ಸೋಮವಾರ, ಮೇ 17, 2021
31 °C

ದೆಹಲಿ ದಳ್ಳುರಿ: ಪುನರ್ವಸತಿ ವ್ಯವಸ್ಥೆ ಬಗ್ಗೆ ವರದಿ ಕೇಳಿದ ದೆಹಲಿ ಹೈಕೋರ್ಟ್‌

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಸಂತ್ರಸ್ತರಿಗೆ ಕಲ್ಪಿಸಲಾದ ವೈದ್ಯಕೀಯ ಸೌಲಭ್ಯ ಹಾಗೂ ಪುನರ್ವಸತಿ ಕುರಿತು ವಸ್ತುಸ್ಥಿತಿ ವರದಿ ಸಲ್ಲಿಸಲು ದೆಹಲಿ ಹೈಕೋರ್ಟ್‌ ಪೊಲೀಸರಿಗೆ ಸೋಮವಾರ ಸೂಚಿಸಿದೆ.

ಫೆ.26ರಂದು ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವ ಕುರಿತು ಹೈಕೋರ್ಟ್‌ ನೀಡಿದ್ದ ನಿರ್ದೇಶನಗಳ ಮೇಲೆ ಪೊಲೀಸರು ಕೈಗೊಂಡಿರುವ ಕ್ರಮಗಳ ಕುರಿತು ವರದಿ ನೀಡಲು ಮುಖ್ಯ ನ್ಯಾಯಮೂರ್ತಿ ಡಿ.ಎನ್‌.ಪಟೇಲ್‌ ಹಾಗೂ ನ್ಯಾಯಮೂರ್ತಿ ಸಿ.ಹರಿ ಶಂಕರ್‌ ಅವರಿದ್ದ ನ್ಯಾಯಪೀಠವು ದೆಹಲಿ ಪೊಲೀಸರಿಗೆ ಸೂಚಿಸಿತು. ವಿಚಾರಣೆಯನ್ನು ಏಪ್ರಿಲ್‌ 30ಕ್ಕೆ ಮುಂದೂಡಲಾಯಿತು. 

ನ್ಯಾಯಾಂಗ ತನಿಖೆಗೆ ಆಗ್ರಹ: ಸುಪ್ರೀಂ ಕೋರ್ಟ್‌ ಅಥವಾ ಹೈಕೋರ್ಟ್‌ ಹಾಲಿ ನ್ಯಾಯಮೂರ್ತಿಗಳಿಂದ ಗಲಭೆಯ ಕುರಿತು ತನಿಖೆ ನಡೆಸಬೇಕು ಹಾಗೂ ಗಲಭೆ ಕುರಿತು ಸಮಗ್ರ ವಿಚಾರಣೆ ಜಂಟಿ ಸದನ ಸಮಿತಿ ರಚಿಸಬೇಕು ಎಂದು ಆಮ್‌ ಆದ್ಮಿ ಪಕ್ಷದ (ಎಎಪಿ) ಸಂಸದರು ಆಗ್ರಹಿಸಿದ್ದಾರೆ. ಸಂಸತ್‌ ಆವರಣದಲ್ಲಿನ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದ ಎಎಪಿ ಸಂಸದರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. 

ಕೇಂದ್ರದ ವಿರುದ್ಧ ತೊಗಾಡಿಯಾ ಆರೋಪ: ‘ಗಲಭೆ ಸಂದರ್ಭದಲ್ಲಿ ಮೂಕಪ್ರೇಕ್ಷಕರಾಗಿದ್ದ ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಳ್ಳಲಿಲ್ಲ’ ಎಂದು ವಿಶ್ವ ಹಿಂದೂ ಪರಿಷತ್‌ ಮಾಜಿ ಅಂತರರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರವೀಣ್‌ ತೊಗಾಡಿಯಾ ಆರೋಪಿಸಿದ್ದಾರೆ. ಸಿಖಂದರ್‌ಪುರ್‌ ಕಾಲಾ ಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಅಮಾಯಕ ಹಿಂದೂಗಳ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ. 

ಸಿಬಿಎಸ್‌ಇ ಪರೀಕ್ಷೆ; ಶೇ 92ರಷ್ಟು ವಿದ್ಯಾರ್ಥಿಗಳು ಹಾಜರು: ಈಶಾನ್ಯ ದೆಹಲಿಯಲ್ಲಿ ಸೋಮವಾರ ನಡೆದ ಸಿಬಿಎಸ್‌ಇ ಪಠ್ಯಕ್ರಮದ 10 ಮತ್ತು 12ನೇ ತರಗತಿ ಪರೀಕ್ಷೆಗೆ ಶೇ 92ರಷ್ಟು ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಎಂಜಿನಿಯರಿಂಗ್‌ ಅಥವಾ ಮೆಡಿಕಲ್‌ ಪ್ರವೇಶ ಪರೀಕ್ಷೆ ಎದುರಿಸಲು ವಿದ್ಯಾರ್ಥಿಗಳಿಗೆ ಅಡ್ಡಿಯಾಗಬಹುದು ಎನ್ನುವ ಕಾರಣಕ್ಕೆ ಪರೀಕ್ಷೆ ಮುಂದೂಡಲು ಸಾಧ್ಯವಿಲ್ಲ ಎಂದು ಸಿಬಿಎಸ್‌ಇ ಭಾನುವಾರ ತಿಳಿಸಿತ್ತು.

‘ಬಂಧಿತರ ಹೆಸರು ಬಹಿರಂಗಪಡಿಸಿ’
ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಬಂಧಿತರಾಗಿರುವವರ ಹೆಸರುಗಳನ್ನು ಬಹಿರಂಗಪಡಿಸುವಂತೆ ಸಿಪಿಐ(ಎಂ) ಪಾಲಿಟ್‌ ಬ್ಯೂರೊ ಸದಸ್ಯೆ ಬೃಂದಾ ಕಾರಟ್‌ ದೆಹಲಿ ನಗರ ಪೊಲೀಸ್‌ ಆಯುಕ್ತ ಎಸ್‌.ಎನ್‌.ಶ್ರೀವಾಸ್ತವ ಅವರಿಗೆ ಪತ್ರ ಬರೆದಿದ್ದಾರೆ. 

‘ಬಂಧಿತರ ಹೆಸರನ್ನು ಬಹಿರಂಗಪಡಿಸಬೇಕು ಎನ್ನುವ ಕಾನೂನು ಇದ್ದರೂ, ಪೊಲೀಸ್‌ ನಿಯಂತ್ರಣ ಕೊಠಡಿಯಲ್ಲಿ ಹೆಸರುಗಳನ್ನು ಹಾಕಿಲ್ಲ. ಆಯಾ ಪೊಲೀಸ್‌ ಠಾಣೆಯಲ್ಲೂ ಬಂಧಿತರ ಹೆಸರುಗಳನ್ನು ಬಹಿರಂಗಪಡಿಸಿಲ್ಲ’ ಎಂದು ಕಾರಟ್‌ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು