ಸೋಮವಾರ, ಜೂನ್ 27, 2022
21 °C

ದೆಹಲಿ ಚುನಾವಣೆ| ಪ್ರಚೋದನಕಾರಿ ಭಾಷಣ: ಅನುರಾಗ್‌, ಪರ್ವೇಶ್‌ ಪ್ರಚಾರಕ್ಕೆ ನಿರ್ಬಂಧ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ವಿವಾದಾತ್ಮಕ ಹೇಳಿಕೆ ನೀಡಿದಕ್ಕಾಗಿ ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ ಮತ್ತು  ಬಿಜೆಪಿ ಸಂಸದ ಪರ್ವೇಶ್‌ ಸಾಹಿಬ್‌ ಸಿಂಗ್‌ ವರ್ಮಾ ಅವರನ್ನು ದೆಹಲಿ ವಿಧಾನಸಭೆ ಚುನಾವಣೆಯ ತಾರಾ ಪ್ರಚಾರಕರ ಪಟ್ಟಿಯಿಂದ ತೆಗೆದುಹಾಕುವಂತೆ ಚುನಾವಣಾ ಆಯೋಗ ಆದೇಶಿಸಿದೆ.

ಚುನಾವಣಾ ರ‍್ಯಾಲಿಗಳಲ್ಲಿ ನೀಡಿದ ಆಕ್ಷೇಪಾರ್ಹ ಹೇಳಿಕೆಗಾಗಿ ಆಯೋಗ ಈ ಕ್ರಮಕೈಗೊಂಡಿದೆ. ಬುಧವಾರದಿಂದಲೇ ಈ ಆದೇಶ ಜಾರಿಗೆ ಬರಲಿದೆ ಎಂದು ಆಯೋಗ ತಿಳಿಸಿದೆ.

ಇಲ್ಲಿ ನಡೆದ ರ‍್ಯಾಲಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವವರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದ ಅನುರಾಗ್‌ ಠಾಕೂರ್‌, ‘ದೇಶದ್ರೋಹಿಗಳನ್ನು ಏನು ಮಾಡಬೇಕು ಎಂದು ಪ್ರಶ್ನಿಸಿದಾಗ, ಪ್ರೇಕ್ಷಕರು ಗುಂಡಿಕ್ಕಿ ಕೊಲ್ಲಬೇಕು’ ಎಂದು ಹೇಳಿದ್ದರು.

ಪಶ್ಚಿಮ ದೆಹಲಿ ಸಂಸದ ವರ್ಮಾ ಅವರು, ‘ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರ ಮೇಲೆ ನಡೆದ ದೌರ್ಜನ್ಯದ ರೀತಿಯಲ್ಲಿ ದೆಹಲಿಯಲ್ಲಿಯೂ ನಡೆಯಬಹುದು. ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಶಾಹೀನ್‌ಬಾಗ್‌ದಲ್ಲಿ ನಡೆಸುತ್ತಿರುವ ಲಕ್ಷಾಂತರ ಪ್ರತಿಭಟನಕಾರರು ಮನೆಗಳಿಗೆ ನುಗ್ಗಿ ಮಹಿಳೆಯರ ಮೇಲೆ ಅತ್ಯಾಚಾರ ಮತ್ತು ಕೊಲೆ ಮಾಡಬಹುದು’ ಎಂದು ಹೇಳಿಕೆ ನೀಡಿದ್ದರು.

ಷೋಕಾಸ್‌ ನೋಟಿಸ್‌: ಪರ್ವೇಶ್‌ ವರ್ಮಾ ಅವರಿಗೆ ಚುನಾವಣಾ ಆಯೋಗ ಷೋಕಾಸ್‌ ನೋಟಿಸ್‌ ನೀಡಿದೆ. ಗುರುವಾರ ಮಧ್ಯಾಹ್ನದ ಒಳಗೆ ನೋಟಿಸ್‌ಗೆ ಉತ್ತರ ನೀಡುವಂತೆ ಸೂಚಿಸಲಾಗಿದೆ. ಉತ್ತರ ನೀಡದಿದ್ದರೆ ಆಯೋಗ ಏಕಪಕ್ಷೀಯವಾಗಿ ಕ್ರಮಕೈಗೊಳ್ಳಲಿದೆ ಎಂದು ತಿಳಿಸಿದೆ. ಠಾಕೂರ್‌ ಅವರಿಗೆ ಮಂಗಳವಾರ ಷೋಕಾಸ್‌ ನೋಟಿಸ್‌ ನೀಡಲಾಗಿತ್ತು.

ಬೆದರಿಕೆ ಕರೆ: ಅನಾಮಧೇಯ ವ್ಯಕ್ತಿಯಿಂದ ಬೆದರಿಕೆ ಕರೆ ಬಂದಿದೆ ಎಂದು ವರ್ಮಾ ದೂರಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡುವುದಾಗಿ ವರ್ಮಾ ಟ್ವೀಟ್‌ ಮಾಡಿದ್ದಾರೆ.

ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌, ‘ಈ ವಿಷಯ ಗಮನದಲ್ಲಿದೆ. ಸಕಾರಾತ್ಮಕ ದೃಷ್ಟಿಯಿಂದಲೇ ಪ್ರಚಾರ ಕಾರ್ಯ ಕೈಗೊಂಡಿದ್ದೇವೆ’ ಎಂದು ಹೇಳಿದರು.

ಬಿಜೆಪಿಗೆ ಸೇರಿದ ಸೈನಾ

ನವದೆಹಲಿ: ವಿಶ್ವದ ಮಾಜಿ ನಂಬರ್ ಒನ್ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್‌ ಮತ್ತು ಅವರ ಸಹೋದರಿ ಅಬು ಚಂದ್ರಂಶು ನೆಹ್ವಾಲ್ ಬುಧವಾರ ಬಿಜೆಪಿಗೆ ಸೇರಿದರು. 

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸೈನಾ, ‘ಬಿಜೆಪಿ ದೇಶಕ್ಕಾಗಿ ಹಲವು ಒಳ್ಳೆಯ ಕಾರ್ಯಗಳನ್ನು ಮಾಡುತ್ತಿದೆ. ಪಕ್ಷದ ಸದಸ್ಯೆಯಾಗಿ ನಾನು ಕೆಲಸ ಮಾಡಲಿಚ್ಛಿಸುತ್ತೇನೆ’ ಎಂದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು