ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿ ಮೋದಿ, ಅಮಿತ್ ಶಾಗೆ ಕ್ಲೀನ್‌ಚಿಟ್ ವಿರೋಧಿಸಿದ್ದ ಚುನಾವಣಾ ಆಯುಕ್ತ ಲವಾಸ

ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ
Last Updated 6 ಮೇ 2019, 2:51 IST
ಅಕ್ಷರ ಗಾತ್ರ

ನವದೆಹಲಿ:ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದ ನಾಲ್ಕು ಪ್ರಕರಣಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಮತ್ತು ಒಂದು ಪ್ರಕರಣದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾಗೆ ಕ್ಲೀನ್‌ಚಿಟ್‌ ನೀಡುವುದನ್ನು ಚುನಾವಣಾ ಆಯುಕ್ತ ಅಶೋಕ್ ಲವಾಸ ವಿರೋಧಿಸಿದ್ದರು ಎಂದು ವರದಿಯಾಗಿದೆ.

ಗುಜರಾತ್‌ನ ಪಠಾಣ್‌ನಲ್ಲಿ ಮೋದಿ ಅವರು ಏಪ್ರಿಲ್ 21ರಂದು ಮಾಡಿದ್ದ ಭಾಷಣದಲ್ಲಿ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂಬ ದೂರು ದಾಖಲಾಗಿತ್ತು. ಈ ಪ್ರಕರಣದಲ್ಲಿ ಮೋದಿ ಅವರಿಗೆ ಚುನಾವಣಾ ಆಯೋಗ ಶನಿವಾರ ಕ್ಲೀನ್‌ಚಿಟ್ ನೀಡಿದೆ. ‘ಬಾಲಾಕೋಟ್ ದಾಳಿಯಲ್ಲಿ ಪಾಕಿಸ್ತಾನಕ್ಕೆ ಸೆರೆಸಿಕ್ಕಿದ್ದ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಸುರಕ್ಷಿತವಾಗಿ ಬಿಡುಗಡೆ ಮಾಡುವಂತೆ ಭಾರತ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿತ್ತು’ ಎಂದು ಮೋದಿ ಭಾಷಣದಲ್ಲಿ ಹೇಳಿದ್ದರು.

ಮಾಹಾರಾಷ್ಟ್ರದ ವಾರ್ಧಾರದಲ್ಲಿ ಏಪ್ರಿಲ್ 1ರಂದು ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ್ದ ಮೋದಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೇರಳದ ವಯನಾಡ್‌ನಿಂದ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದನ್ನು ಧರ್ಮದ ಆಧಾರದಲ್ಲಿ ಪ್ರಶ್ನಿಸಿದ್ದರು. ‘ಹಿಂದೂಗಳು ಜಾಸ್ತಿ ಇರುವ ಪ್ರದೇಶದಲ್ಲಿ ಕಣಕ್ಕಿಳಿಯಲು ಕಾಂಗ್ರೆಸ್‍ಗೆ ಭಯ’ ಎಂದು ಟೀಕಿಸಿದ್ದರು. ಏಪ್ರಿಲ್ 6ರಂದು ನಾಂದೇಡ್‌ನಲ್ಲಿ ಚುನಾವಣಾ ಪ್ರಚಾರದ ವೇಳೆ ಬಾಲಾಕೋಟ್ ದಾಳಿ ವಿಚಾರ ಪ್ರಸ್ತಾಪಿಸಿ ಮೊದಲ ಬಾರಿ ಮತದಾನ ಮಾಡುವವರ ಮೇಲೆ ಪ್ರಭಾವ ಬೀರಿದ ಆರೋಪಕ್ಕೆ ಗುರಿಯಾಗಿದ್ದರು. ಏಪ್ರಿಲ್ 9ರಂದು ಲಾತೂರ್‌ನಲ್ಲಿ ಮಾಡಿದ ಭಾಷಣದ ವಿರುದ್ಧವೂ ದೂರು ದಾಖಲಾಗಿತ್ತು. ಏಪ್ರಿಲ್ 9ರಂದು ನಾಗ್ಪುರದಲ್ಲಿ ಮಾತನಾಡಿದ್ದ ಅಮಿತ್ ಶಾ, ವಯನಾಡ್‌ ಕ್ಷೇತ್ರವನ್ನು ಪಾಕಿಸ್ತಾನಕ್ಕೆ ಹೋಲಿಸಿದ್ದರು.ರಾಹುಲ್‌ ಗಾಂಧಿಯ ಚುನಾವಣಾ ಪ್ರಚಾರ ರ್‍ಯಾಲಿಯ ಸಂದರ್ಭದಲ್ಲಿ ಹಸಿರು ಬಣ್ಣದ ಬಾವುಟಗಳನ್ನು ಬಳಸಿದ್ದಕ್ಕಾಗಿ ಶಾ ಈ ಹೋಲಿಕೆ ಮಾಡಿದ್ದರು. ಈ ಐದು ಪ್ರಕರಣಗಳಲ್ಲಿ ಕ್ಲೀನ್‌ಚಿಟ್ ನೀಡುವುದಕ್ಕೆಲವಾಸ ವಿರೋಧ ವ್ಯಕ್ತಪಡಿಸಿದ್ದರು ಎಂದು ದಿ ಇಂಡಿಯನ್‌ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಮುಖ್ಯ ಚುನಾವಣಾ ಆಯುಕ್ತ ಸುನಿಲ್‌ ಆರೋರಾ ಮತ್ತು ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಆಯೋಗದಲ್ಲಿರುವ ಇತರ ಇಬ್ಬರು ಸದಸ್ಯರಾಗಿದ್ದಾರೆ. ಮೋದಿ, ಶಾ ವಿರುದ್ಧದ ಪ್ರಕರಣಗಳಲ್ಲಿ 2–1 ಬಹುಮತದ ಆಧಾರದಲ್ಲಿ ನಿರ್ಧಾರ ಕೈಗೊಳ್ಳಲಾಗಿತ್ತು.

ಈ ಕುರಿತು ಪ್ರತಿಕ್ರಿಯೆ ನೀಡಲುಲವಾಸ ನಿರಾಕರಿಸಿದ್ದಾರೆ ಎಂದೂ ವರದಿ ಉಲ್ಲೇಖಿಸಿದೆ.

ಸಂಬಂಧಿತ ಸುದ್ದಿಗಳು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT