ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯ ಮೂವರು ಕಾರ್ಯಕರ್ತರ ವಿರುದ್ಧ ಪ್ರಕರಣ

Last Updated 2 ಮಾರ್ಚ್ 2020, 19:13 IST
ಅಕ್ಷರ ಗಾತ್ರ

ಕೋಲ್ಕತ್ತ‌: ಕೇಂದ್ರ ಗೃಹ ಸಚಿವ ಅಮಿತ್‌ ಶಾ ಭಾನುವಾರ ಭಾಗವಹಿಸಿದ್ದ ರ‍್ಯಾಲಿಯ ವೇಳೆ ‘ಗೋಲಿ ಮಾರೋ..’ ಘೋಷಣೆ ಕೂಗಿದ್ದ ಆರೋಪದಡಿ ಬಿಜೆಪಿಯ ಮೂವರು ಕಾರ್ಯಕರ್ತರನ್ನು ಕೋಲ್ಕತ್ತ ಪೊಲೀಸರು ಬಂಧಿಸಿದ್ದಾರೆ.

‘ಬಿಜೆಪಿ ಬೆಂಬಲಿಗರು ಪ್ರಚೋದನಾಕಾರಿ ಘೋಷಣೆಗಳನ್ನು ಕೂಗಿರುವುದು ಕಾನೂನುಬಾಹಿರ ಕ್ರಮ. ಇದು, ಪ್ರಜ್ಞಾಪೂರ್ವಕವಾಗಿ ಮಾಡಿದ ಅಪರಾಧ’ ಎಂದು ಕೋಲ್ಕತ್ತ ಪೊಲೀಸ್‌ನ ಹಿರಿಯ ಅಧಿಕಾರಿ ಪ್ರತಿಕ್ರಿಯಿಸಿದರು.

‘ವ್ಯಕ್ತಿಯೊಬ್ಬರ ದೂರು ಆಧರಿಸಿ ನ್ಯೂ ಮಾರ್ಕೆಟ್‌ ಪೊಲೀಸ್‌ ಠಾಣೆ ಸಿಬ್ಬಂದಿಯು ಧ್ರುವ ಬಸು, ಪಂಕಜ್‌ ಪ್ರಸಾದ್‌ ಮತ್ತು ಸುರೇಂದ್ರ ಕುಮಾರ ತೆವಾರಿ ಅವರನ್ನು ಭಾನುವಾರ ಬಂಧಿಸಿದ್ದಾರೆ’ ಎಂದು ತಿಳಿಸಿದರು.

ಮಮತಾ ಬ್ಯಾನರ್ಜಿ ಟೀಕೆ: ‘ದೆಹಲಿ ಹಿಂಸಾಚಾರ ಬಿಜೆಪಿ ಪ್ರಾಯೋಜಿತ ನರಮೇಧ’ ಎಂದು ಟೀಕಿಸಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ,ನಗರದಲ್ಲಿ ಅಮಿತ್‌ ಶಾ ರ‍್ಯಾಲಿಗೆ ತೆರಳುವಾಗ ಅವರ ಬೆಂಬಲಿಗರು ‘ಗೋಲಿ ಮಾರೋ..’ ಘೋಷಣೆ ಕೂಗಿದ್ದನ್ನೂ ಖಂಡಿಸಿದರು.

ಬಿಜೆಪಿ ಈ ಮೂಲಕ ‘ಗುಜರಾತ್‌ ಮಾದರಿ ಗಲಭೆ’ಯನ್ನು ದೇಶದೆಲ್ಲೆಡೆ ಜಾರಿಗೊಳಿಸಲು ಯತ್ನಿಸುತ್ತಿದೆ. ಸಿಎಎಯಿಂದಾಗಿ ಹಲವು ಅಮಾಯಕರ ಹತ್ಯೆ ಆಗಿದೆ. ಅಮಿತ್‌ ಶಾ ಇದನ್ನು ನೆನಪಿಡಬೇಕು. ದೆಹಲಿ ಹಿಂಸೆಗಾಗಿ ಕ್ಷಮೆಕೋರಬೇಕು’ ಎಂದು ಆಗ್ರಹಿಸಿದರು.

ಶಾಂತಿ ಸ್ಥಾಪನೆಗೆ ಯಾವುದೇ ಜವಾಬ್ದಾರಿಗೆ ಸಿದ್ಧ:ರಜನೀಕಾಂತ್‌
ಚೆನ್ನೈ: ‘ದೇಶದಲ್ಲಿ ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ಯಾವುದೇ ಜವಾಬ್ದಾರಿ ನಿಭಾಯಿಸಲು ಸಿದ್ಧ’ ಎಂದು ಪ್ರಸಿದ್ಧ ನಟ ರಜನೀಕಾಂತ್‌ ಹೇಳಿದ್ದಾರೆ.

ಭಾನುವಾರ ತಮ್ಮ ನಿವಾಸದಲ್ಲಿ ಮುಸಲ್ಮಾನ ಸಂಘಟನೆಗಳ ಕೆಲ ಮುಖಂಡರು ಭೇಟಿಯಾದ ಹಿಂದೆಯೇ ರಜನೀಕಾಂತ್‌ ಈ ಕುರಿತು ಟ್ವೀಟ್ ಮಾಡಿದ್ದಾರೆ.

‘ದೇಶದಲ್ಲಿ ಈಗ ಮುಖ್ಯವಾಗಿ ಬೇಕಿರುವುದು ಪ್ರೀತಿ, ಏಕತೆ ಮತ್ತು ಶಾಂತಿ ಎಂಬ ಮುಸಲ್ಮಾನ ಮುಖಂಡರ ಅಭಿಪ್ರಾಯವನ್ನು ನಾನು ಒಪ್ಪುತ್ತೇನೆ’ ಎಂದೂ ಹೇಳಿದ್ದಾರೆ.

ಇದಕ್ಕೂ ಮೊದಲು ‘ತಮಿಳುನಾಡು ಜಮ್ಮಾತ್‌ ಉಲ್‌ ಉಲಾಮಾ ಸಬಾಯಿ’ ಸಂಘಟನೆಯ ಸದಸ್ಯರು ರಜನೀ ಅವರನ್ನು ಭೇಟಿಯಾಗಿದ್ದರು.

ದೆಹಲಿ ಹಿಂಸಾಚಾರವನ್ನು ಕಳೆದ ವಾರ ತೀವ್ರವಾಗಿ ಖಂಡಿಸಿದ್ದ ರಜನೀಕಾಂತ್, ‘ಹಿಂಸೆಯನ್ನು ಸ್ಪಷ್ಟವಾಗಿ ಹತ್ತಿಕ್ಕಬೇಕು. ಹಿಂಸಾಚಾರವನ್ನು ಹತ್ತಿಕ್ಕಲಾಗದಿದ್ದರೆ ರಾಜೀನಾಮೆಯನ್ನು ನೀಡಿ ನಡೆಯಲಿ’ ಎಂದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT