ಸೋಮವಾರ, ಜೂನ್ 27, 2022
22 °C

ಡಿಕೆಶಿಗೆ ಹೋಟೆಲ್‌ ಪ್ರವೇಶ ನಿರ್ಬಂಧ | ಲೋಕಸಭೆಯಲ್ಲಿ ಮತ್ತೆ ವಿಪಕ್ಷಗಳ ಸಭಾತ್ಯಾಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಅತೃಪ್ತ ಶಾಸಕರನ್ನು ಭೇಟಿ ಮಾಡಲು ಮುಂಬೈಗೆ ತೆರಳಿದ್ದ ಡಿ.ಕೆ. ಶಿವಕುಮಾರ್‌ ಅವರನ್ನು ಹೋಟೆಲ್‌ ಒಳಗೆ ಬಿಡದೆ ಬಂಧಿಸಿರುವ ಘಟನೆ ಅತ್ಯಂತ ಆತಂಕಕಾರಿ ಎಂದು ದೂರಿದ ಕಾಂಗ್ರೆಸ್‌ ಮತ್ತಿತರ ವಿಪಕ್ಷಗಳ ಸದಸ್ಯರು ಲೋಕಸಭೆಯಲ್ಲಿ ಬುಧವಾರವೂ ಪ್ರತಿಭಟನೆ ನಡೆಸಿ ಸಭಾತ್ಯಾಗ ಮಾಡಿದರು.

ಶೂನ್ಯವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್ ಗುಂಪಿನ ನಾಯಕ ಅಧೀರ್ ರಂಜನ್ ಚೌಧರಿ, ರಾಜ್ಯ ಸರ್ಕಾರದ ಭಾಗವಾಗಿರುವ ಡಿ.ಕೆ. ಶಿವಕುಮಾರ್‌ ಹೋಟೆಲ್‌ನಲ್ಲಿ ಕೊಠಡಿ ಕಾಯ್ದಿರಿಸಿದ್ದರೂ ಅವರನ್ನು ಒಳಬಿಡದ ಪೊಲೀಸರು, ಸರ್ವಾಧಿಕಾರಿ ಧೋರಣೆ ಅನುಸರಿಸಿದ್ದಾರೆ ಎಂದು ದೂರಿದರು.

ಪ್ರಧಾನಿ ಮೋದಿ ನೇತೃತ್ವದ ಕೇಂದ್ರದ ಎನ್‌ಡಿಎ ಸರ್ಕಾರವು ವಿಪಕ್ಷಗಳ ಆತ್ಮಬಲವನ್ನು ಕುಗ್ಗಿಸುವ ಕೆಲಸ ಮಾಡುತ್ತಿದೆ. ಈ ರೀತಿಯ ಧೋರಣೆ ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಅವರು ಆರೋಪಿಸಿದರು.

ಈ ವೇಳೆ ಕಾಂಗ್ರೆಸ್‌ ಸದಸ್ಯರು ಸ್ಪೀಕರ್‌ ಎದುರಿನ ಜಾಗಕ್ಕೆ ನುಗ್ಗಿ ಪ್ರತಿಭಟಿಸಿದರು. ಬೆಂಬಲ ಸೂಚಿಸಿದ ಡಿಎಂಕೆ ಮತ್ತು ತೃಣಮೂಲ ಕಾಂಗ್ರೆಸ್‌ ಸದಸ್ಯರು ಸರ್ಕಾರ ಪ್ರಜಾಪ್ರಭುತ್ವ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಘೋಷಣೆ ಕೂಗಿದರು.

ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸದಸ್ಯರ ರಾಜೀನಾಮೆಗೆ ಬಿಜೆಪಿ ಕಾರಣವಲ್ಲ. ಮುಂಬೈನಲ್ಲಿ ತಂಗಿರುವ ಆ ಪಕ್ಷಗಳ ಅತೃಪ್ತ ಶಾಸಕರು ಅಲ್ಲಿನ ಪೊಲೀಸ್‌ ಆಯುಕ್ತರಿಗೆ ಪತ್ರ ಬರೆದು ಡಿ.ಕೆ. ಶಿವಕುಮಾರ್‌ ಅವರಿಂದ ರಕ್ಷಣೆ ನೀಡುವಂತೆ ಕೋರಿದ್ದರಿಂದ ಹೋಟೆಲ್‌ಗೆ ಭದ್ರತೆ ಒದಗಿಸಲಾಗಿತ್ತು ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ ಸ್ಪಷ್ಟನೆ ನೀಡಿದರು. ಅದಕ್ಕೆ ಸಮಾಧಾನಗೊಳ್ಳದ ವಿಪಕ್ಷಗಳ ಸದಸ್ಯರು ಸಭಾತ್ಯಾಗ ಮಾಡಿ ಹೊರನಡೆದರು.

ರಾಜ್ಯಸಭೆಯಲ್ಲೂ ಸತತ 3ನೇ ದಿನ ಕಾಂಗ್ರೆಸ್‌ ಸದಸ್ಯರು ಕರ್ನಾಟಕದ ರಾಜಕೀಯ ಬೆಳವಣಿಗೆಯ ಕುರಿತು ನಿಯಮಾನುಸಾರ ಚರ್ಚೆಗೆ ಅವಕಾಶ ನೀಡುವಂತೆ ಕೋರಿ ಪ್ರತಿಭಟನೆ ನಡೆಸಿದ್ದರಿಂದ ಸಭಾಪತಿಯವರು ಕಲಾಪವನ್ನು ಗುರುವಾರಕ್ಕೆ ಮುಂದೂಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು