ಮಂಗಳವಾರ, ಏಪ್ರಿಲ್ 7, 2020
19 °C

ಚಿಕಿತ್ಸೆ ಕೋರಿ ನಿರ್ಭಯಾ ಅತ್ಯಾಚಾರ ಅಪರಾಧಿ ಸಲ್ಲಿಸಿದ್ದ ಅರ್ಜಿ ವಜಾ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ನಿರ್ಭಯಾ ಪ್ರಕರಣದ ಅಪರಾಧಿಗಳಲ್ಲಿ ಒಬ್ಬನಾದ ವಿನಯ್ ಕುಮಾರ್ ಶರ್ಮಾ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾನೆ ಮತ್ತು ಆತನಿಗೆ ಚಿಕಿತ್ಸೆಯ ಅಗತ್ಯವಿದೆ ಎಂದು ಸಲ್ಲಿಸಿದ್ದ ಅರ್ಜಿಯನ್ನು ಶನಿವಾರ ದೆಹಲಿ ನ್ಯಾಯಾಲಯ ವಜಾಗೊಳಿಸಿದೆ. 

‘ವಿನಯ್‌ ಶರ್ಮಾ ಮಾನಸಿಕ ವ್ಯಾದಿಯಿಂದ ಬಳಲುತ್ತಿದ್ದಾನೆ. ಆತನಿಗೆ ಗಾಯಗಳಾಗಿವೆ. ಸ್ಕಿಜೋಫ್ರೇನಿಯಾದಿಂದ ಬಳಲುತ್ತಿರುವ ಆತ ತನ್ನ ವಕೀಲರು, ಕುಟುಂಬ ಸದಸ್ಯರನ್ನೂ ಗುರುತಿಸದಂತಾಗಿದ್ದಾನೆ. ಹೀಗಾಗಿ ಆತನಿಗೆ ಉನ್ನತ ಮಟ್ಟದ ಚಿಕಿತ್ಸೆ ಅಗತ್ಯವಿದ್ದು, ಐಎಚ್‌ಬಿಎಎಸ್‌ (ಮನುಷ್ಯನ ವರ್ತನೆ ಮತ್ತು ಚಿಕಿತ್ಸೆ) ಘಟಕಕ್ಕೆ ದಾಖಸಲಿಸಬೇಕು,’ ವಕೀಲರಾದ ಎಪಿ ಸಿಂಗ್‌ ನ್ಯಾಯಾಲಯಕ್ಕೆ ಕೋರಿಕೆ ಸಲ್ಲಿಸಿದ್ದರು. 

ಆದರೆ ಈ ವಾದವನ್ನೆಲ್ಲ ಅಲ್ಲಗೆಳೆದ ತಿಹಾರ್‌ ಜೈಲು ಅಧಿಕಾರಗಳ ಪರ ವಕೀಲ ಇರ್ಫಾನ್‌ ಖಾನ್‌ ‘ ಇದೆಲ್ಲವೂ ವಿಕೃತ ಸಂಗತಿಗಳ ಕಟ್ಟು ಕಥೆ’ ಎಂದು ಕೋರ್ಟ್‌ಗೆ ತಿಳಿಸಿದರು.  

‘ವಿನಯ್‌ಕುಮಾರ್ ಶರ್ಮಾ ತನ್ನ ದೇಹದ ಮೇಲೆ ಮೇಲ್ನೋಟಕ್ಕೆ ಕಾಣಿಸುವಂತೆ ಗಾಯಗಳನ್ನು ಮಾಡಿಕೊಂಡಿದ್ದಾನೆ. ಆದರೆ, ಅವನು ಯಾವುದೇ ರೀತಿಯ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿಲ್ಲ ಎಂಬುದನ್ನು ಸಿಸಿಟಿವಿಯ ದೃಶ್ಯಾವಳಿಗಳು ಸ್ಪಷ್ಟಪಡಿಸಿವೆ. ಅಲ್ಲದೆ, ಆತ ತನ್ನ ತಾಯಿಗೆ ಇತ್ತೀಚೆಗೆ ಎರಡು ಬಾರಿ ಕರೆ ಮಾಡಿ ಮಾತನಾಡಿದ್ದಾನೆ. ಹೀಗಿದ್ದೂ ಆತ ಮಾನಸಿಕ ಅಸ್ವಸ್ಥನಾಗಲು ಹೇಗೆ ಸಾಧ್ಯ ಎಂದು’ ಹೆಚ್ಚುವರಿ ಸೆಷೆನ್ಸ್‌ ನ್ಯಾಯಾಧೀಶ ಧರ್ಮೇಂದರ್ ರಾಣಾ ಅವರ ಮುಂದೆ ವಿವರಿಸಿದರು. 

ವಾದಗಳನ್ನೆಲ್ಲ ಆಲಿಸಿದ ನ್ಯಾಯಾಲಯ ಚಿಕಿತ್ಸೆ ಕೋರಿ ವಿನಯ್‌ ಶರ್ಮಾನ ವಕೀಲರು ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸಿತು. 

ನ್ಯಾಯಾಂಗ ಹೋರಾಟದ ಎಲ್ಲ ಹಾದಿಯೂ ಅಂತ್ಯವಾಗಿದೆ: ನಿರ್ಭಯಾ ತಾಯಿ 

ಅಪರಾಧಿಗಳು ಶಿಕ್ಷೆಯಿಂದ ಪಾರಾಗಲು ಮಾಡಿದ ತಂತ್ರಗಳಿವು. ಇವರೆಲ್ಲರೂ ನ್ಯಾಯಾಲಯದ ದಿಕ್ಕು ತಪ್ಪಿಸುತ್ತಿದ್ದಾರೆ. ಅವರಿಗೆ ಇದ್ದ ನ್ಯಾಯಾಂಗ ಹೋರಾಟದ ಹಾದಿಗಳೆಲ್ಲವೂ ಅಂತ್ಯಗೊಂಡಿದೆ. ಮಾರ್ಚ್‌ 3ರಂದು ಅವರೆಲ್ಲರೂ ಗಲ್ಲಿಗೇರುತ್ತಾರೆ ಎಂದು ನಾನು ಬಲವಾಗಿ ನಂಬಿದ್ದೇನೆ ಎಂದು ನಿರ್ಭಯಾ ತಾಯಿ ಆಶಾ ದೇವಿ ಹೇಳಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು