ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಧರ ಹತ್ಯೆ: ಸೇಡಿಗಾಗಿ ತಹತಹ

Last Updated 16 ಫೆಬ್ರುವರಿ 2019, 1:00 IST
ಅಕ್ಷರ ಗಾತ್ರ

ಪುಲ್ವಾಮಾ ಭಯೋತ್ಪಾದನೆ ದಾಳಿಯ ಬಳಿಕ ಪಾಕಿಸ್ತಾನಕ್ಕೆ ಪಾಠ ಕಲಿಸಬೇಕು ಎಂಬ ಭಾವನೆ ತೀವ್ರಗೊಳ್ಳುತ್ತಿದೆ. ದೇಶ ವಿದೇಶಗಳಿಂದ ಕಟು ಪದಗಳಲ್ಲಿ ಖಂಡನೆ ವ್ಯಕ್ತವಾಗುತ್ತಿದೆ. ಗುರುವಾರದ ದಾಳಿಯಲ್ಲಿ ಹುತಾತ್ಮರಾದ ಯೋಧರ ಮೃತ ದೇಹಗಳನ್ನು ಶುಕ್ರವಾರ ಸಂಜೆಯ ಹೊತ್ತಿಗೆ ದೆಹಲಿಯ ಪಾಲಂ ವಿಮಾನ ನಿಲ್ದಾಣಕ್ಕೆ ತರಲಾಗಿದೆ. ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ ಯೋಧರಿಗೆ ಅಂತಿಮ ನಮನ ಸಲ್ಲಿಸಿದ್ದಾರೆ

ಆಕ್ರೋಶದಲ್ಲಿ ಹೊತ್ತಿ ಉರಿದ ಜಮ್ಮು

ಜಮ್ಮು:ಸಿಆರ್‌ಪಿಎಫ್ ಯೋಧರ ಮೇಲಿನ ದಾಳಿಯನ್ನು ಖಂಡಿಸಿ ಜಮ್ಮುವಿನಲ್ಲಿ ಶುಕ್ರವಾರ ಪ್ರತಿಭಟನೆ ನಡೆಸುವ ವೇಳೆ ಹಿಂಸಾಚಾರ ನಡಿದಿದೆ. ನಗರಾಡಳಿತವು ಪರಿಸ್ಥಿತಿಯನ್ನು ನಿಯಂತ್ರಿಸಲು ಸೇನೆಯ ನೆರವು ಕೋರಿದೆ. ಜಮ್ಮುವಿನಲ್ಲಿ ಕರ್ಫ್ಯೂ ಹೇರಲಾಗಿದೆ.

ಯೋಧರ ದಾಳಿಯನ್ನು ಖಂಡಿಸಿ ಇಲ್ಲಿನ ಉದ್ಯಮಿಗಳ ಸಂಘಟನೆಯು ಶುಕ್ರವಾರ ಬಂದ್‌ಗೆ ಕರೆ ನೀಡಿತ್ತು. ಹೀಗಾಗಿ ಗುರುವಾರ ನಗರದ ಎಲ್ಲಾ ಅಂಗಡಿಗಳು ಮುಚ್ಚಿದ್ದವು. ವಾಹನ ಸಂಚಾರವೂ ವಿರಳವಾಗಿತ್ತು.

ಮಧ್ಯಾಹ್ನದ ವೇಳೆಗೆ ಸಾರ್ವಜನಿಕರು ನಗರದ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದರು. ಪಾಕಿಸ್ತಾನದ ವಿರುದ್ಧ ಘೋಷಣೆ ಕೂಗಲಾಗುತ್ತಿತ್ತು.ಆಗ ಅವರ ಮೇಲೆ ಕಲ್ಲು ತೂರಾಟ ನಡೆದಿದೆ. ಇದರಿಂದ ರೊಚ್ಚಿಗೆದ್ದ ಪ್ರತಿಭಟನಕಾರರು ರಸ್ತೆಗಳಲ್ಲಿ ಇದ್ದ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಲಾಠಿಪ್ರಹಾರ ನಡೆಸಿದ್ದಾರೆ ಎಂದು ಮೂಲಗಳು ಹೇಳಿವೆ.

ಪ್ರತಿಭಟನಕಾರರು ಚದುರದ ಕಾರಣ ನಗರಾಡಳಿತವು ಸೇನೆಯ ನೆರವು ಕೋರಿದೆ. ಸ್ಥಳಕ್ಕೆ ಬಂದ ಸೈನಿಕರು ನಗರದ ಪ್ರಮುಖ ರಸ್ತೆಗಳಲ್ಲಿ ಪಥಸಂಚಲನ ನಡೆಸಿದ್ದಾರೆ. ನಗರದಲ್ಲಿ ಅಂತರ್ಜಾಲ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.

ಅಜ್ಮಿ ಕರಾಚಿ ಭೇಟಿ ರದ್ದು

ಮುಂಬೈ: ಖ್ಯಾತ ಉರ್ದು ಕವಿ ಮತ್ತು ತಮ್ಮ ತಂದೆ ಕೈಫಿ ಅಜ್ಮಿ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಕರಾಚಿಯಲ್ಲಿ ನಡೆಯಬೇಕಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸದೇ ಇರಲು ನಟಿ ಶಬಾನಾ ಅಜ್ಮಿ ನಿರ್ಧರಿಸಿದ್ದಾರೆ.

ಕರಾಚಿ ಆರ್ಟ್‌ ಕೌನ್ಸಿಲ್ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ಅಜ್ಮಿ ಮತ್ತು ಅವರ ಪತಿ ಜಾವೇದ್ ಅಖ್ತರ್ ಭಾಗವಹಿಸಬೇಕಿತ್ತು. ಸಿಆರ್‌ಪಿಎಫ್ ಯೋಧರ ಮೇಲೆ ಉಗ್ರರು ದಾಳಿ ನಡೆಸಿದ ಕಾರಣ ಈ ಭೇಟಿಯನ್ನು ರದ್ದುಗೊಳಿಸಿದ್ದೇವೆ ಎಂದು ಅಜ್ಮಿ ಟ್ವೀಟ್ ಮಾಡಿದ್ದಾರೆ.

ಯೋಧರ ಸಾವಿಗೆಕವಿ ಜಾವೇದ್ ಅಖ್ತರ್ ಸಂತಾಪ ಸೂಚಿಸಿದ್ದಾರೆ. ‘ಸಿಆರ್‌ಪಿಎಫ್ ಜತೆಗಿನ ನನ್ನ ಸಂಬಂಧ ವಿಶಿಷ್ಟವಾದದ್ದು. ಸಿಆರ್‌ಪಿಎಫ್‌ ಗೀತೆಯನ್ನು ರಚಿಸುವ ಮುನ್ನ ನಾನು, ಸಾಕಷ್ಟು ಸಂಖ್ಯೆಯಲ್ಲಿ ಯೋಧರನ್ನು ಸಂಪರ್ಕಿಸಿದ್ದೆ. ಅಂತಹ ವೀರ ಯೋಧರ ಹತ್ಯೆ ಖಂಡನಾರ್ಹ’ ಎಂದು ಅವರು ಟ್ವೀಟ್ ಮಾಡಿದ್ದಾರೆ. ಜಾವೇದ್ ಅವರು ರಚಿಸಿರುವ ಸಿಆರ್‌ಪಿಎಫ್ ಗೀತೆಯನ್ನು ಆ ಪಡೆಯ ಅಧಿಕೃತ ಗೀತೆಯೆಂದು ಘೋಷಿಸಲಾಗಿದೆ.

ನಿಲುವು ಸ್ಪಷ್ಟಪಡಿಸದ ಚೀನಾ

ಬೀಜಿಂಗ್ : ಜೈಷ್‌ ಎ ಮೊಹಮ್ಮದ್ (ಜೆಇಎಂ) ಮುಖ್ಯಸ್ಥ ಮಸೂದ್ ಅಜರ್‌ನನ್ನು ಜಾಗತಿಕ ಉಗ್ರ ಎಂದು ಘೋಷಿಸಬೇಕು ಎಂಬ ಭಾರತದ ಬೇಡಿಕೆಯನ್ನು ಬೆಂಬಲಿಸುವ ಬಗ್ಗೆ ಚೀನಾ ತನ್ನ ನಿಲುವನ್ನು ಸ್ಪಷ್ಟಪಡಿಸಿಲ್ಲ.

ಭಾರತದ ಈ ಬೇಡಿಕೆಯನ್ನುವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಚೀನಾ ವಿರೋಧಿಸುತ್ತಲೇ ಬಂದಿದೆ. ಗುರುವಾರ ಕಾಶ್ಮೀರದಲ್ಲಿ ಸಿಆರ್‌‍ಪಿಎಫ್‌ ಯೋಧರ ಮೇಲೆ ದಾಳಿ ನಡೆಸಿದ್ದು ತಾನೇಎಂದು ಜೆಇಎಂ ಒಪ್ಪಿಕೊಂಡಿದೆ. ಹೀಗಾಗಿ ಭಾರತದ ಬೇಡಿಕೆಯನ್ನು ಚೀನಾ ಈಗಾಲಾದರೂ ಬೆಂಬಲಿಸುತ್ತದೆ ಎಂದು ನಿರೀಕ್ಷಿಸಲಾಗಿತ್ತು.

‘ಈ ದಾಳಿಯಿಂದ ನಮಗೆ ಆಘಾತವಾಗಿದೆ. ಇಂತಹ ದಾಳಿಗಳನ್ನು ತಡೆಯಲು ಸಂಬಂಧಿತ ರಾಷ್ಟ್ರಗಳು ಒಗ್ಗಟ್ಟಾಗಿ ಕೆಲಸ ಮಾಡಬೇಕು. ಪ್ರಾದೇಶಿಕ ಶಾಂತಿಗಾಗಿ ನಾವೆಲ್ಲರೂ ಶ್ರಮಿಸಬೇಕು’ ಎಂದಷ್ಟೇ ಚೀನಾ ಹೇಳಿದೆ.

ಭಾರತದ ಬೇಡಿಕೆಯ ಬಗ್ಗೆ ಪ್ರಶ್ನಿಸಿದಾಗಲೂ ಚೀನಾ ಬಹಳ ಎಚ್ಚರಿಕೆಯಿಂದ ಉತ್ತರ ನೀಡಿದೆ. ‘ಜೆಇಎಂ ಅನ್ನು ಈಗಾಗಲೇ ನಿಷೇಧಿಸಲಾಗಿದೆ. ಈ ವಿಚಾರದಲ್ಲಿ ಚೀನಾ ರಚನಾತ್ಮಕ ಮತ್ತು ಜವಾಬ್ದಾರಿಯುತ ನಿರ್ಧಾರ ತೆಗೆದುಕೊಳ್ಳಲಿದೆ’ ಎಂದು ಚೀನಾದ ವಿದೇಶಾಂಗ ಸಚಿವಾಲಯ ಹೇಳಿದೆ.

ಪಾಕ್‌ಗೆ ಅಮೆರಿಕದ ಕಟು ಸಂದೇಶ

ಪುಲ್ವಾಮಾ ಭಯೋತ್ಪಾದಕ ದಾಳಿಯನ್ನು ಅಮೆರಿಕ ಬಲವಾಗಿ ಖಂಡಿಸಿದೆ. ಭಯೋತ್ಪಾದಕರಿಗೆ ನೀಡುತ್ತಿರುವ ಬೆಂಬಲವನ್ನು ತಕ್ಷಣವೇ ನಿಲ್ಲಿಸಬೇಕು ಮತ್ತು ಉಗ್ರರಿಗೆ ಸುರಕ್ಷಿತ ತಾಣ ಒದಗಿಸುವ ಕೆಲಸ ಮಾಡಬಾರದು ಎಂಬ ಕಟು ಸಂದೇಶವನ್ನೂ ಪಾಕಿಸ್ತಾನಕ್ಕೆ ರವಾನಿಸಿದೆ.

ಪಾಕಿಸ್ತಾನ ನೆಲದಿಂದ ಕಾರ್ಯಾಚರಿಸುತ್ತಿರುವ ಉಗ್ರಗಾಮಿ ಸಂಘಟನೆಗಳಿಗೆ ಆಶ್ರಯ ಒದಗಿಸುವ ಕೆಲಸ ಮಾಡಬಾರದು. ಅವರ ಗುರಿ ಇರುವುದು ಗೊಂದಲ ಸೃಷ್ಟಿ, ಹಿಂಸೆ ಮತ್ತು ಈ ಪ್ರದೇಶದಲ್ಲಿ ಭಯೋತ್ಪಾದನೆ ಸೃಷ್ಟಿ ಮಾತ್ರ’ ಎಂದು ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಸಾರಾ ಸ್ಯಾಂಡರ್ಸ್‌ ಹೇಳಿದ್ದಾರೆ.

‘ಭಾರತ ಮತ್ತು ಅಮೆರಿಕದ ನಡುವೆ ಇರುವ ಭಯೋತ್ಪಾದನೆ ತಡೆ ಸಹಕಾರ ಮತ್ತು ಸಮನ್ವಯವನ್ನು ಈ ದಾಳಿಯು ಇನ್ನಷ್ಟು ಗಟ್ಟಿಗೊಳಿಸುತ್ತದೆ’ ಎಂದೂ ಅವರು ಹೇಳಿದ್ದಾರೆ.

ಎಲ್ಲ ರೀತಿಯ ಭಯೋತ್ಪಾದನೆಗಳ ವಿರುದ್ಧ ಹೋರಾಡಲು ಭಾರತದ ಜತೆಗೆ ಕೆಲಸ ಮಾಡುವುದಾಗಿ ಅಮೆರಿಕದ ವಿದೇಶಾಂಗ ಸಚಿವಾಲಯವೂ ಹೇಳಿದೆ.

***

ಕ್ಷಮಿಸುವುದಿಲ್ಲ: ಸಿಆರ್‌ಪಿಎಫ್

ನಮ್ಮ ಯೋಧರ ಹತ್ಯೆಯನ್ನು ನಾವು ಮರೆಯುವುದೂ ಇಲ್ಲ, ಕೃತ್ಯ ಎಸಗಿದವರನ್ನು ಕ್ಷಮಿಸುವುದೂ ಇಲ್ಲ. ನಮ್ಮ ಹುತಾತ್ಮರ ಕುಟುಂಬಗಳ ಜತೆಗೆ ನಾವಿದ್ದೇವೆ. ಈ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳುತ್ತೇವೆ

ಸಿಆರ್‌ಪಿಎಫ್

ಉಗ್ರರ ನೆಲೆಗಳು ಒಂದೂ ಉಳಿಯಬಾರದು

ಉಗ್ರರು ಜಿಹಾದ್‌ ಅನ್ನು ಬೆಳೆಸಲು ಧರ್ಮ ಮತ್ತು ಸ್ವರ್ಗದ ಹೆಸರಿನಲ್ಲಿ ಯುವಕರನ್ನು ಉದ್ದೀಪಿಸುತ್ತಿದ್ದಾರೆ. ಇಂತಹ ಅಪಾಯಕಾರಿ ಬೆಳವಣಿಗೆ ತಡೆಯುವುದು ಮನುಕುಲಕ್ಕೆ ಬಹುದೊಡ್ಡ ಸವಾಲು. ಪಾಕಿಸ್ತಾನದ ನೆಲದಲ್ಲಿರುವ ಉಗ್ರರ ನೆಲೆಗಳು ಒಂದೂ ಉಳಿಯದಂತೆ ಧ್ವಂಸ ಮಾಡಬೇಕು. ಭಾರತ ಸರ್ಕಾರವು ದೃಢನಿಶ್ಚಯದಿಂದ ಈ ಕೆಲಸ ಮಾಡುತ್ತದೆ ಎಂಬ ಭರವಸೆ ಇದೆ

ವಿಶ್ವ ಹಿಂದೂ ಪರಿಷತ್

‘ಪ್ರತೀಕಾರವನ್ನು ಎಲ್ಲರೂ ಬೆಂಬಲಿಸಿ’

ಇದು ಇಡೀ ಭಾರತದ ಮೇಲೆ ನಡೆದ ದಾಳಿ.ಇಂತಹ ನೀಚ ಕೃತ್ಯದ ಮೂಲಕ ಭಾರತದ ಧೃತಿಗೆಡಿಸಲು ಮತ್ತು ಭಾರತೀಯರನ್ನು ವಿಭಜಿಸಲು ಸಾಧ್ಯವಿಲ್ಲ ಎಂಬ ಸಂದೇಶವನ್ನುಉಗ್ರರು ಮತ್ತು ಅವರ ಪ್ರಾಯೋಜಕರಿಗೆ ರವಾನಿಸಬೇಕು. ಹೀಗಾಗಿ ಈ ದಾಳಿಗೆ ಪ್ರತೀಕಾರ ತೆಗೆದುಕೊಳ್ಳಲು ಸರ್ಕಾರ ಯಾವ ಮಾರ್ಗ ತುಳಿದರೂ, ಇಡೀ ದೇಶ ಆ ನಿರ್ಧಾರವನ್ನು ಬೆಂಬಲಿಸಬೇಕು

ಲಾಲ್ ಕೃಷ್ಣ ಅಡ್ವಾಣಿ,ಬಿಜೆಪಿ ಹಿರಿಯ ನಾಯಕ

‘ಲಾಡೆನ್‌ಗಾದ ಗತಿಯೇ ಆಗಬೇಕು’

ದೇಶದೊಳಕ್ಕೆ ನುಸುಳುತ್ತಿರುವ ಮತ್ತು ಈಗಾಗಲೇ ನುಸುಳಿರುವ ಉಗ್ರರನ್ನು ಹುಡುಕಿ, ನಿರ್ಮೂಲನೆ ಮಾಡಬೇಕು. ಪಾಕಿಸ್ತಾನದಲ್ಲಿ ನೆಲೆಸಿರುವ ಜೆಇಎಂ ಉಗ್ರರಾದ ಹಫೀಜ್‌ ಸಯೀದ್ ಮತ್ತು ಮಸೂದ್ ಅಜರ್‌ನನ್ನು ಭಾರತಕ್ಕೆ ಎಳೆದುತರಬೇಕು. ಒಸಾಮ ಬಿನ್‌ ಲಾಡೆನ್‌ಗೆ ಆದ ಗತಿಯೇ ಇವರಿಗೂ ಆಗಬೇಕು

ಬಾಬಾ ರಾಮ್‌ದೇವ್,ಯೋಗ ಗುರು

ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು: ಪುಟಿನ್

ಇದೊಂದು ಪೈಶಾಚಿಕ ಕೃತ್ಯ. ಈ ದಾಳಿ ನಡೆಸಿದ ದುಷ್ಕರ್ಮಿಗಳು ಮತ್ತು ಅವರಿಗೆ ನೆರವು ಒದಗಿಸಿದವರನ್ನು ಶಿಕ್ಷಿಸಲೇಬೇಕು. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ನೆರವು ನೀಡಲು ರಷ್ಯಾ ಸದಾ ಸಿದ್ಧವಾಗಿರುತ್ತದೆ

ವ್ಲಾಡಿಮಿರ್ ಪುಟಿನ್,ರಷ್ಯಾ ಅಧ್ಯಕ್ಷ

‘ಉಗ್ರರ ದಮನಕ್ಕೆ ಒಗ್ಗಟ್ಟಾಗಬೇಕು’

ಇದೊಂದು ನೀಚ ಕೃತ್ಯ.ಉಗ್ರವಾದ ಮತ್ತು ಹಿಂಸಾಚಾರದ ವಿರುದ್ಧ ಹೋರಾಡುತ್ತಿರುವ ಭಾರತೀಯರ ಬೆಂಬಲಕ್ಕೆ ನಾವು ನಿಲ್ಲುತ್ತೇವೆ. ಈ ಹೋರಾಟದಲ್ಲಿ ಅಂತರರಾಷ್ಟ್ರೀಯ ಸಮುದಾಯವು ಒಗ್ಗಟ್ಟಾಗಿ ನಿಲ್ಲಬೇಕು

ಯುಎಇ

ದೇಶವನ್ನು ದೂರುವುದೇ?

ಇದು ಹೇಡಿಗಳ ಕೃತ್ಯ. ಇದನ್ನು ನಾನು ಖಂಡಿಸುತ್ತೇನೆ. ದುಷ್ಕರ್ಮಿಗಳನ್ನು ಶಿಕ್ಷಿಸಲೇಬೇಕು. ಆದರೆ ಯಾರೋ ಒಂದಿಬ್ಬರು ಮಾಡಿದ ಕೃತ್ಯಕ್ಕೆ ಇಡೀ ದೇಶವನ್ನು ದೂರುವುದೇ?

ನವಜೋತ್ ಸಿಂಗ್ ಸಿಧು,ಪಂಜಾಬ್ ಸಚಿವ

***

ಇದು ಒಗ್ಗಟ್ಟನ್ನು ಪ್ರದರ್ಶಿಸಬೇಕಾದ ಸಮಯ. ಆದರೆ ಪ್ರತಿಭಟನೆ ನೆಪದಲ್ಲಿ ಅಲ್ಪಸಂಖ್ಯಾತರ ಮೇಲೆ ದಾಳಿ ನಡೆಸಲಾಗುತ್ತಿದೆ. ಅಲ್ಪಸಂಖ್ಯಾತರಿಗೆ ಹೆಚ್ಚಿನ ಭದ್ರತೆ ಒದಗಿಸಲು ರಾಜ್ಯಪಾಲರು ನಿರ್ದೇಶನ ನೀಡಬೇಕು

–ಮೆಹಬೂಬಾ ಮುಫ್ತಿ, ಪಿಡಿಪಿ ಮುಖ್ಯಸ್ಥೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT