ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಧ್ಯಮಗಳಿಗೆ ನಿರ್ಬಂಧ ಕೋರಿಕೆ: ಅರ್ಜಿ ವಜಾ

ಗೊಗೊಯಿ ವಿರುದ್ಧದ ಲೈಂಗಿಕ ಕಿರುಕುಳ ಆರೋಪ
Last Updated 29 ಏಪ್ರಿಲ್ 2019, 11:35 IST
ಅಕ್ಷರ ಗಾತ್ರ

ನವದೆಹಲಿ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ರಂಜನ್ ಗೊಗೊಯಿ ವಿರುದ್ಧದ ಲೈಂಗಿಕ ಕಿರುಕುಳ ಆರೋಪ ಇತ್ಯರ್ಥ ಆಗುವವರೆಗೆ, ಈ ಕುರಿತು ಮಾಧ್ಯಮಗಳಲ್ಲಿ ಸುದ್ದಿ ಪ್ರಕಟಿಸದಂತೆ ತಡೆ ವಿಧಿಸಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್‌ ವಜಾಗೊಳಿಸಿದೆ.

ಅರ್ಜಿ ವಿಚಾರಣೆ ನಡೆಸಿದಮುಖ್ಯ ನ್ಯಾಯಮೂರ್ತಿ ರಾಜೇಂದ್ರ ಮೆನನ್ ನೇತೃತ್ವದ ನ್ಯಾಯ ಪೀಠ, ಪ್ರಕರಣದ ಕುರಿತು ಸುಪ್ರೀಂ ಕೋರ್ಟಿನಲ್ಲಿ ಈಗಾಗಲೇ ವಿಚಾರಣೆ ನಡೆದಿದ್ದು, ಹೈಕೋರ್ಟ್‌ ಮಧ್ಯಪ್ರವೇಶಿಸುವ ಅಗತ್ಯವಿಲ್ಲ ಎಂದು ತಿಳಿಸಿದೆ.

‘ದೇಶ ವಿರೋಧಿ ಶಕ್ತಿಗಳು’ ಈ ಪ್ರಕರಣದಲ್ಲಿ ಕೈವಾಡ ಹೊಂದಿರುವ ಶಂಕೆ ಇದೆ. ಸಿಜೆಐ ವಿರುದ್ಧದ ಆರೋಪಗಳ ಪ್ರಕಟಣೆಗೆ ನಿರ್ಬಂಧ ವಿಧಿಸದಿದ್ದರೆ ದೇಶದ ನ್ಯಾಯಾಂಗ ವ್ಯವಸ್ಥೆ ಮೇಲೆ ನೇರ ಪರಿಣಾಮ ಉಂಟಾಗಲಿದೆ. ಜನರು ನ್ಯಾಯಾಂಗದ ಮೇಲೆ ವಿಶ್ವಾಸ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಅರ್ಜಿದಾರರು ಹೇಳಿದ್ದರು.

ಕಾನೂನು ಹಾಗೂ ನ್ಯಾಯಾಂಗ ಸಚಿವಾಲಯ, ಮಾಹಿತಿ ಮತ್ತು ಪ್ರಸಾರ ಸಚಿವಾಲಯ, ದೆಹಲಿ ಸರ್ಕಾರ, ಭಾರತೀಯ ಮಾಧ್ಯಮ ಮಂಡಳಿ ಹಾಗೂ ದೆಹಲಿ ಪೊಲೀಸ್ ಆಯುಕ್ತರನ್ನು ಅರ್ಜಿಯಲ್ಲಿ ಪ್ರತಿವಾದಿಗಳು ಎಂದು ಉಲ್ಲೇಖಿಸಿದ್ದರು.

‘ವಿದ್ಯುನ್ಮಾನ ಹಾಗೂ ಮುದ್ರಣ ಮಾಧ್ಯಮಗಳ ಜತೆಗೆ ಸಾಮಾಜಿಕ ಜಾಲತಾಣಗಳಲ್ಲಿಯೂ ಸುದ್ದಿ ಪ್ರಸಾರಕ್ಕೆ ನಿರ್ಬಂಧ ಹೇರಬೇಕು. ವಾಟ್ಸ್‌ಆ್ಯಪ್, ಗೂಗಲ್, ಯೂಟ್ಯೂಬ್, ಲಿಂಕ್ಡ್‌ಇನ್ ಕಾರ್ಪೊರೇಷನ್ ಹಾಗೂ ಸ್ಕ್ರಾಲ್.ಇನ್ ವೆಬ್‌ಸೈಟ್‌ಗೆ ನಿರ್ದೇಶನ ನೀಡಬೇಕು’ ಎಂದು ಮನವಿ ಮಾಡಿದ್ದರು.

ಸಿಜೆಐ ವಿರುದ್ಧ ಸುಪ್ರೀಂ ಕೋರ್ಟ್ ಮಾಜಿ ಉದ್ಯೋಗಿ ಮಾಡಿರುವ ಲೈಂಗಿಕ ಕಿರುಕುಳ ಆರೋಪ ಕುರಿತು ಮೂವರು ನ್ಯಾಯಮೂರ್ತಿಗಳ ಸಮಿತಿ ತನಿಖೆ ನಡೆಸುತ್ತಿದ್ದು, ಈ ವಿಚಾರಣೆ ಮುಕ್ತಾಯ ಆಗುವವರೆಗೆ ಮಾಧ್ಯಮಗಳಿಗೆ ನಿರ್ಬಂಧ ವಿಧಿಸುವಂತೆ ಕೋರಲಾಗಿತ್ತು.

‘ಆ್ಯಂಟಿ ಕರಪ್ಷನ್ ಕೌನ್ಸಿಲ್ ಆಫ್ ಇಂಡಿಯಾ’ ಸ್ವಯಂ ಸೇವಾ ಸಂಸ್ಥೆ ಈ ಅರ್ಜಿ ಸಲ್ಲಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT