ಭಾನುವಾರ, ಮಾರ್ಚ್ 7, 2021
22 °C

ಜನರ ಹೃದಯ ಬಡಿತಕ್ಕೆ ಕಿವಿಗೊಡದ ಮೋದಿ: ರಾಹುಲ್‌ ಗಾಂಧಿ ಕಟಕಿ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ’ರಾಜಕಾರಣಿಯಾದವರು ಜನರ ಹೃದಯ ಬಡಿತವನ್ನು ಆಲಿಸಬೇಕು. ಆದರೆ, ಪ್ರಧಾನಿ ನರೇಂದ್ರ ಮೋದಿ ಅವುಗಳಿಗೆ ಕಿವಿಗೊಡಲಿಲ್ಲ‘ ಎಂದು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಕುಟುಕಿದರು.

ಮೂರು ರಾಜ್ಯಗಳಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ’ಐದು ವರ್ಷದ ಹಿಂದೆ ಜನರು ಮೋದಿ ಅವರ ಕೈಗೆ ಅಧಿಕಾರ ನೀಡಿದಾಗ ಅವರ ಬಳಿ ಬಹಳ ದೊಡ್ಡ ಅವಕಾಶವಿತ್ತು. ದುರಹಂಕಾರದಿಂದ ಅವರು ಅದನ್ನು ಕಳೆದುಕೊಂಡರು. ಒಬ್ಬ ರಾಜಕಾರಣಿ ಹೇಗಿರಬಾರದು ಎಂಬುದನ್ನು ನಾನು ಮೋದಿ ಅವರನ್ನು ನೋಡಿ ಕಲಿತಿದ್ದೇನೆ‘ ಎಂದು ವಿಷಾಧಿಸಿದರು.

’2014ರ ಚುನಾವಣೆ ನನಗೆ ಅತ್ಯದ್ಭುತ ಕ್ಷಣಗಳು. ಅಲ್ಲಿಂದ ಅದಾದ ನಂತರ ನಾನು ಸಾಕಷ್ಟು ಕಲಿತಿದ್ದೇನೆ. ಹೇಗೆ ಯೋಚಿಸಬೇಕು, ಬಹಳ ಮುಖ್ಯವಾಗಿ ಮಾನವೀಯತೆಯನ್ನು ರೂಢಿಸಿಕೊಂಡಿದ್ದೇನೆ. ಒಬ್ಬ ರಾಜಕಾರಣಿ ಜನರ ಭಾವನೆಗಳನ್ನು ಅರ್ಥಮಾಡಿಕೊಳ್ಳಬೇಕು ಮತ್ತು ಅದರ ಪ್ರಕಾರವಾಗಿ ಕೆಲಸ ಮಾಡಬೇಕು ಎನ್ನುವುದನ್ನು ತಿಳಿದೆ‘ ಎಂದರು.

’ನೋಟು ರದ್ದತಿ ಒಂದು ದೊಡ್ಡ ಹಗರಣ. ಇದನ್ನು ನಾನು ಪದೇ ಪದೇ ಹೇಳಿದ್ದೇನೆ. ಈ ದೇಶದಲ್ಲಿ ಉದ್ಯೋಗ, ಭ್ರಷ್ಟಾಚಾರ ನಿರ್ಮೂಲನೆ ಮತ್ತು ರೈತರಿಗೆ ಬೆಂಬಲ ನೀಡುವುದು ನಮ್ಮ ಪ್ರಮುಖ ಆಶಯ‘ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

’ಭಾರಿ ಬಹುಮತದಿಂದ ಗೆಲುವು ಸಾಧಿಸಿದ್ದ ನರೇಂದ್ರ ಮೋದಿ ಅವರಿಗೆ ಈ ದೇಶವನ್ನು ಬದಲಾಯಿಸುವ ಬಹು ದೊಡ್ಡ ಅವಕಾಶವಿತ್ತು. ಆದರೆ, ಅವರು ಅದನ್ನು ಮಾಡಲಿಲ್ಲ. ಅವರ ಬಗ್ಗೆ ಬೇಸರವಾಗುವ ಒಂದು ಅಂಶವೆಂದರೆ ಅವರು ಜನರ ಹೃದಯ ಬಡಿತಕ್ಕೆ ಕಿವಿಗೊಡಲಿಲ್ಲ. ಯುವ ಜನತೆ, ರೈತರು ಏನು ಹೇಳುತ್ತಿದ್ದಾರೆ ಎನ್ನುವುದನ್ನು ಅವರು ಕೇಳಿಸಿಕೊಳ್ಳಲೇ ಇಲ್ಲ. ಅವರಲ್ಲಿ ಒಂದು ರೀತಿಯ ದುರಹಂಕಾರ ಮೈಗೂಡಿತು. ಜನರು ಮೋದಿಯ ಬಗ್ಗೆ ಇಟ್ಟಿದ್ದ ನಂಬಿಕೆ ಸುಳ್ಳಾಗಿದೆ. ದೇಶದ ಭವಿಷ್ಯವನ್ನು ನೋಡುವುದರಲ್ಲಿ ಅವರು ವಿಫಲರಾಗಿದ್ದಾರೆ‘ ಎಂದು ಟೀಕಿಸಿದರು.

’ಉದ್ಯೋಗ, ಭ್ರಷ್ಟಾಚಾರ ನಿರ್ಮೂಲನೆ ಹಾಗೂ ರೈತರ ಅಭಿವೃದ್ಧಿ ಈ ಮೂರು ಅಂಶಗಳ ಆಧಾರದಿಂದ ಮೋದಿ ಅಧಿಕಾರದ ಚುಕ್ಕಾಣಿ ಹಿಡಿದರು. ಆದರೆ, ಅದನ್ನು ಅನುಷ್ಠಾನಗೊಳಿಸುವಲ್ಲಿ ಅವರು ಸಂಪೂರ್ಣ ವಿಫಲರಾಗಿದ್ದಾರೆ. ನಾವು ಗೆಲುವ ಸಾಧಿಸಿರುವ ಮೂರು ರಾಜ್ಯಗಳಲ್ಲಿ ಈ ಮೂರು ಅಂಶಗಳ ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನ ಪಡುತ್ತೇವೆ‘ ಎಂದು ಹೇಳಿದರು.

’ಸಾಲಮನ್ನ ಎನ್ನುವುದು ಸಮಸ್ಯೆಯನ್ನು ತಕ್ಷಣಕ್ಕೆ ಶಮನ ಮಾಡುತ್ತದೆಯೇ ಹೊರತು ರೈತರ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವುದಿಲ್ಲ. ಪರಿಹಾರ ಸುಲಭದ ವಿಷಯವಲ್ಲ, ಅದೊಂದು ದೊಡ್ಡ ಸವಾಲು ನಮ್ಮೆದುರಿಗೆ ಇದೆ. ಅದನ್ನು ನಾವು ಎದುರಿಸಿ ತೋರಿಸುತ್ತೇವೆ‘ ಎಂದು ತಿಳಿಸಿದರು.

’ಇದು ಕಾರ್ಯಕರ್ತರ ಗೆಲುವು. ಕಷ್ಟದ ರಾಜಕೀಯ ಪರಿಸ್ಥಿತಿಯಲ್ಲಿ ಶ್ರಮವಹಿಸಿ ಕೆಲಸ ಮಾಡಿದ ಎಲ್ಲಾ ಕಾಂಗ್ರೆಸ್‌ ಕಾರ್ಯಕರ್ತರಿಗೆ ಅಭಿನಂದನೆಗಳು. ಈ ಮೂರು ರಾಜ್ಯಗಳಲ್ಲಿ ಇಲ್ಲಿಯವರೆಗೆ ಕೆಲಸ ಮಾಡಿದ ಬಿಜೆಪಿ ಮುಖ್ಯಮಂತ್ರಿಗೂ ನನ್ನ ಧನ್ಯವಾದಗಳು. ಮುಂದೆ ನಾವು ಅಲ್ಲಿನ ಜನರ ಅಗತ್ಯಗಳನ್ನು ಅರಿತು ಉತ್ತಮ ಆಡಳಿತ ನೀಡಲು ಪ್ರಯತ್ನಿಸುತ್ತೇವೆ. ಆ ರಾಜ್ಯಗಳಿಗೆ ಹೊಸದೊಂದು ದೃಷ್ಟಿಕೋನ ನೀಡುತ್ತೇವೆ‘ ಎಂದು ಭರವಸೆಯ ಮಾತನಾಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು