ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರಾದೇಶಿಕ ಪಕ್ಷ; ಉದಾಸೀನ ಬೇಡ’

ಮೋದಿ ಹೋರಾಟಗಾರ.. ಸೋಲಿನಿಂದ ವಿರಮಿಸುವುದಿಲ್ಲ...
Last Updated 11 ಡಿಸೆಂಬರ್ 2018, 20:30 IST
ಅಕ್ಷರ ಗಾತ್ರ

ನವದೆಹಲಿ: ಪ್ರಾದೇಶಿಕ ಪಕ್ಷಗಳ ಶಕ್ತಿಯನ್ನು ರಾಷ್ಟ್ರೀಯ ಪಕ್ಷಗಳು ಅಲಕ್ಷಿಸಬಾರದು. ತೆಲಂಗಾಣ ಮತ್ತು ಮಿಜೋರಾಂ ವಿಧಾನಸಭೆ ಚುನಾವಣೆಯ ಫಲಿತಾಂಶ ಅವಲೋಕಿಸಿ ಮಹತ್ವ ನೀಡಬೇಕು ಎಂದು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಪ್ರಧಾನಿ ಆಗದಿದ್ದರೆ, ಪ್ರಾದೇಶಿಕ ಪಕ್ಷಗಳನ್ನು ಒಳಗೊಳ್ಳುವ ಮೈತ್ರಿಕೂಟವೇ ಅಧಿಕಾರಕ್ಕೆ ಬರುವುದು ನಿಶ್ಚಿತ. ಹಾಗಾಗಿ ಉದಾಸೀನ ಬೇಡ. ಆದರೆ, ಕಾಂಗ್ರೆಸ್‌ ಪಕ್ಷವನ್ನು ದೂರವಿರಿಸಿ ಸರ್ಕಾರ ರಚಿಸುವುದು ಅಸಾಧ್ಯ ಎಂದು ಅಭಿಪ್ರಾಯಪಟ್ಟರು.

ಪಂಚ ರಾಜ್ಯಗಳ ಚುನಾವಣೆಯ ಫಲಿತಾಂಶವು ಲೋಕಸಭೆ ಚುನಾವಣೆಗೆ ದಿಕ್ಸೂಚಿ ಆಗಲಾರದು. ಆದರೂ ಈ ಫಲಿತಾಂಶವನ್ನು ನಿರ್ಲಕ್ಷಿಸಲಾಗದು. ಮಧ್ಯಪ್ರದೇಶ, ರಾಜಸ್ಥಾನಗಳಲ್ಲಿ ಕಾಂಗ್ರೆಸ್‌ ಜಯಿಸಿದೆ. ಜೊತೆಗೆ ಅಲ್ಲೆಲ್ಲ ವಿರೋಧ ಪಕ್ಷಗಳು ಪ್ರಬಲವಾಗಿವೆ ಎಂಬುದನ್ನು ಮರೆಯಲಾಗದು ಎಂದು ಅವರು ಹೇಳಿದರು.

ವಾಸ್ತವಾಂಶದ ಹಿನ್ನೆಲೆಯಲ್ಲಿ ನೋಡದೆ ಅವಸರದಲ್ಲಿಯೇ ‘ಕಾಂಗ್ರೆಸ್‌ಮುಕ್ತ ಭಾರತ’ ಮಾಡುವುದಾಗಿ ಘೋಷಿಸಿದ್ದ ಮೋದಿ, ಇಂದಿನ ಸೋಲಿನಿಂದ ನಿರಾಸೆಯಲ್ಲಿ ಮಲಗುವುದಿಲ್ಲ. ಬದಲಿಗೆ, ಸವಾಲಾಗಿ ಸ್ವೀಕರಿಸಲಿದ್ದಾರೆ. ಅವರು ನಿಜಕ್ಕೂ ಹೋರಾಟಗಾರ. ಅನೇಕ ರಾಜ್ಯಗಳಲ್ಲಿ ಬಿಜೆಪಿಯ ಅಧಿಕಾರವಿದೆ. ಹಾಗಾಗಿ ಲೋಕಸಭೆ ಚುನಾವಣೆ ಫಲಿತಾಂಶ ಏನಾಗಬಹುದು ಎಂಬುದನ್ನು ಈಗಲೇ ಹೇಳಲಾಗದು ದೇವೇಗೌಡ ತಿಳಿಸಿದರು.

‘ಮಹಾ ಮೈತ್ರಿಯ ಬಗ್ಗೆ ಸೋಮವಾರ ವಿವಿಧ ಪಕ್ಷಗಳ ಮುಖಂಡರೆಲ್ಲ ಸಭೆ ನಡೆಸಿದ್ದೇವೆ. ಕೇಂದ್ರ ಸರ್ಕಾರ ರಫೇಲ್‌ ಹಗರಣದಲ್ಲಿ ಸಿಲುಕಿದೆ. ಸಿಬಿಐ, ಆರ್‌ಬಿಐ, ಜಾರಿ ನಿರ್ದೇಶನಾಲಯ (ಇ.ಡಿ)ಗಳನ್ನು ದುರ್ಬಳಕೆ ಮಾಡಿಕೊಂಡಿದೆ. ಇದನ್ನೇ ಮುಖ್ಯವಾಗಿಸಿ ಹೋರಾಟ ರೂಪಿಸಬೇಕಿದೆ. ನಾಯಕತ್ವದ ಬಗ್ಗೆ ಇನ್ನೂ ಚರ್ಚೆ ನಡೆದಿಲ್ಲ. ರಾಷ್ಟ್ರೀಯ ಪಕ್ಷಗಳ ಮುಖಂಡರನ್ನು ಹೊರತುಪಡಿಸಿ ಬೇರೆ ಯಾರಿಗಾದರೂ ನಾಯಕತ್ವ ನೀಡಲು ಸಾಧ್ಯವೇ’ ಎಂದು ಪ್ರಶ್ನಿಸಿದ ಅವರು, ರಾಹುಲ್‌ ಗಾಂಧಿ ಅವರ ನಾಯಕತ್ವವನ್ನೂ ನಿರ್ಲಕ್ಷಿಸಲಾಗದು ಎಂದರು.

ಕುಮಾರಸ್ವಾಮಿ ಏಕಾಂಗಿ ಹೋರಾಟ’
ನವದೆಹಲಿ: ರಾಜ್ಯದಲ್ಲಿ ಸರ್ಕಾರ ಇನ್ನಷ್ಟೇ ಪೂರ್ಣ ಪ್ರಮಾಣದಲ್ಲಿ ರಚನೆಯಾಗಬೇಕಿದೆ. ಸಚಿವ ಸ್ಥಾನಗಳ ಭರ್ತಿ, ನಿಗಮ, ಮಂಡಳಿಗಳಿಗೆ ನೇಮಕವಾಗಬೇಕಿದೆ. ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ಜಾರಿಗೆ ತಂದಿದ್ದ ಯೋಜನೆಗಳನ್ನು ಮುಂದುವರಿಸಿಯೂ ಏಕಾಂಗಿ ಹೋರಾಟ ನಡೆಸುತ್ತಿದ್ದಾರೆ ಎಂದು ಅವರು ಹೇಳಿದರು.

ರಾಜ್ಯದ ಮೈತ್ರಿ ಸರ್ಕಾರದಲ್ಲಿ ಎಲ್ಲವೂ ಸುಗಮವಾಗಿ ಸಾಗುತ್ತಿದೆ ಎಂಬ ವಾತಾವರಣ ಇಲ್ಲ. ಈ ಹಿಂದೆ ಬಿಜೆಪಿ ಬೆಂಬಲದೊಂದಿಗೆ ಮುಖ್ಯಮಂತ್ರಿ ಆಗಿದ್ದಾಗ ಕುಮಾರಸ್ವಾಮಿ ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳುತ್ತಿದ್ದರು. ಆದರೆ, ಈಗ ಹಾಗಿಲ್ಲ. ಪ್ರಾದೇಶಿಕ ಪಕ್ಷಕ್ಕೆ ಅಲ್ಲೂ ಸಮಸ್ಯೆಗಳಿವೆ. ಅವುಗಳನ್ನು ಕಾಂಗ್ರೆಸ್‌ ಹೈಕಮಾಂಡ್‌ ಸರಿಪಡಿಸಿದರೆ ಮಾತ್ರ ಜನ ನಂಬುತ್ತಾರೆ ಎಂದು ಅವರು ತಿಳಿಸಿದರು.

ಪ್ರಾದೇಶಿಕ ಪಕ್ಷಗಳನ್ನು ತಾತ್ಸಾರದಿಂದ ನೋಡಕೂಡದು. ಈ ಹಿಂದೆ ಮಾಡಿದಂತೆ ಪ್ರಾದೇಶಿಕ ಪಕ್ಷಗಳಿಗೆ ಕೇವಲ 6, 8 ಅಥವಾ 10 ತಿಂಗಳುಗಳವರೆಗೆ ನೇತೃತ್ವ ನೀಡುವುದನ್ನು ಕೈಬಿಡಬೇಕು ಎಂದು ಅವರು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT