಲ್‌ಗೆ ಮತ ಬೇಟೆಯ ವರ್ಚಸ್ಸು ಸಿದ್ಧಿಸಿದೆ. ಬಡಜನರ ಪರ ನಿಲುವು ಅವರ ಕೈಹಿಡಿಯುವ ಸಾಧ್ಯತೆಯಿದೆ. ನೀರು, ವಿದ್ಯುತ್ತನ್ನು ಸಬ್ಸಿಡಿ ದರದಲ್ಲಿ ನೀಡುವ ಯೋಜನೆ ಮತದಾರರನ್ನು ಸೆಳೆಯುವ ಸಾಧ್ಯತೆಯಿದೆ

ದೌರ್ಬಲ್ಯ: ಕಳೆದ ಲೋಕಸಭಾ ಚುನಾವಣೆಯಲ್ಲಿ ಮೂರನೇ ಸ್ಥಾನ ಗಳಿಸುವ ಮೂಲಕ ಪಕ್ಷಕ್ಕಾದ ಗಾಯ ಹಾಗೆಯೇ ಇದೆ

ಅವಕಾಶಗಳು: ತನ್ನನ್ನು ತಾನು ‘ಸ್ಥಳೀಯ’ ಎಂದು ಬಿಂಬಿಸಿಕೊಂಡಿರುವ ಎಎಪಿಗೆ ಅದೇ ವರದಾನ.

ಮುಖ್ಯಮಂತ್ರಿ ಅಭ್ಯರ್ಥಿ ಇಲ್ಲ; ಮೋದಿಯೇ ಎಲ್ಲ

ಸಾಮರ್ಥ್ಯ: ವಿಧಾನಸಭಾ ಚುನಾವಣೆಗಳಲ್ಲಿ ಗಳಿಸಿದ ಮತ ಪ್ರಮಾಣ ಮತ್ತು 2014, 2019ರ ಲೋಕಸಭಾ ಚುನಾವಣೆಯ ಭರ್ಜರಿ ಗೆಲುವು ಬಿಜೆಪಿಯ ವಿಶ್ವಾಸ ಹೆಚ್ಚಿಸಿದೆ

ದೌರ್ಬಲ್ಯ: ಮುಖ್ಯಮಂತ್ರಿ ಅಭ್ಯರ್ಥಿ ಇಲ್ಲ. ಕೇಜ್ರಿವಾಲ್‌ ಅವರ ಜನಪ್ರಿಯ ಕಾರ್ಯಕ್ರಮಗಳನ್ನು ಎದುರಿಸುವ ಸವಾಲು ಇದೆ

ಅವಕಾಶಗಳು:ಮೆಟ್ರೊ ಕಾಮಗಾರಿ ವಿಳಂಬ, ಅಧಿಕಾರಿಗಳ ಜತೆಗೆ ಎಎಪಿ ಮುಖಂಡರ ಸಂಘರ್ಷ, ಸಿಎಎ ಮತ್ತು ಜಾಮಿಯಾ ಹಿಂಸಾಚಾರದ ಬಗ್ಗೆ ದನಿ ಎತ್ತುವ ಅವಕಾಶ

ಕಾಂಗ್ರೆಸ್‌ನಲ್ಲಿ ಹೊಸ ಉತ್ಸಾಹ

ಸಾಮರ್ಥ್ಯ: ಕಳೆದ ಲೋಕಸಭಾ ಚುನಾವಣೆಯಲ್ಲಿ ಎರಡನೇ ಸ್ಥಾನ ಸಿಕ್ಕಿದ್ದು ಅನಿರೀಕ್ಷಿತ ಹುರುಪು ತುಂಬಿದೆ. ಮತ ಗಳಿಕೆ ಪ್ರಮಾಣ ಶೇ 22.5ಕ್ಕೆ ಏರಿದ ವಿಶ್ವಾಸ

ದೌರ್ಬಲ್ಯ: ಶೀಲಾ ದೀಕ್ಷಿತ್ ಅವರ ಸಾವು ಪಕ್ಷಕ್ಕೆ ಹೊಡೆತ ನೀಡಿದೆ. ಪಕ್ಷ ಸಂಘಟನೆಯಲ್ಲಿ ಒಗ್ಗಟ್ಟಿನ ಕೊರತೆ. ಅವಕಾಶಗಳು: ಬಿಜೆಪಿ ವಿರೋಧಿ ಮತಗಳು ಎಎಪಿಗೆ ಬದಲು ಪರ್ಯಾಯ ಶಕ್ತಿ ಕಾಂಗ್ರೆಸ್‌ನತ್ತ ಹೊರಳುವ ಸಾಧ್ಯತೆಯೂ ಇದೆ

ದೆಹಲಿ ವಿಧಾನಸಭಾ ಚುನಾವಣೆ

ಫೆ.8 -ಮತದಾನ

ಫೆ. 11 -ಫಲಿತಾಂಶ

1.46 ಕೋಟಿ - ಮತದಾರರು

ಕೇಜ್ರಿವಾಲ್: ಬದಲಾದ ಕಾರ್ಯತಂತ್ರ

ಪ್ರಧಾನಿ ನರೇಂದ್ರ ಮೋದಿ ಅವರನ್ನು ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಸಮರ್ಥವಾಗಿ ಎದುರಿಸುವ ಸಲುವಾಗಿ ಮುಖ್ಯಮಂತ್ರಿ ಕೇಜ್ರಿವಾಲ್ ಅವರು ಇತ್ತೀಚೆಗೆ ಹೊಸ ಕಾರ್ಯತಂತ್ರ ರೂಢಿಸಿಕೊಂಡಂತೆ ತೋರುತ್ತಿದೆ.

2013ರಿಂದ 2019ರ ಅವಧಿಯಲ್ಲಿ ಮೋದಿ ಅವರಿಗೆ ಕೇಜ್ರಿವಾಲ್ ಅವರು ರಾಜಕೀಯವಾಗಿಕಡು ವಿರೋಧಿಯಾಗಿದ್ದರು. ನೋಟು ರದ್ದತಿ, ನಿರ್ದಿಷ್ಟ ದಾಳಿಗಳನ್ನು ಪ್ರಬಲವಾಗಿ ವಿರೋಧಿಸಿದ್ದರು.ಆದರೆ 2019ರ ಲೋಕಸಭಾ ಚುನಾವಣೆಯ ಸೋಲು ಕೇಜ್ರಿವಾಲ್ ಅವರಿಗೆ ತಮ್ಮ ಸಮಸ್ಯೆಗಳ ಬಗ್ಗೆ ಸ್ಪಷ್ಟ ಚಿತ್ರಣ ನೀಡಿತು. ಮೋದಿ ಅವರು ಚುನಾವಣೆ ಮತ್ತು ರಾಜಕೀಯದಲ್ಲಿ ಮತಗಳನ್ನು ಧ್ರುವೀಕರಿಸುವ ದೊಡ್ಡ ಶಕ್ತಿಯಾಗಿಯೇ ಉಳಿದಿದ್ದಾರೆ. ಮೋದಿ ಅವರನ್ನು ವಿರೋಧಿಸುವ ಮೂಲಕ ರಾಷ್ಟ್ರೀಯತೆ ಹಾಗೂ ಹಿಂದುತ್ವದ ವಿರೋಧಿ ಎಂಬ ಹಣೆಪಟ್ಟಿ ಬೀಳುತ್ತಿರುವ ಸುಳಿವು ಕೇಜ್ರಿವಾಲ್‌ಗೆ ಸಿಕ್ಕಿತು.

ಕೇಜ್ರಿವಾಲ್ ಬದಲಾವಣೆಗೆ ಅಡಿಯಿಟ್ಟರು. ಜಮ್ಮು ಕಾಶ್ಮೀರದ ವಿಶೇಷಾಧಿಕಾರ ರದ್ದು ಮಾಡಿದ ಕೇಂದ್ರದ ನಡೆಯನ್ನು ಬೆಂಬಲಿಸಿ ಅಚ್ಚರಿ ಮೂಡಿಸಿದರು. ‘ದೆಹಲಿಗೆ ಹಿಂದೂ ಕೇಜ್ರಿವಾಲ್, ಕೇಂದ್ರಕ್ಕೆ ಹಿಂದುತ್ವದ ಮೋದಿ’ ಎಂಬ ಮಾತೂ ಪ್ರಚಲಿತಕ್ಕೆ ಬಂದಿತು.

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೆಹಲಿ ಸೇರಿ ದೇಶದ ಎಲ್ಲೆಡೆ ದೊಡ್ಡ ಪ್ರಮಾಣದ ಪ್ರತಿಭಟನೆ ನಡೆದರೂ ಕೇಜ್ರಿವಾಲ್ ಮಾತನಾಡಲಿಲ್ಲ.ಒಂದರ್ಥದಲ್ಲಿ ಮೋದಿ ಅವರನ್ನು ಕೇಜ್ರಿವಾಲ್ ನೇರವಾಗಿ ಎದುರಿಸದಿದ್ದರೂ, ಅವರ ಹೋರಾಟ ಮೋದಿ ವಿರುದ್ಧವೇ ಎಂಬುದು ಸ್ಪಷ್ಟ. ಬರುವ ಚುನಾವಣೆಯಲ್ಲಿ ಮತ್ತೆ ಗದ್ದುಗೆ ಹಿಡಿಯಲು ಅವರು ಕಂಡುಕೊಂಡ ಹೊಸ ತಂತ್ರಗಾರಿಕೆಯಿದು ಎಂದು ವಿಶ್ಲೇಷಿಸಲಾಗುತ್ತಿದೆ.

ಫಲಿತಾಂಶ ಪ್ರಭಾವಿಸಬಲ್ಲ 5 ಅಂಶಗಳು

1. ಕೇಜ್ರಿವಾಲ್‌ ಜನಪ್ರಿಯ ಯೋಜನೆಗಳು

ಕೇಜ್ರಿವಾಲ್ ಜಾರಿಗೆ ತಂದ ಉಚಿತ ನೀರು, ಕಡಿಮೆ ದರದ ವಿದ್ಯುತ್, ಹೊರೆಯಾಗದ ಶಾಲಾ ಶುಲ್ಕ, ಸರ್ಕಾರಿ ಆಸ್ಪತ್ರೆಗಳ ಅತ್ಯುತ್ತಮ ನಿರ್ವಹಣೆ–ಇವು ಎಎಪಿ ಮರಳಿ ಬರಲು ನೆರವಾಗಲಿವೆ. ವಿರೋಧ ಪಕ್ಷಗಳಿಗೆ ಈ ಜನಪ್ರಿಯ ಯೋಜನೆಗಳನ್ನು ಮೆಟ್ಟಿನಿಲ್ಲುವುದೇ ಸವಾಲು

2. ಮೋದಿ ಅಲೆ

2019ರ ಲೋಕಸಭಾ ಚುನಾವಣೆಯಲ್ಲಿ ದೆಹಲಿ ಮೇಲೆ ಮೋದಿ ಅಲೆ ಗಾಢ ಪ್ರಭಾವ ಬೀರಿತ್ತು. ಏಳೂ ಲೋಕಸಭಾ ಕ್ಷೇತ್ರಗಳನ್ನು ಬಿಜೆಪಿ ಬುಟ್ಟಿಗೆ ಹಾಕಿಕೊಂಡಿತ್ತು. ಆದರೆ ವಿಧಾನಸಭಾ ಚುನಾವಣೆಯಲ್ಲಿ ಮೋದಿ ಅಲೆ ಸಫಲವಾಗಲಿಲ್ಲ. ಈ ಬಾರಿ ಕುತೂಹಲ ಇದ್ದೇ ಇದೆ

3. ಕಾಂಗ್ರೆಸ್: ಮತ್ತೆ ಮುಂಚೂಣಿಗೆ ಬರುವ ಸಾಮರ್ಥ್ಯ

2019ರ ಲೋಕಸಭಾ ಚುನಾವಣೆಯಲ್ಲಿ ಏಳರ ಪೈಕಿ ಐದು ಕ್ಷೇತ್ರಗಳಲ್ಲಿ ಎರಡನೇ ಸ್ಥಾನ ಗಿಟ್ಟಿಸುವ ಮೂಲಕ ಕಾಂಗ್ರೆಸ್‌ ಉತ್ಸಾಹ ಇಮ್ಮಡಿಯಾಗಿತ್ತು. ಸಮಸ್ಯೆಗಳ ನಡುವೆಯೂ ಕಾಂಗ್ರೆಸ್‌ನ ಈ ಸಾಧನೆ ಬೆರಗು ಮೂಡಿಸಿತ್ತು.

4. ಜಾತಿ ಹಾಗೂ ಸಮುದಾಯ ಲೆಕ್ಕಾಚಾರ

ದೆಹಲಿ ಮತದಾರರದ ಪೂರ್ವಾಂಚಲದವರು, ಪಂಜಾಬಿಗಳು, ಮುಸ್ಲಿಮರು, ಮೇಲ್ವರ್ಗದ ಬನಿಯಾ, ಕೊಳೆಗೇರಿ ನಿವಾಸಿಗಳು ಒಂದು ಪಕ್ಷಕ್ಕೆ ಸೀಮಿತವಾಗಿದ್ದಾರೆ

5. ವಿದ್ಯುತ್, ನೀರು, ರಸ್ತೆ

ದೆಹಲಿಯ ದೊಡ್ಡ ಸಂಖ್ಯೆಯ ನಿವಾಸಿಗಳು ಹೊರಗಿನವರು. ಹೀಗಾಗಿ ಸಾರ್ವಜನಿಕ ಕಳಕಳಿಯ ವಿಷಯಗಳು ಚುನಾವಣೆಯಲ್ಲಿ ಕೊನೆಯ ಸಾಲಿನಲ್ಲಿ ನಿಲ್ಲುತ್ತವೆ. ಅಭಿವೃದ್ಧಿಯು ಚುನಾವಣೆಯಲ್ಲಿ ಅಷ್ಟೇನೂ ಮಹತ್ವದ ವಿಷಯವಾಗಿ ಉಳಿದಿಲ್ಲ

ಎಎಪಿಗೇ ಮತ್ತೆ ಗದ್ದುಗೆ: ಸಮೀಕ್ಷೆ

ಆಡಳಿತರೂಢ ಆಮ್ ಆದ್ಮಿ ಪಕ್ಷಕ್ಕೇ ಈ ಬಾರಿ ಮತದಾರ ಮಣೆ ಹಾಕಲಿದ್ದಾನೆ ಎಂದು ಐಎಎನ್‌ಎಸ್‌–ಸಿವೋಟರ್ ಸಮೀಕ್ಷೆ ಇತ್ತೀಚೆಗೆ ತಿಳಿಸಿತ್ತು. ಎಎಪಿ 59 ಸ್ಥಾನ ಗೆಲ್ಲಲಿದೆ. ಬಿಜೆಪಿ (8) ಹಾಗೂ ಕಾಂಗ್ರೆಸ್ (3) ಕ್ರಮವಾಗಿ ಎರಡನೇ ಹಾಗೂ ಮೂರನೇ ಸ್ಥಾನ ಗಳಿಸಲಿವೆ ಎಂದು ಹೇಳಿತ್ತು. ಜನವರಿ ಮೊದಲ ವಾರದಲ್ಲಿ ಈ ಸಮೀಕ್ಷೆ ನಡೆಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT