ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ ಚುನಾವಣೆ: 3 ಪಕ್ಷಗಳ 240 ಅಭ್ಯರ್ಥಿಗಳಲ್ಲಿ ಮಹಿಳೆಯರು ಕೇವಲ 24

Last Updated 22 ಜನವರಿ 2020, 7:47 IST
ಅಕ್ಷರ ಗಾತ್ರ
ADVERTISEMENT
""

ನವದೆಹಲಿ: ದೆಹಲಿ ವಿಧಾನಸಭಾ ಚುನಾವಣಾ ಕಣ ರಂಗೇರಿದೆ. ನಾಮಪತ್ರ ಸಲ್ಲಿಕೆಗೆ ನಿನ್ನೆ (ಜ.21) ಕೊನೆಯ ದಿನವಾಗಿತ್ತು. ಇಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಳೆ ನಾಮಪತ್ರ ಹಿಂಪಡೆಯಲು ಕೊನೆಯ ದಿನ.

ದೆಹಲಿ ಗದ್ದುಗೆಗಾಗಿ ಬಿಜೆಪಿ, ಆಪ್ ಮತ್ತು ಕಾಂಗ್ರೆಸ್ ನಡುವೆ ನೇರ ಪೈಪೋಟಿ ಇದೆ. 70 ಸದಸ್ಯ ಬಲದ ವಿಧಾನಸಭೆಗೆಮೂರೂ ಪಕ್ಷಗಳಿಂದ ಒಟ್ಟು 240 ಮಂದಿ ನಾಮಪತ್ರ ಸಲ್ಲಿಸಿದ್ದಾರೆ.ಈ ಪೈಕಿ ಮಹಿಳೆಯರ ಸಂಖ್ಯೆ ಕೇವಲ 24. ಆದರೆಒಟ್ಟು 1.46 ಕೋಟಿ ಮತದಾರರ ಪೈಕಿ 66.35 ಲಕ್ಷ ಮಂದಿ ಮಹಿಳೆಯರೇ ಇದ್ದಾರೆ.

ಕಳೆದ ವರ್ಷ ಬಿಜೆಪಿ ಅತಿಹೆಚ್ಚು (8) ಮಹಿಳಾ ಅಭ್ಯರ್ಥಿಗಳಿಗೆ ಅವಕಾಶ ನೀಡಿತ್ತು. ಈ ಬಾರಿ ಅದು ಅತ್ಯಂತ ಕಡಿಮೆ (5) ಸಂಖ್ಯೆಯ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ.2015ರಲ್ಲಿ ಕಾಂಗ್ರೆಸ್ ಐವರು ಮಹಿಳೆಯರಿಗೆ ಅವಕಾಶಕೊಟ್ಟಿತ್ತು. ಈ ಬಾರಿ 10 ಮಂದಿಯನ್ನು ಕಣಕ್ಕಿಳಿಸಿದೆ. ಕಳೆದ ಬಾರಿ 6 ಮಂದಿಯನ್ನು ಕಣಕ್ಕಿಳಿಸಿದ್ದ ಆಪ್ ಈ ಬಾರಿ 9 ಮಂದಿಗೆ ಅವಕಾಶ ನೀಡಿದೆ.

ತೊಮಾರ್ ದಂಪತಿ

ಪತಿ ಬದಲು ಪತ್ನಿ

ಈ ಪೈಕಿ ತ್ರಿನಗರ್ ಕ್ಷೇತ್ರದಿಂದ ಕಣಕ್ಕಿಳಿದಿರುವ ಪ್ರೀತಿ ತೊಮಾರ್ ಅವರ ವಿಚಾರವೇ ಬೇರೆ. ಕಳೆದ ಬಾರಿ ಅಭ್ಯರ್ಥಿಯಾಗಿದ್ದ ಅವರ ಪತಿ ಜಿತೇಂದರ್ ಸಿಂಗ್ ತೊಮಾರ್ ನಾಮಪತ್ರ ಸಲ್ಲಿಕೆ ವೇಳೆತಪ್ಪು ಮಾಹಿತಿ ನೀಡಿದ್ದರುಎನ್ನುವ ಕಾರಣಕ್ಕೆ ದೆಹಲಿ ಹೈಕೋರ್ಟ್‌ ಅವರ ಸ್ಪರ್ಧೆಯನ್ನು ನಿರ್ಬಂಧಿಸಿತ್ತು. ಹೀಗಾಗಿ ಜಿತೇಂದರ್ ಪತ್ನಿ ಪ್ರೀತಿಗೆ ಈ ಬಾರಿ ಆಪ್ ಟಿಕೆಟ್ ನೀಡಿದೆ.

ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಯಾವುದೇ ಅಭ್ಯರ್ಥಿಗೆ ಕಾಂಗ್ರೆಸ್ ಈ ಬಾರಿ ಅವಕಾಶ ಕೊಟ್ಟಿಲ್ಲ. ಆದರೆ ಕಳೆದ ಬಾರಿ ಚಾಂದಿನಿ ಚೌಕ್ ಕ್ಷೇತ್ರದಲ್ಲಿ ಆಪ್ ಟಿಕೆಟ್‌ ಪಡೆದು ಸ್ಪರ್ಧಿಸಿ, ಜಯಗಳಿಸಿದ್ದ ಅಲ್ಕಾ ಲಂಬಾ ಈ ಬಾರಿ ಅದೇ ಕ್ಷೇತ್ರದಲ್ಲಿಕಾಂಗ್ರೆಸ್‌ ಟಿಕೆಟ್‌ನಿಂದ ಸ್ಪರ್ಧಿಸುತ್ತಿದ್ದಾರೆ.ಪಟೇಲ್ ನಗರ್ ಕ್ಷೇತ್ರದಿಂದ ಕಳೆದ ಬಾರಿ ಬಿಜೆಪಿ ಟಿಕೆಟ್ ಪಡೆದು ಸ್ಪರ್ಧಿಸಿದ್ದ ಕೃಷ್ಣ ತೀರ್ಥ ಈ ಬಾರಿ ಅದೇ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷದಿಂದ ಕಣಕ್ಕಿಳಿದಿದ್ದಾರೆ.

ಆಮ್‌ ಆದ್ಮಿ ಪಕ್ಷವು ಕಳೆದ ಬಾರಿ ಸ್ಪರ್ಧಿಸಿದ್ದ ಹಲವರಿಗೆ ಮತ್ತೊಂದು ಅವಕಾಶ ನೀಡಿದೆ. ರೋಹ್ತಾಸ್‌ ನಗರದಿಂದ ಸ್ಪರ್ಧಿಸಿದ್ದ ಸರಿತಾ ಸಿಂಗ್, ಪಾಲಂನಿಂದ ಭಾವನಾ ಗೌರ್, ಮಂಗಲ್‌ಪುರಿಯಿಂದ ರಾಖಿ ಬಿರ್ಲಾ, ಶಾಲಿಮಾರ್‌ ಬಾಗ್‌ನಿಂದ ಬಂದನಾ ಕುಮಾರಿ ಮತ್ತು ಆರ್‌.ಕೆ.ಪುರಂನಿಂದ ಪರ್ಮಿಳಾ ತೊಕಾಸ್‌ ಅವರು ಈ ಬಾರಿ ಮತ್ತೊಮ್ಮೆ ಅದೃಷ್ಟ ಪರೀಕ್ಷೆ ಮಾಡಿಕೊಳ್ಳುತ್ತಿದ್ದಾರೆ.

ತ್ರಿಲೋಕ್‌ಪುರಿ ಕ್ಷೇತ್ರದಿಂದ ಕಿರಣ್‌ ವೈದ್ಯ, ಶಾಲಿಮಾರ್‌ ಬಾಗ್‌ನಿಂದ ರೇಖಾ ಗುಪ್ತಾ ಅವರಿಗೆಬಿಜೆಪಿ ಈ ಬಾರಿಯೂ ಅವಕಾಶ ನೀಡಿದೆ.

ಪ್ರಾತಿನಿಧಿಕ ಚಿತ್ರ

ಗೆಲ್ಲುವ ಸಾಮರ್ಥ್ಯವೇ ಮಾನದಂಡ: ಬಿಜೆಪಿ

‘ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರಿಗೆ ಟಿಕೆಟ್ ನೀಡಿದ್ದು ನಮ್ಮ ಪಕ್ಷ ತೆಗೆದುಕೊಂಡ ಪ್ರಜ್ಞಾಪೂರ್ವಕ ನಿರ್ಧಾರ’ ಎಂದು ಕಾಂಗ್ರೆಸ್‌ ಪ್ರಣಾಳಿಕೆ ಸಮಿತಿಯ ಪೂಜಾ ಭಾರಿ ಹೇಳಿದ್ದಾರೆ.

‘ಮೀಸಲು ಸ್ಥಾನಗಳಿಗಿಂತಲೂ ಹೆಚ್ಚುವರಿಯಾಗಿ ಎರಡು ಸ್ಥಾನಗಳಲ್ಲಿ ಮಹಿಳೆಯರಿಗೆ ಅವಕಾಶ ಕೊಟ್ಟಿದ್ದೇವೆ. ಗೆಲುವಿನ ಮಾನದಂಡ ಅನುಸರಿಸಿ ಟಿಕೆಟ್ ಹಂಚಿಕೆ ಮಾಡಲಾಗಿದೆ’ ಎಂದು ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ಪೂನಂ ಪರಾಶರ ಝಾ ತಿಳಿಸಿದ್ದಾರೆ.

‘ಮಹಿಳೆಯರ ಬಗ್ಗೆ ನಮ್ಮದು ಸದಾ ಪ್ರಗತಿಪರ ನಿಲುವು. ನಾಯಕತ್ವದ ಸ್ಥಾನಗಳಿಗೆ ಅವರು ಬರಬೇಕು ಎಂದು ಬಯಸುತ್ತೇವೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಅವಕಾಶ ಕಲ್ಪಿಸಿದ್ದು ಮಹಿಳಾ ಸ್ವಾವಲಂಬನೆಯ ಹಾದಿಯಲ್ಲಿ ಮಹತ್ವದ ಹೆಜ್ಜೆ’ ಎಂದು ಆಪ್‌ ಪ್ರಣಾಳಿಕ ಸಮಿತಿ ಸದಸ್ಯ ಜಾಸ್ಮಿನ್ ಶಾ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT