ಮಂಗಳವಾರ, ಫೆಬ್ರವರಿ 25, 2020
19 °C
ಫಲಿತಾಂಶ ವಿಶ್ಲೇಷಣೆ

Analysis | ಪ್ರಗತಿಯ ಭರವಸೆ, ಧ್ರುವೀಕರಣದ ತಂತ್ರಗಾರಿಕೆ: ಕೇಜ್ರಿವಾಲ್ ಎಂಬ ಚತುರ

ಆರ್‌. ಹರಿಶಂಕರ್‌ Updated:

ಅಕ್ಷರ ಗಾತ್ರ : | |

ಚಾಣಕ್ಯಪುರಿ, ಇದು ದೆಹಲಿಯ ಐತಿಹಾಸಿಕ ಹೆಸರು. ಇದೇ ಚಾಣಕ್ಯಪುರಿಯನ್ನು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಚಾಣಕ್ಯ ತಂತ್ರಗಳನ್ನೂ ಮೀರಿದ ತಂತ್ರಗಾರಿಕೆ ಪ್ರಯೋಗಿಸಿ ಗೆಲ್ಲುವ ಮೂಲಕ ಅತ್ಯಂತ ಅಲ್ಪಾವಧಿಯಲ್ಲೇ ರಾಜಕೀಯ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ.

ಅರವಿಂದ ಕೇಜ್ರಿವಾಲ್‌ ಅವರು ರಾಜಕೀಯ ಪ್ರವೇಶ ಮಾಡಿದ್ದು 2013ರಲ್ಲಿ. ಆ ಹೊತ್ತಿನ ಭಾರತೀಯ ರಾಜಕೀಯ ವ್ಯವಸ್ಥೆಗೂ, ಈ ಹೊತ್ತಿನ ರಾಜಕೀಯ ವ್ಯವಸ್ಥೆಗೂ ಬಹಳಷ್ಟು ವ್ಯತ್ಯಾಸಗಳಿವೆ. ಅಂದಿನ ಮತ್ತು ಇಂದಿನ ಎರಡೂ ಬಗೆಯ ರಾಜಕಾರಣಗಳನ್ನು ಎದುರಿಸಿ ಗೆಲ್ಲುವಲ್ಲಿ ಅರವಿಂದ ಕೇಜ್ರಿವಾಲ್‌ ಅವರು ಯಶಸ್ವಿಯಾಗಿದ್ದಾರೆ ಎನ್ನುವುದು ಗಮನಾರ್ಹ ಅಂಶ.

ಆಮ್‌ ಆದ್ಮಿ ಪಕ್ಷವನ್ನು ಸ್ಥಾಪಿಸಿ ಮೊದಲ ಬಾರಿಗೆ ಚುನಾವಣೆಗೆ ದುಮುಕಿದಾಗ ಕೇಜ್ರಿವಾಲ್ ಜನರಲ್ಲಿ ಬಿತ್ತಿದ್ದು ಭ್ರಷ್ಟಾಚಾರ ನಿಗ್ರಹದ ಭರವಸೆ. ಎರಡನೇ ಬಾರಿಗೆ ಚುನಾವಣೆ ಸ್ಪರ್ಧಿಸಿದಾಗ ಅಭಿವೃದ್ಧಿ ಮತ್ತು ಭ್ರಷ್ಟಾಚಾರ ಮೂಲೋತ್ಪಾಟನೆ ಅವರ ವಿಚಾರಗಳಾಗಿದ್ದವು. ಆದರೆ, ಅಭಿವೃದ್ಧಿ, ಭ್ರಷ್ಟಾಚಾರ ನಿರ್ಮೂಲನೆ ಎಂಬ ಅಂಶಗಳು ದೇಶದ ರಾಜಕೀಯ ವ್ಯವಸ್ಥೆಯಲ್ಲಿ ಸವಕಲು, ಆದಿ–ಅಂತ್ಯವಿಲ್ಲದ ಪ್ರಕ್ರಿಯೆ ಎಂಬುದು ಕೇಜ್ರಿವಾಲ್ ಅವರಿಗೆ ಕ್ರಮೇಣ ಹೊಳೆಯಿತು. ಇದನ್ನು ಮನಗಂಡ ನಂತರ ಕಾಲಕ್ಕೆ ತಕ್ಕಂತೆ ದಾಳ ಉರುಳಿಸುವ ಹೊಸ ರಾಜಕೀಯಕ್ಕೆ ಕೇಜ್ರಿವಾಲ್ ಹೊರಳಿದಂತಿದೆ. ಅದು ಅವರ ಇಂದಿನ ಗೆಲುವಿನಲ್ಲೂ ಪ್ರತಿಫಲನವಾಗುತ್ತಿದೆ. 

ಒಂದೆಡೆ ಜನರಿಗೆ ಅಗತ್ಯವಾದುದನ್ನು ಪೂರೈಸುವ ಆಶಾ ಭಾವನೆ ಬಿತ್ತುತ್ತಲೇ, ಇನ್ನೊಂದೆಡೆ ಮತ ಧ್ರುವೀಕರಣದ ರಾಜಕಾರಣಕ್ಕೆ ತಕ್ಕಂತೆ ದಾಳ ಉರುಳಿಸುವುದು ಅರವಿಂದ ಕೇಜ್ರಿವಾಲ್‌ ಅವರ ಇವತ್ತಿನ ವರಸೆಯಾಗಿ ಬದಲಾಗಿದೆ. ಅವರ ಈ ತಂತ್ರವೇ ಇಂದಿನ ರಾಜಕೀಯ ವ್ಯವಸ್ಥೆಯಲ್ಲೂ ಅವರಿಗೆ ಜಯ ತಂದು ಕೊಟ್ಟಿದೆ.

ಧ್ರುವೀಕರಣದ ತಂತ್ರ ಅರಿತ ಚಾಣಕ್ಯ

2013ರಿಂದ 2019ರವರೆಗೆ ಮೋದಿ ಅವರಿಗೆ ಕೇಜ್ರಿವಾಲ್ ರಾಜಕೀಯವಾಗಿ ಕಡು ವಿರೋಧಿಯಾಗಿದ್ದರು. ನೋಟು ರದ್ದತಿ, ನಿರ್ದಿಷ್ಟ ದಾಳಿಗಳನ್ನು ಪ್ರಬಲವಾಗಿ ವಿರೋಧಿಸಿದ್ದರು. ಆದರೆ 2019ರ ಲೋಕಸಭಾ ಚುನಾವಣೆಯ ಸೋಲು, ಪಂಜಾಬ್‌ ವಿಧಾನಸಭಾ ಚುನಾವಣೆಯಲ್ಲಿ ಆದ ಹಿನ್ನೆಡೆಗಳು ಕೇಜ್ರಿವಾಲ್ ಅವರಿಗೆ ತಮ್ಮ ನಡೆಯಲ್ಲಿರುವ ಸಮಸ್ಯೆಗಳ ಬಗ್ಗೆ ಸ್ಪಷ್ಟ ಚಿತ್ರಣ ನೀಡಿದಂತೆ ಕಾಣಿಸುತ್ತದೆ.

ಮೋದಿ ಅವರು ಚುನಾವಣೆ ಮತ್ತು ರಾಜಕೀಯದಲ್ಲಿ ಮತಗಳನ್ನು ಧ್ರುವೀಕರಿಸುವ ದೊಡ್ಡ ಶಕ್ತಿ ಎಂಬುದು ಸ್ಪಷ್ಟವಾದ ನಂತರ ರಾಷ್ಟ್ರೀಯತೆ ಹಾಗೂ ಹಿಂದುತ್ವದ ವಿರೋಧಿ ಎಂಬ ಹಣೆಪಟ್ಟಿ ತಮಗೆ ಜೋತು ಬೀಳದಂತೆ ಕೇಜ್ರಿವಾಲ್ ಕಟ್ಟೆಚ್ಚರ ವಹಿಸಿದರು. ‘ನರೇಂದ್ರ ಮೋದಿ ಈ ದೇಶದ ಪ್ರಧಾನಿ, ನನಗೂ ಪ್ರಧಾನಿ’ ಎಂದು ಹೆಮ್ಮೆಯಿಂದ ಹೇಳಿಕೊಂಡರು. ಮಾತ್ರವಲ್ಲ, ಸರ್ಕಾರಿ ವೆಚ್ಚದಲ್ಲಿ ತೀರ್ಥಯಾತ್ರೆ ಮುಗಿಸಿ ಬಂದ ಹಿರಿಯ ನಾಗರಿಕರನ್ನು ಗೌರವಿಸಿ ‘ನಿಮ್ಮ ಮನೆಮಗ ಕೇಜ್ರಿವಾಲ್ ಸಹ ಒಬ್ಬ ಹಿಂದೂ’ ಎಂಬ ಸಂದೇಶ ರವಾನಿಸಿದರು.

ಕೇಜ್ರಿವಾಲ್ ಪ್ರಯೋಗಿಸಿದ ಈ ನವ ಹಿಂದುತ್ವದ ಅಸ್ತ್ರವು ಗುಜರಾತ್, ರಾಜಸ್ಥಾನ ವಿಧಾನಸಭಾ ಚುನಾವಣೆ ಸಂದರ್ಭ ಕಾಂಗ್ರೆಸ್‌ನ ರಾಹುಲ್ ಗಾಂಧಿ ಪ್ರಯೋಗಿಸಿದ್ದ ಮೃದು ಹಿಂದುತ್ವದ ಅಸ್ತ್ರಗಳಿಗಿಂತಲೂ ಭಿನ್ನವಾಗಿತ್ತು. ಆಗ ರಾಹುಲ್ ಅವರು ಬಿಜೆಪಿಯ ಹಾದಿಯನ್ನು ಅನುಸರಿಸಿ ಬಿಜೆಪಿಯನ್ನು ಎದುರಿಸಲು ಯತ್ನಿಸಿದ್ದರು. ಅದರಿಂದ ಕಾಂಗ್ರೆಸ್‌ ಅಲ್ಪಸಂಖ್ಯಾತರ ನಂಬಿಕೆ ಕಳೆದುಕೊಂಡಿದ್ದು ಬಿಟ್ಟರೆ ಹೆಚ್ಚೇನೂ ಪ್ರಯೋಜನವಾಗಲಿಲ್ಲ. ಅದರಿಂದ ಪಾಠ ಕಲಿತ ಕೇಜ್ರಿವಾಲ್ ತಮ್ಮದೇ ಹಾದಿಯಲ್ಲಿ ಮುನ್ನಡೆದು, ಅಲ್ಪಸಂಖ್ಯಾತರ ಭರವಸೆ ಕಾಪಾಡಿಕೊಳ್ಳುವ ಜೊತೆಗೆ ಬಿಜೆಪಿ ಹಿಂದುತ್ವಕ್ಕೂ ಸವಾಲು ಹಾಕಿದರು. ಇದಕ್ಕೆ ಪ್ರತಿತಂತ್ರ ಹೆಣೆದು, ಅನುಷ್ಠಾನಕ್ಕೆ ತರಲು ಬಿಜೆಪಿ–ಕಾಂಗ್ರೆಸ್‌ಗೆ ಸಾಧ್ಯವಾಗಲೇ ಇಲ್ಲ.

ಜಮ್ಮು ಕಾಶ್ಮೀರದ ವಿಶೇಷಾಧಿಕಾರ ರದ್ದು ಮಾಡಿದ ಕೇಂದ್ರದ ನಡೆಯನ್ನು ಕೇಜ್ರಿವಾಲ್ ಬೆಂಬಲಿಸಿದಾಗಿ ಹಲವರಿಗೆ ಅಚ್ಚರಿಯಾಗಿತ್ತು. ‘ದೆಹಲಿಗೆ ಹಿಂದೂ ಕೇಜ್ರಿವಾಲ್, ಕೇಂದ್ರಕ್ಕೆ ಹಿಂದುತ್ವದ ಮೋದಿ’ ಎಂಬ ಮಾತುಗಳು ಚುನಾವಣೆಗೂ ಮೊದಲೇ ದೆಹಲಿಯಲ್ಲಿ ಪ್ರಚಲಿತಕ್ಕೆ ಬಂದಿತ್ತು. ಚುನಾವಣೆ ಹೊತ್ತಿಗೆ ಈ ಅಂಶ ಬಿಜೆಪಿಗೆ ಅರಿವಿಗೆ ಬಂದಿತ್ತು. ಚುನಾವಣೆ ಹೊತ್ತಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ, ಪಾಕಿಸ್ತಾನ, ಭಯೋತ್ಪಾದನೆಯ ವಿಚಾರವನ್ನು ಎತ್ತಿ ಕೇಜ್ರಿವಾಲ್‌ ವಿರುದ್ಧ ಬಿಜೆಪಿ ಎಷ್ಟು ಮಾತನಾಡಿದರೂ, ಅವರು ಮಾತ್ರ ಪ್ರತಿಕ್ರಿಯಿಸಲಿಲ್ಲ.

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೆಹಲಿ ಸೇರಿ ದೇಶದ ಎಲ್ಲೆಡೆ ದೊಡ್ಡ ಪ್ರಮಾಣದ ಪ್ರತಿಭಟನೆ ನಡೆದರೂ ಕೇಜ್ರಿವಾಲ್ ಮಾತನಾಡಲಿಲ್ಲ. ಒಂದರ್ಥದಲ್ಲಿ ಮೋದಿ ಅವರನ್ನು ಕೇಜ್ರಿವಾಲ್ ನೇರವಾಗಿ ಎದುರಿಸದಿದ್ದರೂ, ಅವರ ಹೋರಾಟ ಮೋದಿ ವಿರುದ್ಧವೇ ಎಂಬುದು ಸ್ಪಷ್ಟ.

ಮೊಸಳೆಗೆ ನೀರಿನಲ್ಲಿ ಶಕ್ತಿ, ಆನೆಗೆ ಕಾಡಿನಲ್ಲಿ ಶಕ್ತಿ. ಅವರೆಡರ ನಡುವೆ ಯುದ್ಧ ನಡೆದರೆ ಯಾರು ಗೆಲ್ಲುತ್ತದೆ ಎನ್ನುವುದನ್ನು ಯುದ್ಧ ನಡೆಯುವ ಜಾಗವೇ ನಿರ್ಧರಿಸುತ್ತದೆ. ಬಿಜೆಪಿ ತನ್ನ ಹಾದಿಗೆ ಕೇಜ್ರಿವಾಲ್‌ ಅವರನ್ನು ಸೆಳೆಯಲು ಯತ್ನಿಸಿತು. ಆದರೆ ಕೇಜ್ರಿವಾಲ್ ತಾವಿದ್ದ ಜಾಗದಲ್ಲೇ ಯುದ್ಧಮುಗಿಸಿಬಿಟ್ಟರು.

ಕಾಂಗ್ರೆಸ್‌ ಮತ ಬುಟ್ಟಿಗೆ ಕೈ 

ಚುನಾವಣಾ ಪ್ರಚಾರದ ವೇಳೆ, ಬದ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಆಮ್‌ ಆದ್ಮಿ ಪಕ್ಷದ (ಎಎಪಿ) ಅಭ್ಯರ್ಥಿ ಅಜೇಶ್‌ ಯಾದವ್‌ ಪರ ನಡೆದ ರೋಡ್‌ಶೋ ಉದ್ದೇಶಿಸಿ ಮಾತನಾಡಿದ್ದ ಕೇಜ್ರಿವಾಲ್‌, ‘ಆರೋಗ್ಯ ಸೇವೆ, ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗಾಗಿ ನಾವು ಕಠಿಣ ಪರಿಶ್ರಮ ಹಾಕಿದ್ದೇವೆ. ನೀವು ಬೇರೆ ಪಕ್ಷಕ್ಕೆ ಮತ ಹಾಕಿದರೆ ಶಿಕ್ಷಣ ಹಾಗೂ ಆರೋಗ್ಯ ಸೇವೆ ಕೆಡಲಿದೆ. ಕಳೆದ ಐದು ವರ್ಷದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಸರ್ಕಾರ ಕೈಗೆತ್ತಿಕೊಂಡಿದ್ದು, ಕಳೆದ 70 ವರ್ಷದಿಂದ ಬಾಕಿ ಉಳಿದಿರುವ ಕೆಲಸಗಳನ್ನು ಪೂರ್ಣಗೊಳಿಸಲು ಮತ್ತಷ್ಟು ಸಮಯಾವಕಾಶ ಬೇಕಾಗಿದೆ’ ಎಂದರು. ಅಲ್ಲದೆ, ಕಾಂಗ್ರೆಸ್‌ ಮತ್ತು ಬಿಜೆಪಿಗರೂ ಎಎಪಿಗೆ ಮತ ನೀಡಿ ಎಂದು ಕೇಳಿಕೊಂಡಿದ್ದರು.

ಕೇಜ್ರಿವಾಲ್‌ ಅವರು ಹೀಗೆ ಮಾಡಿಕೊಂಡ ಮನವಿಯೂ ಒಂದು ರಾಜಕೀಯ ತಂತ್ರಗಾರಿಕೆಯ ಭಾಗವೇ ಆಗಿತ್ತು. ಅದರಲ್ಲಿ ಆಪ್‌ಗೆ ಬಿಜೆಪಿ ಮತಬುಟ್ಟಿಗೆ ಕೈಹಾಕುವುದಕ್ಕಿಂತಲೂ ಕಾಂಗ್ರೆಸ್‌ನ ಮತ ಬುಟ್ಟಿಗೆ ಕೈ ಹಾಕಿದರೆ ಹೆಚ್ಚು ಲಾಭ ಎಂಬ ಅರಿವು ಕೆಲಸ ಮಾಡಿತ್ತು. ‘ಕಳೆದ 70 ವರ್ಷಗಳಿಂದ ಅಭಿವೃದ್ಧಿ ಕುಂಠಿತವಾಗಿದೆ’ ಎಂಬ ಅವರ ಉಲ್ಲೇಖ  ನೇರವಾಗಿ ಕಾಂಗ್ರೆಸ್ಸನ್ನೇ ಉದ್ದೇಶಿಸಿತ್ತು.

ಕಳೆದೆರಡು ಚುನಾವಣೆಗಳಿಂದಲೂ ಮತಗಳಿಕೆಯಲ್ಲಿ ಸೊರಗುತ್ತಿರುವ ಕಾಂಗ್ರೆಸ್‌ಗೆ ಅಧಿಕಾರದ ಕನಸು ದೂರದ ಮಾತಾಗಿದೆ. ಇಂಥ ಪಕ್ಷಕ್ಕೆ ಹೋಗುವ ಪ್ರತಿ ಮತಗಳೂ ಬಿಜೆಪಿ ಗೆಲುವಿಗೆ ಸಹಕಾರಿಯಾಗಬಹುದು ಎಂಬ ಲೆಕ್ಕಾಚಾರದ ಹಿನ್ನೆಲೆಯಲ್ಲಿ ಕೇಜ್ರಿವಾಲ್‌ ಕಾಂಗ್ರೆಸ್ಸಿಗರು, ಬಿಜೆಪಿಗರೂ ನಮಗೇ ಮತ ನೀಡಿ ಎಂದು ಕೋರಿಕೊಂಡಿದ್ದರು. ಅದಕ್ಕೆ ಪ್ರತಿಯಾಗಿ ಅವರು ಮುಂದಿಟ್ಟದ್ದು ಅಭಿವೃದ್ಧಿಯ ಕನಸು. ಕೇಜ್ರಿವಾಲರ ಈ ಉದ್ದೇಶ ಈಡೇರಿರುವುದು ಫಲಿತಾಂಶದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ. ಕಾಂಗ್ರೆಸ್‌ ಕಳೆದ ಬಾರಿಗಿಂತಲೂ ಕಳಪೆ ಸಾಧನೆ ಮಾಡಿದೆ. ಮತಗಳನ್ನು ಸೂರೆ ಮಾಡುವುದರಲ್ಲಿ ಆಪ್ ಸಫಲವಾಗಿದೆ.

ಗ್ಯಾರೆಂಟಿ ಪ್ರಣಾಳಿಕೆ 

ದೆಹಲಿಯ ಮಾಲಿನ್ಯ ತಗ್ಗಿಸುವುದು, ಉಚಿತ ವಿದ್ಯುತ್‌, ವೈಫೈ, ಮಹಿಳೆಯರು ಮತ್ತು ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಸೇವೆ, ನೀರಿನ ಪೂರೈಕೆ, ವಿಶ್ವ ದರ್ಜೆಯ ಶಿಕ್ಷಣ ವ್ಯವಸ್ಥೆ,  ದೆಹಲಿಯನ್ನು ದೇಶದ ಸುರಕ್ಷಿತ ನಗರವನ್ನಾಗಿಸುವುದು, ಮೊಹಲ್ಲಾ ಆಸ್ಪತ್ರೆಗಳನ್ನು ಸ್ಥಾಪಿಸುವುದು, ಕೊಳೆಗೇರಿ ನಿವಾಸಿಗಳಿಗೆ ಸುಸಜ್ಜಿತ ಮನೆಗಳನ್ನು ನಿರ್ಮಿಸಿಕೊಡುವ ಕುರಿತು ಆಪ್‌ ದೆಹಲಿ ಜನರಿಗೆ ಪ್ರಣಾಳಿಕೆಯಲ್ಲಿ ಭರವಸೆ ನೀಡಿತ್ತು. ಇದನ್ನು ಪ್ರಣಾಳಿಕೆ ಎಂದು ಘೋಷಿಸಿಕೊಳ್ಳದ ಆಪ್‌ ತನ್ನದು ಗ್ಯಾರೆಂಟಿ ಕಾರ್ಡ್‌ ಎಂದು ಹೇಳಿಕೊಂಡಿತ್ತು. 

ವಲಸಿಗರು, ಮಧ್ಯಮ ವರ್ಗ ಮತ್ತು ಬಡ, ಕೊಳೆಗೇರಿ ವಾಸಿಗಳಿರುವ ದೆಹಲಿಯಲ್ಲಿ ಕೇಜ್ರಿವಾಲ್‌ ಅವರ ಈ ಭರವಸೆಗಳು ಆಶಾ ಭಾವ ಮೂಡಿಸಿತ್ತು. ಈಗಾಗಲೇ ಒಂದು ಅವಧಿಯ ಭರವಸೆಯ ಆಡಳಿತ ನೀಡಿದ್ದ ಕೇಜ್ರಿವಾಲ್‌ ಅವರ ಆಡಳಿತ ಈ ಭರವಸೆಗಳಿಗೆ ಪೂರಕವಾಗಿತ್ತು. ಹೀಗಾಗಿ ದೆಹಲಿಯ ಮಧ್ಯಮ ವರ್ಗ ಮತ್ತು ಬಡವರ್ಗದವರು ಕೇಜ್ರಿವಾಲ್‌ ಅವರ ಕೈ ಹಿಡಿದಿರುವಂತಿದೆ. 

ಆಲಿಸುವ ಕಿವಿಯಾದರು

ಚುನಾವಣೆ ಪ್ರಚಾರದ ಭಾಗವಾಗಿ ಕೇಜ್ರಿವಾಲ್‌ ಅವರು ಕಿಶೋರ್‌ ಸಲಹೆ ಮೇರೆಗೆ ’ಟೌನ್‌ ಹಾಲ್‌’ ಪ್ರಚಾರಗಳನ್ನು ಆಯೋಜಿಸಿ, ಜನರ ಬಳಿಗೇ ತೆರಳಿದರು. ಈ ಮೂಲಕ ಜನರೊಂದಿಗೆ ಸಂವಹನ ಸಾಧಿಸಿಕೊಳ್ಳುವ, ಜನರ ಅಹವಾಲುಗಳಿಗೆ ಕಿವಿ ನೀಡುವ ಕೆಲಸವನ್ನು ಅವರು ಮಾಡಿದ್ದರು. 

ನಾನು ರಾಜಕೀಯ ಅರಾಜಕತಾವಾದಿ ಎಂದು ಹೇಳಿಕೊಂಡೇ, ಅದಕ್ಕಾಗಿ ಜನರಲ್ಲಿ ಕ್ಷಮೆ ಕೋರುತ್ತಲೇ ಅಧಿಕಾರಕ್ಕೆ ಬಂದು,  ಭರವಸೆ ಆಡಳಿತ ನೀಡುತ್ತಲೇ ಪ್ರಗತಿಯ ರಾಜಕಾರಣಕ್ಕೆ, ಮತ ಧ್ರುವೀಕರಣದ ಲೇಪ ನೀಡಿದ್ದು ಕೇಜ್ರಿವಾಲ್‌ ಅವರ ವೈಶಿಷ್ಟ್ಯ.

ಘಟಾನುಘಟಿ ನಾಯಕರನ್ನು ಪ್ರಚಾರದ ಕಣಕ್ಕಿಳಿಸಿದ ಬಿಜೆಪಿ ಜನರ ಮಾತನ್ನು ಆಲಿಸಿದ್ದಕ್ಕಿಂತ, ತಾನು ಹೇಳಿದ್ದೇ ಹೆಚ್ಚಾಯಿತು. ಆದರೆ ಆಪ್‌ ಪ್ರಚಾರ ತಂತ್ರದಲ್ಲಿ ಒಂದು ಸಮತೋಲನವಿತ್ತು. ಸಾಮಾಜಿಕ ಮಾಧ್ಯಮಗಳ ಬಳಕೆ ವಿಚಾರದಲ್ಲಿಯೂ ಆಪ್‌ ಹಿಂದೆ ಬೀಳಲಿಲ್ಲ. ತಮ್ಮನ್ನು ಟ್ರೋಲ್ ಮಾಡಲು ಬಳಸಿದ ‘ಕೇಜ್ರಿ–ವಾಲ್’ (ಗೋಡೆ) ಪದವನ್ನೇ ಆಪ್‌ ತನ್ನ ಪರವಾಗಿ ತಿರುಗಿಸಿಕೊಂಡು ‘ಎಂದಿಗೂ ಬಿರುಕುಬಿಡದ ಗೋಡೆ’ ಎಂದು ಯುವಜನರ ಮನಸ್ಸುಗಳಿಗೆ ಲಗ್ಗೆ ಹಾಕಿತು.

ಅಭಿವೃದ್ಧಿಯೋ ಧ್ರುವೀಕರಣವೋ? 

ಸತತ ಎರಡು ಬಾರಿ ಬಿಜೆಪಿಗೆ ಅಧಿಕಾರ ತಂದುಕೊಟ್ಟ ಚಾಣಕ್ಷ ಅಮಿತ್‌ ಶಾ, ಸದ್ಯದ ರಾಜಕಾರಿಣಿಗಳಲ್ಲಿ ಅತಿ ಚತುರ ಮಾತುಗಾರ ಎನಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರಂಥ ಘಟಾನುಘಟಿಗಳ ಎದುರು ಕೇಜ್ರಿವಾಲ್‌ಗೆ ಗೆಲುವು ತಂದುಕೊಟ್ಟ ಅಂಶಗಳೇನಿರಬಹುದು?

ದೆಹಲಿಯ ಪ್ರಚಾರದ ವೇದಿಕೆಯಲ್ಲಿ ನಿಂತ ಮೋದಿ, ‘ಬಿಜೆಪಿಗೆ ಹಾಕುವ ಪ್ರತಿ ಮತಗಳೂ ನನಗೇ ನೀಡಿದಂತೆ’ ಎಂದು ಘೋಷಿಸಿದ್ದು. ಆದರೂ, ಜನರು ಕೇಜ್ರಿವಾಲ್‌ ಕೈಬಿಡಲಿಲ್ಲ.

ಮೋದಿ ವಿಚಾರಧಾರೆಗಳು ರಾಷ್ಟ್ರಮಟ್ಟದ ಮತಧ್ರುವೀಕರಣ ಮಾಡಬಲ್ಲವಾದರೂ, ಸ್ಥಳೀಯ ನಾಯಕತ್ವದ ವಿಚಾರಗಳು ಬಂದಾಗ ಜನರ ಸ್ಪಂದನೆಗಳು ವ್ಯತಿರಿಕ್ತವಾಗಿರುತ್ತವೆ. ಈಗಾಗಲೇ ದೇಶದ ಹಲವು ವಿಧಾನಸಭೆಗಳು ಸ್ಥಳೀಯ ನಾಯಕತ್ವಕ್ಕೆ ಒಲಿದಿರುವುದೇ ಇದಕ್ಕೆ ಉದಾಹರಣೆ. ದೆಹಲಿ ವಿಷಯದಲ್ಲಿ ಇದು ಮತ್ತೊಮ್ಮೆ ಸಾಬೀತಾಯಿತು. ದೇಶದ ಪ್ರಧಾನ ಸೇವಕನನ್ನು ಗೌರವಿಸುತ್ತಲೇ, ದೆಹಲಿಯ ಜನರು ತಮ್ಮ ಮನೆಮಗನನ್ನು ಮುಖ್ಯಮಂತ್ರಿ ಗಾದಿಗೇರಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು