‘ಸುಪ್ರೀಂ’ ತೀರ್ಪು ಮರುದಿನ ಮತ್ತೆ ಸಂಘರ್ಷ

7
ದೆಹಲಿಯ ಅಧಿಕಾರಿಗಳ ವರ್ಗಾವಣೆ: ಸರ್ಕಾರದ ಆದೇಶ ಪಾಲಿಸಲು ಸೇವಾ ಇಲಾಖೆ ನಕಾರ

‘ಸುಪ್ರೀಂ’ ತೀರ್ಪು ಮರುದಿನ ಮತ್ತೆ ಸಂಘರ್ಷ

Published:
Updated:

ನವದೆಹಲಿ: ದೆಹಲಿಯ ಅಧಿಕಾರಿಗಳು ಯಾರ ನಿಯಂತ್ರಣದಲ್ಲಿರುಬೇಕು ಎಂಬ ವಿಚಾರದಲ್ಲಿ ಹೊಸ ಸಂಘರ್ಷವೊಂದು ಗುರುವಾರ ಬಿಚ್ಚಿಕೊಂಡಿದೆ. ಅಧಿಕಾರಿಗಳ ವರ್ಗಾವಣೆ ಮುಖ್ಯಮಂತ್ರಿಯ ಅಧಿಕಾರ ಎಂದು ಸರ್ಕಾರ ಹೊರಡಿಸಿರುವ ಆದೇಶವನ್ನು ಅಧಿಕಾರಿಗಳು ತಿರಸ್ಕರಿಸಿದ್ದಾರೆ.

ದೆಹಲಿಯಲ್ಲಿ ಚುನಾಯಿತ ಸರ್ಕಾರಕ್ಕೆ ಹೆಚ್ಚು ಅಧಿಕಾರ ಎಂದು ಸುಪ್ರೀಂ ಕೋರ್ಟ್‌ ಬುಧವಾರ ತೀರ್ಪು ನೀಡಿತ್ತು. ಇದರಿಂದಾಗಿ ದೆಹಲಿ ಸರ್ಕಾರ ಮತ್ತು ಲೆಫ್ಟಿನೆಂಟ್‌ ಗವರ್ನರ್‌ ನಡುವಣ ಸಮರ ಕೊನೆಯಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ತೀರ್ಪು ಪ್ರಕಟವಾದ ಮರುದಿನವೇ ಮತ್ತೊಂದು ಸಂಘರ್ಷ ಕಂಡುಬಂದಿದೆ.

ಅಧಿಕಾರಿಗಳ ವರ್ಗಾವಣೆ ಮತ್ತು ನಿಯೋಜನೆ ವಿಚಾರದಲ್ಲಿ ಸರ್ಕಾರದ ಆದೇಶ ಪಾಲಿಸಲು ನಿರಾಕರಿಸಿದ ಅಧಿಕಾರಿಗಳ ಕ್ರಮದ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ. ಈ ಮಧ್ಯೆ, ಸುಪ್ರೀಂ ಕೋರ್ಟ್‌ನ ತೀರ್ಪನ್ನು ಎಎಪಿ ಗ್ರಹಿಸಿಕೊಂಡ ರೀತಿ ಸಂಪೂರ್ಣ ತಪ್ಪಾಗಿದೆ ಎಂದು ಕೇಂದ್ರ ಸಚಿವ ಅರುಣ್‌ ಜೇಟ್ಲಿ ಅಭಿಪ್ರಾಯಪಟ್ಟಿದ್ದಾರೆ.

ದೆಹಲಿ ಸರ್ಕಾರದ ನಿರ್ದೇಶನದಂತೆ ವರ್ಗಾವಣೆ ಮತ್ತು ನಿಯೋಜನೆ ನಡೆಸಬಾರದು. ಹಾಗೆ ಮಾಡುವುದು ನಿಯಮ ವಿರುದ್ಧ ಎಂದು ಕೇಂದ್ರ ಗೃಹ ಸಚಿವಾಲಯವು 2015ರಲ್ಲಿ ಅಧಿಸೂಚನೆ ಹೊರಡಿಸಿತ್ತು. ಸುಪ್ರೀಂ ಕೋರ್ಟ್‌ ಈ ಅಧಿಸೂಚನೆಯನ್ನು ರದ್ದುಪಡಿಸಿಲ್ಲ. ಹಾಗಾಗಿ ಈ ವಿಚಾರದಲ್ಲಿ ಸರ್ಕಾರಕ್ಕೆ ಯಾವುದೇ ಅಧಿಕಾರ ಇಲ್ಲ ಎಂದು ದೆಹಲಿಯ ಸೇವಾ ಇಲಾಖೆ ವಾದಿಸಿದೆ. 

‘ಸೇವಾ ಇಲಾಖೆಯು ದೆಹಲಿ ಸರ್ಕಾರದ ಆದೇಶವನ್ನು ಅನುಸರಿಸುವುದಿಲ್ಲ ಎಂದು ಮುಖ್ಯ ಕಾರ್ಯದರ್ಶಿ ನನಗೆ ಪತ್ರ ಬರೆದಿದ್ದಾರೆ. ಸರ್ಕಾರದ ಆದೇಶವನ್ನು ಅಧಿಕಾರಿಗಳು ಅನುಸರಿಸದೇ ಇದ್ದರೆ ಮತ್ತು ಕಡತಗಳನ್ನು ಲೆಫ್ಟಿನೆಂಟ್‌ ಗವರ್ನರ್‌ಗೆ ಕಳುಹಿಸಿದರೆ ಅದು ಸುಪ್ರೀಂ ಕೋರ್ಟ್‌ ತೀರ್ಪಿನ ಉಲ್ಲಂಘನೆ’ ಎಂದು ಉಪ ಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಹೇಳಿದ್ದಾರೆ. 

ಮೂರು ವಿಚಾರಗಳನ್ನು (ಸಾರ್ವಜನಿಕ ಸುವ್ಯವಸ್ಥೆ, ಪೊಲೀಸ್‌ ಮತ್ತು ಜಮೀನು) ಬಿಟ್ಟು ಇತರ ಇಲಾಖೆಗಳಲ್ಲಿ ಲೆಫ್ಟಿನೆಂಟ್‌ ಗವರ್ನರ್‌ಗೆ ಯಾವುದೇ ಅಧಿಕಾರ ಇಲ್ಲ ಎಂದು ಸುಪ್ರೀಂ ಕೋರ್ಟ್‌ ಸ್ಪಷ್ಟವಾಗಿ ಹೇಳಿದೆ. ಸೇವಾ ಇಲಾಖೆಯು ಈ ಮೂರು ಇಲಾಖೆಗಳ ವ್ಯಾಪ್ತಿಗೆ ಬರುವುದಿಲ್ಲ ಎಂಬುದು ಎಎಪಿಯ ವಾದವಾಗಿದೆ.

**

ಲೆಫ್ಟಿನೆಂಟ್‌ ಗವರ್ನರ್‌ ಬೈಜಾಲ್‌ಗೆ ಪತ್ರ
ಕೇಜ್ರಿವಾಲ್‌ ಅವರು ದೆಹಲಿ ಲೆಫ್ಟಿನೆಂಟ್‌ ಗವರ್ನರ್‌ ಅನಿಲ್‌ ಬೈಜಾಲ್‌ ಅವರಿಗೆ ಪತ್ರ ಬರೆದು ಸೇವಾ ಇಲಾಖೆಯು ಸಚಿವ ಸಂಪುಟದ ಅಧೀನದಲ್ಲಿರುತ್ತದೆ ಎಂದು ಹೇಳಿದ್ದಾರೆ. 

ಸರ್ಕಾರ ಕೈಗೊಳ್ಳುವ ಯಾವುದೇ ನಿರ್ಧಾರಕ್ಕೆ ಲೆಫ್ಟಿನೆಂಟ್‌ ಗವರ್ನರ್‌ ಅವರ ಅನುಮೋದನೆ ಬೇಕಾಗಿಲ್ಲ ಎಂದು ಪತ್ರದಲ್ಲಿ ಕೇಜ್ರಿವಾಲ್‌ ವಿವರಿಸಿದ್ದಾರೆ. ಅಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿ ಹೊಸ ಯೋಜನೆಗಳನ್ನು ಜಾರಿಗೆ ತರಲು ಎಎಪಿ ಸರ್ಕಾರ ಸಜ್ಜಾಗಿದೆ. 

*
ಸುಪ್ರೀಂ ಕೋರ್ಟ್‌ ಆದೇಶ ಜಾರಿ ಮಾಡಲು ಎಲ್ಲರೂ ನೆರವಾಗಬೇಕೆಂದು ಕೋರುತ್ತೇನೆ. ದೆಹಲಿಯ ಅಭಿವೃದ್ಧಿಗೆ ಎಲ್ಲರೂ ಜತೆಯಾಗಿ ಕೆಲಸ ಮಾಡೋಣ.
-ಅರವಿಂದ ಕೇಜ್ರಿವಾಲ್‌, ದೆಹಲಿ ಸಿ.ಎಂ

*
ಸುಪ್ರೀಂ ಕೋರ್ಟ್ ತೀರ್ಪು ರಾಜ್ಯ ಅಥವಾ ಕೇಂದ್ರ ಸರ್ಕಾರಕ್ಕೆ ಯಾವುದೇ ಹೆಚ್ಚುವರಿ ಅಧಿಕಾರ ಕೊಟ್ಟಿಲ್ಲ. ಹಾಗೆಯೇ ಇರುವ ಅಧಿಕಾರವನ್ನು ಕಸಿದುಕೊಂಡಿಲ್ಲ.
-ಅರುಣ್‌ ಜೇಟ್ಲಿ, ಕೇಂದ್ರ ಸಚಿವ

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !